ಸೋಮವಾರ, ಏಪ್ರಿಲ್ 12, 2021
29 °C

ಪೈಪ್‌ಲೈನ್‌ಗೆ ಧಕ್ಕೆ ಮಾಡಿದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ:  ಶಾಂತಿಸಾಗರದಿಂದ ನಗರಕ್ಕೆ ಪೂರೈಸುವ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿ ಮಾಡಿ ನೀರು ಪಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ನಗರಸಭೆ ಸದಸ್ಯರು ಹಾಗೂ ಆಯುಕ್ತರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಕೋರಿದಾಗ ಪ್ರತಿಕ್ರಿಯಿಸಿದ ಅವರು, ಪೈಪ್‌ಗಳನ್ನು ಒಡೆಯುವವರ ಬಗ್ಗೆ ಲಿಖಿತವಾಗಿ ದೂರು ನೀಡುವಂತೆ ಸೂಚಿಸಿದರು.ಕುಡಿಯುವ ನೀರಿನ ಪೈಪ್ ಒಡೆಯುವುದು ಅಕ್ಷಮ್ಯ ಅಪರಾಧ. ಇದೇ ರೀತಿ ಮುಂದುವರಿದಲ್ಲಿ 144 ಸೆಕ್ಷನ್ ಜಾರಿಗೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದರೆ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದರು.ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಹನುಮಂತಪ್ಪ ಅವರಿಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗಾಗಿ ಕೊಳವೆ ಬಾವಿಗಳನ್ನು ಹಾಕಿಸಿ ನೀರು ಪೂರೈಸಿ ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯ್ತಿ ಸಿಇಒ ನಾರಾಯಣಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಜಿಲ್ಲಾಧಿಕಾರಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಕುರಿತು ಜನ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಮೊದಲು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗೆಹರಿಸಿ, ಕುಡಿಯುವ ನೀರಿಗಾಗಿ ಕೊಳವೆ ಬಾವಿ ಅಥವಾ ಸಿರಿಗೆರೆಗೆ ಶಾಂತಿಸಾಗರದಿಂದ ಕುಡಿಯುವ ನೀರಿನ ಪ್ರತ್ಯೇಕ ಪೈಪ್‌ಲೈನ್ ಮಾಡಿರುವಂತೆ ಮಾನಂಗಿ, ಸಿದ್ದಾಪುರ ಹಾಗೂ ಮಾಳಪ್ಪನಹಟ್ಟಿಗೂ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿ ಎಂದು ಸೂಚನೆ ನೀಡಿದರು.ನಗರಸಭೆ ಸದಸ್ಯ ಸಿ.ಟಿ. ಕೃಷ್ಣಮೂರ್ತಿ ಮಾತನಾಡಿ, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆ ನಡೆಯುತ್ತಿವೆ. ರಾಜಕಾರಣಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರಿಗೆ ತೊಂದರೆ ನೀಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಇದ್ದಕ್ಕಿದ್ದಂತೆ ಉದ್ಭವಿಸಲು ಕಾರಣ ಏನು ಎಂದು ಪ್ರಶ್ನಿಸಿದರು.ಮಾನಂಗಿ ಮತ್ತು ಸಿದ್ದಾಪುರ ಗ್ರಾಮದಲ್ಲಿ ಶಾಂತಿಸಾಗರದ ಪೈಪ್‌ಲೈನ್ ಒಡೆದು ನೀರನ್ನು ಕುಡಿಯುವುದಕ್ಕೆ ಮಾತ್ರವಲ್ಲದೆ ಬೇರೆ ಉದ್ದೇಶಕ್ಕೂ ಬಳಸುತ್ತಿದ್ದಾರೆ. ಆದರೆ, ನಗರದಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಸಂಬಂಧ ಗ್ರಾಮಸ್ಥರು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುವಂತೆ  ಸಿ.ಟಿ. ಕೃಷ್ಣಮೂರ್ತಿ ಮನವಿ ಮಾಡಿದರು.ನಗರಸಭೆ  ಮಾಜಿ ಉಪಾಧ್ಯಕ್ಷ ಅಲ್ಲಾಭಕ್ಷ್ ಮಾತನಾಡಿ, ಆ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರು ಈ ಸಮಸ್ಯೆಗೆ ಸ್ಪಂದಿಸಿ ಕೊಳವೆ ಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಬೇಕು. ಬದಲಿಗೆ, ಅವರು ಸೇರಿಕೊಂಡು ನಗರದ ಜನತೆಗೆ ತೊಂದರೆ ಮಾಡುವುದು ಸರಿಯಲ್ಲ ಎಂದರು.ಪೌರಾಯುಕ್ತೆ ಭಾರತಿ, ಸದಸ್ಯರಾದ ಪ್ರಕಾಶ್, ಗಾಡಿ ಮಂಜುನಾಥ್, ರುದ್ರಾಣಿ ಗಂಗಾಧರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ನಾಮ ನಿರ್ದೇಶಿತ ಸದಸ್ಯರಾದ ಎನ್.ಇ. ನಾಗರಾಜ್, ನಂಜುಂಡಸ್ವಾಮಿ, ಎಇಇ ಚಿದಾನಂದರೆಡ್ಡಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.