ಶನಿವಾರ, ಮೇ 28, 2022
31 °C

ಪಿಯುಸಿ ಮರು ಮೌಲ್ಯಮಾಪನ: ಅಂಕಗಳು ಇನ್ನೂ ಕಡಿಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ನಂತರ 607 ವಿದ್ಯಾರ್ಥಿಗಳ ಅಂಕಗಳು ಮೊದಲಿಗಿಂತಲೂ ಕಡಿಮೆಯಾಗಿವೆ.12,913 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲಾಗಿದೆ. ಈ ಪೈಕಿ 1,499 ವಿದ್ಯಾರ್ಥಿಗಳು ಮರು ಮೌಲ್ಯಮಾಪನ ನಂತರ ಆರು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.12,913 ವಿದ್ಯಾರ್ಥಿಗಳ ಪೈಕಿ 11,414 ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮರು ಮೌಲ್ಯಮಾಪನದ ನಂತರ ಐದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದಕ್ಕಿಂತ ಕಡಿಮೆ ವ್ಯತ್ಯಾಸವಾದರೆ ಆ ಅಂಕಗಳನ್ನು ಮಾನ್ಯ ಮಾಡುವುದಿಲ್ಲ.ಮೊದಲು ಗಣಿತದಲ್ಲಿ 36 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದ ಎನ್.ಅಮಿತ್‌ಗೆ ಮರು ಮೌಲ್ಯಮಾಪನದ ನಂತರ 9 ಅಂಕಗಳು ಕಡಿಮೆಯಾಗಿವೆ. ಇದರಿಂದಾಗಿ ಅವರು ಅನುತ್ತೀರ್ಣಗೊಂಡಿದ್ದಾರೆ. ಇದೇ ವಿಷಯದಲ್ಲಿ  ಸೈಯದ್ ಅಬ್ದುಲ್ 13, ಮಹಮದ್ ಕಮಿಲ್‌ಗೆ 15, ಜಿ.ದಿವ್ಯಾಗೆ 10 ಅಂಕಗಳು ಕಡಿಮೆಯಾಗಿವೆ.ಜೀವವಿಜ್ಞಾನ ವಿಷಯದಲ್ಲಿ ಪ್ರೀತಿ ಬಸನಗೌಡ ಪಾಟೀಲ ಅವರು ಮೊದಲು 60 ಅಂಕಗಳನ್ನು ಪಡೆದಿದ್ದರೆ, ಮರು ಮೌಲ್ಯಮಾಪನ ನಂತರ 30 ಅಂಕಗಳನ್ನು ಕಳೆದುಕೊಂಡಿದ್ದಾರೆ. ವಿಕ್ರಮ್‌ಗೌಡ ಮತ್ತು ಆರ್.ರಮ್ಯಾ ಅವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ತಲಾ 20 ಅಂಕಗಳು ಕಡಿಮೆಯಾಗಿವೆ.ನಗರದ ದೀಕ್ಷಾ ಕಾಲೇಜಿನ ಎಂ.ಡಿ.ಭರತ್, ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂಗ್ಲಿಷ್, ಭೌತವಿಜ್ಞಾನ ವಿಷಯದ ಅಂಕಗಳಲ್ಲಿ ವ್ಯತ್ಯಾಸವಾಗಿಲ್ಲ. ಆದರೆ ರಸಾಯನ ವಿಜ್ಞಾನದಲ್ಲಿ 14 ಮತ್ತು ಗಣಿತದಲ್ಲಿ ಎಂಟು ಅಂಕಗಳು ಕಡಿಮೆಯಾಗಿವೆ. `ಪ್ರತಿ ವಿಷಯದಲ್ಲಿ ಕನಿಷ್ಠ ಐದು ಅಂಕಗಳು ಹೆಚ್ಚಿಗೆ ಬರಲಿವೆ ಎಂದು ನಿರೀಕ್ಷೆ ಮಾಡಿದ್ದೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ~ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು. ಇವರಿಗೆ ಅಂಕಗಳು ಕಡಿಮೆಯಾಗಿರುವುದರಿಂದ ಸಿಇಟಿ ರ‌್ಯಾಂಕಿಂಗ್‌ನಲ್ಲೂ ಬದಲಾವಣೆಯಾಗಿದೆ.ಈ ಮುಂಚೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಮತ್ತು ಗಣಿತದಲ್ಲಿ 300ಕ್ಕೆ 250 ಅಂಕಗಳನ್ನು ಗಳಿಸಿದ್ದರು. ಆದರೆ ಮರು ಮೌಲ್ಯಮಾಪನ ನಂತರ 228 ಅಂಕಗಳನ್ನು ಪಡೆದಿರುವುದರಿಂದ ಎಂಜಿನಿಯರಿಂಗ್‌ನಲ್ಲಿ 13,000 ರ‌್ಯಾಂಕ್ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.