ಭಾನುವಾರ, ಜೂನ್ 13, 2021
20 °C

ಪ್ರಿಯಾಮಣಿ ಚಿಂತಾಮಣಿ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

`ನೆಗೆಟಿವ್ ಶೇಡ್ ಇರುವ ಪಾತ್ರಗಳೆಂದರೆ ನನಗಿಷ್ಟ~. ನಟಿ ಪ್ರಿಯಾಮಣಿ ಅವರ ಧ್ವನಿಯಲ್ಲಿ ಉತ್ಸಾಹವಿತ್ತು. `ಸಿನಿಮಾ ರಂಜನೆ~ ಜೊತೆ ಮಾತನಾಡುತ್ತಿದ್ದ ಅವರು, `ವಿಷ್ಣುವರ್ಧನ~ ಚಿತ್ರದ ತಮ್ಮ ಪಾತ್ರವನ್ನು ನೆನಪಿಸಿಕೊಂಡು ನೀಡಿದ ಪ್ರತಿಕ್ರಿಯೆ ಇದು.`ವಿಷ್ಣುವರ್ಧನ~ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಭಾವನಾ ನಟಿಸಿದ್ದರೆ, ಪ್ರಿಯಾಮಣಿ ಖಳನಾಯಕನ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರಕ್ಕಿರುವ ಮಹತ್ವ ತಮ್ಮ ಪಾತ್ರಕ್ಕೆ ಇಲ್ಲವಲ್ಲ ಎಂದು ಕೆಣಕಿದಾಗ, `ಲೇಡಿ ಬಾಂಡ್~ ರೀತಿಯಲ್ಲಿ ಅವರು ತಮ್ಮ ಪಾತ್ರದ ಸಮರ್ಥನೆಗೆ ವಾದವನ್ನೇ ಮಂಡಿಸಿದರು.“ನನಗೆ ಎರಡು ಪಾತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನಿರ್ದೇಶಕ ಕುಮಾರ್ ನೀಡಿದ್ದರು. ನಾಯಕಿಯ ಪಾತ್ರದ ಬದಲಾಗಿ, ಖಳನಾಯಕನ ಪತ್ನಿಯ ಪಾತ್ರವನ್ನು ನಾನೇ ಆಯ್ಕೆ ಮಾಡಿಕೊಂಡಿದ್ದು. ಇದಕ್ಕೆ ಕಾರಣಗಳಿವೆ.ಮೊದಲನೆಯದಾಗಿ ನನಗೆ ನೆಗೆಟಿವ್ ಶೇಡ್ ಇರುವ ಪಾತ್ರಗಳೆಂದರೆ ಇಷ್ಟ. ನಾಯಕನ ಜೊತೆ ಬಂದು ಹೋಗುವ ನಾಯಕಿಯ ಪಾತ್ರವನ್ನು ಸುಲಭವಾಗಿ ಮಾಡಬಹುದು. ಆದರೆ ನೆಗೆಟಿವ್ ಪಾತ್ರಗಳಲ್ಲಿ ಅಭಿನಯ ಸಾಮರ್ಥ್ಯ ಪ್ರದರ್ಶಿಸಲು ಸಾಕಷ್ಟು ಅವಕಾಶವಿರುತ್ತದೆ.ಎರಡನೆಯದಾಗಿ ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಿಂತ ನನ್ನ ಪಾತ್ರವೇ ಪ್ರಧಾನ. ಚಿತ್ರದ ಮುಖ್ಯ ಕಥೆಯ ಎಳೆ ನನ್ನ ಪಾತ್ರದೊಳಗೆ ಮಿಳಿತವಾಗಿದೆ. ಚಿಕ್ಕದಾಗಿದ್ದರೇನಂತೆ, ಚಿತ್ರದಲ್ಲಿ ಅದು ಮುಖ್ಯಪಾತ್ರ. ಆದರೆ ನಾನು ಬಯಸುವ ಸಂಪೂರ್ಣ ನೆಗೆಟಿವ್ ಪಾತ್ರವುಳ್ಳ ಚಿತ್ರ ಇದುವರೆಗೆ ಸಿಕ್ಕಿಲ್ಲ”.ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಸದಾ ಬಿಜಿಯಾಗಿರುತ್ತಿದ್ದ ಪ್ರಿಯಾಮಣಿ ಅವರನ್ನು ಈಗ ಕನ್ನಡದಲ್ಲಿ ಸಾಲು ಅವಕಾಶಗಳು ಅರಸಿ ಬರುತ್ತಿವೆ. `ಅಣ್ಣಾ ಬಾಂಡ್~ ಮತ್ತು `ಲಕ್ಷ್ಮೀ~ ಅವರ ಕೈಯಲ್ಲಿರುವ ಕನ್ನಡ ಚಿತ್ರಗಳು. `ಅಣ್ಣಾ ಬಾಂಡ್~ ಚಿತ್ರದಲ್ಲಿಯೂ ಇಬ್ಬರು ನಾಯಕಿಯರು.ನಿಧಿ ಸುಬ್ಬಯ್ಯ ಜೊತೆ ನಾಯಕಿಯ ಪಟ್ಟ ಹಂಚಿಕೊಂಡಿರುವ ಪ್ರಿಯಾಮಣಿಗೆ ಚಿತ್ರದಲ್ಲಿ ಸಾಹಸಿ ಮನೋಭಾವದ ಯುವತಿಯ ಪಾತ್ರವಂತೆ. ಮೀರಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಅವರು ಮೂಢನಂಬಿಕೆಯ ವಿಚಾರಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಡಾಕ್ಯಮೆಂಟರಿ ತಯಾರಿಸುವ ಫಿಲ್ಮ್‌ಮೇಕರ್.ನಿಧಿ ಸುಬ್ಬಯ್ಯ ಆಕೆಯ ಸ್ನೇಹಿತೆ. ಸಾಕ್ಷ್ಯಚಿತ್ರಕ್ಕಾಗಿ ಅವರ ತಂಡ ಒಂದು ಊರಿಗೆ ಹೋದಾಗ ಅಲ್ಲಿ ಪುನೀತ್, ರಂಗಾಯಣ ರಘು ಎದುರಾಗುತ್ತಾರೆ. ಅವರು ಕಷ್ಟದಲ್ಲಿ ಸಿಲುಕಿದಾಗ ಸಹಾಯ ಮಾಡುತ್ತಾರೆ... ಹೀಗೆ ಕಥೆ ಮುಂದೆ ಸಾಗುತ್ತದೆ. ಅವರ ಪಾತ್ರದಲ್ಲಿ ಕಾಮಿಡಿಯೂ ಇದೆಯಂತೆ.`ಜಾಕಿ~ಯಂತಹ ಹಿಟ್ ಚಿತ್ರ ಕೊಟ್ಟ ಸೂರಿ-ಪುನೀತ್ ಕಾಂಬಿನೇಷನ್ ಚಿತ್ರವೆಂದರೆ ಜನರಲ್ಲಿ ಬಹಳ ನಿರೀಕ್ಷೆ ಇರುತ್ತದೆ. ಆದರೆ, ಸಾಮಾನ್ಯವಾಗಿ ನಾನು ನಟಿಸಿದ ಚಿತ್ರಗಳ ಬಗ್ಗೆ ನಾನು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಇದು ಅಹಂಕಾರದ ಮಾತಲ್ಲ~- ಬಾಣದಂತೆ ಹರಿತ ನುಡಿ ಅವರದು. ಅಂದಹಾಗೆ, ಶಿವರಾಜ್‌ಕುಮಾರ್ ಜೊತೆ ನಟಿಸುತ್ತಿರುವ `ಲಕ್ಷ್ಮೀ~ ಚಿತ್ರದಲ್ಲಿ ಪ್ರೇಕ್ಷಕರನ್ನು ಪ್ರೀತಿಯ ಆಳದಲ್ಲಿ ಮುಳುಗಿಸುವ ಪಾತ್ರ ಅವರದು.ಕನ್ನಡ ಚಿತ್ರರಂಗ ತಮ್ಮನ್ನು ಈ ಮೊದಲು ನಿರ್ಲಕ್ಷಿಸಿದ್ದರ ಬಗ್ಗೆ ಅವರಿಗೆ ಬೇಸರವಿಲ್ಲ. ತಮಿಳು, ತೆಲುಗು ಮತ್ತು ಮಲಯಾಳಂಗಳಲ್ಲಿ ಅವಕಾಶಗಳು ಹರಿದುಬಂದವು.ಕನ್ನಡದಲ್ಲಿ ಆರಂಭದಲ್ಲಿ ಅವಕಾಶಗಳು ಬರಲಿಲ್ಲ. ಅನ್ಯಭಾಷೆಗಳಲ್ಲಿ ನಟಿಸತೊಡಗಿದ ಮೇಲೆ ಆಫರ್‌ಗಳು ಬಂದವು. ಆಗ ಕೆಲವು ಕಥೆಗಳು ನನಗೆ ಇಷ್ಟವಾಗಲಿಲ್ಲ. ಪಾತ್ರವನ್ನು ಅಳೆದು ತೂಗುತ್ತೇನೆ. ಸ್ಕ್ರಿಪ್ಟ್ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುವುದು. ಅಲ್ಲದೆ ಬೇರೆ ಭಾಷೆಗಳಲ್ಲಿ ಬಿಜಿಯಾಗಿದ್ದರಿಂದ ಕನ್ನಡ ಚಿತ್ರಗಳಿಗೆ ಡೇಟ್ಸ್ ನೀಡಲು ಆಗಲಿಲ್ಲ.ಹೀಗಾಗಿ ಕನ್ನಡಕ್ಕೆ ಬರಲು ತಡವಾಯಿತಷ್ಟೇ. ಈಗ ಕನ್ನಡದಲ್ಲಿಯೂ ಅವಕಾಶಗಳು ಬರುತ್ತಿವೆ. `ರಾಮ್~ನಿಂದ ಇಲ್ಲಿಯವರೆಗೆ ನಾನು ನಟಿಸಿದ ಎಲ್ಲಾ ಕನ್ನಡ ಚಿತ್ರಗಳೂ ಖುಷಿ ನೀಡಿವೆ ಎಂದು ಪ್ರಿಯಾಮಣಿ ತನ್ನ ಕನ್ನಡ ಸಿನಿಮಾ ಪಯಣವನ್ನು ಬಣ್ಣಿಸಿದರು.ಮಲಯಾಳಂನಲ್ಲಿ `ಗ್ರ್ಯಾಂಡ್ ಮಾಸ್ಟರ್~ ಚಿತ್ರದಲ್ಲಿ ಮೋಹನ್‌ಲಾಲ್ ಅವರೊಂದಿಗೆ ಪ್ರಿಯಾಮಣಿ ನಟಿಸುತ್ತಿದ್ದಾರೆ. ಕ್ರೈಮ್ ಮತ್ತು ಥ್ರಿಲ್ಲರ್ ಕಥಾ ಹಂದರವುಳ್ಳ ಈ ಚಿತ್ರದಲ್ಲಿ ಅವರದು ವಕೀಲೆಯ ಪಾತ್ರವಂತೆ. ಈ ವಕೀಲೆ ಫೈಟ್ ಮಾಡುತ್ತಾಳಾ? ಸದ್ಯಕ್ಕದು ಸೀಕ್ರೆಟ್!`ಮೋಹನ್‌ಲಾಲ್ ಅತ್ಯದ್ಭುತ ನಟ. ಬಾಲ್ಯದಿಂದಲೂ ಅವರ ಚಿತ್ರಗಳನ್ನು ತಪ್ಪದೆ ನೋಡುತ್ತಿದ್ದೆ. ಅವರೊಂದಿಗೆ ನಟಿಸುವುದು ನನ್ನ ಕನಸಾಗಿತ್ತು. ಆ ಕನಸು ಈಗ ನಿಜವಾಗಿದೆ~ ಎನ್ನುವಾಗ ಪ್ರಿಯಾಮಣಿ ಮೊಗದಲ್ಲೂ ಕಣ್ಣುಗಳಲ್ಲೂ ನಗೆಮಿಂಚು.`ಕನ್ನಡ ಚಿತ್ರರಂಗವನ್ನು ನೆರೆಯ ಚಿತ್ರರಂಗಗಳೊಂದಿಗೆ ಹೋಲಿಸುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದಾಗಿದ್ದರೂ ಅನ್ಯಭಾಷೆಗಳಿಗೆ ಕಮ್ಮಿಯಿಲ್ಲದಂತೆ ಬೆಳೆಯುತ್ತಿದೆ. ತಾಂತ್ರಿಕವಾಗಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವಲ್ಲಿ ಹಿಂದೆ ಬಿದ್ದಿಲ್ಲ. ರೀಮೇಕ್‌ಗಳು ನಡೆಯುತ್ತಿದ್ದರೂ, ಮೂಲಕಥೆಗಳುಳ್ಳ ಕನ್ನಡ ಚಿತ್ರಗಳು ಹೆಚ್ಚಾಗಿ ಬರುತ್ತಿವೆ. ದೊಡ್ಡ ಬಜೆಟ್ ಚಿತ್ರಗಳು ನಿರ್ಮಾಣವಾಗುತ್ತಿವೆ~ ಎನ್ನುವ ಪ್ರಿಯಾಮಣಿ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆಯಿದೆ.ನಾಯಕಿಯರೊಂದಿಗಿನ ಮಾತಿನಲ್ಲಿ ಮದುವೆ ಪ್ರಸ್ತಾಪವಿಲ್ಲದಿದ್ದರೆ ಏನು ಚೆನ್ನ? ಆದರೆ, ಮದುವೆ ಬಗ್ಗೆ ಮಾತೆತ್ತಿದರೆ ಪ್ರಿಯಾಮಣಿ ಮುನಿಸಿಕೊಳ್ಳುತ್ತಾರೆ. `ಚಿತ್ರರಂಗದ ವೃತ್ತಿ ಬದುಕು ನೆಮ್ಮದಿ ನೀಡಿದೆ. ಚಿತ್ರರಂಗಕ್ಕೆ ಕಾಲಿಟ್ಟು 9 ವರ್ಷಗಳಾದವು.

 

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಗಳಲ್ಲಿ ಸೇರಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದೇನೆ. ಅನೇಕ ಸವಾಲಿನ ಪಾತ್ರಗಳು ದೊರೆತಿವೆ. ನಟಿಯಾಗಿ ಸವಾಲಿನ ಪಾತ್ರಗಳನ್ನು ನಿರ್ವಹಿಸುವ ಹಂಬಲ ಮತ್ತಷ್ಟು ಬೆಳೆಯುತ್ತಲೇ ಇದೆ~ ಎಂದು ಸಿನಿಮಾ ಬಗ್ಗೆ ಹೇಳುತ್ತಲೇ ಅವರು ಮದುವೆ ಮಾತನ್ನು ಮರೆಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.