ಶನಿವಾರ, ಜೂನ್ 19, 2021
27 °C

ಪುಟ್ಟ ಸಾಧಕರ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟ ಸಾಧಕರ ಪರಿಚಯ

ಮಾರ್ಕೊ ಕಲಾಸನ್

ಮ್ಯಾಸಿಡೋನಿಯಾದಲ್ಲಿ 2000ರಲ್ಲಿ ಹುಟ್ಟಿದ ಮಾರ್ಕೊ ಕಲಾಸನ್ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮೈಕ್ರೋಸಾಫ್ಟ್‌ನಿಂದ ವಿಶ್ವದ ಅತಿ ಕಿರಿಯ ಕಂಪ್ಯೂಟರ್ ಕಾರ್ಯನಿರ್ವಾಹಕ ಎಂಬ ಬಿರುದು ಪಡೆದುಕೊಂಡಿದ್ದಾನೆ. ಎರಡು ವರ್ಷವಿರುವಾಗಲೇ ಮಾರ್ಕೊಗೆ ಓದಲು, ಬರೆಯಲು ಬರುತ್ತಿತ್ತು.ಮಗುವಿನ ಬುದ್ದಿವಂತಿಕೆಯನ್ನು ಗಮನಿಸಿದ ಪೋಷಕರು ಕಂಪ್ಯೂಟರ್ ಅಭ್ಯಾಸವನ್ನೂ ಆರಂಭಿಸಿದರು. ಈತನ ತಂದೆ ತಾಯಿಯೂ ಐಟಿ ಕ್ಷೇತ್ರದಲ್ಲಿದ್ದು,  ಮಕ್ಕಳಿಗೆ ಕಂಪ್ಯೂಟರ್ ಶಾಲೆಯನ್ನೂ  ನಡೆಸುತ್ತಿದ್ದರು. ಕಂಪ್ಯೂಟರ್ ಕಲಿಯುವಲ್ಲಿ ಈತನಿಗಿದ್ದ ಅತ್ಯಾಸಕ್ತಿಯೇ ಈ ಹೆಗ್ಗಳಿಕೆ ತಂದುಕೊಟ್ಟಿದೆ.ಮಾಸಿಡೋನಿಯಾ ಪ್ರಧಾನಿ ನಿಕೋಲ ಗ್ರೂಯೆವ್‌ಸ್ಕಿ 15 ಕಂಪ್ಯೂಟರ್ ಒಳಗೊಂಡ ಐಟಿ ಲ್ಯಾಬನ್ನು ಈತನ ಕಲಿಕೆಗೆ ಉಡುಗೊರೆಯನ್ನಾಗಿ ನೀಡಿದ್ದಾರೆ. ಈತನ ಬುದ್ದಿವಂತಿಕೆಗೆ ಮಾಧ್ಯಮಗಳು `ಮೊಜಾರ್ಟ್ ಆಫ್ ಕಂಪ್ಯೂಟರ್ಸ್‌~ ಎಂಬ ಬಿರುದನ್ನು ನೀಡಿದೆ.

ಕಂಪ್ಯೂಟರ್‌ಗೆಂದು ಹೊಸ ಆಪರೇಟಿಂಗ್ ಸಿಸ್ಟಮನ್ನು ಕಂಡುಹಿಡಿಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾನೆ.

 

ಮಾರ್ಕೊ ಇದುವರೆಗೂ ಎಂಸಿಪಿ, ಎಂಸಿಡಿಎಸ್‌ಟಿ, ಎಂಸಿಎಸ್‌ಎ, ಎಂಸಿಎಸ್‌ಇ ಎಂಬ ನಾಲ್ಕು ಪರೀಕ್ಷೆಗಳನ್ನು ಪೂರೈಸಿದ್ದು, ಆರು ವಯಸ್ಸಿಗೇ ಎಂಸಿಎಸ್‌ಎ ಪರೀಕ್ಷೆ ಪೂರೈಸಿದ ವಿಶ್ವದ ಅತಿ ಕಿರಿಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾನೆ. 

ಜೇಲಾನ್ ಅಮೊರ್

ವಿಶ್ವದ ಅತಿ ಕಿರಿಯ ಸರ್ಫರ್ (ಕಡಲ ಸವಾರಿ)ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೇಲಾನ್ ಅಮೊರ್ ತನ್ನ ಎರಡನೇ ವಯಸ್ಸಿಗೇ ಸರ್ಫಿಂಗ್ ಅಭ್ಯಾಸ ಆರಂಭಿಸಿದ. ತಂದೆ ತಾಯಿಯೂ ಸರ್ಫಿಂಗ್‌ನಲ್ಲಿ ಪರಿಣಿತರಾದ್ದರಿಂದ ಇದು ರಕ್ತಗತವಾಗಿಯೇ ಆತನಲ್ಲಿ ಹುರುಪು ತಂದಿದೆ ಎನ್ನುವುದು ತಂದೆ ಪೀಟರ್ ಅಮರ್ ಮಾತು.

 

ಕಿಂಗ್ ಆಫ್ ದಿ ವೇವ್ಸ್ ಎಂದು ಕರೆಸಿಕೊಳ್ಳುವ ಈ ಪೋರನಿಗೆ ಅನೇಕ ಬಿರುದುಗಳೂ ಲಭಿಸಿವೆ. ಜೇಲಾನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಎಂದೂ ಇಳಿದಿಲ್ಲ. ಆದರೆ ಕಡಲಿನಲ್ಲಿಯೇ ತನ್ನ ಅಭ್ಯಾಸ ಪ್ರಾರಂಭಿಸಿದ ಎದೆಗಾರಿಕೆ ಹೊಂದಿದ್ದ. ಜೇಲಾನ್‌ಗೆ ನೀರೆಂದರೆ ಅಚ್ಚುವೆುಚ್ಚು. ನೀರಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ಈತನ ಕೌಶಲ್ಯ ಮತ್ತು ಆತ್ಮವಿಶ್ವಾಸ ಗುರುತಿಸಿದ ತಂದೆಯೇ ಸರ್ಫಿಂಗ್‌ಗೆ ಪ್ರೇರಣೆ.

 

ಸುಮಾರು 6 ವರ್ಷದ ಹಿಂದೆ ಬ್ರಿಸ್ಬೇನ್, ಆಸ್ಟ್ರೇಲಿಯಾ ಮುಂತಾದೆಡೆ ಸರ್ಫಿಂಗ್‌ನಲ್ಲಿ ತನ್ನ ಚಮತ್ಕಾರ ತೋರಿದ ಜೇಲಾನ್ ಈಗ ಸರ್ಫಿಂಗ್‌ನಲ್ಲಿ ಪರಿಣಿತಿ ಹೊಂದಿದ್ದಾನೆ. ಜೇಲಾನ್‌ನಿಂದ ಪ್ರೇರಿತಗೊಂಡು ಈತನ 9 ವರ್ಷದ ಸಹೋದರಿ ಶಾಯ್ಲಾ ಕೂಡ ಸರ್ಫಿಂಗ್ ಅಭ್ಯಾಸ ಮಾಡುತ್ತಿದ್ದಾಳೆ.

 

ಸಿಂಧುಜಾ ರಾಜಾರಾಮನ್ 

ಹದಿನಾಲ್ಕನೇ ವಯಸ್ಸಿನಲ್ಲಿಯೇ ಸಿಂಧುಜಾ ರಾಜಾರಾಮನ್ ವಿಶ್ವದ ಅತಿ ಕಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂಬ ಹೆಸರು ಪಡೆದುಕೊಂಡವಳು. 2010ರಲ್ಲಿ ಸಿಂಧುಜಾ ತಂದೆ ಆರಂಭಿಸಿದ ಆನಿಮೇಶನ್ ಸಂಸ್ಥೆ ಸೆಪ್ಪನ್‌ಗೆ ಈಕೆಯೇ ಮುಖ್ಯಸ್ಥೆ.ವ್ಯಂಗ್ಯಚಿತ್ರಗಾರರಾಗಿರುವ ಸಿಂಧುಜಾ ತಂದೆ ಮಗಳ ಆನಿಮೇಶನ್ ಕಲಿಕೆಗೆ ಸ್ಪೂರ್ತಿ. ಆರನೇ ತರಗತಿ ಇದ್ದಾಗಲೇ ಸಿಂಧುಜಾ ದೊಡ್ಡ ಪ್ರಾಜೆಕ್ಟನ್ನು ಪೂರ್ಣಗೊಳಿಸಿದ್ದಳು. ಹೈದರಾಬಾದಿನ ನಾಸ್ಕಾಂನಿಂದ 2010ರಲ್ಲಿ ಹಮ್ಮಿಕೊಂಡಿದ್ದ ಗೇಮಿಂಗ್ ಮತ್ತು ಆನಿಮೇಶನ್ ಸಮಾವೇಶದಲ್ಲಿ ಅತಿ ವೇಗವಾಗಿ 2ಡಿ ಮತ್ತು 3ಡಿ ಆನಿಮೇಶನ್ ಸೃಷ್ಟಿಸುವ ಚತುರೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು.

 

ಸಿಂಧುಜಾಳ ಜ್ಞಾನಾಪೇಕ್ಷೆ ಮತ್ತು ಕ್ರಿಯಾಶೀಲ ನಿರ್ಧಾರಗಳ ಬಗ್ಗೆ ಆಕೆಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವವರಿಗೂ ಹೆಮ್ಮೆಯಿದೆ. ಸಿಂಧುಜಾ ತಂತ್ರಜ್ಞಾನದಲ್ಲಿ ಹೆಚ್ಚಿನ ಕೌಶಲ್ಯ ಹೊಂದಿದ್ದಾಳೆ, ನಮಗೂ ಗೊತ್ತಿರದ ಅನೇಕ ವಿಷಯಗಳನ್ನು ಈಕೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಳವಡಿಸಿಕೊಂಡಿದ್ದಾಳೆ. ಕೆಲವೇ ನಿಮಿಷಗಳಲ್ಲಿ ಹೊಸ ಹೊಸ ಆಲೋಚನೆಗಳನ್ನು ಮುಂದಿಡುತ್ತಾಳೆ ಎಂದು ಸಹೋದ್ಯೋಗಿಗಳೂ ಹೆಮ್ಮೆ ಪಡುತ್ತಾರೆ.

ಆರುಷಿ ಭಟ್ನಾಗರ್

ಆರುಷಿ ಭಟ್ನಾಗರ್ ವಿಶ್ವದ ಅತಿ ಕಿರಿಯ ವೃತ್ತಿಪರ ಕಲಾವಿದೆ ಎಂದು ತನ್ನ ಎರಡನೇ ವಯಸ್ಸಿಗೇ ಹೆಸರಾದವಳು. ಚಿಕ್ಕವಯಸ್ಸಿನಲ್ಲಿಯೇ ಕಲೆಯ ಬಗ್ಗೆ ಈಕೆಗಿದ್ದ ಅಪರಿಮಿತ ಆಸಕ್ತಿಯನ್ನು ಗಮನಿಸಿದ ತಂದೆ ತಾಯಿ ಕಲೆಯಲ್ಲಿ ಮುಂದುವರೆಯಲು ಪ್ರೇರಣೆ ನೀಡಿದರು. 2003ಆರುಷಿ `ಅತಿ ಕಿರಿಯ ವೃತ್ತಿಪರ ಕಲಾವಿದೆ~ ಎಂದು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಯಾದಳು. ಭೋಪಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡ ಆರುಷಿ ಇದುವರೆಗೂ 3000 ಪೇಂಟಿಂಗ್, 15 ಪ್ರದರ್ಶನವನ್ನೂ ನೀಡಿದ್ದಾಳೆ. 23 ಬಹುಮಾನಗಳು ಮತ್ತು 9 ಗೌರವಾರ್ಥ ಪ್ರಶಸ್ತಿಗಳೂ ಈಕೆಗೆ ಲಭಿಸಿವೆ.

 

ಚೈಲ್ಡ್ ಆರ್ಟ್ ಕ್ಲಬ್‌ನಿಂದ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಆರುಷಿ ಚಿನ್ನದ ಪದಕವನ್ನೂ ತನ್ನದಾಗಿಸಿಕೊಂಡಿದ್ದಾಳೆ. 2005ರಲ್ಲಿ `ಅತಿ ಕಿರಿಯ ಪೋಗೊ ಅಮೇಝಿಂಗ್ ಕಿಡ್ಸ್~ ಪ್ರಶಸ್ತಿಯನ್ನು  ಪಡೆದುಕೊಂಡಿದ್ದಾಳೆ.ಸುಹಾಸ್ ಗೋಪಿನಾಥ್

1986ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ಸುಹಾಸ್ ಗೋಪಿನಾಥ್ www.CoolHindustan.com ಜಾಲತಾಣವನ್ನು ಆರಂಭಿಸಿದಾಗ ಆತನಿಗೆ ಕೇವಲ 14 ವಯಸ್ಸು. ವಿಶ್ವದ ಅತಿ ಕಿರಿಯ ಸಿಇಒ ಎಂದು ಕರೆಸಿಕೊಂಡಿರುವ ಸುಹಾಸ್ ಗೋಪಿನಾಥ್ ಈ ಜಾಲತಾಣ ಆರಂಭಿಸಿದ್ದು 2000ರಲ್ಲಿ.ಅದೇ ವರ್ಷ ಕ್ಯಾಲಿಫೋರ್ನಿಯಾ ಮೂಲದ ವೆಬ್ ಸೊಲ್ಯೂಷನ್ ಮತ್ತು ನೆಟ್‌ವರ್ಕಿಂಗ್ ಕಂಪನಿ ಗ್ಲೋಬಲ್ಸ್ ಇಂಕ್ `ಸ್ಯಾನ್ ಜೋಸ್~ ಅನ್ನೂ ಆರಂಭಿಸಿದರು.

ಸುಹಾಸ್ ವಿಶ್ವದ ಅತಿ ಕಿರಿಯ ಪ್ರಮಾಣೀಕೃತ ವೃತ್ತಿಪರ ವೆಬ್ ಡೆವಲಪರ್ ಎಂದು ಕರೆಸಿಕೊಂಡವರು. ಮತ್ತು ಹಾರ್ವರ್ಡ್ ವಿವಿಯಿಂದ ಜಾಗತಿಕ ನಾಯಕತ್ವ ಮತ್ತು ಸಾರ್ವಜನಿಕ ನೀತಿ ವಿಷಯದಲ್ಲಿ ಡಿಪ್ಲೊಮ ಪೂರೈಸಿರುವ ಸುಹಾಸ್‌ನನ್ನು 16 ವರ್ಷವಿರುವಾಗ ಸಿಎನ್‌ಬಿಸಿ ಮತ್ತು ಇ-ಬಿಸಿನೆಸ್ `ವಿಶ್ವದ ಅತಿ ಕಿರಿಯ ಸಿಇಒ~ ಎಂದು ಗುರುತಿಸಿದವು.ನಂತರ 2003ಲಿಮ್ಕಾ ದಾಖಲೆಗೂ ಸೇರ್ಪಡೆಯಾದರು. ಯುರೋಪಿಯನ್ ಪಾರ್ಲಿಮೆಂಟ್ ಮತ್ತು ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ 2007ರಲ್ಲಿ `ಅತಿ ಕಿರಿಯ ಸಾಧಕ~ ಎಂಬ ಬಿರುದನ್ನೂ ನೀಡಿ ಗೌರವಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.