ಶುಕ್ರವಾರ, ಜೂನ್ 25, 2021
30 °C

ಪ್ರೀತಿಯ ದೀಪಧಾರಿ

ಎಚ್.ಎಸ್. ನವೀನಕುಮಾರ್ ಹೊಸದುರ್ಗ Updated:

ಅಕ್ಷರ ಗಾತ್ರ : | |

ಕನ್ನಡ ಸಾರಸ್ವತ ಲೋಕದ ಅಭಿನವ ಕಾಳಿದಾಸ ಪ್ರೊ. ಎಸ್.ವಿ. ಪರಮೇಶ್ವರಭಟ್ಟರು ಬದುಕಿದ್ದರೆ ಕಳೆದ ಫೆಬ್ರುವರಿ ೮ಕ್ಕೆ ಅವರಿಗೆ ನೂರು ತುಂಬುತ್ತಿತ್ತು. ಕನ್ನಡಿಗರ ಎದೆಯಲ್ಲಿ ಪ್ರೀತಿಯ ದೀಪವನ್ನು ಹಚ್ಚಿದ ಈ ಅಪರೂಪದ ಕವಿ ಜಪಾನಿನ ಹಾಯ್ಕುಗಳ ಮಾದರಿಯಲ್ಲಿ ಅಪರೂಪದ ಗಾದೆಗಳನ್ನು, ದ್ವಿಪದಿಗಳನ್ನು ಹಾಗೂ ಮುಕ್ತಕಗಳನ್ನೂ ರಚಿಸಿದವರು.ತಮ್ಮ ೮೬ ವರ್ಷಗಳ ತುಂಬು ಜೀವನದಲ್ಲಿ ಕನ್ನಡ ಸಾಹಿತ್ಯಕ್ಕೆ ೬೦ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳ ಕೊಡುಗೆ ನೀಡಿದ ಎಸ್.ವಿ.ಪಿ. ಬಹುಶ್ರುತ ವಿದ್ವಾಂಸರು. ಸಂಸ್ಕೃತದ ಮಹಾಕಾವ್ಯಗಳನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದವರು. ಅದೇ ರೀತಿಯಾಗಿ, ಕನ್ನಡದ ನವೋದಯ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡಿದವರು. ಕನ್ನಡದ ಆಧುನಿಕ ವಚನಕಾರರು. ನಮ್ಮ ನಾಡುನುಡಿಯ ಹಿರಿತನವನ್ನು ಸಹಸ್ರಾರು ಶಿಷ್ಯರಲ್ಲಿ ಬಿತ್ತಿದ ಶ್ರೇಷ್ಠ ಪ್ರಾಧ್ಯಾಪಕರು.ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರ (ಜ: ಫೆ. 8, 19೧೪) ತವರು ತೀರ್ಥಹಳ್ಳಿ ತಾಲ್ಲೂಕು ಮಾಳೂರು. ಅವರ ಪೂರ್ವಿಕರು ಶೃಂಗೇರಿಯ ವಿದ್ಯಾರಣ್ಯಪುರದ ಶಿವಾಲಯದ ಅರ್ಚಕರು. ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಮ್ಮನವರು. ತಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಶಿಕ್ಷಕರಾಗಿದ್ದರಿಂದ, ಪ್ರಾಥಮಿಕ, ಪ್ರೌಢಶಿಕ್ಷಣಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮುಗಿಸಿದ ಭಟ್ಟರು, ೧೯೩೮ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಲ್ಲೇ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.ನಂತರ ತುಮಕೂರಿನಲ್ಲಿ ಅಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕುವೆಂಪು ನಂತರದ ಕನ್ನಡದ ಎರಡನೇ ಪ್ರೊಫೆಸರ್ ಎಂಬ ಹೆಗ್ಗಳಿಕೆ ಅವರದ್ದು. ಮಂಗಳೂರಿನ ಕನ್ನಡ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದರು. ತಮ್ಮ ಹೆಚ್ಚಿನ ಕೃತಿಗಳನ್ನು ಮಂಗಳೂರಲ್ಲಿ ರಚಿಸಿದ ಎಸ್.ವಿ.ಪಿ. ಅವರು, ಮಂಗಳೂರಿನ ಸಾಹಿತ್ಯಕ ವಾತಾವರಣವನ್ನು ತಮ್ಮ ಕಾಳಿದಾಸ ಮಹಾ ಸಂಪುಟದ ಬಿನ್ನಹದಲ್ಲಿ ಏರ್ ಕಂಡಿಷನ್ಡ್ ಎಂದು ಕರೆಯುತ್ತಾರೆ! ‘ಪಡುಗಡಲ ನಿರ್ಮಲ ಗಾಳಿ ಸೇವಿಸಿ, ಸ್ವಚ್ಛವಾಗಿ ಉಸಿರಾಡುತ್ತಿದ್ದೇನೆ’ ಎನ್ನುತ್ತಾರೆ. ದಕ್ಷಿಣ ಕನ್ನಡದಲ್ಲಿ ತೀವ್ರ ಸೆಖೆಯ ವಾತಾವರಣ­ವಿದ್ದರೂ, ಸಹೃದಯ ವಿದ್ವಜ್ಜನರು ತುಂಬಿರುವುದರಿಂದ ಅದು ಅವರಿಗೆ ಹವಾನಿಯಂತ್ರಿತ ಅನುಭವ ನೀಡಿತ್ತು!ಎಸ್.ವಿ.ಪಿ. ಕನ್ನಡ ಸಾಹಿತ್ಯದ ಮೇರು ಪರ್ವತವಾಗಿ ಗೋಚರಿಸಲು ಕಾರಣ ಅವರಿಗಿದ್ದ ಬಹು ಮುಖಿತ್ವ. ಅವರೊಬ್ಬ ಅನುವಾದಕ, ಸಂಶೋಧಕ, ಸೃಜನಶೀಲ ಕವಿ, ಜೊತೆಗೆ ಮುಕ್ತಕ, ವಚನ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯದಲ್ಲೂ ಅವರ ಅಪರೂಪದ ಕೊಡುಗೆಗಳಿವೆ. ‘ರಾಗಿಣಿ’, ‘ಸುರಗಿ ಸುರಹೊನ್ನೆ’, ‘ತುಂಬೆಹೂವು’ ಅವರ ಕವನ ಸಂಕಲನಗಳಾದರೆ, ‘ಕನ್ನಡ ಕಾಳಿದಾಸ ಮಹಾ ಸಂಪುಟ’, ‘ಕನ್ನಡ ಭಾಸ ಮಹಾ ಸಂಪುಟ’, ‘ಕನ್ನಡ ಹರ್ಷಮಹಾ ಸಂಪುಟ’, ‘ಭತೃಹರಿಯ ಶತಕತ್ರಯ’, ‘ಕನ್ನಡ ಬುದ್ಧ ಚರಿತೆ’, ‘ಕನ್ನಡ ಗಾಥಾಸಪ್ತಶತಿ’, ‘ಕನ್ನಡ ಗೀತಗೋವಿಂದ’, ‘ಕನ್ನಡ ಕವಿಕೌಮುದಿ’, ‘ಕನ್ನಡ ಅಮರುಶತಕ’– ಅವರ ಪ್ರಮುಖ ಅನುವಾದಿತ ಗ್ರಂಥಗಳು. ಮುದ್ದಣ ಕವಿಯ ‘ಶ್ರೀರಾಮ ಪಟ್ಟಾಭಿಷೇಕ’, ‘ಅದ್ಭುತ ರಾಮಾಯಣ’ ಹಾಗೂ ‘ಮಂಗಳಾವಲೋಕನ’ ಸಂಪಾದಿತ ಕೃತಿಗಳು. ‘ರಸಋಷಿ ಕುವೆಂಪು’ ಎಸ್.ವಿ.ಪಿ ಯವರ ಕುವೆಂಪು ಸಾಹಿತ್ಯವಲೋಕನ ಗ್ರಂಥ. ‘ಇಂದ್ರಚಾಪ’, ‘ಚಂದ್ರವೀಥಿ’ ಪ್ರಮುಖ ಮುಕ್ತಕಗಳು. ‘ಉಪ್ಪುಕಡಲು’, ‘ಉಂಬರ’, ಪ್ರಮುಖ ವಚನ ಸಂಕಲನಗಳು. ‘ಕಣ್ಣು ಮುಚ್ಚಾಲೆ’, ‘ಭೂಮಿ ಮತ್ತು ಧೂಮಕೇತು’ ಮಕ್ಕಳ ಸಾಹಿತ್ಯ ರಚನೆಗಳು. ಹೀಗೆ ಮಕ್ಕಳಿಂದ ಹಿಡಿದು ಪ್ರೌಢ ವಿದ್ವಾಂಸರವರೆಗೆ ಎಲ್ಲಾ ಬಗೆಯ ಅಭಿರುಚಿಗಳಿಗೆ ಸ್ಪಂದಿಸಿದ ಅಪರೂಪ ಸಾಹಿತಿ ಎಸ್.ವಿ.ಪಿ.‘ಪ್ರೀತಿಯ ಕರೆ ಕೇಳಿ’ ಎಸ್.ವಿ.ಪಿ.ಯವರ ಜನಪ್ರಿಯ ಭಾವಗೀತೆ. ಎಲ್ಲರ ಮನೆ ಮನಗಳಲ್ಲಿ ಪ್ರೀತಿಯ ದೀಪ ಉರಿಯಲಿ ಎಂಬುದು ಕವಿಯ ಆಶಯ. ಇಲ್ಲಿ ಕವಿಗೆ ಜೀವನದ ಎರಡು ಮಗ್ಗಲುಗಳಾದ ನೋವು-–ನಲಿವುಗಳು, ಕತ್ತಲು–-ಬೆಳಕುಗಳಾಗಿ ಗೋಚರಿಸುತ್ತವೆ.  

ಕರಿಗೆಜ್ಜೆ ಕುಣಿಸುತ್ತಾ,

ಕಣ್ಣೀರ ಮಿಡಿಯುತ್ತಾ,

ಇರುಳಾಕೆ ಬಂದಳು

ದೀಪ ಹಚ್ಚ!!

ಕತ್ತಲಲ್ಲಿ ಕಣ್ಣೀರಿದೆ. ಆಕೆ ಕರಿಗೆಜ್ಜೆ ಕುಣಿಸುತ್ತಾ ಬರುತ್ತಿದ್ದಾಳೆ. ಅದನ್ನು ದೂರಾಗಿಸಲು, ಅರಿವಿನ ದೀಪ ಹಚ್ಚಬೇಕು ಎಂದು ಕವಿ ಬಯಸುತ್ತಾರೆ. ದೂರದ ತಾರಿಕೆಗಳ ಜ್ಞಾನದ ಹೊಳಪು ಮನದಂಗಳದಲ್ಲಿ ಮೂಡಿದ್ದೇ ಆದರೆ ಕತ್ತಲು ಖಂಡಿತಾ ದೂರಾಗುತ್ತದೆ ಎನ್ನುವ ಹಂಬಲದ ಈ ಪದ್ಯದಲ್ಲಿ ಕವಿಯ ನವೋದಯದ ಪರಿಕಲ್ಪನೆ, ಹಾಗೂ ಆಧ್ಯಾತ್ಮಿಕ ಜಾಗೃತಿ ಮುಂದಿನ ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ.

ಹಳೆಬಾಳು ಸತ್ತಿತ್ತು

ಕೊಳೆಬಾಳು ಸುಟ್ಟಿತ್ತು

ಹೊಸಬಾಳು ಹುಟ್ಟಿತ್ತು

ದೀಪ ಹಚ್ಚ!!

ನೀನೆಂಬ ಜ್ಯೋತಿಯಲಿ

ನಾನೆಂಬ ಪತಂಗ

ಸೋತ ಉಲಿ ಏಳಲಿ ದೀಪ ಹಚ್ಚ,

ನನ್ನಂತರಂಗದಲಿ ನಂದದೆ ನಿಂದಿಪ

ನಂದಾ ದೀಪವಾಗಿರಲಿ, ದೀಪ ಹಚ್ಚ!!ಹೊಸ ಬದುಕಿಗಾಗಿ, ಇಲ್ಲಿ ನವೋದಯದ ದೀಪ ಹಚ್ಚುವ ಕವಿ, ‘ನಾನು’ ಎಂಬ ಅಹಂಕಾರದ ಪತಂಗ, ‘ನೀನು’ ಎಂಬ ಜ್ಞಾನದ ಜ್ಯೋತಿಯಲ್ಲಿ ಸುಟ್ಟು ಹೋಗಲಿ, ‘ನಾನು’ ಎಂಬುದರ ಸೋಲಿನ ಸೊಲ್ಲು ಕೇಳಿ ಬರಲಿ, ಎಂಬ ಅತ್ಯದ್ಭುತ ಆಧ್ಯಾತ್ಮಿಕ ದೃಷ್ಟಿಕೋನವನ್ನು ಅಭಿವ್ಯಕ್ತಿಸುತ್ತಾರೆ. ಈ ಭಾವ ಉದಯಿಸಿದಾಗ, ನಮ್ಮಾಳದ ಅರಿವಿನ ನಂದಾದೀಪ ಎಂದಿಗೂ ಆರದೇ ಉರಿಯುತ್ತದೆ.ಎಸ್.ವಿ.ಪಿ. ಅವರ ಇನ್ನೊಂದು ಜನಪ್ರಿಯ ಗೀತೆ, ‘ತಿಳಿಮುಗಿಲ ತೊಟ್ಟಿಲಲಿ’ ರಚನೆಯಲ್ಲಿ ಪ್ರಕೃತಿಯ ನವಿರಾದ ವರ್ಣನೆಯ ಜೊತೆಗೆ, ನವೋದಯದ ಪರಿಕಲ್ಪನೆ ಇದೆ. ಪ್ರಕೃತಿಯ ಸುಂದರ ಆಡೊಂಬಲದ ರಮ್ಯಾತಿರಮ್ಯ ವರ್ಣನೆಯಿದೆ. ಕವಿಗೆ ನಿರ್ಮಲ ಆಕಾಶ ತೊಟ್ಟಿಲಾಗಿ ಕಾಣಿಸುತ್ತಿದೆ. ಅದರಲ್ಲಿ ಚಂದಿರ ಪುಟ್ಟ ಕಂದಮ್ಮನಾಗಿ ತೋರುತ್ತಿದ್ದಾನೆ. ಬೀಸುತ್ತಿರುವ ನವಿರಾದ ಗಾಳಿ ಜೋಗುಳದ ಹಾಡಾಗಿ ಕೇಳಿ ಬರುತ್ತಿದೆ. ಈ ಸಾಲುಗಳು ನಮ್ಮನ್ನು ಬೇರೊಂದು ಲೋಕಕ್ಕೇ ಒಯ್ಯುವಂತಿದೆ.ಆದರೆ ಇಲ್ಲಿ ಇರುಳು ಋಣಾತ್ಮಕವಾಗಿಯಷ್ಟೇ ಕವಿಗೆ ಕಾಣಿಸದೆ, ಬಾಳಿನ ಶುಭೋದಯ ಮುನ್ನುಡಿಯಾಗಿಯೂ ಕಾಣಿಸುತ್ತದೆ. ಕತ್ತಲಿನಾಚೆಗೆ ಬೆಳಕಿದೆ ಎಂಬ ಸಂದೇಶ ಸಾರುವ ಈ ಕವಿತೆ, ಕವಿಯ ಧನಾತ್ಮಕ ಚಿಂತನೆಗೆ, ಜೀವನ್ಮುಖಿ ವಿಚಾರ ಧಾರೆಗೆ ಸಾಕ್ಷಿಯಾಗುತ್ತದೆ.ಪರಮೇಶ್ವರಭಟ್ಟರ ‘ಇಂದ್ರಚಾಪ’ ಕನ್ನಡ ಸಾಹಿತ್ಯ ಲೋಕದಲ್ಲಿ ಮೂಡಿದ ಸಾಂಗತ್ಯದ ಸುಂದರ ಕಾಮನಬಿಲ್ಲು. ಸರಳ ಛಂದಸ್ಸಿನ ಚೌಪದಿಗಳಲ್ಲಿ ಮೂಡಿ ಬಂದಿರುವ ಇಂದ್ರಚಾಪದ ಮುಕ್ತಕಗಳು, ಕವಿಯ ಬದುಕಿನ ಏರಿಳಿತಗಳ ಏಳುರಂಗುಗಳನ್ನು ಓದುಗರ ಮನದಲ್ಲಿ ಅತ್ಯಂತ ಮನೋಹರವಾಗಿ ಮೂಡಿಸುತ್ತವೆ.ಮನವೆ ಬಾನಂಗಳ ದುಗುಡವೆ ಮಳೆ ಮೋಡ

ಕವಿಗಣ ಸೂಕ್ತಿಯೇ ದಿನಪ

ಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡ

ಕವಿತೆಯ ಈ ಇಂದ್ರಚಾಪ

ಎಂದು ಇಂದ್ರಚಾಪ ಜನ್ಮ ತಾಳಿದ ಬಗೆಯನ್ನು ಕವಿ ವಿವರಿಸುತ್ತಾರೆ.ಎಲ್ಲ ಹಿರಿಯ ಚೇತನಗಳ ಸೂಕ್ತಿಯ ಸೂರ್ಯಕಿರಣಗಳು ಎಸ್.ವಿ.ಪಿ.ಯವರ ಮನದಂಗಣದಲ್ಲಿ ಮೇಳೈಸಿ, ಸುಂದರ ಇಂದ್ರಚಾಪ ಮೂಡಿದ್ದು ಕನ್ನಡಿಗರ ಸೌಭಾಗ್ಯವೆಂದೇ ಹೇಳಬೇಕು. ಇಂದ್ರಚಾಪದ ಮೊದಲ ಮುನ್ನೂರು ಮುಕ್ತಕಗಳಲ್ಲಿ ತಮ್ಮ ಬಂಧು-ಬಳಗದ ಗುರುವೃಂದದ ವಿವರ ನೀಡುವ ಕವಿ ನಂತರ ಮುಕ್ತಕಗಳಲ್ಲಿ ಬದುಕಿನ ಹತ್ತು ಹಲವು ಮುಖಗಳತ್ತ ಬೆಳಕು ಚೆಲ್ಲುತ್ತಾರೆ. ಅವರೇ ಹೇಳುವಂತೆ ಇಂದ್ರಚಾಪವೆಂದರೆ– ‘ ಬೆಳ್ಳಿಯ ದೇಗುಲ ಚಿನ್ನದಬಾಗಿಲು / ಒಳಗಡೆ ಬಹುಮುತ್ತುರತ್ನ /  ಬೀಗದ ಕೈ ತಂದು ಬಾಗಿಲು ತೆರೆಯಲು / ನೀನೊಮ್ಮೆ ಮಾಡು ಪ್ರಯತ್ನ’.ಎಸ್.ವಿ.ಪಿ. ಅವರು ರಚಿಸಿರುವ ಮುಕ್ತಕಗಳು, ವಚನಗಳು ಹಳತು–ಹೊಸತರ ಸಮಪಾಕದಲ್ಲಿ ಮೂಡಿಬಂದು ಚಿಂತನ ಯೋಗ್ಯವೆನಿಸುತ್ತವೆ. ‘ಉಪ್ಪು ಕಡಲು’, ‘ಉಂಬರ’ ಅವರ ಪ್ರಮುಖ ವಚನ ಸಂಕಲನಗಳು, ಈ ವಚನಗಳಲ್ಲಿ ಸಾಮಾಜಿಕ ಸ್ಥಿತಿಗತಿಗಳ ವಸ್ತು ನಿಷ್ಟ ವಿಡಂಬನೆ ಆಧುನಿಕ ಉದಾರಣೆಗಳ ಮೂಲಕ ಆಧ್ಯಾತ್ಮಿಕ ಚಿಂತನೆಗಳು ಅದ್ಭುತವಾಗಿ ಮೂಡಿಬಂದಿವೆ. ‘ಸದಾಶಿವಗುರು’ ಎಂಬ ಅಂಕಿದೊಡನೆ ಈ ವಚನಗಳನ್ನು ರಚಿಸಿರುವ ಕವಿ, ತಮ್ಮ ಜೀವನದ ಆದರ್ಶವಾಗಿದ್ದ ತಂದೆ ಸದಾಶಿವರಾಯನ್ನು ಬಹಳ ಉಚಿತ ರೀತಿಯಲ್ಲಿ ನೆನೆದಿದ್ದಾರೆ.ಎಸ್.ವಿ.ಪಿ. ಕೇವಲ ಕವಿ ಹೃದಯದ ಭಾವಜೀವಿಯಲ್ಲ. ಸಂಶೋಧನಾ ಮನೋಭಾವದ, ಅಧ್ಯಯನಶೀಲ ಶಿಸ್ತುಳ್ಳ ದೊಡ್ಡ ವಿದ್ವಾಂಸರೂ ಹೌದು. ಅವರ ಕನ್ನಡ ಕಾಳಿದಾಸ ಮಹಾ ಸಂಪುಟ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಗ್ರಂಥ. ಸಂಸ್ಕೃತ ಮಹಾಕಾವ್ಯಗಳಾದ, ‘ಋತು ಸಂಹಾರ’, ‘ಮೇಘದೂತ’, ‘ಕುಮಾರ ಸಂಭವ’, ‘ರಘುವಂಶ’ ಹಾಗೂ ನಾಟಕಗಳಾದ ‘ವಿಕ್ರಮೋರ್ವಶೀಯ’, ‘ಮಾಲವಿಕಾಗ್ನಿ ಮಿತ್ರ’, ‘ಅಭಿಜ್ಞಾನ ಶಾಕುಂತಳ’ಗಳನ್ನು ಈ ಮಹಾಸಂಪುಟದ ಮೂಲಕ, ಕನ್ನಡಕ್ಕೆ ತಂದ ಭಗೀರಥ ಎಸ್.ವಿ.ಪಿ. ಅವರು. ಹೀಗೆ ಕಾಳಿದಾಸನ ಸಂಪೂರ್ಣ ಕೃತಿ ಸಮುದಾಯವನ್ನು ಒಂದೇ ಸಂಪುಟದಲ್ಲಿ ಅನುವಾದಿಸಿದ ನಿದರ್ಶನ ಬೇರಾವ ಭಾರತೀಯ ಭಾಷೆಯಲ್ಲೂ ಇಲ್ಲ.ಸಂಸ್ಕೃತದ ಅತ್ಯಂತ ಪ್ರತಿಭಾವಂತ ನಾಟಕಕಾರ ಭಾಸನನ್ನು ಅತ್ಯುತ್ತಮವಾಗಿ ಕನ್ನಡಿಗರಿಗೆ ತಮ್ಮ ‘ಭಾಸ ಮಹಾ ಸಂಪುಟ’ದ ಮೂಲಕ ಪರಮೇಶ್ವರಭಟ್ಟರು ಪರಿಚಯಿಸಿದ್ದಾರೆ. ಇಂದಿನ ಪ್ರಯೋಗಶೀಲ ರಂಗಭೂಮಿಗೂ ಪ್ರಸ್ತುತವಾಗುವ ಭಾಸನ ೧೪ ರೂಪಕಗಳ ಕನ್ನಡೀಕರಣವನ್ನು ‘ಭಾಸ ಮಹಾ ಸಂಪುಟ’ದಲ್ಲಿ ಕಾಣಬಹುದು.  ಭಾಸನ ‘ಪ್ರತಿಮಾ ನಾಟಕ’, ‘ಕರ್ಣಭಾರ’, ‘ಊರುಭಂಗ’, ‘ಮಧ್ಯಮ ವ್ಯಾಯೋಗ’, ‘ಸ್ವಪ್ನ ವಾಸವದತ್ತ’ ಮುಂತಾದ ರೂಪಕಗಳು ನಮ್ಮ ನಾಡಿನ ದನಿಯಲ್ಲಿ ಮೊಳಗುವಂತೆ ಮಾಡಿದ ಶ್ರೇಯಸ್ಸು ಎಸ್.ವಿ.ಪಿ.ಯವರಿಗೆ ಸಲ್ಲುತ್ತದೆ. ‘ಭಟ್ಟರ ಬಳಿ ಅಳುತ್ತಾ ಬಂದವರೂ ನಗುತ್ತಾ ಮರಳುತ್ತಾರೆ. ನಿರಾಶೆ ತುಂಬಿ ನಿಂತವರು ಭರವಸೆಯ ಬೆಳಕು ಪಡೆಯುತ್ತಾರೆ. ಅವರ ನಡೆ-ನುಡಿ, ಸಾನಿಧ್ಯ ಸದಾ ಸ್ಫೂರ್ತಿದಾಯಕ’ ಎಂದು ಹೆಚ್.ಜೆ. ಲಕ್ಕಪ್ಪಗೌಡರು, ಎಸ್.ವಿ.ಪಿ.ಯವರನ್ನು ಅವರ ಅಭಿನಂದನಾ ಗ್ರಂಥ ‘ಪೂರ್ಣಕುಂಭ’ದಲ್ಲಿ ಅಭಿನಂದಿಸುತ್ತಾರೆ. ಹೀಗೆ ನೋವುಂಡು ನಗೆ ಚೆಲ್ಲುವ ಅಜಾತಶತ್ರುವಾಗಿದ್ದರು ಅವರು.ಎಸ್.ವಿ.ಪಿ. ಅವರಿಗಿದ್ದ ಉತ್ಕಟ ಕನ್ನಡ ಪ್ರೇಮ ಹಾಗೂ ಕನ್ನಡಿಗರಿಗೆ ಅವರ ಮೇಲಿದ್ದ ಅಪಾರ ಅಭಿಮಾನ ಯಾವ ಮಟ್ಟದಾಗಿತ್ತು ಎಂಬುದನ್ನು ‘ಕನ್ನಡ ಕಾಳಿದಾಸ ಮಹಾಸಂಪುಟ’ದ ಪ್ರಕಟಣೆಯ ಸಂದರ್ಭದಲ್ಲಿ ನೋಡಬಹುದು. ಈ ಬೃಹತ್ ಕೃತಿಯ ಪ್ರಕಟಣೆಗೆ ಸುಮಾರು ನಲವತ್ತು ಸಾವಿರ ರೂಪಾಯಿಗಳ ಅಗತ್ಯವಿತ್ತು. ಈ ಪ್ರಮಾಣದ ಹಣ ಭಟ್ಟರಲ್ಲಿರಲಿಲ್ಲ. ಇದಕ್ಕಾಗಿ ಹದಿನೈದು ಸಾವಿರ ರೂಪಾಯಿಗಳನ್ನು ಸಿಂಡಿಕೇಟ್ ಬ್ಯಾಂಕ್‌ನಿಂದ ಅವರು ಸಾಲ ಪಡೆಯುತ್ತಾರೆ.ಆಗಿನ ಕಾಲಕ್ಕೆ ಒಬ್ಬ ಕವಿ ಹದಿನೈದು ಸಾವಿರ ಸಾಲ ಮಾಡುವ ಧೈರ್ಯವನ್ನು ತಂದುಕೊಳ್ಳುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ, ಒಂದು ಬ್ಯಾಂಕಿಗೆ ಒಬ್ಬ ಕವಿಗೆ ಮಾರ್ಕೆಟ್‌ನಲ್ಲಿ ಬಿಸಿದೋಸೆಯಂತೆ ಮಾರಾಟವಾಗದ ಕೃತಿರತ್ನಕ್ಕೆ ಸಾಲ ಕೊಡುವುದು! ಆದರೆ ಭಟ್ಟರು ಕೃತಿಯ ಪ್ರಕಟಣ ಪೂರ್ವದಲ್ಲಿಯೇ ಋಣಮುಕ್ತರಾಗಿ ಬಿಡುತ್ತಾರೆ. ‘ಕೃತಿಯನ್ನು ಕೊಂಡುಕೊಳ್ಳಿ’ ಎಂದು ನಾಲ್ಕು ಸಾವಿರ ಕನ್ನಡಿಗರಿಗೆ ಮನವಿಯನ್ನು ಕಳಿಸಿ ಕೊಡುತ್ತಾರೆ.ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತದೆ. ‘ಪುಸ್ತಕ ನೋಡದೆ ನನ್ನನ್ನೂ ನೋಡದೆ ಒಮ್ಮೆಗೇ ನನಗೊಂದು ಪ್ರತಿ ಇರಲಿ ಎಂದು ಹಣ ಕೊಟ್ಟ ಗುಣವಂತರು ಈ ನಾಡಿನಲ್ಲಿ ಇರುವುದು ನನ್ನ ಪರಮ ಭಾಗ್ಯ’ ಎಂದವರು ಭಾವಪರವಶರಾಗಿ ನುಡಿದಿದ್ದಾರೆ. ಅವರು ಬ್ಯಾಂಕ್‌ ಸಾಲ ಮಾಡಿದ್ದು ಭವ್ಯವಾದ ಮನೆಕಟ್ಟಲಿಕ್ಕೆ ಅಲ್ಲ, ಜಮೀನು ಮಾಡಲು ಅಲ್ಲ, ಬದಲಿಗೆ ಕನ್ನಡಿಗರಿಗೆ ಕಾಳಿದಾಸನನ್ನು ಪರಿಚಯಿಸುವ ಸಲುವಾಗಿ. ಇದು ಎಂದಿಗೂ ಹಾಳಾಗದ ಕನ್ನಡಿಗರ ಹೃದಯಲ್ಲಿ ನಿರ್ಮಿಸಿದ ದಿವ್ಯ ಮಂದಿರವಲ್ಲವೆ? ಎಸ್.ವಿ.ಪಿ. ಅವರ ಸಾಹಿತ್ಯ ಹರಿವ ತುಂಗಾನದಿಯಂತೆ. ಅವರು ಮಲೆನಾಡ ತುಂಗೆಯಾಗಿ, ಮೈಸೂರ ಕಾವೇರಿಯಾಗಿ ಹರಿದು ಕರಾವಳಿಯ ಸಾಗರ ಸೇರಿ ಉಪ್ಪು ಕಡಲಾಗಿ ಬೆಳೆದವರು. 

ಕುವೆಂಪುಗೆ ರನ್ನಗನ್ನಡಿ

ಕುವೆಂಪುರವರ ಸಮಗ್ರ ಸಾಹಿತ್ಯಾವಲೋಕನ, ‘ರಸಋಷಿ ಕುವೆಂಪು’ ಎಸ್.ವಿ.ಪಿ.ಯವರ ಮತ್ತೊಂದು ಮೌಲ್ಯಯುತ ಗ್ರಂಥ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಇದನ್ನು ೫ ಸಂಪುಟಗಳಲ್ಲಿ ಪ್ರಕಟಿಸಿದೆ. ಇವುಗಳಲ್ಲಿ ಕುವೆಂಪುರವರ, ಕವಿತೆಗಳು, ಕಥನ ಕವನ, ಖಂಡಕಾವ್ಯ, ಮಹಾಕಾವ್ಯ, ನಾಟಕ, ಜೀವನಚರಿತ್ರೆ, ಆತ್ಮಕಥೆ, ವಿಚಾರ ವಿಮರ್ಶಾ ಸಾಹಿತ್ಯಗಳಲ್ಲಿ ಕಂಡು ಬರುವ ಅವರ ಬಹುಮುಖ ಶ್ರೀಮತ್ ಪ್ರತಿಭೆಯನ್ನು ಎಸ್.ವಿ.ಪಿ. ಎಳೆಎಳೆಯಾಗಿ ತೆರೆದಿಡುತ್ತಾರೆ.‘ಅಚಲ ವಿಶ್ವಾಸ, ಆತ್ಮಸಾಕ್ಷಾತ್ಕಾರಕ್ಕೆ ಬೇಕಾದ ಅಂತರ್ಮುಖತೆಗೆ ಪ್ರಕೃತಿ ಸಮೀಕ್ಷೆಯೇ ಏಕೈಕ ಮಾರ್ಗ ಎಂದು ಸಾರುತ್ತಿರುವ ಮಹಾ ಪ್ರವಾದಿ ಕುವೆಂಪು. ಪ್ರಕೃತಿಯ ಜೊತೆಗಿನ ಭಾವನಾತ್ಮಕ ಒಡನಾಟವೇ ಕುವೆಂಪುರವರ ಮನೋವಿಕಾಸದ ಮಾರ್ಗವಾಗಿತ್ತು’ ಎಂಬುವುದನ್ನು ಎಸ್.ವಿ.ಪಿ. ಸ್ಪಷ್ಟಪಡಿಸುತ್ತಾರೆ. ಪರಮೇಶ್ವರಭಟ್ಟರ ಈ ಗ್ರಂಥವನ್ನು ಕುವೆಂಪು ಅವರು ವಿಶಿಷ್ಟ ರೀತಿಯಲ್ಲಿ ಪತ್ರ ಬರೆದು ಶ್ಲಾಘಿಸುತ್ತಾರೆ.‘ನನ್ನ ಸಾಹಿತ್ಯದ ಕುರಿತು ಬರೆಯಲು, ನಿಮಗಿಂತ ಉತ್ತಮತರ ಅಧಿಕಾರಿ ದೊರೆಯುವುದು ಕಷ್ಟ!  ನನ್ನಂತೆಯೇ ನೀವೂ ಹುಟ್ಟಿ, ಬೆಳೆದು ಮಲೆಕಾಡುಗಳ ಸಾನಿಧ್ಯದ ದಿವ್ಯ ಸೌಂದರ್ಯದ ಪೀಯೂಷವನ್ನು  ಆಸ್ವಾದಿಸಿದ್ದೀರಿ. ಭಾಷಾ ಪಾಂಡಿತ್ಯದಲ್ಲಿ, ನನ್ನೆಲ್ಲಾ ವಾಚ್ಯ, ಲಕ್ಷ್ಯ, ವ್ಯಂಗ್ಯಗಳನ್ನು ತಲಸ್ಪರ್ಶಿಯಾಗಿ ಅರಿಯುವ ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೆ ಒಂದು ಹೆದರಿಕೆ! ಜನರು ನಿಮ್ಮ ಗ್ರಂಥವನ್ನೇ ಓದಿ ತೃಪ್ತರಾಗಿ, ನನ್ನ ಕೃತಿಗಳನ್ನು ಎಲ್ಲಿ ಓದದೇ ಹೋಗುತ್ತಾರೊ ಎಂದು! ಹಾಗಾದರೂ ಆಗಿ ಹೋಗಲಿ! ನಷ್ಟವೇನಿಲ್ಲ! ಭಟ್ಟ ಪರಮೇಶ್ವರನಿಗೆ ಜಯವಾಗಲಿ!’.

ತೀರ್ಥಹಳ್ಳಿಯ ಸಮೀಪದ ತುಂಗಾತೀರದ ಮೋಹಕ ತಾಣ ಸಿಬ್ಬಲು ಗುಡ್ಡೆಯಲ್ಲಿ ಕುವೆಂಪುರವರಿಗೆ ಹಾರುವ ಬೆಳ್ಳಕ್ಕಿಯ ಸಾಲು ‘ದೇವರು ರುಜು ಮಾಡಿದಂತೆ’ ಕಾಣಿಸಿ, ದಿವ್ಯ ಜೀವನ ದರ್ಶನವಾಗುತ್ತದೆ. ಆ ಸ್ಥಳವನ್ನು ಎಸ್.ವಿ.ಪಿ.ಯವರು ಕವಿಯ ಕಮಲಯಾನದ ಕಲಾವಿಮಾನ ಬಂದಿಳಿವ ವಿಮಾನ ನಿಲ್ದಾಣ ಎಂದೆನ್ನುತ್ತಾರೆ. ಹಾಗೆಯೇ ದೇವರು ರುಜು ಮಾಡಿಹನು ರೀತಿಯ ಕವನಗಳಲ್ಲಿ ನಾವು ಪದಗಳನ್ನು ಕಾಣುವುದಿಲ್ಲ, ‘ಸರಸ್ವತಿಯ ಚರಣ ಚಿಹ್ನೆ’ಗಳನ್ನೇ ಕಾಣುತ್ತೇವೆ’ ಎಂದು ಉದ್ಗರಿಸುತ್ತಾರೆ. ಕುವೆಂಪುರವರಂತಹ ಮಹಾನ್ ರಸಋಷಿಯ ದಿವ್ಯಾನುಭೂತಿಯನ್ನು ಎಸ್.ವಿ.ಪಿ. ಅವರಂತಹ ಪ್ರಾಜ್ಞರೇ ಸರಿಯಾಗಿ ಹಿಡಿದಿಡಲು ಸಾಧ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.