ಬುಧವಾರ, ಜನವರಿ 29, 2020
29 °C

ಪ್ರವಾಸ ಪರ್ವ

ಕೆ.ಎಂ. ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಚಳಿಗಾಲದ ಪ್ರವಾಸ ಎಲ್ಲರ ಮನಸ್ಸಿನಲ್ಲೂ ಹಿಗ್ಗು ಮೂಡಿಸುತ್ತದೆ. ತುಂಡುಡುಗೆ ಧರಿಸಿ ಗೋವಾದ ಕಡಲ ಕಿನಾರೆಯಲ್ಲೋ, ಕೇರಳದ ನದಿ ತಟದ ನುಣ್ಣನೆ ಮರಳ ರಾಶಿಯಲ್ಲೋ ಮಲಗಿ ಬಿಸಿಲು ಕಾಯಿಸಿಕೊಳ್ಳುವ ಸುಖ ನೆನೆದರೆ ಕೆಲವರಿಗೆ ಪ್ರವಾಸಕ್ಕೆ ಹೋಗಬೇಕೆನ್ನುವ ವಾಂಛೆ ಮತ್ತಷ್ಟು ಗಾಢವಾಗುತ್ತದೆ.ಉದ್ಯೋಗಿಗಳು ಡಿಸೆಂಬರ್‌ ತಿಂಗಳಿನಲ್ಲಿ ಕ್ಯಾಶುವಲ್‌ ಲೀವ್‌ ಮುಗಿಸಿಕೊಳ್ಳುವ ನೆಪದಲ್ಲಿ ಪ್ರವಾಸ ಕೈಗೊಂಡರೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸ್ಟಡಿ ಟೂರ್‌ ಹೆಸರಿನಲ್ಲಿ ಪ್ರವಾಸಕ್ಕೆ ಅಣಿಯಾಗುತ್ತಾರೆ. ಇದು ವರ್ಷಾಂತ್ಯವೂ ಆದ್ದರಿಂದ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರೆಲ್ಲಾ ಕುಟುಂಬದೊಟ್ಟಿಗೆ ತಮ್ಮಿಷ್ಟದ ಸ್ಥಳಕ್ಕೆ ತೆರಳಿ ಸಂತೋಷದಿಂದ ಕಾಲ ಕಳೆಯುವ ಸಮಯವೂ ಹೌದು. ಒಟ್ಟಾರೆಯಾಗಿ ಚಳಿಗಾಲವೆಂದರೆ, ಪ್ರವಾಸ ಪರ್ವಕಾಲ.ಹೌದು, ಬೆಂಗಳೂರಿನಲ್ಲಿ ಈಗ ಎದೆ ಸೀಳಿ ಒಳನುಗ್ಗುವ ಚಳಿಗಾಳಿಗೆ ಮೈಯೊಡ್ಡಲು ಇಲ್ಲಿನವರು ಹೆದರುತ್ತಿದ್ದರೆ, ಕಚಗುಳಿಯಿಡುವ ಚಳಿಯನ್ನು ಸವಿಯಲೆಂದೇ ಸಿಲಿಕಾನ್ ಸಿಟಿಗೆ ದೇಶ ವಿದೇಶಗಳಿಂದ ಜನರು ಬರುತ್ತಿದ್ದಾರೆ. ಇಲ್ಲಿನವರು ಬೇರೆ ಬೇರೆ ಪ್ರವಾಸಿ ತಾಣಗಳತ್ತ ದೃಷ್ಟಿ ಹರಿಸುತ್ತಿದ್ದಾರೆ. ಅಂದಹಾಗೆ, ಶೇ 69ಜನರು ಬೇಸಿಗೆಗಿಂತ ಚಳಿಗಾಲದಲ್ಲೇ ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರಂತೆ. ಏಕತಾನತೆ, ಒತ್ತಡ, ಕೆಲಸದ ಜಂಜಡವನ್ನೆಲ್ಲಾ ಮರೆತು ಮೈಮನಕ್ಕೆ ಆರಾಮದಾಯಕವಾದ ತಾಣಗಳಲ್ಲಿ ಚಳಿಗಾಲವನ್ನು ಕಳೆಯಬೇಕು ಎಂಬ ಕಾರಣಕ್ಕೆ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಹೆಚ್ಚಿದೆ.‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ಚಳಿಗಾಲಕ್ಕೆಂದೇ ವಿಶೇಷ ವಿಂಟರ್‌ ಪ್ಯಾಕೇಜ್‌ ಆರಂಭಿಸಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಹಾಗೂ ಉತ್ತರ ಭಾರತದ ಅನೇಕ ಜನರು ಚಳಿಗಾಲವನ್ನು ಆನಂದಿಸಲು ಬೆಂಗಳೂರಿಗೆ ಬರುತ್ತಾರೆ. ಇಲ್ಲಿಗೆ ಬಂದವರು ಬೆಂಗಳೂರಿನ ಪ್ರವಾಸಿ ತಾಣಗಳನ್ನು ನೋಡುವುದರ ಜತೆಗೆ ಮೈಸೂರು, ಶ್ರವಣಬೆಳಗೊಳ, ಬೇಲೂರು, ಹಳೆಬೀಡು ಹೀಗೆ ಒಂದು ದಿನದಲ್ಲಿ ಹೋಗಿಬರುವ ತಾಣಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಒಬ್ಬೊಬ್ಬ ಪ್ರವಾಸಿಗರದು ಒಂದೊಂದು ಅಭಿರುಚಿ.

ಆಂಧ್ರದ ಪ್ರವಾಸಿಗರು ಹೆಚ್ಚಾಗಿ ದೇವಸ್ಥಾನ ಇರುವ ತಾಣಗಳನ್ನು ಆಯ್ಕೆ ಮಾಡಿಕೊಂಡರೆ, ಉತ್ತರ ಭಾರತೀಯರು ಪ್ರಕೃತಿ ಸೌಂದರ್ಯ ಸವಿಯಲು ಇಷ್ಟಪಡುತ್ತಾರೆ. ಹಾಗೆಯೇ, ಬೆಂಗಳೂರಿನ ಪ್ರವಾಸಿ ತಾಣಗಳನ್ನು ತೋರುವ ಒಂದು ದಿನದ ಲೋಕಲ್‌ ಟ್ರಿಪ್‌ ಸಹ ನಮ್ಮಲ್ಲಿದೆ. ಬಹುತೇಕ ಪ್ರವಾಸಿಗರು ಮೊದಲು ಬೆಂಗಳೂರಿನ ಪ್ರೇಕ್ಷಣೀಯ ಸ್ಥಳ ನೋಡಿ, ಬೇರೆ ಸ್ಥಳಕ್ಕೆ ತೆರಳಲು ಬಯಸುತ್ತಾರೆ’ ಎನ್ನುತ್ತಾರೆ ಕೆಎಸ್‌ಟಿಡಿಸಿಯ ಸಹಾಯಕ ವ್ಯವಸ್ಥಾಪಕ ಐನಾಪುರ್‌.ವಿಂಟರ್ ಪ್ಯಾಕೇಜ್

‘ನಾವು ವಿಂಟರ್‌ ಟೂರಿಸಂಗೆಂದೇ ಪ್ರವಾಸಿಗರ ಅಭಿರುಚಿಗೆ ಅನುಗುಣವಾಗಿ ಅನೇಕ ಪ್ಯಾಕೇಜ್‌ಗಳನ್ನು ಆರಂಭಿಸಿದ್ದೇವೆ. ಒಂದು ದಿನದಿಂದ ಒಂದು ವಾರದವರೆಗಿನ ಪ್ಯಾಕೇಜ್‌ಗಳು ಲಭ್ಯವಿದೆ. ದೇವಸ್ಥಾನ, ಪ್ರಕೃತಿಯ ರಮ್ಯ ತಾಣಗಳು, ಶಿಲ್ಪಕಲಾ ವೈಭವ ಹೀಗೆ ಎಲ್ಲ ಸ್ಥಳಕ್ಕೂ ಪ್ರತ್ಯೇಕ ಪ್ಯಾಕೇಜ್‌ಗಳಿವೆ.ಬೆಂಗಳೂರು ಸೈಟ್‌ ಸೀಯಿಂಗ್‌, ಮೈಸೂರು, ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಊಟಿ, ಮುನ್ನಾರ್‌, ಕೊಡೈಕೆನಾಲ್‌, ಮಂತ್ರಾಲಯ, ಹಂಪಿ, ತಿರುಪತಿ ಹಾಗೂ ದಕ್ಷಿಣ ಭಾರತದ ಪ್ಯಾಕೇಜ್‌ಗಳಿವೆ. ವಾರದ ನಿರ್ದಿಷ್ಟ ದಿನಗಳಲ್ಲಿ ಈ ಪ್ಯಾಕೇಜ್‌ಗಳು ಪ್ರವಾಸಿಗರಿಗೆ ಲಭ್ಯ. ಈ ಬಾರಿಯ ಚಳಿಗಾಲದ ಪ್ರವಾಸೋದ್ಯಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ಐನಾಪುರ್.ಈ ವರ್ಷವೇ ಅಧಿಕ

ಪ್ರವಾಸಿಗರಿಗೆ ಪ್ರವಾಸ ಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಯಾತ್ರಾ ಡಾಟ್‌ ಕಾಮ್‌ನ ಅಧ್ಯಕ್ಷ ಶರತ್‌ ಧಾಲ್‌ ಅವರು ಬೆಂಗಳೂರಿನ ಚಳಿಗಾಲದ ಪ್ರವಾಸೋದ್ಯಮ ಕುರಿತು ಹೇಳುವುದು ಹೀಗೆ:‘ಈ ವರ್ಷದಷ್ಟು ಜನರು ಚಳಿಗಾಲದ ಪ್ರವಾಸಕ್ಕೆ ಒಲವು ತೋರಿಸಿದ್ದನ್ನು ನಾನು ಕಂಡಿರಲಿಲ್ಲ. ವಿಮಾನ ಪ್ರಯಾಣ ದರ ದುಬಾರಿಯಾಗಿರುವುದರಿಂದ ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಳಿತವಾಗಬಹುದು ಎಂದುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆ ಸುಳ್ಳಾಗಿದೆ. ಪ್ರಯಾಣದ ದರ ಹೆಚ್ಚಾದರೂ ಜನರ ಪ್ರವಾಸದ ಉತ್ಸಾಹ ಕುಗ್ಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಶೇ 30ರಿಂದ 40 ಅಧಿಕವಾಗಿದೆ.’ ಚಳಿಗಾಲದ ಪ್ರವಾಸ ಇಷ್ಟ

ಮೈಗೆ ಕಚಗುಳಿ ಇಡುವ ಚಳಿ, ಮನಸ್ಸಿಗೆ ಮುದ ನೀಡುವ ನಿಸರ್ಗದ ಸೌಂದರ್ಯ ಉಣಬಡಿಸುವ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳುವುದು ನನಗೆ ಅತ್ಯಂತ ಮೆಚ್ಚಿನ ಸಂಗತಿ. ಕೊಡಗು ನನ್ನ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಕುಟುಂಬದವರ ಜತೆ ಪ್ರವಾಸ ಕೈಗೊಳ್ಳುವುದಕ್ಕಿಂತ ನನಗೆ ಸ್ನೇಹಿತರ ಜತೆಗೆ ಟ್ರಿಪ್‌ ಹೋಗಲು ತುಂಬ ಇಷ್ಟ. ಎರಡು ಮೂರು ದಿನ ಒಂದು ಸ್ಥಳದಲ್ಲಿ ಉಳಿದುಕೊಂಡು ಪ್ರವಾಸದ ಸಂತೋಷನ್ನೆಲ್ಲಾ ಭರ್ತಿಯಾಗಿ ಆನಂದಿಸಿದಾಗಲೇ ಪ್ರವಾಸದ ಮಜಾ ಪೂರ್ಣಗೊಳ್ಳುವುದು. ಈ ಬಾರಿಯ ಪ್ರವಾಸಕ್ಕೆ ನಾನು ₨10 ಸಾವಿರ ಬಜೆಟ್‌ ನಿಗಧಿ ಮಾಡಿಕೊಂಡಿದ್ದೇನೆ. ಇನ್ನೂ ಯಾವ ಸ್ಥಳಕ್ಕೆ ಹೋಗಬೇಕೆಂದು ನಿಗಧಿಯಾಗಿಲ್ಲ. ಸ್ಥಳ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ಪ್ರವಾಸ ಕೈಗೊಳ್ಳುವ ದಿನಕ್ಕೆ ಕಾತರದಿಂದ ಕಾಯುತ್ತಿದ್ದೇನೆ. 

–ಸ್ವಪ್ನಾ, ಖಾಸಗಿ ಕಂಪೆನಿ ಉದ್ಯೋಗಿ

ಪ್ರವಾಸಿಗರ ಸಮೀಕ್ಷೆ

ಈ ಬಾರಿಯ ಚಳಿಗಾಲದ ಪ್ರವಾಸೋದ್ಯಮಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ತಿಳಿಯಲು ‘ಯಾತ್ರಾ ಡಾಟ್ ಕಾಮ್’ ದೇಶಾದ್ಯಂತ 15 ಸಾವಿರ ಜನರನ್ನು ಒಳಗೊಂಡ ಸಮೀಕ್ಷೆ ನಡೆಸಿತ್ತಂತೆ. ಅದರಲ್ಲಿನ ಕೆಲ ಅಂಶಗಳು ಹೀಗಿವೆ:

ಸಮೀಕ್ಷೆಯಲ್ಲಿ ಪಾಲ್ಗೊಂಡ ಬೆಂಗಳೂರಿನ ಶೇ 12 ಮಂದಿಯಲ್ಲಿ ಎಲ್ಲರೂ ಚಳಿಗಾಲದಲ್ಲಿ ಪ್ರವಾಸ ಮಾಡುವುದು ಇಷ್ಟ ಎಂದಿದ್ದಾರೆ. ಬೆಂಗಳೂರಿನಿಂದ ಪ್ರವಾಸ ಕೈಗೊಳ್ಳುವವರು ಹೆಚ್ಚಾಗಿ ಕೇರಳ ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಗಳಿಗೆ ತೆರಳಲು ಉತ್ಸಾಹ ತೋರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ, ಹಂಪಿ, ಕೊಡಗು, ಮೈಸೂರು, ಊಟಿ ಮತ್ತು ಪಾಂಡಿಚೇರಿಯನ್ನು ಇಷ್ಟಪಡುತ್ತಾರೆ. ಹೊರದೇಶಗಳಲ್ಲಿ ಚಳಿಗಾಲದ ಪ್ರವಾಸದ ಮೋಜು ಅನುಭವಿಸಲು ಇಷ್ಪಪಡುವವರ ಮೊದಲ ಆಯ್ಕೆ ಥಾಯ್ಲೆಂಡ್‌. ನಂತರದ ಆಯ್ಕೆ ಯುರೋಪ್‌ ಹಾಗೂ ಸಿಂಗಪುರ’ ಎಂದು ಮಾಹಿತಿ ನೀಡುತ್ತಾರೆ ‘ಯಾತ್ರಾ’ದ ಶರತ್‌.ಅಂದಹಾಗೆ, ಚಳಿಗಾಲದ ಪ್ರವಾಸಕ್ಕೆ ಶೇ 15 ಮಂದಿ ವಿಮಾನ ಪ್ರಯಾಣವನ್ನು ಇಷ್ಟಪಟ್ಟರೆ, ಶೇ 20 ಮಂದಿ ರೈಲಿನಲ್ಲಿ, ಶೇ 25 ಮಂದಿ ಬಸ್‌ನಲ್ಲಿ ಹೋಗುತ್ತಾರಂತೆ. ಇದರಲ್ಲಿ ಶೇ 46 ಮಂದಿ ಪ್ಯಾಕೇಜ್‌ ಟೂರ್‌ಗಳನ್ನು ಇಷ್ಟಪಡುತ್ತಾರಂತೆ. ‘ಯಾವ ಸ್ಥಳವನ್ನು ಪ್ರವಾಸಕ್ಕೆ ಆಯ್ದುಕೊಳ್ಳುತ್ತಾರೆ ಎಂಬುದರ ಮೇಲೆ ಪ್ರವಾಸದ ಬಜೆಟ್‌ ನಿರ್ಧಾರವಾಗುತ್ತದೆ. ಪ್ರವಾಸಿಗರು ಆರಿಸುವ ಸಾರಿಗೆ, ಸ್ಥಳ, ವಾಸ್ತವ್ಯದ ಹೋಟೆಲ್‌ ಇವೆಲ್ಲವೂ ಪ್ರವಾಸದ ಬಜೆಟ್‌ ನಿರ್ಧರಿಸುತ್ತವೆ. ಐಷಾರಾಮಿತನವನ್ನು ಬಯಸದ ವ್ಯಕ್ತಿಯೊಬ್ಬ ಹತ್ತಿರದ ಪ್ರೇಕ್ಷಣೀಯ ಸ್ಥಳಕ್ಕೆ ಐದು ಸಾವಿರ ರೂಪಾಯಿಯಲ್ಲಿ ಹೋಗಿಬರಬಹುದು. ಚಳಿಗಾಲದ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದವರು ಹೆಚ್ಚಾಗಿ ಕೋರಮಂಗಲ, ಇಂದಿರಾನಗರ, ಗಾಂಧಿನಗರದಲ್ಲಿ ಉಳಿದುಕೊಳ್ಳುತ್ತಾರೆ. ಮೇಲ್ವರ್ಗದ ಜನರು ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ತಂಗುತ್ತಾರೆ. ಈಗ ಅತಿ ಹೆಚ್ಚಿನ ಪ್ರವಾಸಿಗರು ಉಳಿಯಲು ಸ್ಟಾರ್‌ ಹೋಟೆಲ್‌ಗಳನ್ನೇ ಹುಡುಕುತ್ತಾರೆ. ಅದೇ ರೀತಿ ಬಜೆಟ್‌ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದೆ’ ಎಂದು ವಿವರಿಸುತ್ತಾರೆ ಅವರು.ಬೆಂಗಳೂರಿನಿಂದ ಪ್ರವಾಸ ಕೈಗೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ ಎನ್ನುವ ಶರತ್‌ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 20 ಹೆಚ್ಚಳವಾಗಿದೆ ಎನ್ನುತ್ತಾರೆ. ವರ್ಷಪೂರ ನಡೆಯುವ ಪ್ರವಾಸೋದ್ಯಮ ವಹಿವಾಟಿನಲ್ಲಿ ಶೇ 20 ವ್ಯವಹಾರ ಚಳಿಗಾಲದಲ್ಲಿಯೇ ನಡೆಯುತ್ತದೆ ಎಂಬುದು ಅವರ ವಿವರಣೆ.

ಪ್ರತಿಕ್ರಿಯಿಸಿ (+)