ಸೋಮವಾರ, ಜನವರಿ 27, 2020
28 °C

ಪುತ್ರ ವ್ಯಾಮೋಹಿ ಶಿಲ್ಪಾ

–ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ತಾಯ್ತನದ ಸುಖವನ್ನು ಭರ್ತಿಯಾಗಿ ಆನಂದಿಸುತ್ತಿರುವ ಶಿಲ್ಪಾ ಶೆಟ್ಟಿ ಈಗ ಏಕಕಾಲಕ್ಕೆ ನಟಿ, ಉದ್ಯಮಿ ಮತ್ತು ತಾಯಿಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮದುವೆ ನಂತರ ನನ್ನ ಜೀವನ ಬಹಳ ಸುಂದರವಾಗಿದೆ ಎನ್ನುವ ಶಿಲ್ಪಾ ಶೆಟ್ಟಿಗೆ ಈಗ ಮಗನೇ ಸರ್ವಸ್ವವಂತೆ. ಅಂದಹಾಗೆ, ಶಿಲ್ಪಾ ಈಗ ಮತ್ತಷ್ಟು ತೆಳ್ಳಗಾಗಿದ್ದಾರೆ. ತಮ್ಮ ಸುಂದರ ಕಾಯದ ಸೊಬಗು ಎದ್ದು ಕಾಣಿಸುವಂತೆ ಚೆಂದವಾಗಿ ಅಲಂಕರಿಸಿಕೊಂಡು ಬಂದಿದ್ದ ಶಿಲ್ಪಾ ಶೆಟ್ಟಿ ಝಗಮಗಿಸುವ ತಮ್ಮ ಚೆಲುವಿನಿಂದ ಮೊನ್ನೆ ಬೆಂಗಳೂರಿನಲ್ಲಿ ಮಿಂಚು ಹರಿಸಿದರು.ಶಿಲ್ಪಾ ಶೆಟ್ಟಿ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ ಜನರೆಲ್ಲಾ ಜಯನಗರದ ಕಾಸ್ಮೋಪಾಲಿಟನ್‌ ಕ್ಲಬ್‌ ಎದುರಿನ ರಸ್ತೆಯಲ್ಲಿ ಜಮಾಯಿಸಿದ್ದರು. ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಒಂದು ಗಂಟೆಯಿಂದಲೂ ಕಾಯುತ್ತಿದ್ದರು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ಶಿಲ್ಪಾ ಶೆಟ್ಟಿ ಕಾರಿನಿಂದ ಇಳಿಯುತ್ತಿದ್ದಂತೆ, ಆಕೆಯನ್ನು ನೋಡಿದ ಜನರು ಉತ್ಸಾಹದಿಂದ ಕೂಗಿದರು. ಕೆಲವರು ಹಸ್ತಲಾಘವ ನೀಡಲು ಮುಂದಾದರು, ಮತ್ತೆ ಕೆಲವರು ಆಟೋಗ್ರಾಫ್‌ ಪಡೆದುಕೊಳ್ಳಲು ಮುಗಿಬಿದ್ದರು. ಶಿಲ್ಪಾ ಅಭಿಮಾನಿಗಳ ಇಂತ ಸಣ್ಣ ಆಸೆಗಳಿಗೆಲ್ಲ ತಣ್ಣೀರೆರಚಿದ್ದು ಆಕೆಯ ಅಂಗರಕ್ಷಕರು. ಜನರು ಶಿಲ್ಪಾ ಹತ್ತಿರಕ್ಕೆ ಸುಳಿಯದಂತೆ ಅವರನ್ನು ಸುರಕ್ಷಿತವಾಗಿ ಮಳಿಗೆಯ ಒಳಕ್ಕೆ ಕರೆತಂದರು. ಆನಂತರ, ಮಾತಿಗೆ ಸಿಕ್ಕ ಶಿಲ್ಪಾ ಶೆಟ್ಟಿ ರಸವತ್ತಾಗಿ ಮಾತನಾಡಿದರು.‘ವಿಮಾನ ಅರ್ಧ ಗಂಟೆ ತಡವಾಗಿ ಹೊರಟರೇ ಏನೆಲ್ಲಾ ಆಗುತ್ತೇ ನೋಡಿ. ಊಟ ಮಾಡೋದು ತಡವಾಗುತ್ತೆ. ವಿಮಾನ ನಿಲ್ದಾಣದಿಂದ ನಗರದೊಳಕ್ಕೆ ಬರಲು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತೆ. ಇಲ್ಲಿಗೆ ಬಂದ ಮೇಲೆ ರಿಫ್ರೆಶ್‌ ಆಗಿ ಮೇಕಪ್‌ ಮಾಡಿಕೊಂಡು ನಿಮ್ಮ ಮುಂದೆ ಬರುವಷ್ಟರಲ್ಲಿ ಇಷ್ಟೋತ್ತಾಯ್ತು’ ಅಂತ ಹೇಳಿ ನಕ್ಕರು.ಕನ್ನಡದಲ್ಲಿ ಮಾತನಾಡಿ ಎಂಬ ಕೋರಿಕೆಗೆ ಮನ್ನಿಸಿದ ಶಿಲ್ಪಾ ‘ಚೆನ್ನಾಗಿದ್ದೀರಾ’ ಅಂತ ಒಂದು ಪದವನ್ನು ಚೆಂದವಾಗಿ ಹೇಳಿ ನಕ್ಕರು. ‘ನನಗೆ ಕನ್ನಡ ಭಾಷೆಯೊಂದಿಗಿನ ನಂಟು ತಪ್ಪಿರುವುದರಿಂದ ಕನ್ನಡ ಮಾತನಾಡಲು ತುಸು ಕಷ್ಟವಾಗುತ್ತದೆ. ತುಳು ಚೆನ್ನಾಗಿ ಬರುತ್ತದೆ. ಮಾತನಾಡಲೇ?’ ಎಂದ ಶಿಲ್ಪಾ ಅವರಿಗೆ ಮಂಗಳೂರಿನಂತೆ ಬೆಂಗಳೂರು ಸಹ ಇಷ್ಟವಾಗುತ್ತದಂತೆ. ‘ನನಗೆ ಬೆಂಗಳೂರಿನಲ್ಲಿ ಸಾಕಷ್ಟು ಸಂಬಂಧಿಕರಿದ್ದಾರೆ. ಈ ನಗರಕ್ಕೆ ಬರುವುದೆಂದರೆ ನನಗೆ ಖುಷಿಯಾಗುತ್ತದೆ. ನಾ ಹುಟ್ಟಿ ಬೆಳೆದ ಮಂಗಳೂರಿನ ಮೇಲೆ ಇರುವಷ್ಟೇ ಪ್ರೀತಿ ಬೆಂಗಳೂರಿನ ಮೇಲೂ ಇದೆ’ ಎಂದರು.2009ರಲ್ಲಿ ರಾಜ್‌ ಕುಂದ್ರಾ ಅವರನ್ನು ಮದುವೆಯಾದ ನಂತರ ಶಿಲ್ಪಾ ಶೆಟ್ಟಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬೆಳ್ಳಿತೆರೆಗೆ ಬೆನ್ನು ತೋರಿದ್ದು ಯಾಕೆ ಎಂಬ ಪ್ರಶ್ನೆಗೆ ಶಿಲ್ಪಾ ಉತ್ತರಿಸಿದ್ದು ಹೀಗೆ: ‘ಸಿನಿಮಾಗಳಲ್ಲಿ ಅಭಿನಯಿಸುವುದು ನನಗೆ ತುಂಬ ಇಷ್ಟ. ಆದರೆ, ಅದಕ್ಕೆ ಈಗ ಸಮಯ ಹೊಂದಿಸಿಕೊಳ್ಳುವುದು ತುಂಬ ಕಷ್ಟವಾಗುತ್ತಿದೆ. ನಮ್ಮಿಬ್ಬರ ಬಾಳಿನಲ್ಲಿ ಈಗ ಮಗ ಕಾಲಿಟ್ಟಿದ್ದಾನೆ.ಅವನೇ ನನಗೆ ಸರ್ವಸ್ವ. ನನ್ನ ದಿನದ 24 ಗಂಟೆಯನ್ನು ಅವನಿಗೆ ಮಾತ್ರ ಮೀಸಲಿಡುತ್ತಿದ್ದೇನೆ. ಹಾಗಾಗಿ, ನಾನೀಗ ಪಾರ್ಟ್‌ ಟೈಂ ಲೆಕ್ಕದಲ್ಲಿ ಟೀವಿ ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾ ಒಪ್ಪಿಕೊಂಡರೆ ಅದಕ್ಕಾಗಿ ಸಾಕಷ್ಟು ಸಮಯ ಮೀಸಲಿಡಬೇಕು. ಸಿನಿಮಾದಲ್ಲಿ ನಟಿಸಲು ಹೊರಟರೇ ನನ್ನ ಮಗನನ್ನು ಮಿಸ್‌ ಮಾಡಿಕೊಳ್ಳಬೇಕಾಗುತ್ತದೆ. ಈ ಒಂದು ಕಾರಣಕ್ಕಾಗಿಯೇ ನಾನು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಟೀವಿ ಷೋಗಳಾದರೆ ಅಡ್ಡಿಯಿಲ್ಲ. ಯಾಕೆಂದರೆ, ಅವುಗಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭ. ಹಾಗಂತ, ಇನ್ನು ಮುಂದೆ ಸಿನಿಮಾದಲ್ಲಿ ನಟಿಸುವುದಿಲ್ಲ ಅಂತಲ್ಲ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಅಷ್ಟೆ. ನನ್ನೆಲ್ಲಾ ಸಮಯವನ್ನು ಮಗನಿಗೆ ಮೀಸಲಿಟ್ಟಿರುವುದರಿಂದ ಈಗ ನಾನು ನನ್ನ ಗಂಡನಿಗೆ ಪಾರ್ಟ್‌ ಟೈಂ ಹೆಂಡತಿ ಆಗಿಬಿಟ್ಟಿದ್ದೇನೆ’ ಎಂದು ನಕ್ಕರು ಶಿಲ್ಪಾ.ಕನಕಾಂಬರ ಹೂ ಬಣ್ಣದ ಸೀರೆಯುಟ್ಟಿದ್ದ ಶಿಲ್ಪಾ ಶೆಟ್ಟಿ ಅದಕ್ಕೆ ಹೊಂದುವಂತಹ ಕೆನೆ ಬಣ್ಣದ ಸ್ಲೀವ್‌ಲೆಸ್‌ ರವಿಕೆ ಧರಿಸಿದ್ದರು. ಅದರ ಮೇಲೆಲ್ಲಾ ಮುತ್ತಿನ ಕುಸುರಿ ಕಲೆಯಿತ್ತು. ಕತ್ತಿನ ಕೆಳಭಾಗದ ಸೌಂದರ್ಯವನ್ನು ತೋರುವಂತೆ ಸೆರಗು ಹೊದ್ದಿದ್ದ ಶಿಲ್ಪಾ ಕೊರಳಲ್ಲಿ ವಜ್ರಖಚಿತ ಮುತ್ತಿನ ನೆಕ್ಲೇಸ್‌ ಮಿನುಗುತ್ತಿತ್ತು. ಒಂದು ಮಗುವಿನ ತಾಯಿಯಾದರೂ ಮೀನಿನಂತೆ ಬಳುಕುವ ಸೌಂದರ್ಯ ಉಳಿಸಿಕೊಂಡಿರುವ ಶಿಲ್ಪಾ ಅವರನ್ನು ತಮ್ಮ ದೇಹಾಕಾರದ ಹಿಂದಿನ ಗುಟ್ಟಿನ ಬಗ್ಗೆ ಕೇಳಿದರೆ ಉತ್ತರಿಸಿದ್ದು ಹೀಗೆ:‘ನಾನು ಸಿಕ್ಕಾಪಟ್ಟೆ ತಿನ್ನುತ್ತೇನೆ. ರೋಟಿ, ನಾನ್‌ ಅಂದ್ರೆ ಇಷ್ಟ. ಕ್ಯಾರೆಟ್‌ ಹಲ್ವಾ ತುಂಬಾ ಅಚ್ಚುಮೆಚ್ಚು. ಸಿಹಿತಿನಿಸುಗಳು ತುಂಬಾನೇ ಇಷ್ಟ. ಆಹಾರದಲ್ಲಿ ನಾನು ಯಾವತ್ತೂ ಕಟ್ಟುನಿಟ್ಟು ಮಾಡುವುದಿಲ್ಲ. ಚೆನ್ನಾಗಿ ಊಟಮಾಡುತ್ತೇನೆ. ಆದರೆ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದೇನೆ. ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ನಾನು ತುಂಬ ಕಾಳಜಿ ತೋರುತ್ತೇನೆ. ಕೂದಲು ಮತ್ತು ತ್ವಚೆಯ ಅಂದಕ್ಕಾಗಿ ನಿತ್ಯ ಆರು ನೆನೆಸಿದ ಬಾದಾಮಿ ಮತ್ತು ವಾಲ್‌ನಟ್ಸ್‌ ತಿನ್ನುತ್ತೇನೆ. ಚೆನ್ನಾಗಿ ನೀರು ಕುಡಿಯುತ್ತೇನೆ. ನಿತ್ಯ ವ್ಯಾಯಾಮ ಮಾಡುತ್ತೇನೆ. ಇದೇ ನನ್ನ ಸುಂದರ ಕಾಯದ ಗುಟ್ಟು’.ಅಂದಹಾಗೆ, ಬೆಂಗಳೂರಿನಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿರುವ ಪಿಸಿ ಜ್ಯುವೆಲರ್ಸ್‌ ಮಳಿಗೆ ಉದ್ಘಾಟನೆಗೆಂದು ಆಗಮಿಸಿದ್ದ ಶಿಲ್ಪಾ ತಮ್ಮ ಆಭರಣ ಪ್ರೀತಿಯನ್ನೂ ಈ ವೇಳೆ  ಹೇಳಿಕೊಂಡರು. ‘ದಿವಿನಾದ ಆಭರಣಗಳೆಂದರೆ ನನಗೆ ಅಚ್ಚುಮೆಚ್ಚು. ಸುಮಾರು 15 ವರ್ಷಗಳಿಂದಲೂ ನಾನು ಆಭರಣ ಖರೀದಿ ಮಾಡುತ್ತಿದ್ದೇನೆ. ಆಕರ್ಷಕ ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣಗಳು ನನಗೆ ತುಂಬ ಇಷ್ಟವಾಗುತ್ತವೆ. ಪಿಸಿ ಜ್ಯುವೆಲರ್ಸ್‌ ನನ್ನ ಅಚ್ಚುಮೆಚ್ಚಿನ ಆಭರಣ ಖರೀದಿ ತಾಣ. ಇಲ್ಲಿ ಮನಮೋಹಕ ಸಂಗ್ರಹವಿದೆ’ ಎಂದರು.

 

ಪ್ರತಿಕ್ರಿಯಿಸಿ (+)