ಸೋಮವಾರ, ಮೇ 23, 2022
20 °C

ಪುಸ್ತಕಗಳಿಗೆ ಶೇ 10 ರಿಯಾಯಿತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪುಸ್ತಕ ಮಾರಾಟದಿಂದ ಉತ್ತೇಜಿತರಾಗಿರುವ ಪ್ರಕಾಶಕರು ಹಾಗೂ ಮಾರಾಟಗಾರರು ಮತ್ತೊಂದು ಅವಕಾಶಕ್ಕೆ ಎದುರು ನೋಡುತ್ತಿದ್ದು, ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಭರಪೂರ ಬೇಡಿಕೆ ವ್ಯಕ್ತಗೊಂಡಿದೆ.ವಿಶ್ವ ಕನ್ನಡ ಸಮ್ಮೇಳನ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆ ಉದ್ದೇಶದಿಂದ ಒಟ್ಟು 676 ಅರ್ಜಿಗಳು ಬಂದಿವೆ. ಆ ಪೈಕಿ ಅನೇಕ ಪ್ರಕಾಶಕರು, ಮಾರಾಟಗಾರರು ಒಂದಕ್ಕಿಂತ ಹೆಚ್ಚು ಬೇಡಿಕೆ ಮುಂದಿಟ್ಟಿದ್ದಾರೆ. ಅಂತಹವರ ಬೇಡಿಕೆಗಳಿಗೆ ಒಂದಿಷ್ಟು ಕಡಿವಾಣ ಹೇರಿ ಹಂಚಿಕೆ ಮಾಡಲು ಸಮ್ಮೇಳನ ಪುಸ್ತಕ ಪ್ರದರ್ಶನ ಸಮಿತಿ ನಿರ್ಧರಿಸಿದೆ.ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಉದ್ದೇಶದಿಂದ ಭಾರಿ ಪೆಂಡಾಲ್ ಹಾಕಿ, ಒಟ್ಟು 401 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ಕಚೇರಿ ಹಾಗೂ ಸ್ವಾಗತಕ್ಕಾಗಿ ಎರಡು ಮಳಿಗೆಗಳು ಮೀಸಲಿವೆ. ಅಂದರೆ ಪುಸ್ತಕ ಪ್ರಕಾಶಕರಿಗೆ ಹಾಗೂ ಮಾರಾಟಗಾರರಿಗೆ 399 ಮಳಿಗೆಗಳು ಲಭ್ಯವಿದ್ದು, ಆ ಎಲ್ಲ ಮಳಿಗೆಗಳು ಆಗಲೇ ಭರ್ತಿಯಾಗಿವೆ.ಹಂಚಿಕೆ: ‘ಆಯಕಟ್ಟಿನ ಸ್ಥಳಗಳಲ್ಲಿನ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣಕ್ಕೆ ಈ ಬಾರಿ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ವಿಶ್ವ ಕನ್ನಡ ಸಮ್ಮೇಳನ ಪುಸ್ತಕ ಪ್ರದರ್ಶನ ಮಾರಾಟ ಸಮಿತಿಯ ಕಾರ್ಯದರ್ಶಿ ಬಲವಂತರಾವ ಪಾಟೀಲ ಹೇಳುತ್ತಾರೆ.ರಿಯಾಯಿತಿ ಕಡ್ಡಾಯ: ‘ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾರಾಟಕ್ಕೆ ಇಡಲಾಗುವ ಎಲ್ಲ ಪುಸ್ತಕಗಳ ಮೇಲೆ ಕನಿಷ್ಠ ಶೇ 10ರಷ್ಟು ರಿಯಾಯಿತಿ ನೀಡಬೇಕು ಎಂದು ಪುಸ್ತಕ ಪ್ರದರ್ಶನ ಸಮಿತಿ ತೀರ್ಮಾನಿಸಿದೆ. ಜತೆಗೆ ಅಲ್ಲಿನ ಮಳಿಗೆಗಳಲ್ಲಿ ಗರಿಷ್ಠ ರಿಯಾಯಿತಿಯನ್ನು ಪ್ರಕಾಶಕರು, ಮಾರಾಟಗಾರರ ವಿವೇಚನೆಗೆ ಬಿಡಲಾಗಿದೆ. ಜತೆಗೆ ಕನ್ನಡ ಪುಸ್ತಕ ಪ್ರಾಧಿಕಾರ, ಅಕಾಡೆಮಿಗಳು ಪ್ರಕಟಿಸುವ ಪುಸ್ತಕಗಳನ್ನು ವಿಶೇಷ ರಿಯಾಯಿತಿಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಪುಸ್ತಕ ಮಾರಾಟ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಗುರುತಿನ ಪತ್ರ ತೋರಿಸಿ ಶೇ 33ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ’ಎಂದು ಅವರು ವಿವರಿಸಿದರು.ಸೌಲಭ್ಯ: ಪುಸ್ತಕ ಮಳಿಗೆ ಪೆಂಡಾಲ್ ಬಳಿಯಲ್ಲೇ ವಿ.ಕೃ. ಗೋಕಾಕ ಹೆಸರಿನ ಸಭಾ ವೇದಿಕೆ ಇರುತ್ತಿದ್ದು, ಸದರಿ ವೇದಿಕೆಯಲ್ಲಿ ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಫುಡ್‌ಕೋರ್ಟ್ ಸಹ ಸ್ಥಾಪಿಸಲಾಗುತ್ತಿದೆ.ಎಲ್ಲ ಮಳಿಗೆಗಳಲ್ಲಿ ಒಂದು ಟೇಬಲ್, ಎರಡು ಕುರ್ಚಿಗಳನ್ನು ಒದಗಿಸಲಾಗುತ್ತದೆ. ಜತೆಗೆ ಪುಸ್ತಕ ರ್ಯಾಕ್ ವ್ಯವಸ್ಥೆಯೂ ಇದೆ. ಆಸಕ್ತರು ಹಣ ಪಾವತಿಸಿ ಅಂತಹ ರ್ಯಾಕ್‌ಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಳಿಗೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬೆಂಗಳೂರಿನ ರುದ್ರೇಶ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.