ಬುಧವಾರ, ಮೇ 18, 2022
23 °C

ಪೊರಕೆ ಮಾರುವವರ ಬಾಳದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊರಕೆ ಮಾರುವವರ ಬಾಳದಾರಿ

`ಇಲ್ಲಿಗೆ ಬಂದು ಹದಿನೈದು ವರ್ಷಗಳಾಗಿವೆ. ಆಗ ವಿದ್ಯಾಭ್ಯಾಸ ಇರಲಿಲ್ಲ. ಬಂಡವಾಳ ಹಾಕೋದಕ್ಕೆ ಕಾಸೂ ಇರಲಿಲ್ಲ. ಅಂತಹ ಸಮಯದಲ್ಲಿ ನನ್ನ ಕೈಹಿಡಿದಿದ್ದು ಪೊರಕೆ ವ್ಯಾಪಾರ. ನನ್ನ ಮುತ್ತಾತನಿಂದ ಈ ಕಸುಬು ಬಂದಿದೆ. ಆಗೆಲ್ಲಾ ನಮ್ಮ ವ್ಯಾಪಾರ ಚೆನ್ನಾಗಿ ನಡೀತಿತ್ತು. ಆದರೆ ಬಾಂಬೆ ಪೊರಕೆ ಬಂದಾಗಿಂದ ವ್ಯಾಪಾರ ಡೌನಾಗಿಬಿಟ್ಟದೆ, ಏನೂ ಗಿಟ್ಟೋದಿಲ್ಲ. ಮಕ್ಕಳಿಗೆ ದೃಷ್ಟಿ ತೆಗೆಯಲು ಮಾತ್ರ ಇದನ್ನು ಕೊಂಡುಕೊಳ್ಳುತ್ತಾರೆ.ಬರಿದಾದ ಕೈ ನೋಡಿಕೊಂಡರೆ ಹೆಂಡತಿ, ಮಕ್ಕಳ ಭವಿಷ್ಯ ನೆನಪಾಗಿ ಯೋಚನೆ ಶುರುವಾಗುತ್ತೆ~ ಹೀಗಂತ ಹೇಳಿಕೊಂಡವರು ಪೊರಕೆ ವ್ಯಾಪಾರಿ ಅರುಣ್.ಬೆಂಗಳೂರಿನಲ್ಲಿ ಓಕಳಿಪುರಂ ಎಲ್ಲರಿಗೂ ಚಿರಪರಿಚಿತ. ಮೆಜೆಸ್ಟಿಕ್ ಕಡೆ ಹೋಗುವವರೆಲ್ಲಾ ಇದರ ಮುಖ ನೋಡಲೇಬೇಕು. ವಾಹನಗಳ ಹಾರ್ನ್ ಸದ್ದು, ಟ್ರಾಫಿಕ್ ಅಬ್ಬರ ಇಲ್ಲಿನ ನಿತ್ಯ ನೋಟ. ಇತ್ತ ಚಲಿಸುವ ಎಲ್ಲರ ಮುಖದಲ್ಲೂ ಅದೇನೋ ಧಾವಂತ. ಆದರೆ ಇಷ್ಟೆಲ್ಲಾ ಗಿಜಿಗುಡುವ ಬದುಕಿನ ನಡುವೆಯೂ ಇದೊಂದು ಓಣಿಯಲ್ಲಿ ಮಾತ್ರ ಸದ್ದಿಲ್ಲದೆ ಪೊರಕೆ ಕಸುಬು ನಡೆಯುತ್ತಿರುತ್ತದೆ. ಪೊರಕೆ ಮಾಡುವಲ್ಲಿ ನಿರತರಾಗಿರುವ ಸಣ್ಣ ಜನಾಂಗ ಇಲ್ಲಿದೆ. ಸೂರ್ಯ ಹುಟ್ಟುವ ಮುನ್ನವೇ ಎದ್ದು ಕಾಯಕ ಆರಂಭಿಸುವ ಈ ಮಂದಿಗೆ ದಿನದ ವ್ಯಾಪಾರವೇ ಬದುಕಿನ ದಾರಿ.ಇವರ ಜೀವನಶೈಲಿಯೇ ವಿಭಿನ್ನ. ಓಣಿ ತುಂಬೆಲ್ಲಾ ಪೊರಕೆ ಕಡ್ಡಿಗಳೇ ಚೆಲ್ಲಾಡುವ ಇವರ ಮನೆಯಲ್ಲೂ ಪೊರಕೆ ಕಡ್ಡಿಗಳ ಗಂಟುಗಳೇ ತುಂಬಿರುತ್ತವೆ. ಚಿಕ್ಕದಾದ ಓಣಿ ಒಳಗೇ ಎಲ್ಲಾ ಕೆಲಸವೂ ಸಾಗಬೇಕು. ಬೆಳಿಗ್ಗೆ ಎದ್ದು ಪೊರಕೆಗಳ ಹೂವುಗಳನ್ನು (ಹೂಬುಗಳೆಂದೂ ಕರೆಯುತ್ತಾರೆ) ಶುದ್ಧಗೊಳಿಸಿ, ಕಟ್ಟಿ ಸೈಕಲ್ ಮೇಲೆ ತುಂಬಿಕೊಂಡು ಹೊರಟರೆ ಮತ್ತೆ ಬರುವುದು ಎಷ್ಟು ಹೊತ್ತಿಗೆ ಎಂದು ಹೇಳಲಾಗುವುದಿಲ್ಲ. ಒಬ್ಬೊಬ್ಬರೂ ಒಂದೊಂದು ಬೀದಿಯನ್ನು ಗೊತ್ತು ಮಾಡಿಕೊಂಡು ಹೊರಡುತ್ತಾರೆ. ಬೀದಿಬೀದಿ ಸುತ್ತಿಕೊಂಡು ಪೊರಕೆಗಳನ್ನು ಮಾರಲೇಬೇಕಾದ ಅನಿವಾರ್ಯತೆ ಇವರಿಗೆ. `ಕೆಲವೊಂದು ಬಾರಿ ಅಂಗಡಿಗಳಲ್ಲಿ ಒಟ್ಟೊಟ್ಟಿಗೆ ಅದು ವ್ಯಾಪಾರವಾಗಿ ಹೋಗುತ್ತದೆ. ಆದರೂ ಈ ಪುಡಿಗಾಸು ಮಕ್ಕಳ ವಿದ್ಯಾಭ್ಯಾಸಕ್ಕೆ ಏನೇನೂ ಸಾಕಾಗುವುದಿಲ್ಲ~ ಎಂದು  ಹತಾಶಭಾವದಿಂದ ನುಡಿಯುತ್ತಾರೆ ಅರುಣ್.`ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ ಪೊರಕೆ ಮಾಡಲು ಕಡ್ಡಿಗಳನ್ನು ತರಿಸಿಕೊಳ್ಳಬೇಕು. ಒಂದೊಂದು ಬಾರಿ ಸಾಗಣೆಯಲ್ಲೇ ಅದೆಷ್ಟೋ ಕಡ್ಡಿಗಳು ಹಾಳಾಗಿ ಹೋಗಿರುತ್ತದೆ. ಆದ್ದರಿಂದ ಲಾಭ ಸಿಕ್ಕಿದೆಯೆಂದರೂ ಅದು ಹೇಳಿಕೊಳ್ಳುವ ಮಟ್ಟಿಗಲ್ಲ.ಒಂದು ಪೊರಕೆಗೆ 10 ರೂಪಾಯಿಯಂತೆ ಮಾರಾಟ ಮಾಡುತ್ತೇವೆ. ಹಾಗಂತ ಪೊರಕೆ ಕೊಳ್ಳುವವರೂ ಇಲ್ಲವೆಂದಲ್ಲ. ಅವರ ಸಂಖ್ಯೆ ಕಡಿಮೆಯಾಗಿದೆಯಷ್ಟೆ~ ಎನ್ನುತ್ತಾರವರು.

`ಏನೇ ಆದರೂ ಒಗ್ಗಟ್ಟಿದ್ದರೆ ಎಂತಹ ಕಷ್ಟ ಕೆಲಸವೂ ಸುಲಭ ಸಾಧ್ಯ ಎನ್ನುವುದು ನಮ್ಮ ಮಂತ್ರ. ಆದ್ದರಿಂದ ಏನೇ ಏಳುಬೀಳು ಇದ್ದರೂ ಸುಮಾರು 30 ಮಂದಿ ಈ ಪೊರಕೆ ವ್ಯಾಪಾರದಲ್ಲಿ ಜೀವನ ನಡೆಸುತ್ತಿದ್ದೇವೆ, ಕಷ್ಟ ಸುಖ ಏನನ್ನೂ ಲೆಕ್ಕಿಸದೆ ನಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಶ್ರಮಿಸುತಿದ್ದೇವೆ~ ಎಂದರು.`ಹಲವರಿಗೆ ಅಪಶಕುನವೆನಿಸುವ ಪೊರಕೆಯೊಂದಿಗೆ ಇವರ ಬದುಕು ಹೆಣೆದುಕೊಂಡಿದೆ. ದಿನ ಬೆಳಗಾದರೆ ಪೊರಕೆಗಳೊಂದಿಗೆ ಇವರ ನಿತ್ಯ ಜೀವನ ಆರಂಭ. ಎಲ್ಲರೂ ಪೊರಕೆಗಳನ್ನು ಅಪಶಕುನ ಎಂದು ಭಾವಿಸುತ್ತಾರೆ. ಆದರೆ ಪೊರಕೆಯೇ ನಮ್ಮ ಜೀವನ.ಈ ಕಾಯಕವೇ ನಮ್ಮ ದೇವರು ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಪೊರಕೆ ಕಸುಬಿನಲ್ಲಿ ತೊಡಗಿಕೊಂಡಿರುವ ಪಾರ್ವತಮ್ಮ. ಬಡತನದಿಂದ ನನ್ನ ಜೀವನ ಹಾದಿ ತಪ್ಪಿದ್ದಾಗ ನನ್ನ ಕೈಹಿಡಿದಿದ್ದು ಈ ಕಾಯಕ. ಈಗಲೂ ನಾನು ಮಕ್ಕಳನ್ನು ಸಾಕುತ್ತಿರುವುದು ಈ ಪೊರಕೆ ವ್ಯಾಪಾರದಿಂದಲೇ~ ಎನ್ನುತ್ತಾರೆ ಅವರು.ಮೂಲತಃ ಈ ಓಣಿಯಲ್ಲಿರುವವರು ಬೆಂಗಳೂರಿನವರೇನಲ್ಲ. ಈ ನಗರ ಅಷ್ಟೇನೂ ಅಭಿವೃದ್ಧಿ ಕಂಡಿರದಿದ್ದ ದಿನಗಳಲ್ಲಿ ಇಲ್ಲಿಗೆ ಗುಳೆ ಹೊರಟು ಬಂದವರು. ಹಲವು ಕಾರಣಗಳಿಗೆ, ಹಲವು ಉದ್ದೇಶಗಳನ್ನಿಟ್ಟುಕೊಂಡು ಇಲ್ಲಿಗೆ ಜೀವನ ಅರಸುತ್ತಾ ಬಂದವರು. ತಮಿಳುನಾಡು, ಆಂಧ್ರ, ಕರ್ನಾಟಕದ ಇನ್ನಿತರ ಹಳ್ಳಿಗಳಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರು.ನಮ್ಮ ದಿನನಿತ್ಯದ ಮನೆ ಕೆಲಸ ಆರಂಭಗೊಳ್ಳುವುದೇ ಪೊರಕೆಯಿಂದ. ಆದರೆ ಮೊದಲಿದ್ದ ಅಂಚಿಕಡ್ಡಿ, ತೆಂಗಿನ ಕಡ್ಡಿ ಪೊರಕೆಗಳ ಜಾಗದಲ್ಲಿ ಈಗ ಇನ್ನಿತರ ಪೊರಕೆಗಳಿವೆ. ಆದರೂ ಕೆಲವು ಕಡೆ ಇಂತಹ ಪೊರಕೆಗಳೇ ಅತ್ಯಾವಶ್ಯಕವಾದ್ದರಿಂದ ಈ ಪೊರಕೆ ಹಲವರಿಗೆ ಜೀವನ ನೀಡಿದೆ ಎಂದರೆ ತಪ್ಪಿಲ್ಲ.ಅಂಚಿಕಡ್ಡಿಗಿಂತ ಬೇರೆ ಪೊರಕೆ ಆರಾಮ, ಬಗ್ಗಿ ಗುಡಿಸುವಂತಿಲ್ಲ, ದೂಳು ಕೂಡ ಉದುರುವುದಿಲ್ಲ ಎನ್ನುವ ಕಾರಣಕ್ಕೆ ಇವುಗಳ ವ್ಯಾಪಾರ ಈಗ ಸ್ವಲ್ಪ ಕಡಿಮೆ. ಮನೆಯ ಹೊರಗೆ ಗುಡಿಸಲು ಈ ಪೊರಕೆಗಳನ್ನು ಕೊಂಡುಕೊಳ್ಳುವವರು ಹೆಚ್ಚು. ಅಷ್ಟೇನೂ ವ್ಯಾಪಾರವಿಲ್ಲದಿದ್ದರೂ ನಷ್ಟವಂತೂ ಇದರಿಂದ ಉಂಟಾಗಿಲ್ಲ ಎನ್ನುತ್ತಾರೆ ಅಂಗಡಿ ವ್ಯಾಪಾರಿ ಆನಂದ್.`ಪೊರಕೆ ಕಸುಬು ಎಂದರೆ ಅದೇನೋ ತಾತ್ಸಾರ. ಪೊರಕೆ ಮಾಡುವವರು ಎಂದರೂ ಅಷ್ಟೆ. ಪೊರಕೆ ವ್ಯಾಪಾರವೆಂದರೇ ಕೀಳಾಗಿ ನೋಡುವ ಈಗಿನ ದಿನದಲ್ಲಿ ನಮ್ಮ ಅಭಿವೃದ್ಧಿಯತ್ತ ಗಮನ ಹರಿಸುತ್ತಾರೆ ಎಂಬುದು ಸುಳ್ಳು ಭರವಸೆ, ಬೆಂಗಳೂರು ಇಷ್ಟು ಬೆಳೆದು ನಿಂತರೂ ನಮ್ಮ ಜೀವನ ಮಾತ್ರ ಇನ್ನೂ ಸುಧಾರಿಸಿಲ್ಲ, ಸರ್ಕಾರದಿಂದಲೂ ಯಾವುದೇ ಸವಲತ್ತುಗಳನ್ನು ಪಡೆಯದೆ ಬದುಕುತ್ತಿದ್ದೇವೆ. ನಮ್ಮ ಮಕ್ಕಳ ಭವಿಷ್ಯವೂ ಹೀಗೇ ಆಗದಿರಲಿ, ಎನ್ನುವುದೇ ನಮ್ಮ ಹಾರೈಕೆ~ ಎಂದರು ಮಾರಪ್ಪ.ಅವಕಾಶಗಳ ಆಕಾಶವೇ ನಗರದಲ್ಲಿ ಇದ್ದರೂ ಇಷ್ಟೆಲ್ಲ ಕಷ್ಟಪಡುವ ಇವರೆಲ್ಲರೂ ಫೋಟೋಗೆ ಮುಖ ತೋರಿಸಲು ಕೂಡ ಹಿಂದೇಟು ಹಾಕುತ್ತಾರೆ. `ಇದು ನಮ್ಮ ಬದುಕು. ನಮ್ಮ ಪಾಡಿಗೆ ನಾವಿದ್ದೇವೆ, ಬಿಟ್ಟುಬಿಡಿ~ ಎನ್ನುತ್ತಾ ಪೊರಕೆ ಕಟ್ಟಿಕೊಂಡು ಅವರೆಲ್ಲಾ ಬಾಳಬಂಡಿ ಹೂಡುತ್ತಾರೆ. ನಕ್ಕಿದ್ದು ಕೂಡ ಗೊತ್ತಾಗುವುದೇ ಇಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.