ಸೋಮವಾರ, ಜನವರಿ 20, 2020
29 °C

ಪ್ರಮಾಣಪತ್ರ ನೀಡಿಕೆ ಹೋಬಳಿ ಮಟ್ಟಕ್ಕೆ ವಿಸ್ತರಣೆ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕಂದಾಯ ಇಲಾಖೆಯಿಂದ ನೀಡಲಾಗುವ ಆದಾಯ, ಜಾತಿ ಪ್ರಮಾಣ ಪತ್ರವನ್ನು ಹೊರತುಪಡಿಸಿ ಇತರ 43 ಪ್ರಮಾಣ ಪತ್ರಗಳನ್ನು ಹೋಬಳಿ ಮಟ್ಟದಲ್ಲಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್ ನಂತರ ಈ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರಲಿದೆ ಎಂದರು.

ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯುವುದಕ್ಕಾಗಿಯೇ ಗ್ರಾಮೀಣ ಭಾಗದ ಜನರು ತಾಲ್ಲೂಕು ಕೇಂದ್ರಗಳಿಗೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.ಕಡ್ಡಾಯ ಭೇಟಿಗೆ ಆದೇಶ:  ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಗ್ರಾಮ ಮಟ್ಟಕ್ಕೆ ತಲುಪಬೇಕಾದರೆ, ತಾಲ್ಲೂಕು ಆಡಳಿತ ಚುರುಕಾಗಬೇಕು. ಜಿಲ್ಲಾಧಿಕಾರಿಗಳು ವಾರದಲ್ಲಿ ಮೂರು ದಿನ ತಾಲ್ಲೂಕುಗಳಿಗೆ, ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ವಾರದಲ್ಲಿ ಒಂದು ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಗೆ ಹಾಗೂ ಉಪ ವಿಭಾಗಾಧಿಕಾರಿಗಳು ವಾರಕ್ಕೆ ಮೂರು ದಿನ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕಲ್ಲದೇ, ಸಿಇಓ ಹಾಗೂ ಉಪ ವಿಭಾಗಾಧಿಕಾರಿಗಳು ತಾವು ಭೇಟಿ ನೀಡಿದ್ದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಸೂಚಿಸಿದರು.ಸುವರ್ಣಭೂಮಿ ಯೋಜನೆಯಡಿ ರೈತರಿಗೆ ನೀಡಬೇಕಾದ ಎರಡನೇ ಕಂತಿನ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದ ಅವರು, ಮೊದಲನೇ ಹಂತದ ಹಣದ ಉಪಯೋಗ ಯಾವ ರೀತಿಯಾಗಿದೆ ಎಂಬುದನ್ನು ಪರಿಶೀಲನೆ ನಡೆಸಲು ವಿಳಂಬವಾಗಿದ್ದರಿಂದ ಎರಡನೇ ಕಂತಿನ ಹಣ ಬಿಡುಗಡೆಗೆ ವಿಳಂಬವಾಯಿತು ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)