ಮಂಗಳವಾರ, ಮಾರ್ಚ್ 28, 2023
32 °C

ಪೊಲೀಸ್ ಎನ್‌ಕೌಂಟರ್ ರೌಡಿಗಳ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯ  ಬಾಗಲೂರು ಮತ್ತು ಪೀಣ್ಯದಲ್ಲಿ ಶನಿವಾರ ನಸುಕಿನಲ್ಲಿ ಪೊಲೀಸರ ಗುಂಡಿನ ಸದ್ದು ಮೊಳಗಿದ್ದು, ಇತ್ತೀಚೆಗೆ ಜಾರ್ಖಂಡ್‌ನ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿ ಶಂಕರ (27) ಮತ್ತು ರೌಡಿ ಪೆದ್ದಗುಂಡನನ್ನು (27) ಬೆಂಗಳೂರು ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ.

ಗುಂಡು: ಜಾರ್ಖಂಡ್‌ನ ಸ್ನೇಹಾ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ ಡಿ.12ರಂದು ನಡೆದಿತ್ತು, ಈ ಪ್ರಕರಣದ ಪ್ರಮುಖ ಆರೋಪಿ ಶಂಕರ ಉರುಫ್ ಚಂದ್ರ ಎಂಬಾತನನ್ನು ಪೊಲೀಸರು ಬಾಗಲೂರಿನ ರೇವಾ ಕಾಲೇಜಿನ ಬಳಿ ನಸುಕಿನಲ್ಲಿ ಗುಂಡಿಕ್ಕಿ ಸಾಯಿಸಿದ್ದಾರೆ.

ಘಟನೆ ನಡೆದ ನಂತರ ಪೊಲೀಸರು ಬಂಧಿಸಿದ್ದ ಸೋಮಶೇಖರ ಎಂಬಾತ ಶಂಕರನ ಬಗ್ಗೆ ಮಾಹಿತಿ ನೀಡಿದ್ದ. ಆತನ ಬಂಧನಕ್ಕೆ ಕಾದು ಕುಳಿತಿದ್ದ ಕೇಂದ್ರ ಅಪರಾಧ ವಿಭಾಗದ ಪೊಲೀಸರ ತಂಡಕ್ಕೆ ಬೆಳಗಿನ ಜಾವ 4.45ರ ಸುಮಾರಿಗೆ ಆರೋಪಿ ತನ್ನ ಸಹಚರನ ಜತೆ ಬೈಕ್‌ನಲ್ಲಿ ಬಾಗಲೂರು ಕಡೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಬಂತು. ಕೂಡಲೇ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್‌ಗಳಾದ ಬಾಳೇಗೌಡ, ಅಶೋಕನ್, ಎಸ್‌ಐ ಸಿರಾಜುದ್ದೀನ್, ಕಾನ್‌ಸ್ಟೆಬಲ್ ವಿಜಯ್‌ಕುಮಾರ್ ಅವರ ತಂಡ ಆತನನ್ನು ಬೆನ್ನಟ್ಟಿತು. ರೇವಾ ಕಾಲೇಜಿನಿಂದ ಸ್ವಲ್ಪ ಮುಂದೆ ಅವರನ್ನು ಅಡ್ಡಗಟ್ಟಿ ಶರಣಾಗುವಂತೆ ಸಿಬ್ಬಂದಿ ಸೂಚಿಸಿದರು, ಇದಕ್ಕೆ ಒಪ್ಪದ ಶಂಕರ, ವಿಜಯ್‌ಕುಮಾರ್ ಮತ್ತು ಸಿರಾಜುದ್ದೀನ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ. ಪ್ರಾಣ ರಕ್ಷಣೆಗಾಗಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದರು. ಒಂದು ಗುಂಡು ಪಕ್ಕೆಗೆ ಬಿದ್ದರೆ ಇನ್ನೊಂದು ಆತನ ಕುತ್ತಿಗೆಗೆ ಹೊಕ್ಕಿತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಂಕರನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವ ವಿಷಯವನ್ನು ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕರಪೆದ್ದಗುಂಡ

ಶಂಕರನು ಹೊಸೂರು ಹಾಗೂ ಆನೇಕಲ್ ಸುತ್ತಮುತ್ತ ಏಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ ಈ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ‘ಬೈಕ್ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಮತ್ತು ಪ್ರಕರಣದ ಇತರೆ ಮೂರು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ಆರೋಪಿಗಳ ಪ್ರಾಣವೂ ಅಮೂಲ್ಯ ಎಂಬುದು ಗೊತ್ತಿದೆ. ಆದರೆ ಪೊಲೀಸರನ್ನೇ ಕೊಲೆ ಮಾಡಲು ಯತ್ನಿಸಿದರೆ ಸುಮ್ಮನಿರಲು ಆಗುವುದಿಲ್ಲ’ ಎಂದರು.

ಹನ್ನೆರಡು ಪ್ರಕರಣಗಳಿವೆ: ‘ಶಂಕರನ ವಿರುದ್ಧ ಒಟ್ಟು ಹನ್ನೆರಡು ಪ್ರಕರಣಗಳಿವೆ. ನೆಲಮಂಗಲ, ಕ್ಯಾತಸಂದ್ರ, ಎಲೆಕ್ಟ್ರಾನಿಕ್‌ಸಿಟಿ, ತಮಿಳುನಾಡಿನ ಡೆಂಕಣಿಕೋಟೆ, ರಾಯಕೋಟೆ ಠಾಣೆಗಳಲ್ಲಿ ಆತನ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಯತ್ನ ಮತ್ತು ಇತರೆ ಪ್ರಕರಣಗಳು ದಾಖಲಾಗಿವೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದರು.

ಗುಂಡನಿಗೆ ಗುಂಡು: ಪೀಣ್ಯ 2ನೇ ಹಂತದ ಪ್ರಿಯದರ್ಶಿನಿ ಹ್ಯಾಂಡ್‌ಲೂಮ್ ಸಮೀಪ ಬೆಳಗಿನ ಜಾವ ನಾಲ್ಕು ಗಂಟೆ ವೇಳೆಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ಪೆದ್ದಗುಂಡ ಉರುಫ್ ವೆಂಕಟಸ್ವಾಮಿ ಸಾವನ್ನಪ್ಪಿದ್ದಾನೆ.

ಒಂದು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಆತ ಹಫ್ತಾ ವಸೂಲಿಯಲ್ಲಿ ತೊಡಗಿದ್ದ. ಪೆದ್ದಗುಂಡನ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಎಸಿಪಿ ಎಸ್.ವೈ.ಹಾದಿಮನಿ ಮತ್ತು ಸಿಬ್ಬಂದಿ ತಂಡ ಆತ ಪೀಣ್ಯದ ಸಮೀಪ ಓಡಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆನ್ನಟ್ಟಿತು. ಸಹಚರನ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ಆತನನ್ನು ಪೀಣ್ಯ ಎರಡನೇ ಹಂತದಲ್ಲಿ ಅಡ್ಡಗಟ್ಟಿದ ಪೊಲೀಸರು ಶರಣಾಗುವಂತೆ ಮನವಿ ಮಾಡಿದರೂ ಆತ ಕೇಳಲಿಲ್ಲ. ಪ್ರತಿಯಾಗಿ ಆತ ಪಿಸ್ತೂಲ್‌ನಿಂದ ಪೊಲೀಸರ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ. ಅದರಲ್ಲಿ ಒಂದು ಗುಂಡು ಮುಖ್ಯ ಕಾನ್‌ಸ್ಟೆಬಲ್ ಟಿ.ಕೆ ಕೃಷ್ಣ ಅವರ ಎಡಗೈಗೆ ಬಿತ್ತು.

ಪ್ರಾಣಾಪಾಯಸೂಚನೆ ಅರಿತ ಹಾದಿಮನಿ ಆತನ ಮೇಲೆ ಒಂದು ಗುಂಡು ಹಾರಿಸಿದರು. ಅದು ಆತನ ಹಣೆಗೆ ಹೊಕ್ಕಿತು. ಇನ್‌ಸ್ಪೆಕ್ಟರ್ ರವಿಪ್ರಕಾಶ್ ಅವರು ಹಾರಿಸಿದ ಎರಡು ಗುಂಡು ಆತನ ಎದೆಗೆ ಬಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ. ಬಾಗಲೂರು ಮತ್ತು ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್ ರವಿಕಾಂತೇಗೌಡ ಮತ್ತು ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಎಂ. ರಾಮಚಂದ್ರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.