ಶನಿವಾರ, ಜೂನ್ 19, 2021
28 °C

ಪಿಯು ಪರೀಕ್ಷೆ; 713 ವಿದ್ಯಾರ್ಥಿಗಳ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಗುರುವಾರ ಆರಂಭವಾಗಿದ್ದು, ಮೊದಲ ದಿನ ಇತಿಹಾಸ ಮತ್ತು ಕಂಪ್ಯೂಟರ್ ವಿಜ್ಞಾನ ಪರೀಕ್ಷೆಗಳು ನಡೆದವು.ಇತಿಹಾಸ ಪರೀಕ್ಷೆಗೆ ನೋಂದಣಿಯಾಗಿದ್ದ 11,061 ವಿದ್ಯಾರ್ಥಿಗಳ ಪೈಕಿ 10,390 ಮಂದಿ ಹಾಜರಾಗಿದ್ದರು. 671 ಮಂದಿ ಗೈರುಹಾಜರಾಗಿದ್ದರು. ಕಂಪ್ಯೂಟರ್ ವಿಜ್ಞಾನ ಸಂಬಂಧಿಸಿದಂತೆ ನೋಂದಣಿಯಾಗಿದ್ದ 1,288 ವಿದ್ಯಾರ್ಥಿಗಳ ಪೈಕಿ 1,246 ಮಂದಿ ಹಾಜರಾಗಿದ್ದರು. 42 ಮಂದಿ ಗೈರು ಹಾಜರಾಗಿದ್ದರು.ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಿದ್ದವು. ದಾವಣಗೆರೆಯ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಯಾವುದೇ ನಕಲು ಮಾಡಿದ ಪ್ರಕರಣಗಳು ನಡೆದಿಲ್ಲ. ಸಾಂಗವಾಗಿ ಪರೀಕ್ಷೆಗಳು ನಡೆದಿವೆ. ಶುಕ್ರವಾರ ಜೀವಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರುದ್ರಮುನಿ ತಿಳಿಸಿದರು.ನಾಲ್ಕು ಕೇಂದ್ರ

ಚನ್ನಗಿರಿ: ತಾಲ್ಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ  ಯಶಸ್ವಿಯಾಗಿ ನಡೆದವು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು, ಮಣ್ಣಮ್ಮ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು ಸಂತೇಬೆನ್ನೂರು ಹಾಗೂ ಎಲ್. ಸಿದ್ದಪ್ಪ ಕಾಲೇಜು ಸಾಗರಪೇಟೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 1,764 ವಿದ್ಯಾರ್ಥಿಗಳಲ್ಲಿ 1,680 ವಿದ್ಯಾರ್ಥಿಗಳು ಗುರುವಾರ ನಡೆದ ಪರೀಕ್ಷೆಗೆ ಹಾಜರಾಗಿದ್ದರು.ಜಿಜೆಸಿ ಚನ್ನಗಿರಿ 541, ಮಣ್ಣಮ್ಮ ಕಾಲೇಜು ಚನ್ನಗಿರಿ 385, ಜಿಜೆಸಿ ಸಂತೇಬೆನ್ನೂರು 350 ಹಾಗೂ ಎಲ್. ಸಿದ್ದಪ್ಪ ಕಾಲೇಜು ಸಾಗರಪೇಟೆ ಪರೀಕ್ಷಾ ಕೇಂದ್ರಗಳಲ್ಲಿ 404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷಾ ಕೇಂದ್ರಗಳ ಮುಂದೆ ಬಿಗಿಯಾದ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ಎಂದು ಬಿಇಒ ಜಿ.ಆರ್. ತಿಪ್ಪೇಶಪ್ಪ ಪತ್ರಿಕೆಗೆ ತಿಳಿಸಿದರು.45 ವಿದ್ಯಾರ್ಥಿಗಳು ಗೈರು

ಹೊನ್ನಾಳಿ: ಪಟ್ಟಣದ ಹಾಗೂ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ  ಪ್ರಾರಂಭವಾಯಿತು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 25, ಪಟ್ಟಣದ ಹಿರೇಕಲ್ಮಠದ ಚನ್ನೇಶ್ವರ ಗ್ರಾಮಾಂತರ ಪ.ಪೂ. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 11 ಮತ್ತು ನ್ಯಾಮತಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 9 ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ಎಂದು ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ತಿಳಿಸಿದರು.ಸುಗಮ ಪರೀಕ್ಷೆಗೆ ಕೊಠಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ. ಬಸವರಾಜಪ್ಪ ಮಾಹಿತಿ ನೀಡಿದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿದರು.

ಉಪ ನಿರ್ದೇಶಕರ ತಪಾಸಣೆಹರಪನಹಳ್ಳಿ: ತಾಲ್ಲೂಕಿನ ಐದು ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಿರುವ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರುದ್ರಮುನಿ, ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹಾಜರಾದ ವಿದ್ಯಾರ್ಥಿಗಳ ತಪಾಸಣೆ ನಡೆಸಿದರು.ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ನಕಲು ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಾಗೃತ ತಂಡ ರಚಿಸಲಾಗಿದೆ. ತಾಲ್ಲೂಕಿನ ಐದು ಪದವಿಪೂರ್ವ ಕಾಲೇಜುಗಳಲ್ಲಿ ತೆರೆಯಲಾಗಿರುವ ಕೇಂದ್ರಗಳಲ್ಲಿ, ಪ್ರತಿ ಕೇಂದ್ರಗಳಲ್ಲಿಯೂ ಒಬ್ಬ ಪ್ರಾಂಶುಪಾಲರ ನೇತೃತ್ವದಲ್ಲಿ ನಾಲ್ಕು ಜನರ ತನಿಖಾ ತಂಡ ಬೀಡು ಬಿಟ್ಟಿರುತ್ತದೆ. ಉಳಿದಂತೆ ತಹಶೀಲ್ದಾರ್ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ಮೇಲುಸ್ತುವಾರಿ ನಡೆಸಲಿದೆ. ಉಪ ವಿಭಾಗಾಧಿಕಾರಿ ನೋಡೆಲ್ ಅಧಿಕಾರಿಯಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಲ್ಲಾ ಕೇಂದ್ರಗಳಲ್ಲಿಯೂ ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.ಇತಿಹಾಸ ವಿಷಯದ ಪರೀಕ್ಷೆಗಾಗಿ ತಾಲ್ಲೂಕಿನ ವಿವಿಧ ಕಾಲೇಜುಗಳ 2,371 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಈ ಪೈಕಿ, 2,242 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿಷಯಕ್ಕೆ ಸಂಬಂಧಿಸಿದಂತೆ 107 ವಿದ್ಯಾರ್ಥಿಗಳು ನೋಂದಣಿ ಮಾಡಿ ಕೊಂಡಿದ್ದು, 100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದರು. ಎಸ್‌ಎಸ್‌ಎಚ್ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಕುರವತ್ಯೆಪ್ಪ, ಎಸ್‌ಎಸ್‌ಎಚ್ ಜೈನ್ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ವೇಣುಗೋಪಾಲ್ ಹಾಜರಿದ್ದರು.

ಆರಂಭಮಲೇಬೆನ್ನೂರು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ  ದ್ವಿತೀಯ ಪಿಯು ಪರೀಕ್ಷೆ  ವಿಧ್ಯುಕ್ತವಾಗಿ ಆರಂಭವಾಯಿತು.ಇಲ್ಲಿನ ವಿದ್ಯಾರ್ಥಿಗಳು, ಸಮೀಪದ ಕುಂಬಳೂರಿನ ಸರ್ಕಾರಿ ಪದವಿಪೂರ್ವ ಹಾಗೂ ಬೀರಲಿಂಗೇಶ್ವರ ಕಾಲೇಜಿನ ಒಟ್ಟು186 ಪರೀಕ್ಷಾರ್ಥಿಗಳ ಪೈಕಿ 180 ವಿದ್ಯಾರ್ಥಿಗಳು ಹಾಜರಾಗಿದ್ದರು.ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳು ಆರಂಭವಾಗಿವೆ, ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಪರೀಕ್ಷೆ ಉಸ್ತುವಾರಿ ಹೊತ್ತಿರುವ ಮುಖ್ಯ ಅಧೀಕ್ಷಕ ಪ್ರಾಂಶುಪಾಲ ಎಸ್.ಜಿ. ಶಿವಣ್ಣ ಮಾಹಿತಿ ನೀಡಿದರು. ಬೆಳಿಗ್ಗೆ 8.30ರ ಹೊತ್ತಿಗೆ ಪೋಷಕರು ವಿದ್ಯಾರ್ಥಿಗಳೊಂದಿಗೆ ಆಗಮಿಸಿದ್ದರು, ಸರಿಯಾಗಿ ಬರೆಯುವಂತೆ ಧೈರ್ಯ ಹೇಳುವುದು, ಶುಭ ಕೋರುವ ದೃಶ್ಯ ಕಂಡುಬಂದಿತು. ಪೊಲೀಸರು ಭದ್ರತೆ ಒದಗಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.