ಶನಿವಾರ, ಮೇ 21, 2022
23 °C

ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದ್ರಾಲೇಔಟ್ ಸಮೀಪದ ಅಹಮ್ಮದ್‌ನಗರದಲ್ಲಿರುವ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸೇರಿದ ನಿವೇಶನವೊಂದಕ್ಕೆ ಹಾಕಿದ್ದ ತಾತ್ಕಾಲಿಕ ತಡೆಗೋಡೆ ತೆರವುಗೊಳಿಸುವ ವಿಷಯವಾಗಿ ಶಾಸಕ ಪ್ರಿಯಾಕೃಷ್ಣ ಮತ್ತು ಮೆಕ್ಕಾ ಮಸೀದಿ ಪದಾಧಿಕಾರಿಗಳ ನಡುವೆ ಸೋಮವಾರ ಬೆಳಿಗ್ಗೆ ವಾಗ್ವಾದ ನಡೆದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

`ಈ ವೇಳೆ ಪ್ರಿಯಾಕೃಷ್ಣ ಅವರ ಅಂಗರಕ್ಷಕ ಚಂದ್ರಶೇಖರ್ ಅವರು, ಮೆಕ್ಕಾ ಮಸೀದಿಯ ಅಧ್ಯಕ್ಷ ರಫೀಕ್ ಅಹಮ್ಮದ್ ಅವರಿಗೆ ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದರು~ ಎಂದು ಆರೋಪಿಸಿ ಮೆಕ್ಕಾ ಮಸೀದಿಯ ಪದಾಧಿಕಾರಿಗಳು, ಶಾಸಕರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದಾಗಿ ಶಾಸಕರು ಮತ್ತು ರಫೀಕ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ರಫೀಕ್ ಅವರು, ಪ್ರಿಯಾಕೃಷ್ಣ ಮತ್ತು ಚಂದ್ರಶೇಖರ್ ವಿರುದ್ಧ ದೂರು ನೀಡಲು ತಮ್ಮ ಬೆಂಬಲಿಗರೊಂದಿಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಂದ್ರಾಲೇಔಟ್ ಠಾಣೆಯ ಬಳಿ ಬಂದರು. ಆ ವೇಳೆಗಾಗಲೇ ಠಾಣೆಯ ಬಳಿ ಜಮಾಯಿಸಿದ್ದ ಪ್ರಿಯಾಕೃಷ್ಣ ಬೆಂಬಲಿಗರು ಮತ್ತು ರಫೀಕ್ ಬೆಂಬಲಿಗರ ನಡುವೆ ಪುನಃ ವಾಗ್ವಾದ ನಡೆದು ಪರಸ್ಪರರು ಕೈ ಮಿಲಾಯಿಸಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಉಭಯ ಗುಂಪಿನವರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು.

ನಂತರ ಎರಡೂ ಗುಂಪಿನವರೊಂದಿಗೆ ರಾಜಿ ಮಾತುಕತೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು, `ಚಂದ್ರಶೇಖರ್ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಘಟನೆ ಸಂಬಂಧ ಎಸಿಪಿ ದರ್ಜೆಯ ಅಧಿಕಾರಿಯಿಂದ ಸಮಗ್ರ ತನಿಖೆ ನಡೆಸಲಾಗುತ್ತದೆ~ ಎಂದು ಭರವಸೆ ನೀಡಿದರು. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಅಹಮ್ಮದ್‌ನಗರ ಆರನೇ ಅಡ್ಡರಸ್ತೆಯಲ್ಲಿ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸೇರಿದ ನಿವೇಶನವಿದೆ. ಆ ನಿವೇಶನದಲ್ಲಿ ಉರ್ದು ಶಾಲೆಯ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಆದೇಶವಾಗಿತ್ತು. ಅಲ್ಲದೇ, ಶಾಲೆಗೆ ನಿವೇಶನವನ್ನು ಮಂಜೂರು ಮಾಡಿ ಸರ್ಕಾರ 2011ರಲ್ಲಿ ಆದೇಶ ಸಹ ಹೊರಡಿಸಿತ್ತು. ಆದರೆ, ಅದೇ ನಿವೇಶನದಲ್ಲಿ ಕೆಲವರು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಆ ನಿವೇಶನದ ಒಂದು ಭಾಗದಲ್ಲಿದ್ದ ಸುಮಾರು 56 ಶೆಡ್‌ಗಳನ್ನು ತೆರವುಗೊಳಿಸಿ ಕಟ್ಟಡ ನಿರ್ಮಿಸುವ ಕೆಲಸ ಮುಂದುವರಿದಿತ್ತು. ನಿವೇಶನದ ಮತ್ತೊಂದು ಭಾಗದಲ್ಲಿದ್ದ ಶೆಡ್‌ಗಳನ್ನು ತೆರವುಗೊಳಿಸಿರಲಿಲ್ಲ.

ಶಾಲಾ ಕಟ್ಟಡ ನಿರ್ಮಾಣ ಸಾಮಗ್ರಿಗಳ ರಕ್ಷಣೆಗಾಗಿ ನಿವೇಶನದ ಸುತ್ತ ತಗಡುಗಳಿಂದ ತಾತ್ಕಾಲಿಕ ತಡೆಗೋಡೆ ಹಾಕಲಾಗಿತ್ತು. ಇದರಿಂದಾಗಿ ಶೆಡ್‌ಗಳಲ್ಲಿನ ಜನರ ಓಡಾಟಕ್ಕೆ ಸ್ಥಳಾವಕಾಶವಿಲ್ಲದೆ ತೊಂದರೆಯಾಗಿತ್ತು. ಈ ಬಗ್ಗೆ ಶೆಡ್‌ಗಳಲ್ಲಿನ ಜನರು, ಪ್ರಿಯಾಕೃಷ್ಣ ಬಳಿ ಬೆಳಿಗ್ಗೆ ಅಳಲು ತೋಡಿಕೊಂಡು ತಡೆಗೋಡೆಯನ್ನು ತೆರವುಗೊಳಿಸಿ ಓಡಾಟಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಪ್ರಿಯಾಕೃಷ್ಣ, ತಡೆಗೋಡೆ ತೆರವುಗೊಳಿಸುವಂತೆ ಕಾಮಗಾರಿಯ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ಸಂಗತಿ ಘರ್ಷಣೆಗೆ ಕಾರಣವಾಯಿತು.

ರಾಜಕೀಯ ಪ್ರೇರಿತ: `ಸಚಿವ ವಿ.ಸೋಮಣ್ಣ ಅವರು ರಾಜಕೀಯ ದುರುದ್ದೇಶದಿಂದ ಮೆಕ್ಕಾ ಮಸೀದಿಯ ಪದಾಧಿಕಾರಿಗಳನ್ನು ನನ್ನ ವಿರುದ್ಧ ಎತ್ತಿ ಕಟ್ಟಿದ್ದಾರೆ. ರಫೀಕ್ ಅಹಮ್ಮದ್ ಆರೋಪದಲ್ಲಿ ಹುರುಳಿಲ್ಲ ಮತ್ತು ನನ್ನ ಅಂಗರಕ್ಷಕ ಪಿಸ್ತೂಲ್‌ನಿಂದ ಯಾರಿಗೂ ಬೆದರಿಕೆ ಹಾಕಿಲ್ಲ~ ಎಂದು ಪ್ರಿಯಾಕೃಷ್ಣ `ಪ್ರಜಾವಾಣಿ~ಗೆ ತಿಳಿಸಿದರು.

`ಶೆಡ್‌ಗಳಲ್ಲಿನ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿವೇಶನದ ತಡೆಗೋಡೆಯನ್ನು ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ. ಆದರೆ, ರಫೀಕ್ ಅವರು ಈ ವಿಷಯವನ್ನೇ ದೊಡ್ಡದು ಮಾಡಿ ನನ್ನ ಚಾರಿತ್ರ್ಯ ವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ~ ಎಂದರು.

ಪ್ರಾಣ ಬೆದರಿಕೆ: `ಪ್ರಿಯಾಕೃಷ್ಣ ಅವರು ಶಾಲಾ ಕಟ್ಟಡ ಕಾಮಗಾರಿಗೆ ತಡೆಯೊಡ್ಡುವ ಉದ್ದೇಶದಿಂದ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಮಗಾರಿ ಪ್ರಗತಿಯನ್ನು ಪರಿಶೀಲಿಸುವ ನೆಪದಲ್ಲಿ ಸ್ಥಳಕ್ಕೆ ಬಂದಿದ್ದ ಅವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅವರ ಅಂಗರಕ್ಷಕ ನನ್ನ ತಲೆಗೆ ಪಿಸ್ತೂಲ್ ಇಟ್ಟು ಪ್ರಾಣ ಬೆದರಿಕೆ ಹಾಕಿದ~ ಎಂದು ರಫೀಕ್ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.