ಭಾನುವಾರ, ಜನವರಿ 26, 2020
28 °C

ಪುನರ್ವಸತಿಯಲ್ಲಿ ಪರಿಹಾರ

ಪ್ರವೀಣ್ ಭಾರ್ಗವ್‌ Updated:

ಅಕ್ಷರ ಗಾತ್ರ : | |

ಬಂಡೀಪುರ ಅರಣ್ಯದ ಅಂಚಿನಲ್ಲಿ ಹುಲಿಯು ಮನುಷ್ಯರನ್ನು ಕೊಂದಿರುವ ವಿಚಾರ ಕಳವಳಕಾರಿ.  ಈ ವಿಚಾರ ಮುಂದಿಟ್ಟುಕೊಂಡು ಆ ಭಾಗದಲ್ಲಿ ಜನರ ಭಾವನೆ ಕೆರಳಿಸುವ ಪ್ರಯತ್ನಗಳು ನಡೆಯುತ್ತಿವೆ. ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ದುರ್ಘಟನೆಯೊಂದರಲ್ಲಿ ಕಳೆದುಕೊಳ್ಳುವುದು ಅತ್ಯಂತ ನೋವಿನ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಪ್ರಾಕೃತಿಕ ವಿಕೋಪಗಳು, ಭಯೋತ್ಪಾದನೆ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಗೆ ಹೋಲಿಸಿದರೆ, ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದಿಂದ ಸಾವನ್ನಪ್ಪುವವರ ಸಂಖ್ಯೆ ತೀರಾ ಕಡಿಮೆ. ಜೀವ ಕಳೆದುಕೊಂಡವರ ಕುಟುಂಬಕ್ಕೆ ಶೀಘ್ರಗತಿಯಲ್ಲಿ ಪರಿಹಾರ ವಿತರಣೆ ಆಗಬೇಕು.ಇಲ್ಲಿ ಒಂದು ವಿಚಾರ ಸ್ಪಷ್ಟಪಡಿಸಬೇಕು. ನಾಗರಹೊಳೆ ಹುಲಿ ಅಭಯಾರಣ್ಯದ ಬೇಟೆ ತಡೆ (anti-poaching) ತಂಡದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಹುಲಿಯೊಂದು ಬೇಟೆಯಾಡಿ ಕೊಂದ ಘಟನೆಗೂ ಬಂಡೀಪುರ ಭಾಗದಿಂದ ವರದಿಯಾಗಿರುವ ನರಭಕ್ಷಕನ ಕೃತ್ಯಗಳಿಗೂ ಸಂಬಂಧ ಇಲ್ಲ. ಸಂಜೆ ಹೊತ್ತಿನ ಮಂದ ಬೆಳಕಿನಲ್ಲಿ ಒಂದೆಡೆ ಕುಳಿತು ಗೆಡ್ಡೆ-ಗೆಣಸು ಸಂಗ್ರಹಿಸುತ್ತಿದ್ದ ಅರಣ್ಯ ವೀಕ್ಷಕನನ್ನು ಹುಲಿಯು  ಬೇಟೆಯ ಪ್ರಾಣಿ ಎಂದು ಭಾವಿಸಿಕೊಂಡು ಕೊಂದಿರುವ ಸಾಧ್ಯತೆ ಇದೆ. ಹಾಗೆಯೇ, ಬಂಡೀಪುರ ಅರಣ್ಯಕ್ಕೆ ಮೃಗಾಲಯದ ಪ್ರಾಣಿಯೊಂದನ್ನು ಬಿಡಲಾಗಿದೆ ಎಂಬ ವರದಿಯೂ ಸಂಪೂರ್ಣ ನಿರಾಧಾರ.ಅರಣ್ಯ ಇಲಾಖೆ ಮೇಲೆ ತಮಗಿರುವ ಸಿಟ್ಟು ತೀರಿಸಿಕೊಳ್ಳಲು ಕೆಲವು ಸ್ಥಳೀಯರು ಇಂಥ ಗಾಳಿಸುದ್ದಿಗಳನ್ನು ಹರಿಬಿಟ್ಟಿರುವಂತಿದೆ. ಅವರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವನ್ಯಜೀವಿಗಳ ಸಂರಕ್ಷಣೆಯ ವಿಚಾರವನ್ನು ಬೆಂಬಲಿಸುತ್ತಿರುವ ಮಾಧ್ಯಮಗಳೂ ಇಂಥ ವರದಿಗಳನ್ನು ಪ್ರಕಟಣೆ, ಪ್ರಸಾರದ ಮೊದಲು ಪರಾಮರ್ಶೆಗೆ ಒಳಪಡಿಸಬೇಕು.ಹಾಗಾದರೆ ವಾಸ್ತವ ಏನು? ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಏನು? ಹುಲಿಗಳು ತಮ್ಮದೇ ಆದ ಪ್ರದೇಶದಲ್ಲಿ ವಾಸಿಸುತ್ತವೆ. ಅವುಗಳ ಚಲನವಲನಗಳು ಒಂದು ಪ್ರದೇಶದ ವ್ಯಾಪ್ತಿಯಲ್ಲಿ ಮಾತ್ರ ಇರುತ್ತವೆ. ಹುಲಿಗಳ ಸಂರಕ್ಷಣೆಗೆ ನಾಗರಹೊಳೆ ಮತ್ತು ಬಂಡೀಪುರ ವಲಯದಲ್ಲಿ ಹಿಂದಿನಿಂದಲೂ ಆದ್ಯತೆ ನೀಡಿರುವುದರಿಂದ ಆ ಭಾಗದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮದೇ ಆದ ಒಂದು ವಲಯ ಅಥವಾ ಜಾಗದ ಮೇಲೆ ಆಧಿಪತ್ಯ ಸ್ಥಾಪಿಸಿಕೊಳ್ಳಬೇಕು ಎಂದು ಹುಲಿಗಳ ನಡುವೆ ನಡೆಯುವ ಕಾದಾಟದಿಂದಾಗಿ, ದುರ್ಬಲವಾಗಿರುವ ಹುಲಿಗಳು ಅರಣ್ಯದ ಅಂಚಿಗೆ ಸರಿಯುತ್ತವೆ. ಆಗ ಅವು ಮನುಷ್ಯನ ಜೊತೆ ಸಂಘರ್ಷ ಎದುರಿಸಬೇಕಾಗುತ್ತದೆ.ಅರಣ್ಯದ ಅಂಚಿಗೆ ಸರಿದ, ಗಾಯಗೊಂಡ, ಮನುಷ್ಯರನ್ನು ಬೇಟೆಯಾಡುತ್ತಿರುವ ವ್ಯಾಘ್ರಗಳನ್ನು ಅತ್ಯಂತ ಶೀಘ್ರಗತಿಯಲ್ಲಿ ಆ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು. ಇದು ವೈಜ್ಞಾನಿಕವಾಗಿಯೂ ಸರಿ. ಒಂದೆರಡು ನರಭಕ್ಷಕ ಹುಲಿಗಳು ನಡೆಸುವ ಕೃತ್ಯದಿಂದಾಗಿ, ಹುಲಿಗಳ ಸಂರಕ್ಷಣೆಗೆ ಸಾರ್ವಜನಿಕರ ಬೆಂಬಲ ಇಲ್ಲದಂತೆ ಆಗಬಾರದು. ನಮ್ಮ ಗುರಿ, ಹುಲಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಕಾಪಾಡುವುದೇ ಆಗಿರಬೇಕು.ನರಭಕ್ಷಕನಾಗಿ ಪರಿವರ್ತನೆಗೊಂಡ ಹುಲಿಗಳನ್ನು ಹಿಡಿಯುವುದು ಅಥವಾ ಅವುಗಳನ್ನು ಕೊಲ್ಲುವುದು ಅತ್ಯಂತ ಸೂಕ್ಷ್ಮ ಕೆಲಸ. ಸ್ವಯಂಘೋಷಿತ ಬೇಟೆಗಾರರ ಕೈಗೆ ಈ ಕೆಲಸ ಒಪ್ಪಿಸುವುದು, ನಂತರ ಅವರು ಮೃತ ಹುಲಿಯ ಎದುರು ಫೋಟೊ ತೆಗೆಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಅವಕಾಶ ನೀಡಬಾರದು. ಹಿಡಿದ ಅಥವಾ ಕೊಂದ ನರಭಕ್ಷಕನನ್ನು ಜನರ ಗುಂಪಿನ ನಡುವಿನಿಂದ ಕೊಂಡೊಯ್ಯುವ ಕೆಲಸವೂ ಸಲ್ಲದು. ಸೂಕ್ತ ತರಬೇತಿ ಇಲ್ಲದ, ಸ್ವಘೋಷಿತ ತಜ್ಞರು  ನರಭಕ್ಷಕ ಹುಲಿಯ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಕಡಿವಾಣ ಹಾಕಬೇಕು.ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅವುಗಳ ಹಕ್ಕುಗಳನ್ನು ಕಾಪಾಡಬೇಕು. ಆದರೆ ಅರಣ್ಯ ಹಕ್ಕುಗಳ ಕಾಯ್ದೆಯ ಅಡಿ, ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ  ಅಭಯಾರಣ್ಯ ಮತ್ತು ನಾಗರಹೊಳೆ ಅಭಯಾರಣ್ಯದ ಕೆಲವು ಭಾಗಗಳಿಂದ ಎಲ್ಲ ಬಗೆಯ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಅವಕಾಶ ನೀಡಲಾಗಿದೆ. ಇದು ನಮ್ಮ ಚಿಂತೆಗೆ ಕಾರಣ. ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಅಭಯಾರಣ್ಯದೊಳಗೆ ಹೋಗುವ ಜನ ಅಲ್ಲಿನ ಹುಲಿಗಳು ಸೇರಿದಂತೆ ಇತರ ವನ್ಯಜೀವಿಗಳ ಜೊತೆ ಸಂಘರ್ಷಕ್ಕೆ ಒಳಗಾಗುವ ಅಪಾಯ ಇದೆ. ಹೀಗೆ ಸಂಘರ್ಷ ಏರ್ಪಟ್ಟು ಮನುಷ್ಯರು ಬಲಿಯಾದಾಗ ವನ್ಯಜೀವಿಗಳಿಗೆ ‘ಪುಂಡ’ ಎಂಬ ಹೆಸರು ಬರುತ್ತದೆ.ಇಂಥ ಘಟನೆಗಳು ಬಂಡೀಪುರ ಮತ್ತು ನಾಗರಹೊಳೆಯಂಥ ಪ್ರದೇಶಗಳಲ್ಲಿ ಮತ್ತೆ ಮತ್ತೆ ಆಗುವ ಸಾಧ್ಯತೆಯೇ ಹೆಚ್ಚು. ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ತಡೆಯಲು ವೈಜ್ಞಾನಿಕ ಮಾಹಿತಿ ಆಧರಿಸಿದ ಸೂಕ್ತ ಯೋಜನೆ ರೂಪಿಸಬೇಕು. ದೀರ್ಘಾವಧಿ ಯೋಜನೆಯಾಗಿ, ಹುಲಿ ಅಭಯಾರಣ್ಯಗಳ ನಡುವಿನಲ್ಲಿ ವಾಸಿಸುತ್ತಿರುವವರನ್ನು ಬೇರೆಡೆ ಸ್ಥಳಾಂತರಿಸಿ ಅವರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.ಅರಣ್ಯ ಉತ್ಪನ್ನಗಳ ಮೇಲಿನ ಅಧಿಕಾರದ ಪ್ರಶ್ನೆಯನ್ನು ನ್ಯಾಯಸಮ್ಮತವಾಗಿ ಪರಿಹರಿಸಿ, ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಶಾಶ್ವತ ಸ್ವರೂಪ ಪಡೆಯದಂತೆ  ನಿಗಾ ವಹಿಸಬೇಕು. ನಾಗರಹೊಳೆ ಭಾಗದ ಹಲವು ಪ್ರದೇಶಗಳಲ್ಲಿ ಈ ಪ್ರಯತ್ನ ಜಾರಿಯಲ್ಲಿದೆ. ಹಲವರು ಅರಣ್ಯದಿಂದ ಹೊರಬರಲು ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಈ ಪ್ರಯತ್ನಕ್ಕೆ ಚುರುಕು ನೀಡಬೇಕು. ಪುನರ್ವಸತಿ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ದೀರ್ಘಾವಧಿ ಯೋಜನೆಯು ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಬಹುಮಟ್ಟಿಗೆ ನಿವಾರಿಸುತ್ತದೆ.

(ಲೇಖಕರು: ‘ವೈಲ್ಡ್‌ಲೈಫ್ ಫಸ್ಟ್‌’ನ ಟ್ರಸ್ಟಿ)

ಬೇಕು ವಿಶೇಷ ತಂಡ

ಸಂಘರ್ಷ ತಡೆಗೆ ಪಾರಿಸರಿಕ ಮತ್ತು ಸಾಮಾಜಿಕ ಪರಿಹಾರಗಳೆರಡನ್ನೂ ಕ್ರೋಡೀಕರಿಸಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸ ಬೇಕು. ಹುಲಿ–ಮನುಷ್ಯನ ಸಂಘರ್ಷ ಮುಂದಿನ ದಿನಗಳಲ್ಲಿ ಇತರ ಹುಲಿ ಸಂರಕ್ಷಿತ ಪ್ರದೇಶಗಳ ಲ್ಲಿಯೂ ಕಂಡುಬರಬಹುದು. ಅಂತಹ ಸ್ಥಿತಿ  ನಿಭಾಯಿಸಲು ಈಗಲೇ ಕಾರ್ಯ ಯೋಜನೆ ರೂಪಿಸ ಬೇಕು. ಹುಲಿ, ಚಿರತೆ, ಆನೆ, ಕರಡಿ ಮೊದಲಾದ ಜೀವಹಾನಿ ಮಾಡುವಂತಹ ಪ್ರಾಣಿಗಳ ಸಂಘರ್ಷವನ್ನು ನಿಭಾಯಿಸಲು ತರಬೇತಾದ ವಿಶೇಷ ತಂಡಗಳನ್ನು ಅರಣ್ಯ ಇಲಾಖೆಯಲ್ಲಿ ರಚಿಸಬೇಕು.ಸಂಘರ್ಷಕ್ಕೆ ಹೆಚ್ಚಿಗೆ ಎಡೆಮಾಡಿ ಕೊಡಬಹುದಾದ  ವನ್ಯಜೀವಿಧಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಈ ತಂಡಗಳು ಇರಬೇಕು.  ಹಾಗೆಯೇ ಸಂಘರ್ಷ ತಪ್ಪಿಸುವ ಮಾರ್ಗೋಪಾಯಗಳ ಕಡೆಗೂ ಗಮನ ಹರಿಸಬೇಕು. ಸಕಲೇಶಪುರ ತಾಲ್ಲೂಕಿನ ಆನೆ ಆವಾಸ ಸ್ಥಾನಗಳಲ್ಲಿ ಕಿರು ಜಲವಿದ್ಯುತ್ ಯೋಜನೆ ಗಳಿಗೆ ಅನುಮತಿ ಕೊಟ್ಟ ಕಾರಣ ಘಟ್ಟದ ಕೆಳಗಿನ ಸುಬ್ರಹ್ಮಣ್ಯ, ಶಿರಿಬಾಗಿಲು, ಬಿಳಿನೆಲೆ, ಬಾಳಗೋಡು, ಸಂಪಾಜೆ, ಅರಂತೋಡು ಮುಂತಾದ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆಗಳಿಂದ ರೈತರ ಬೆಳೆ ಮತ್ತು ಪ್ರಾಣ ಹಾನಿಯಾಗಿದೆ.

ಆದ್ದರಿಂದ ವನ್ಯಜೀವಿಗಳ ಪ್ರಮುಖ ಆವಾಸ ಸ್ಥಾನಗಳನ್ನು ಅರಣ್ಯೇತರ ಚಟುವಟಿಕೆಗಳಿಗೆ ಪರಭಾರೆ ಮಾಡುವುದನ್ನು ನಿಲ್ಲಿಸ ಬೇಕು. ವನ್ಯಜೀವಿ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೆಲವು ಪ್ರದೇಶಗಳಲ್ಲಿ ಪ್ರತ್ಯೇಕಿಸಲೇಬೇಕಾಗಿದೆ.

–ಸಂಜಯ್‌ ಗುಬ್ಬಿ, ವನ್ಯಜೀವಿ ವಿಜ್ಞಾನಿ.

ಸ್ಥಳಾಂತರ ತಂದ ನೆಮ್ಮದಿ

ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಿಂದೆ ಜನರು ವಾಸ ಮಾಡುತ್ತಿದ್ದಾಗ ಕಾಡು ಪ್ರಾಣಿಗಳಿಂದ ಜೀವ ಮತ್ತು ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸಾಹಸವೇ ಆಗಿತ್ತು. ವರ್ಷದ ಎರಡು ಮೂರು ತಿಂಗಳು ನಿದ್ದೆಯನ್ನೇ ಮಾಡದ ಸ್ಥಿತಿ ಇರುತ್ತಿತ್ತು. ಪ್ರಾಣಿಗಳು ತಿಂದುಬಿಟ್ಟ ಬೆಳೆಯನ್ನು ಮಾತ್ರ ಕೊಯ್ಲು ಮಾಡಿ ಕೊಳ್ಳುವ ಸ್ಥಿತಿ ಇತ್ತು. ದಶಕಗಳಿಂದ ಸಂಘರ್ಷ ನಡೆಸುತ್ತಲೇ ಬದುಕು ನಡೆಸಿಕೊಂಡು ಬಂದಿದ್ದರು.2002ರಲ್ಲಿ 13 ಹಳ್ಳಿಗಳ ಜನರು ಬೇರೆಡೆಗೆ ಸ್ಥಳಾಂತರವಾಗಿ ನೆಲೆಕಂಡುಕೊಂಡ ಮೇಲೆ ಈಗ ಸಂಘರ್ಷ ಅಂತ್ಯಗೊಂಡಿದೆ, ಅವರೆಲ್ಲರೂ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಉಳಿದಿರುವವರು ಈಗ ಇದೇ ಸಮಸ್ಯೆ ಎದುರಿಸುತ್ತಿದ್ದು, ಬೇರೆಡೆ ನೆಲೆ ಕಂಡು ಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಪ್ರತಿಕ್ರಿಯಿಸಿ (+)