ಶನಿವಾರ, ಮೇ 8, 2021
19 °C

ಪ್ರವಾಸಿ ಸ್ಥಳಗಳಲ್ಲಿ ಸೌಲಭ್ಯ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಇಂದು `ವಿಶ್ವ ಪ್ರವಾಸೋದ್ಯಮ ದಿನ~ ಇದರ ಅಂಗವಾಗಿ ಎಲ್ಲೆಡೆ ಸಂಭ್ರಮಾಚರಣೆಗಳು ಸಹಜವಾಗಿಯೇ ಆಚರಿಸಲ್ಪಡುತ್ತಿವೆ. ಪ್ರವಾಸ ಎಂಬುದು ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಮನರಂಜನೆ, ಜ್ಞಾನಾಭಿವೃದ್ಧಿ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಅಧ್ಯಯನ. ದೇಶ ವಿದೇಶಗಳ ಸಂಸ್ಕೃತಿಗಳ ಪರಸ್ಪರ ತೌಲನಿಕ ಸಮೀಕ್ಷೆ, ಪರಸ್ಪರ ಅಭಿವೃದ್ಧಿಗೆ ಪೂರಕ. ಇದು ಒಂದೆಡೆಯಾದರೆ, ಪ್ರವಾಸ ನಿರ್ವಹಣೆಯೂ ಸ್ವತಃ ಒಂದು ಉದ್ಯಮ ಎಂದೇ ಘೋಷಿತವಾಗಿದೆ.ಹಾಸನ ಜಿಲ್ಲೆ ಪ್ರವಾಸೋದ್ಯಮಕ್ಕೆ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸುವ ಒಂದು ಸಾಗರವಿದ್ದಂತೆ. ಹಾಗೆಂದೇ ಈ ಜಿಲ್ಲೆ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಗಣನೀಯ ಸ್ಥಾನಗಳಿಸಿದೆ. ಬೇಲೂರು-ಹಳೇಬೀಡು ದೇವಾಲಯಗಳ ವಾಸ್ತುಶಿಲ್ಪ ವೈಭವ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.ಶ್ರವಣಬೆಳಗೊಳದ ಶಾಂತಿಮೂರ್ತಿ ಭಗವಾನ್ ಬಾಹುಬಲಿ ಜಗತ್ಪ್ರಸಿದ್ದಿಯನ್ನು ಪಡೆದಿದೆ. ಈ ದೇಗುಲಗಳಲ್ಲದೆ, ಜಿಲ್ಲೆಯಲ್ಲಿ ಇನ್ನೂ ಅನೇಕ ಐತಿಹಾಸಿಕ ದೇವಾಲಯಗಳು ದೇಶ, ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.ಹಾಸನ ಜಿಲ್ಲೆಯ ಪ್ರವಾಸೋದ್ಯಮವೂ ಕೆಲವೇ ಬೆರಳೆಣಿಕೆಯಷ್ಟು ತಾಣಗಳಿಗೆ ಮೀಸಲಾಗಿರುವಂತಿದೆ. ಅದರಲ್ಲೂ ಶಿಲ್ಪಕಲಾ ವೀಕ್ಷಣೆಗಷ್ಟೇ ಕೇಂದ್ರೀಕೃತಗೊಂಡಿದೆ. ಆದರೆ ಈ ಜಿಲ್ಲೆಯ ಹರವಿನಲ್ಲಿ ಚಾರಣ ಪ್ರವಾಸ, ನಿಸರ್ಗ ಅಧ್ಯಯನ ಪ್ರವಾಸ, ವನ್ಯಜೀವಿ/ಪಕ್ಷಿ ವೀಕ್ಷಣಾ ಪ್ರವಾಸ, ವೈದ್ಯಕೀಯ ಸಸ್ಯ ಅಧ್ಯಯನ ಪ್ರವಾಸ, ಜಲ ಸಾಹಸ ಕ್ರೀಡಾ ಪ್ರವಾಸ, ಪುರಾತತ್ವ ಅಧ್ಯಯನ ಪ್ರವಾಸ ಮುಂತಾದವುಗಳಿಗೆ ಅತಿ ವಿಫುಲವೂ ಆಕರ್ಷಕವೂ ಆದ ಅವಕಾಶಗಳಿವೆ.ಇಂತಹ ಯಾವುದಾದರೂ ಒಂದು ಅವಕಾಶಗಳಿದ್ದರೂ ಅದನ್ನೇ ಅದ್ಭುತವಾಗಿ ಬಳಸಿಕೊಂಡು ಪ್ರವಾಸೋದ್ಯಮವನ್ನೇ ಜೀವನಾಡಿಯನ್ನಾಗಿ ರೂಪಿಸಿಕೊಂಡಿರುವ ಉದಾಹರಣೆಗಳು ಭಾರತದಲ್ಲಿ ಹಾಗೂ ವಿದೇಶದಲ್ಲಿ ಸಾಕಷ್ಟಿವೆ. ಆದರೆ ಇಷ್ಟೊಂದು ವೈವಿಧ್ಯಮಯ ಸಮೃದ್ಧಿಯಿರುವ ನಮ್ಮ ಜಿಲ್ಲೆಯ ಸಿರಿವಂತಿಕೆಯನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಯೋಗ್ಯ ಯತ್ನ ಏಕೆ ನಡೆಯುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.ಆದರೆ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಇವುಗಳ ಸಮರ್ಥ ಬಳಕೆಯಾಗುತ್ತಿಲ್ಲ. ಕೆಲವೇ ಆಯ್ದ ತಾಣಗಳ ಹೊರತು ಜಿಲ್ಲೆಯಲ್ಲಿ ಅಂತರ್ಗತವಾಗಿರುವ, ಬೆಳಕಿಗೆ ಬಾರದ ಪ್ರವಾಸಿ ತಾಣಗಳ ಮಾಹಿತಿಯನ್ನು ಆಸಕ್ತರಿಗೆ ಮುಟ್ಟಿಸುವ ಕೆಲಸವಂತೂ ಆಗಿಯೇ ಇಲ್ಲ ಎನ್ನಬಹುದು.

 

ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ದೊರಕುತ್ತಿಲ್ಲ. ರಸ್ತೆ, ಕುಡಿಯುವ ನೀರು, ವಸತಿ ಗೃಹ ಮತ್ತಿತರ ಸೌಲಭ್ಯಗಳು ಪ್ರವಾಸಿಗರಿಗೆ ಇನ್ನೂ ಮರೀಚಿಕೆಯಾಗಿಯೇ ಇದೆ.

 

ಹಾಸನ ಜಿಲ್ಲಾಡಳಿತ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿ ಸಮಗ್ರ ವರದಿ ತಯಾರಿಸಲು ಯೋಜನೆ ರೂಪಿಸಿದೆ. ಯಾವ ರೀತಿ ಅಭಿವೃದ್ಧಿ ಕೈಗೊಳ್ಳಬೇಕೆಂಬ ಬಗ್ಗೆ ಯುನೆಸ್ಕೋ ಸಹಯೋಗದಲ್ಲಿ ವರದಿ ತಯಾರಿಸುತ್ತಿದೆ.ಆದರೆ ಇದಕ್ಕೆ ಸರ್ಕಾರ ಸೂಕ್ತ ರೀತಿಯ ನೆರವು ಒದಗಿಸದೆ ಇರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆಯಾದಂತಾಗಿದೆ.“ಪ್ರವಾಸೋದ್ಯಮ ದಿನಾಚರಣೆ” ಎಂಬುದು ಕೇವಲ ಒಂದೇ ದಿನದ ಸಂಭ್ರಮಕ್ಕೆ ಮೀಸಲಾಗದೆ ಅದು ಕನಿಷ್ಠ ಆ ವರ್ಷದುದ್ದಕ್ಕೂ ಪ್ರವಾಸೋದ್ಯಮದ ಅಗತ್ಯಗಳನ್ನು ಸಮರ್ಥವಾಗಿ ಪೂರೈಸಬಲ್ಲ ಕ್ರಿಯಾಶೀಲ ಹಾಗೂ ಸುಸ್ಪಷ್ಟ ಕಾರ್ಯ ಯೋಜನೆಯನ್ನು ಒಳಗೊಂಡು ವ್ಯವಸ್ಥೆಗೊಳಿಸಲ್ಪಡಬೇಕು.

 

ಜೊತೆಗೆ ಸ್ಥಳೀಯರಿಂದ ಹಿಡಿದು ವಿಶ್ವದಾದ್ಯಂತ ಪ್ರವಾಸಿಗಳಿಗೆ ಸುಲಲಿತ ಪ್ರವಾಸಕ್ಕೆ ಪೂರಕವಾಗಬಲ್ಲಂತೆ ವಾರ್ಷಿಕ, ದ್ವೈವಾರ್ಷಿಕ, ಪಂಚ ವಾರ್ಷಿಕ, ದಶ ವಾರ್ಷಿಕ ಹಾಗೂ ಶಾಶ್ವತ ಯೋಜನೆಗಳನ್ನು ಆಯೋಜಿಸಬೇಕಾದುದು ಅನಿವಾರ್ಯ. ಪ್ರವಾಸೋದ್ಯಮ ದಿನದ ಸಂಭ್ರಮವು ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಬೇಕು ಎಂಬುದು ಸಂಶೋಧಕ ಡಾ.ಶ್ರೀವತ್ಸ ಎಸ್ ವಟಿ ಅವರ ಅಭಿಪ್ರಯವಾಗಿದೆ.ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮಕ್ಕಿರುವ ವಿಫುಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿ ಪಡಿಸಿದರೆ ಸರ್ಕಾರ ಮತ್ತು ಸ್ಥಳೀಯರ ಆದಾಯವೂ ಗಣನೀಯವಾಗಿ ಏರಿಕೆಯಾಗಲಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸುವುದು ಅವಶ್ಯಕವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.