ಸೋಮವಾರ, ಏಪ್ರಿಲ್ 12, 2021
26 °C

ಪ್ರಶ್ನೆ-ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಶ್ನೆ-ಉತ್ತರ

 ವಿರೂಪಾಕ್ಷ ಮಠಪತಿ

ನಾನು ಬಿಕಾಂ ಮುಗಿಸಿದ್ದೇನೆ. ಎಸ್‌ಎಸ್‌ಎಲ್‌ಸಿ ನಂತರ ಪಿಯು ಮಾಡದೆ ವಯಸ್ಸಿನ ಆಧಾರದ ಮೇಲೆ ದೂರಶಿಕ್ಷಣದಲ್ಲಿ ಪದವಿ ಪಡೆದೆ. ಈಗ ನಾನು ಎಂಬಿಎ ಮಾಡಬಹುದೇ? ಪಿಜಿಸಿಇಟಿ ಪರೀಕ್ಷೆ ಬರೆಯಬಹುದೇ?
- ಎಂಬಿಎ ಮಾಡಲು ನೀವು ಪದವೀಧರರಾಗಿರಬೇಕು. ಪಿಯು ಮಾಡಿ ಪದವಿ ಗಳಿಸಿದ್ದೀರೋ ಅಥವಾ ದೂರಶಿಕ್ಷಣದ ಮೂಲಕ ಪಿಯು ಮಾಡದೇ ಪದವಿ ಗಳಿಸಿದ್ದೀರೋ ಎಂಬುದು ಮುಖ್ಯವಲ್ಲ. ಆದ್ದರಿಂದ ನೀವು ಎಂಬಿಎ ಮಾಡಲು ತೊಂದರೆಯಿಲ್ಲ. ಹಾಗೆಯೇ ಪಿಜಿಸಿಇಟಿ ಪರೀಕ್ಷೆಯನ್ನೂ ನೀವು ಬರೆಯಬಹುದು.

ವೀರೇಶ, ಗುಲ್ಬರ್ಗ

ನಾನು 2002 ರಲ್ಲಿ ಪಿಯುಸಿಯಲ್ಲಿ (ವಿಜ್ಞಾನ) ಫೇಲಾದೆ. ನಂತರ ಶಿಕ್ಷಣವನ್ನು ಮುಂದುವರಿಸಲಿಲ್ಲ. ಈಗ ದೂರಶಿಕ್ಷಣದ ಮೂಲಕ ಬಿಕಾಂ ಪದವಿ ಓದಲು ಇಚ್ಛಿಸಿದ್ದೇನೆ. ದೂರ ಶಿಕ್ಷಣದಲ್ಲಿ ಪದವಿ ಪಾಸಾದರೆ ನಾನು ಮುಂದೆ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕಲು ಅರ್ಹತೆ ಇರುತ್ತದೆಯೇ? ಇದರ ಬಗ್ಗೆ ದಯವಿಟ್ಟು ಸಲಹೆ ನೀಡಿ ಮಾರ್ಗದರ್ಶನ ಕೊಡಿ.

- ಸರ್ಕಾರಿ ನೌಕರಿಗೆ ಸೇರಲು ನೀವು ಕ್ರಮಬದ್ಧವಾದ ಶಿಕ್ಷಣವನ್ನು ಪಡೆದಿರಬೇಕಾಗುತ್ತದೆ. ಪಿಯು ಮಾಡದೇ ನೀವು ದೂರಶಿಕ್ಷಣದ ಮೂಲಕ ಬಿಕಾಂ ಮಾಡಬಹುದು. ಮುಂದೆ ಎಂಬಿಎ ಸಹ ಮಾಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿರುವುದರಿಂದ ನೀವು ಸರ್ಕಾರಿ ಉದ್ಯೋಗದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

 ಅಕ್ಷಯ್ ಸಿ ಡಿ

ನಾನು ಈಗ ದ್ವಿತೀಯ ಪಿಯುಸಿ (ಪಿಸಿಎಂಇ) ವಿಭಾಗದಲ್ಲಿ ಓದುತ್ತಿದ್ದೇನೆ. ನಾನು ಏರೋಸ್ಪೇಸ್ ವಿಭಾಗದಲ್ಲಿ ಸಂಶೋಧನೆಗೆ ಹೋಗಬಯಸಿದ್ದೇನೆ. ದಯಮಾಡಿ ಪೂರಕ ಮಾರ್ಗದರ್ಶನ ಕೊಡಿ.


- ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸಂಶೋಧನೆ ಮಾಡುವ ಆಸಕ್ತಿ ನಿಮಗಿರುವುದನ್ನು ತಿಳಿದು ಸಂತೋಷವಾಯಿತು. ಈಗ ಎಂಜಿನಿಯರಿಂಗ್ ಪದವಿ ನಂತರ ಉದ್ಯೋಗಕ್ಕೆ ಸೇರುವವರೇ ಹೆಚ್ಚಾಗಿರುವಾಗ ಸಂಶೋಧನೆಯ ಆಸಕ್ತಿಯನ್ನು ಹೊಂದಿರುವ ನಿಮ್ಮಂತಹವರು ವಿರಳ.ಐಐಟಿ ಅಥವಾ ಐಐಎಸ್ಸಿ ಇತ್ಯಾದಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಮಾಡುವುದಾದರೆ ನೀವು ಐಐಟಿ/ ಜೆಇಇ ಅಥವಾ ಕೆವಿಪಿವೈ ಆಯ್ಕೆ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತಮ ರ‌್ಯಾಂಕ್ ಪಡೆಯಬೇಕು. ಇಂತಹ ಕಡೆ ಮಾಡಿದರೆ ಮಾತ್ರ ನೀವು ಸಂಶೋಧನೆಯ ಹಾದಿ ಹಿಡಿಯಬಹುದು.ಇದು ಸಾಧ್ಯವಾಗದಿದ್ದರೆ ನೀವು ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿಇ ಮಾಡಿ. ಅನಂತರ ಏರೋಸ್ಪೇಸ್‌ನಲ್ಲಿ ನೀವು ಎಂಟೆಕ್ ಮಾಡಿ. ಬಳಿಕ ಸಂಶೋಧನೆಯ ಮಾರ್ಗವನ್ನು ಹಿಡಿಯಬಹುದು.

 

 ಗಿರೀಶ್ ಮಹದೇವ್

ನಾನು ಮೆಕಾಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ನನಗೆ ಈಗ ಬಿಇ ಮಾಡಬೇಕೆನಿಸುತ್ತಿದೆ. ಆದರೆ ಮೆಕಾಟ್ರಾನಿಕ್ಸ್ ಬೋಧಿಸುವ ಕಾಲೇಜುಗಳ ಸಂಖ್ಯೆ ಅತೀ ಕಡಿಮೆ. ಆದ್ದರಿಂದ ಇದನ್ನು ಮಾಡುವುದರಿಂದ ಉತ್ತಮ ಉದ್ಯೋಗ ಲಭಿಸುವುದೇ? ಉತ್ತಮ ಭವಿಷ್ಯವಿದೆಯೇ? ಅಥವಾ ಮೆಕ್ಯಾನಿಕಲ್ ವಿಭಾಗಕ್ಕೆ ಹೋಗಲೆ? ಗೊಂದಲವಾಗುತ್ತಿದೆ. ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ.


-ನಿಮಗೆ ಮೆಕಾಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದ್ದರೆ ನೀವು ಬಿಇ ಮಾಡುವುದು ಒಳ್ಳೆಯದು. ಮೆಕ್ಯಾನಿಕಲ್ ವಿಭಾಗದಲ್ಲಿ ನೀವು ಬಿಇ ಮಾಡಿದರೂ ಮುಂದೆ ಎಂಟೆಕ್ ಮಾಡುವಾಗ ಮೆಕಾಟ್ರಾನಿಕ್ಸ್ ಆರಿಸಿಕೊಳ್ಳಬಹುದು. ಸುನಿಲ್ ಪ್ರಭು

ನಾನು ಚಿತ್ರದುರ್ಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಇದೆ. ಬಾಹ್ಯಾಕಾಶ ವಿಜ್ಞಾನವು ಲಭ್ಯವಿರುವ ವಿಶ್ವವಿದ್ಯಾಲಯಗಳು ಯಾವುವು ಮತ್ತು ದ್ವಿತೀಯ ಪಿಯುಸಿ ನಂತರ ಯಾವ ಆಯ್ಕೆ ಉತ್ತಮ? ದಯಮಾಡಿ ಮಾರ್ಗದರ್ಶನ ಕೊಡಿ.


- ಬಾಹ್ಯಾಕಾಶ ವಿಜ್ಞಾನದಲ್ಲಿ ನಿಮಗೆ ಆಸಕ್ತಿ ಇರುವುದನ್ನು ತಿಳಿದು ಸಂತೋಷವಾಯಿತು. ಬಾಹ್ಯಾಕಾಶ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಭೌತಶಾಸ್ತ್ರ, ಗಣಿತ ಮುಂತಾದ ಮೂಲಭೂತ ಕ್ಷೇತ್ರಗಳ ಜ್ಞಾನ ಚೆನ್ನಾಗಿರಬೇಕು.ಇದಕ್ಕಾಗಿ ನೀವು ಪಿಯು ನಂತರ ಬಿಎಸ್ಸಿ ಮತ್ತು ಎಂಎಸ್ಸಿಯನ್ನು ಮಾಡಿ ಸಂಶೋಧನೆಯ ಹಂತದಲ್ಲಿ ಬಾಹ್ಯಾಕಾಶ ವಿಜ್ಞಾನದ ಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಇಲ್ಲವಾದರೆ ಪಿಯು ನಂತರ ಐಐಟಿ/ ಜೆಇಇ ಆಯ್ಕೆ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕ್ ಪಡೆದರೆ ನೀವು ಐಐಎಸ್‌ಸಿಆರ್‌ನಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಅಧ್ಯಯನ ಮಾಡಬಹುದು.

  ಮುಹಮ್ಮದ್ ಇದ್ರಿಸ್

ನಾನು ದ್ವಿತೀಯ ಪಿಯ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು, ನನಗೆ ಸಿಇಟಿ ಬರೆಯುವ ಅಭಿಲಾಷೆ ಇಲ್ಲ. ಆದ್ದರಿಂದ ಪಿಯು ನಂತರ ಉತ್ತಮ ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ಕೋರ್ಸುಗಳು ಯಾವುವು? ಅದರಲ್ಲೂ ಎರಡೇ ವರ್ಷಕ್ಕೆ ಉದ್ಯೋಗ ಲಭಿಸುವ ಯಾವುದಾದರೂ ಕೋರ್ಸ್ ಇದೆಯೇ? ಇದ್ದರೆ ಅಂತಹ ಕೋರ್ಸ್/ ಕ್ಷೇತ್ರಗಳಾವುವು? ದಯಮಾಡಿ ಮಾರ್ಗದರ್ಶನ ಕೊಡಿ.
- ನೀವು ಪತ್ರದಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರಗಳೇನು ಎಂಬುದನ್ನು ತಿಳಿಸಿಲ್ಲ. ಯಾವ ಕ್ಷೇತ್ರದಲ್ಲಿ ಅಧ್ಯಯನ ಮಾಡಿದರೆ ಬೇಗ ಕೆಲಸ ಸಿಗುತ್ತದೆ ಎಂದಷ್ಟೇ ಕೇಳಿದ್ದೀರಿ. ಇವತ್ತು ಉದ್ಯೋಗವನ್ನು ಪಡೆಯುವುದು ಕಷ್ಟವಲ್ಲ. ಆದರೆ ಆ ಉದ್ಯೋಗಕ್ಕೆ ಬೇಕಾದ ಜ್ಞಾನ ಮತ್ತು ಕೌಶಲ್ಯವನ್ನು ಪಡೆದಿರುವುದು ಮುಖ್ಯ.

 

ನೀವು ನಿಮ್ಮ ಆಸಕ್ತಿಯನ್ನು ಗುರುತಿಸಿಕೊಂಡು ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಯಶಸ್ವಿಯಾಗಬಹುದು. ಪಿಯು ನಂತರ ನೀವು ಬಿಎಸ್ಸಿ ಮತ್ತು ಬಿಇಡಿ ಮುಗಿಸಿದರೆ ಪ್ರೌಢಶಾಲಾ ಪ್ರಾಧ್ಯಾಪಕರಾಗಬಹುದು. ಆದರೆ ಇದಕ್ಕೆ ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಇರಬೇಕು.ಪಿಯು ನಂತರ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಡಿಪ್ಲೊಮಾ ಮಾಡಿದರೆ ಖಾಸಗೀ ಉದ್ಯೋಗಗಳು ಹೇರಳವಾಗಿ ಸಿಗುತ್ತವೆ. ಆದರೆ ನಿಮಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರಬೇಕು. ಆದ್ದರಿಂದ ಅಧ್ಯಯನದ ಸಮಯದಲ್ಲಿ ಉದ್ಯೋಗದ ಬಗ್ಗೆ ಚಿಂತಿಸದೆ, ನಿಮ್ಮ ಆಸಕ್ತಿಯನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಪರಿಣತಿಯನ್ನು ಸಂಪಾದಿಸಿ. ಉದ್ಯೋಗ ತಂತಾನೆ ಸಿಗುತ್ತದೆ.

  ಮಂಜುನಾಥ

ನಾನು ಈಗ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲಸದ ನಂತರ ನನಗೆ ತುಂಬಾ ಸಮಯ ಉಳಿದಿರುತ್ತದೆ. ಹಾಗಾಗಿ ಮುಂದೆ ಓದಲು ನಿರ್ಧರಿಸಿದ್ದೇನೆ. ನಾನು ಏಳು ವರ್ಷಗಳ ಹಿಂದೆ ಬಿಕಾಂ ಮಾಡುತ್ತಿದ್ದೆ. ಅದರಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ.

 

ಈಗಾಗಲೇ ಏಳು ವರ್ಷ ಕಳೆದಿರುವುದರಿಂದ ಮತ್ತೆ ಪರೀಕ್ಷೆ ಬರೆದು ಅವುಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ದೂರಶಿಕ್ಷಣದಲ್ಲಿ ಪಿಯು ಆಧಾರದ ಮೇಲೆ ಅಥವಾ ವಯಸ್ಸಿನ ಆಧಾರದ ಮೇಲೆ ಎಂಬಿಎ ಮಾಡಬಹುದೇ? ಸೂಕ್ತ ಮಾರ್ಗದರ್ಶನ ಕೊಡಿ.
-ಪಿಯು ಆಧಾರದ ಮೇಲೆ ಎಂಬಿಎಗೆ ಸೇರಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಂದು ವಿಭಾಗದಲ್ಲಿ ಪದವಿಯನ್ನು ಗಳಿಸಿರಲೇಬೇಕು. ಆದ್ದರಿಂದ ನೀವು ದೂರಶಿಕ್ಷಣದ ಮೂಲಕ ಬಿಎ ಅಥವಾ ಬಿಕಾಂ ಡಿಗ್ರಿಯನ್ನು ಮೊದಲು ಪಡೆದು ನಂತರ ಎಂಬಿಎ ಮಾಡಬಹುದು.

 ತೇಜಮೂರ್ತಿ ಕೆ ಎಲ್.

ನಾನು ಬಿಇ ಮೆಕ್ಯಾನಿಕಲ್ ಮಾಡುತ್ತಿದ್ದೇನೆ. ನನಗೆ ಬಾಹ್ಯಾಕಾಶ ಮತ್ತು ಏರೋನಾಟಿಕಲ್ ಕ್ಷೇತ್ರಗಳಲ್ಲಿ ಅತ್ಯಂತ ಆಸಕ್ತಿ ಇದೆ. ನನಗೆ ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ಆಸೆಯೂ ಇದೆ. ಆದ್ದರಿಂದ ಇದಕ್ಕಾಗಿ ಯಾವುದಾದರೂ ವಿಶೇಷ ಕೋರ್ಸುಗಳಿದ್ದರೆ ತಿಳಿಸಿ ಸಲಹೆ ನೀಡಿ.- ನೀವು ಮೆಕಾನಿಕಲ್ ವಿಭಾಗದಲ್ಲಿ ಬಿಇ ಮಾಡುತ್ತಿರುವುದು ನಿಮ್ಮ ಆಸಕ್ತಿಯ ಕ್ಷೇತ್ರಗಳಾದ ವ್ಯೋಮ ವಿಜ್ಞಾನ (ಸ್ಪೇಸ್ ಸೈನ್ಸ್) ಮತ್ತು ವಿಮಾನ ವಿಜ್ಞಾನ (ಏರೋನಾಟಿಕಲ್) ವಿಭಾಗಗಳಿಗೆ ಪೂರಕವಾಗಿದೆ. ಬಿಇ ನಂತರ ನೀವು ಏರೋನಾಟಿಕ್ಸ್‌ನಲ್ಲಿ ಎಂಟೆಕ್ ಮಾಡುವುದು ಒಳ್ಳೆಯದು.

 ಶ್ರೀವಿದ್ಯಾ

ನಾನು ಡಿಪ್ಲೊಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಮುಂದೆ ಬಿಟೆಕ್ ಮಾಡಬಯಸಿದ್ದೇನೆ. ಹಾಗಾಗಿ ನಾನು ಡಿಪ್ಲೊಮಾ ಮಾಡುತ್ತಿರುವುದರಿಂದ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದೇ ಅಥವಾ ಮೂರು ವರ್ಷಗಳನ್ನು ಓದಬೇಕೆ? ದಯಮಾಡಿ ಸೂಕ್ತ ಸಲಹೆ ಕೊಡಿ.- ನೀವು ಡಿಪ್ಲೊಮಾ ನಂತರ ತಾಂತ್ರಿಕ ಶಿಕ್ಷಣ ಮಂಡಲಿಯವರು ನಡೆಸುವ ಸಿಇಟಿ ಪರೀಕ್ಷೆ ತೆಗೆದುಕೊಂಡು ಲ್ಯಾಟರಲ್ ಎಂಟ್ರಿ ಪಡೆದು ಎರಡನೆ ವರ್ಷದ ಬಿಇಗೆ ಸೇರಬಹುದು ಅಥವಾ ಡಿಪ್ಲೊಮಾ ನಂತರ ಸಂಜೆ ಕಾಲೇಜುಗಳಲ್ಲಿಯೂ ಬಿಇ ಮಾಡಬಹುದು.

 ಸ್ವರ್ಣಾ

ಡಿಪ್ಲೊಮಾದಲ್ಲಿ ಉತ್ತಮವಾದ ವಿಭಾಗಗಳು ಯಾವುವು? ಡಿಪ್ಲೊಮಾ ಮತ್ತು ಬಿಇ ಮಾಡಿದ ನಂತರ ಉತ್ತಮ ಉದ್ಯೋಗ ಲಭಿಸುವುದೇ? ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ.
- ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮುಂತಾದ ಅನೇಕ ಕ್ಷೇತ್ರಗಳು ಡಿಪ್ಲೊಮಾ ಲಭ್ಯವಿವೆ. ನಿಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ಡಿಪ್ಲೊಮಾ ಮಾಡಿ. ನಂತರ ನೀವು ಅದೇ ಕ್ಷೇತ್ರದಲ್ಲಿ ಬಿಇ ಸಹ ಮಾಡಬಹುದು. ಉತ್ತಮ ಉದ್ಯೋಗಕ್ಕೆ ಬಿಇ ಮಾಡುವುದು ಒಳ್ಳೆಯದು.ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001

ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.