ಸೋಮವಾರ, ಜನವರಿ 27, 2020
22 °C

ಪೂರ್ವ ಜಪಾನ್: ಅಣು ಸ್ಥಾವರ ಸ್ಥಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 ಟೋಕಿಯೊ (ಎಎಫ್ ಪಿ): ಪೂರ್ವ ಜಪಾನಿನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 5.7 ಪ್ರಮಾಣದಷ್ಟು ಭೂಕಂಪ ಸಂಭವಿಸಿದೆ. ಆದರೆ ಕಳೆದ ವರ್ಷದಲ್ಲಿ ನಡೆದ ಭೂಕಂಪದಿಂದ ಸ್ವಲ್ಪ ಜಖಂಗೊಂಡಿದ್ದ ಸಮೀಪದ ಫುಕುಶಿಮಾ ಅಣು ಸ್ಥಾವರಕ್ಕೆ ಏನೂ ಧಕ್ಕೆಯಾಗಿಲ್ಲ,  ಅಣು ಸ್ಥಾವರದ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಗಳು  ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಕಂಪದ ಕೇಂದ್ರ ಬಿಂದು ದಕ್ಷಿಣ ಫುಕುಶಿಮಾದ ಐವಕಿಯ ಪೂರ್ವದ ಶಾಂತಸಾಗರದಲ್ಲಿ 22 ಕಿ.ಮೀ ದೂರದಲ್ಲಿ, ಸುಮಾರು ಒಂಬತ್ತು ಕಿ.ಮೀ ಆಳದಲ್ಲಿ ಇತ್ತೆಂದು ಅಮೆರಿಕದ ಭೂಗರ್ಭ ಸರ್ವೆ ಇಲಾಖೆ ತಿಳಿಸಿದೆ.

ಈ ಭೂಕಂಪದಿಂದ ಸುನಾಮಿ ಉಂಟಾಗುವ ಸಾಧ್ಯತೆಗಳಿಲ್ಲ ಎಂದಿರುವ ಜಪಾನಿನ ಹವಾಮಾನ ಇಲಾಖೆಯು ಇದುವರೆಗೆ ಯಾವುದೇ ಬಗೆಯ ಆಸ್ತಿಪಾಸ್ತಿ ಹಾಗೂ ಜೀವ ಹಾನಿಯ ಕುರಿತು ವರದಿಗಳು ಬಂದಿಲ್ಲ ಎಂದು ಹೇಳಿಕೆ ನೀಡಿದೆ. 

ಸಮೀಪದಲ್ಲೇ ಭೂಕಂಪ ಸಂಭವಿಸಿದ್ದರೂ ಫುಕುಶಿಮಾ ದೈಚಿ ಅಣು ಸ್ಥಾವರಕ್ಕೆ ಧಕ್ಕೆಯಾಗಿಲ್ಲ. ಅದು ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅದನ್ನು ನೋಡಿಕೊಳ್ಳುತ್ತಿರುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ ಸ್ಪಷ್ಟಪಡಿಸಿದೆ.

ಕಳೆದ ವರ್ಷ 2011ರ ಮಾರ್ಚ್ ತಿಂಗಳಲ್ಲಿ ಜಪಾನಿನಲ್ಲಿ ರಿಕ್ಷರ್ ಮಾಪಕದಲ್ಲಿ 9.0 ಪ್ರಮಾಣದಷ್ಟು ಭೂಕಂಪ ಸಂಭವಿಸಿತ್ತು. ಆಗ  ಸಮುದ್ರಲ್ಲಿ ಉಂಟಾದ ದೈತ್ಯ ಸುನಾಮಿಗಳ ಅಲೆಗಳಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. 19,000ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ರಿಯಾಕ್ಟರ್ ನಲ್ಲಿ ತೊಂದರೆ ಕಾಣಿಸಿಕೊಂಡು  ಫುಕುಶಿಮಾ ಅಣುಸ್ಥಾವರಕ್ಕೆ ಧಕ್ಕೆಯಾಗಿತ್ತು.

ಅಣು ಸ್ಥಾವರದಲ್ಲಿ ಸೋರಿಕೆ ಉಂಟಾಗಿ, ಸ್ಥಾವರದ ಸುತ್ತಲಿನ ನೆಲ, ಜಲದಲ್ಲಿ ಅಣುವಿಕರಣ ಭೀತಿ ಮೂಡಿತ್ತು. ಹತ್ತು ಸಾವಿರಕ್ಕೂ ಅಧಿಕ ನಾಗರಿಕರನ್ನು ಸ್ಥಳಾಂತರಗೊಳಿಸಲಾಗಿತ್ತು.  ಮಾರ್ಚ್ ನಲ್ಲಿನ ದೊಡ್ಡ ಪ್ರಮಾಣದ ಭೂಕಂಪದ ಹಿಂದೆಯೇ ಅಲ್ಲಿ ಹಲವಾರ ಬಾರಿ ಭೂಮಿ ನಡುಗಿತ್ತು.

ಪ್ರತಿಕ್ರಿಯಿಸಿ (+)