ಗುರುವಾರ , ಜೂಲೈ 2, 2020
23 °C

ಪ್ರಸಂಗಗಳ ಪರಪಂಚ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಪ್ರಸಂಗಗಳ ಪರಪಂಚ

ಇದುವರೆಗೆ ಇದ್ದ ವಿಜಯ್ ಇಮೇಜನ್ನು ಅಳಿಸಿಹಾಕಿ, ಹೊಸ ರೀತಿಯಲ್ಲಿ ಅವರನ್ನು ನಿರ್ದೇಶಕ ಪ್ರೀತಂ ಗುಬ್ಬಿ ತೆರೆಮೇಲೆ ತೋರಿಸಿರುವ ಚಿತ್ರ `ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್~. ತರ್ಕವನ್ನು ಮರೆತು, ಪ್ರಸಂಗಗಳನ್ನಷ್ಟೇ ಸಿಂಗರಿಸುತ್ತಾ ಲವಲವಿಕೆ ಯಿಂದ ದೃಶ್ಯಗಳನ್ನು ಪೋಣಿಸುವ ಪರಿಪಾಠಕ್ಕೆ ಬಾಲಿವುಡ್‌ನಲ್ಲಿ ಯಶಸ್ಸು ಸಿಕ್ಕಿದೆ. `ಜಾನಿ...~ ಅದೇ ಧಾಟಿಯ ಸಿನಿಮಾ.ನಿರ್ದೇಶಕ ಪ್ರೀತಂ ಗುಬ್ಬಿ ಇದುವರೆಗೆ ತಮ್ಮ ಬೆನ್ನಿಗಂಟಿಕೊಂಡಿದ್ದ ಮಳೆ, ಹಸಿರಿನ ಯೋಚನೆ ಯನ್ನು ಸಂಪೂರ್ಣವಾಗಿ ಕಿತ್ತೆಸೆದು ಈ ಸಿನಿಮಾ ಮಾಡಿದ್ದಾರೆ. ಇಡೀ ಚಿತ್ರ ಒಂದು ಸೆಟ್‌ನಲ್ಲಿ ನಡೆಯುತ್ತದೆನ್ನುವುದು ಈ ಕಾಲದ ಮಟ್ಟಿಗೆ ಹೊಸತನವೇ ಹೌದು.

 

ಕಡಿಮೆ ಪಾತ್ರಗಳು, ಕಚಗುಳಿ ಇಡುವ ಮಾತು, ಅಶ್ಲೀಲತೆಯ ಸೋಂಕೇ ಇಲ್ಲದ ಹಾಸ್ಯ ಚಿತ್ರವನ್ನು ಸಲೀಸಾಗಿ ನೋಡಿಸಿಕೊಂಡು ಹೋಗುವಂತೆ ಮಾಡಿವೆ.ಚಿತ್ರದ ಉದ್ದಕ್ಕೂ ಕಪ್ಪು-ಬಿಳುಪು ಚಿಂತನೆ ಇದೆ. ನಾಯಕ - ಪರಿಸ್ಥಿತಿಯೆಂಬ ಖಳನಾಯಕ, ಪ್ರೀತಿ - ಅದಕ್ಕೆ ಅಡ್ಡ ಬರುವ ನಾಯಕಿಯ ತಂದೆ, ತಿರುವಿಗೆ ಅಗತ್ಯವಿರುವ ಅನುಕೂಲ ಸಿಂಧುತ್ವ ಇವೆಲ್ಲವೂ ಕಪ್ಪು-ಬಿಳುಪು ಚಿಂತನೆಗೆ ಸಾಕ್ಷಿಗಳು. ಆದರೆ, ನಿರ್ದೇಶಕರು ಈ ಎಲ್ಲಾ ಸಂಗತಿಗಳನ್ನು ನಿರೂಪಿಸಿರುವ ರೀತಿ ಶ್ಲಾಘನೀಯ.ವಿಜಯ್ ಇದ್ದಾರೆಂಬ ಕಾರಣಕ್ಕೆ ಎಲ್ಲೂ ಅವರು ಬಟ್ಟೆ ಬಿಚ್ಚಿಸಿಲ್ಲ. ಅಡಿಗಡಿಗೂ ಹೊಡೆದಾಟ ಬೇಕೆಂಬ ಹಟವನ್ನೂ ತೋರಿಲ್ಲ. ಬದಲಿಗೆ, ಪ್ರಸಂಗಗಳಲ್ಲೇ ಹಾಸ್ಯ ನಾಟಕದ ಗುಣವನ್ನು ತುಂಬಿ ರಂಜಿಸಿದ್ದಾರೆ. ಈ ಕಾರಣಕ್ಕೇ `ಜಾನಿ...~ ಸಂಪೂರ್ಣ ಮನರಂಜನಾತ್ಮಕ ಚಿತ್ರ.ನಿರ್ದೇಶಕರ ಉಮೇದನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ಕಲಾ ನಿರ್ದೇಶಕ ಹಾಗೂ ಸಂಭಾಷಣೆಕಾರರ ಕಾಣ್ಕೆಯೂ ದೊಡ್ಡದಿದೆ. ಅಷ್ಟೊಂದು ದೊಡ್ಡ ಸೆಟ್ ಹಾಕುವ ಅವಕಾಶವನ್ನು ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಸದುಪಯೋಗಪಡಿಸಿಕೊಂಡಿದ್ದಾರೆ.ಕಟ್ಟಡಗಳ ಸೆಟ್‌ಗೆ ಅವರು ಬಳಸಿರುವ ಬಣ್ಣಗಳೇ ಚಿತ್ರವನ್ನು ವರ್ಣರಂಜಿತವಾಗಿಸಿವೆ. ವ್ಯಂಗ್ಯವನ್ನು ತುಸುವಷ್ಟೇ ಬೆರೆಸಿ, ಲವಲವಿಕೆಗೆ ಎಲ್ಲೂ ಕೊರತೆಯಾಗದಂತೆ ಎನ್.ಎಸ್. ಶಂಕರ್ ಮಾತುಗಳನ್ನು ಬರೆದಿದ್ದಾರೆ. ಅವುಗಳನ್ನು ಒಪ್ಪಿಸುವಲ್ಲಿ ವಿಜಯ್ ಹಾಗೂ ರಂಗಾಯಣ ರಘು ನಡುವೆ ಜುಗಲ್‌ಬಂದಿಯೇ ನಡೆದಿದೆ.ತಾವು ನಿರ್ದೇಶಕರ ನಟ ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ತಾವು ಹೊಡೆದಾಟ, ಅಬ್ಬರಕ್ಕೆ ಹೇಳಿಮಾಡಿಸಿದ ನಟನಷ್ಟೇ ಅಲ್ಲ ಎಂಬುದನ್ನೂ ಅವರು ರುಜುವಾತು ಮಾಡಿದ್ದಾರೆ. ನೋಡಲು ಸುಂದರವಾಗಿರುವ ರಮ್ಯಾ ಪಕ್ಕದಲ್ಲಿದ್ದಾಗಲೂ ವಿಜಯ್ ಮಂಕು ಎನ್ನಿಸುವುದೇ ಇಲ್ಲ.ನಿರ್ದೇಶಕರು ಅವರ ವೇಷಭೂಷಣದಲ್ಲಷ್ಟೇ ಬದಲಾವಣೆಗಳನ್ನು ತಂದಿಲ್ಲವೆಂಬುದಕ್ಕೆ ಇವೆಲ್ಲಾ ಪುಷ್ಟಿ. ನಾಯಕಿ ರಮ್ಯಾ ತಾವೇ ಮತ್ತೊಮ್ಮೆ ಡಬ್ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ. ತುಸು ದೂರದಿಂದ ಪಾತ್ರವನ್ನು ಅನುಭವಿಸುವಂತೆ ಕಂಡರೂ ಹಾಡುಗಳಲ್ಲಿ ಅವರು ಸೌಂದರ್ಯ ಲಹರಿ.

 

`ಶೀಲಾ ಕೀ ಜವಾನಿ~ ಹಿಂದಿ ಹಾಡಿನಿಂದ ಸ್ಫೂರ್ತಿ ಪಡೆದ ಗೀತೆಗೆ ಅವರು ಕಷ್ಟಪಟ್ಟು ನೃತ್ಯವನ್ನೂ ಮಾಡಿದ್ದಾರೆ.ಅಭಿನಯದಲ್ಲಿ ರಂಗಾಯಣ ರಘು ಹೆಚ್ಚು ಅಂಕ ಗಳಿಸಿದ್ದಾರೆ. ಹೆಣ್ಣುವೇಷದಲ್ಲಿ ಅವರ ಭಾವಾಭಿನಯವನ್ನು ಕಂಡು ನಗದಿರಲು ಸಾಧ್ಯವೇ ಇಲ್ಲ. ದತ್ತಣ್ಣ, ಶರಣ್, ಸಾಧುಕೋಕಿಲಾ, ಅಚ್ಯುತ್ ಕುಮಾರ್ ಎಲ್ಲರೂ ಚಿತ್ರದ ಲವಲವಿಕೆಯನ್ನು ಕಾಯ್ದುಕೊಂಡಿದ್ದಾರೆ.ವಿ. ಹರಿಕೃಷ್ಣ ಸಂಗೀತಕ್ಕೆ ಯೋಗರಾಜ ಭಟ್ಟರ ಗಪದ್ಯದ ಒಗ್ಗರಣೆ ಹದವಾಗಿ ಬೆರೆತಿದೆ. ವಿಜಯ್ ಉತ್ಕಟತೆಯನ್ನು ಅಚ್ಚುಕಟ್ಟಾಗಿ ತೋರಿಸಿರುವ ಛಾಯಾಗ್ರಾಹಕ ಕೃಷ್ಣ ಹಾಗೂ ಹಾಡುಗಳ ಲಯಕ್ಕೆ ತಕ್ಕಂತೆ ನೃತ್ಯ ಮಾಡಿಸಿರುವ ಹರ್ಷ ಕೆಲಸವನ್ನೂ ನೆನಪಿಸಿಕೊಳ್ಳಬೇಕು. ತರ್ಕ ಮರೆತು, ಹರ್ಷ ಬಯಸುವವರಿಗೆ `ಜಾನಿ...~ ರಸಪಾಕ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.