ಭಾನುವಾರ, ಜೂನ್ 20, 2021
28 °C

ಪ್ರೀತಿಯಲ್ಲಿ ಪತ್ರಕರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಯಲ್ಲಿ ಪತ್ರಕರ್ತ

`ಗುಡ್‌ಲಕ್~ ಸಿನಿಮಾ ನಿರ್ದೇಶಿಸಿ ಆರು ವರ್ಷ ಕಳೆದ ಬಳಿಕ ಪತ್ರಕರ್ತ ನಂದಕುಮಾರ್ ಕಾತರ, ತಳಮಳ ತುಂಬಿಕೊಂಡು ಕುಳಿತಿದ್ದರು. ಕಾತರಕ್ಕೆ ಕಾರಣ, ಅವರ ನಿರ್ದೇಶನದ ಎರಡನೇ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ತಳಮಳಕ್ಕೆ ಕಾರಣ, ಸಿನಿಮಾ ಹೇಗೆ ಮೂಡಿಬರುವುದೋ ಎಂಬ ಆತಂಕ. `ಐಯಾಮ್ ಇನ್ ಲವ್~ ಅವರು ನಿರ್ದೇಶಿಸುತ್ತಿರುವ ಎರಡನೇ ಚಿತ್ರ. ಅವರ ಪ್ರಕಾರ ಇದೊಂದು ಸರಳವಾದ ಪ್ರೇಮಕತೆ.

 

ಆದರೆ ಏರಿಳಿತವಂತೂ ಇದ್ದೇ ಇರುತ್ತದೆ. ಫ್ಯಾಷನ್ ಛಾಯಾಗ್ರಾಹಕನ ಬದುಕಿನಲ್ಲಿ ಏಳುವ ಪ್ರೇಮದ ಅಲೆ ಕತೆಯ ಹಂದರ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಮದ ಜತೆಗೆ ತ್ಯಾಗಕ್ಕೂ ಅವಕಾಶ ಕಲ್ಪಿಸಲಾಗಿದೆ.ಚಿತ್ರದ ನಾಯಕ ಮಹೇಶ್. ಚಿತ್ರರಂಗಕ್ಕೆ ಹೊಸಮುಖ. ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು ಕಿರುತೆರೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವ ಹೊಂದಿದವರು. ಚಿತ್ರರಂಗಕ್ಕೆ ಬರಲು ಅವರ ತಂದೆಯವರ ನಾಟಕ ಪ್ರೇಮ ಕಾರಣ. ನೃತ್ಯ ತರಬೇತಿಯನ್ನು ಪಡೆದಿರುವ ಇವರಿಗೆ ನಂದಕುಮಾರ್ ಅವರ ಪರಿಚಯವಾಗಿದ್ದು ಕೆಲ ವರ್ಷಗಳ ಹಿಂದೆ. ಆ ಪರಿಚಯವೇ ಚಿತ್ರ ರೂಪಿಸಲು ಪ್ರೇರಣೆ ನೀಡಿತು. ಇಬ್ಬರೂ ಸೇರಿ ನಿರ್ಮಾಪಕರ ಶೋಧಕ್ಕೆ ತೊಡಗಿದರು.ಆಗ ತಥಾಸ್ತು ಎಂದದ್ದು ಲಲಿತಾ ಚೆನ್ನಾರೆಡ್ಡಿ. ಅವರ ಪಾಲಿಗೂ ಇದು ಮೊದಲ ಚಿತ್ರ. ಹೊಸೂರಿನಲ್ಲಿ ತಮ್ಮದೇ ಆದ ಸ್ವಂತ ವ್ಯವಹಾರ ನಡೆಸುತ್ತಿರುವ ಅವರಿಗೆ ಚಿತ್ರ ನಿರ್ಮಾಣದ ಬಯಕೆ ಇತ್ತು. ಬೆಂಗಳೂರಿನಲ್ಲಿ ಓದುತ್ತಿದ್ದಾಗಲೇ ಸಿನಿಮಾಗಳ ಬಗ್ಗೆ ಅವರು ಆಕರ್ಷಿತರಾಗಿದ್ದರಂತೆ.ಹಾಡುಗಳನ್ನು ಸಂಯೋಜಿಸಿರುವವರು ಸಾಯಿ ಕಾರ್ತಿಕ್. `ಸೆಲ್ಯೂಟ್~, `ಧನ್ ಧನಾಧನ್~, `ಜಿಂಕೆಮರಿ~ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅವರು ಚಿತ್ರಕ್ಕಾಗಿ ಐದು ಹಾಡುಗಳಿಗೆ ರಾಗ ಕಟ್ಟಿದ್ದಾರೆ. ಅವುಗಳಲ್ಲಿ ಎರಡು ಯುಗಳ ಗೀತೆಗಳು. ಒಂದು ನಾಯಕಿಯನ್ನು ಪರಿಚಯಿಸುವ ಹಾಡು, ಮತ್ತೊಂದು ವಿಷಾದದ ಹಾಡು. `ಎಲ್ಲಾ ಹಾಡುಗಳು ಯುವಕರಿಗೆ ಇಷ್ಟವಾಗಲಿವೆ~ ಎನ್ನುವ ನಂಬಿಕೆ ಅವರದು.ಚಿತ್ರದ ಮತ್ತೊಂದು ವಿಶೇಷ ನಟ ಕೊಟ್ರೇಶ್. ದೈಹಿಕವಾಗಿ ರಂಗಾಯಣ ರಘು ಅವರ ಪಡಿಯಚ್ಚಿನಂತೆ ಭಾಸವಾಗುವ ಅವರು ಮಿಮಿಕ್ರಿ ಕಲಾವಿದ. ಮೂಲತಃ ಭದ್ರಾವತಿಯವರಾದ ಇವರು ಪ್ರೌಢಶಾಲೆಯಲ್ಲಿಯೇ ಓದಿಗೆ ವಿದಾಯ ಹೇಳಿ ಕಲೆಯ ಹುಚ್ಚು ಹತ್ತಿಸಿಕೊಂಡವರು. ನಟ ಕರಿಬಸವಯ್ಯ ಅವರ ಶಿಷ್ಯ. `ಕರಾವಳಿ ಹುಡುಗಿ~, `ಪಗಡೆ~, `ಪ್ರೇಮ್ ಅಡ್ಡಾ~ ಚಿತ್ರಗಳಲ್ಲಿ ನಟನೆಯ ಅನುಭವ ಪಡೆದವರು. ಚಿತ್ರದಲ್ಲಿ ಅವರದು ಹಾಸ್ಯಮಯ ಪಾತ್ರ.ಚಿತ್ರದಲ್ಲಿ ಮಾಲತಿ ಸರದೇಶಪಾಂಡೆ, ತಿಲಕ್, ಧರ್ಮ ಮುಂತಾದವರು ಅಭಿನಯಿಸುತ್ತಿದ್ದಾರೆ. ಎರಡು ಹಾಡುಗಳು ಬ್ಯಾಂಕಾಂಕ್‌ನಲ್ಲಿ ಹಾಗೂ ಒಂದು ಹಾಡನ್ನು ನೇಪಾಳದಲ್ಲಿ ಚಿತ್ರಿಸಲು ನಿರ್ಧರಿಸಲಾಗಿದೆ. ಕ್ಯಾಮೆರಾ ಕೈಚಳಕ ಪಿ.ಕೆ.ಎಚ್. ದಾಸ್ ಅವರದ್ದು.  

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.