ಬುಧವಾರ, ಮಾರ್ಚ್ 3, 2021
19 °C

ಪ್ರಪಂಚದ ಪಾಪು ಕಸ್ತೂರಿಯ ಪಾವೆಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಪಂಚದ ಪಾಪು ಕಸ್ತೂರಿಯ ಪಾವೆಂ

ಪ್ರತಿಭೆ, ಬದ್ಧತೆ, ಸಾಮಾಜಿಕ ಕಾಳಜಿ ಹಾಗೂ ಒಳನೋಟಗಳಿಂದ ಕನ್ನಡ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಹಿರಿಯರ ಪಟ್ಟಿಯಲ್ಲಿ ಪಾ.ವೆಂ.ಆಚಾರ್ಯ ಹಾಗೂ ಪಾಟೀಲ ಪುಟ್ಟಪ್ಪ ಅವರದ್ದು ಎದ್ದುಕಾಣುವ ಹೆಸರುಗಳು.ಈ ಇಬ್ಬರ ಜೀವನ ಹಾಗೂ ಸಾಧನೆಯನ್ನು ಒಟ್ಟಿಗೆ ಕಾಣುವ ಪ್ರಯತ್ನವನ್ನು ಮತ್ತೊಬ್ಬ ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಮಾಡಿದ್ದಾರೆ. ಈ ಪ್ರಯತ್ನದ ಫಲ- `ಪ್ರಪಂಚದ ಪಾಪು; `ಕಸ್ತೂರಿ~ಯ ಪಾವೆಂ~ ಕೃತಿ.ಪಾವೆಂ ಹಾಗೂ ಪಾಪು ಅವರನ್ನು ಹತ್ತಿರದಿಂದ ಬಲ್ಲ ಜೋಶಿ ಅವರು, ಹಿರಿಯರೊಂದಿಗಿನ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಮೂಲಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವೈಯಕ್ತಿಕ ಬದುಕಿನಿಂದ ವೃತ್ತಿಬದುಕಿನವರೆಗೆ ಇಬ್ಬರ ನಡುವಣ ಸಾಮ್ಯಗಳನ್ನು ಗುರ್ತಿಸುವುದರ ಜೊತೆಗೆ, ಇಬ್ಬರ ಅನನ್ಯ ಗುಣವಿಶೇಷಗಳನ್ನು ಈ ಪುಟ್ಟ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.ಬಡ ಕುಟುಂಬದಿಂದ ಬಂದ, ಉನ್ನತ ಶಿಕ್ಷಣ ಪಡೆಯದ ಪಾವೆಂ ಅವರು `ಕಸ್ತೂರಿ~ ಡೈಜೆಸ್ಟ್ ಅನ್ನು ರೂಪಿಸಿದ ಹಾಗೂ `ಪದಾರ್ಥ ಚಿಂತಾಮಣಿ~ಯಂಥ ಅಪರೂಪದ ಮಾಲಿಕೆಯನ್ನು ರೂಪಿಸಿದ ಸಾಧನಗಾಥೆ ಇಲ್ಲಿದೆ. ಅಂತೆಯೇ ಶೈಕ್ಷಣಿಕವಾಗಿ ಸಾಕಷ್ಟು ಗಟ್ಟಿಗರಾದ (ವಿದೇಶದಲ್ಲಿಯೂ ಕಲಿತ) ಪಾಪು ಅವರು `ವಿಶಾಲ ಕರ್ನಾಟಕ~, `ನವಯುಗ~ಗಳಿಂದ `ಪ್ರಪಂಚ~ದವರೆಗೆ ಬೆಳೆದುಬಂದ ಹಾದಿಯ ವಿಶ್ಲೇಷಣೆಯಿದೆ.ಸಮಕಾಲೀನ ಸಂಗತಿಗಳಿಗೆ `ಪ್ರಪಂಚ~ ಕನ್ನಡಿಯಾಗಿದ್ದರೆ, ವೈವಿಧ್ಯಮಯ ಜಗತ್ತನ್ನು `ಕಸ್ತೂರಿ~ ಒಳಗೊಳ್ಳುತ್ತಿದ್ದುದನ್ನು ಜೋಶಿಯವರು ಸಕಾರಣವಾಗಿಯೇ ಗುರ್ತಿಸಿದ್ದಾರೆ.

 

ಪಾವೆಂ ಅವರಲ್ಲಿ ಓರ್ವ ಕವಿಯನ್ನು ಗುರ್ತಿಸುವ ಅವರು, ಪಾಪು ಅವರನ್ನು ಎದೆಯಲ್ಲಿ ಕಿಚ್ಚುಳ್ಳ ಹೋರಾಟಗಾರನಂತೆ ಕಾಣುತ್ತಾರೆ. ಆಚಾರ್ಯರು ಲೇಖಕರನ್ನು ಹಾಗೂ ಪುಟ್ಟಪ್ಪನವರು ಪತ್ರಕರ್ತರನ್ನು ತಯಾರುಮಾಡಿದ್ದನ್ನೂ  ಗುರ್ತಿಸುತ್ತಾರೆ.ವೃತ್ತಿಸಂಬಂಧ ವಿವರಗಳು ಮಾತ್ರವಲ್ಲದೆ, ಪಾವೆಂ ಹಾಗೂ ಪಾಪು ಅವರ ಕುಟುಂಬದ ವಿವರಗಳೂ (`ಸೌಭಾಗ್ಯವತಿಯರು) ಪುಸ್ತಕದಲ್ಲಿವೆ. ಈ ಇಬ್ಬರು ಗಣ್ಯರ ಬಗ್ಗೆ ಇತರ ಗಣ್ಯರು ವ್ಯಕ್ತಪಡಿಸಿರುವ ಅನಿಸಿಕೆಗಳೂ ಇಲ್ಲಿ ಸಂಗ್ರಹಗೊಂಡಿವೆ.ಪಾವೆಂ ಮತ್ತು ಪಾಪು ಅವರ ಬದುಕು - ಸಾಧನೆಯ ಬಗ್ಗೆ ಜೋಶಿ ಅವರ ಬರವಣಿಗೆ ಆಪ್ತವಾಗಿದೆ. ಈ ಆಪ್ತಗುಣ ಪುಸ್ತಕದ ಗುಣವೂ ಹೌದು, ಮಿತಿಯೂ ಹೌದು. ಒಂದು ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ನಿಷ್ಠುರ ವಿಮರ್ಶೆ ಸಾಧ್ಯವಾಗಿದ್ದರೆ ಪುಸ್ತಕದ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.

 

ಆದರೆ, ಅಭಿಮಾನದ ಹಂತದಲ್ಲಿಯೇ ಇಲ್ಲಿನ ಬರವಣಿಗೆ ತೃಪ್ತಗೊಂಡಿದೆ. ಆದರೂ, ಸಹೃದಯರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇಬ್ಬರು ಧೀಮಂತರನ್ನು ಮುಖಾಮುಖಿಯಾಗಿಸುವ ಪರಿಚಯ ರೂಪದ ಪುಸ್ತಕವಾಗಿ ಇದು ಗಮನಸೆಳೆಯುತ್ತದೆ.`ಪ್ರಪಂಚ~ದ ಪಾಪು `ಕಸ್ತೂರಿ~ಯ ಪಾವೆಂ

ಲೇ: ಶಿವಾನಂದ ಜೋಶಿ; ಪು: 76; ಬೆ: ರೂ. 85; ಪ್ರ: ಚಿಂತನ ಪ್ರಕಾಶನ, ನಂ.5, ಪತ್ರಕರ್ತನಗರ, ನೃಪತುಂಗ ಬೆಟ್ಟ, ಹುಬ್ಬಳ್ಳಿ- 32.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.