ಸೋಮವಾರ, ಜನವರಿ 20, 2020
21 °C

ಪ್ರೇರಣಾ ಉತ್ಸವಕ್ಕೆ ವಿಧ್ಯುಕ್ತ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಮಂಗಳವಾದ್ಯಗಳ ಮಾರ್ದನಿ, ಜನಪದ ಕಲಾವಿದರ ಕಲರವ, ರಸ್ತೆಯ ಇಕ್ಕೆಲ್ಲಗಳಲ್ಲಿ ಹರಡಿ­ಕೊಂಡಿದ್ದ ರಂಗೋಲಿಯ ಚಿತ್ತಾರ, ಗುಲಾಲಿನಲ್ಲಿ ಮಿಂದೆದ್ದ ಭಕ್ತಾದಿಗಳ ಉದ್ಘೋಷಗಳ ಮಧ್ಯೆ ನಂದಿಕೋಲುಗಳ ಮುಂಚೂಣಿಯಲ್ಲಿ ಸಾಗಿದ ಜ್ಯೋತಿಬಾ ಪಲ್ಲಕ್ಕಿ ಮೆರವಣಿಗೆಗಳೊಂದಿಗೆ ತಾಲ್ಲೂ­ಕಿನ ಯಕ್ಸಂಬಿಯಲ್ಲಿ  ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಪ್ರೇರಣಾ ಉತ್ಸವಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ದೊರಕಿತು.ಜೊಲ್ಲೆ ಉದ್ಯೋಗ ಸಮೂಹದ ಪ್ರೇರಣಾಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಅವರ ಜನ್ಮದಿನ ನಿಮಿತ್ತ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಪ್ರೇರಣಾ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆ­ಯರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳು, ತಿಂಡಿ ತಿನಸುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗ­ಳನ್ನು ಅಂಗವಿಕಲರ ಅಧಿನಿಯಮದ ಆಯುಕ್ತ ಕೆ.ಎಸ್‌. ರಾಜಣ್ಣ ಉದ್ಘಾಟಿಸಿದರು.‘ಅಂಗವಿಕಲರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆ ಪ್ರದರ್ಶನ ಮಾಡಲು ಪ್ರೇರಣಾ ಉತ್ಸವ ವೇದಿಕೆ­ಯಾಗಿದೆ. ಅಂಗವಿಕಲರ ಶ್ರೇಯೋಭಿ­ವೃದ್ಧಿ­ಗಾಗಿ ಜೊಲ್ಲೆ ಉದ್ಯೋಗ ಸಮೂಹ ಹೊಂದಿರುವ ಕಳಕಳಿ ಪ್ರಶಂಸ­ನಾರ್ಹ­ವಾಗಿದೆ.’ ಎಂದು ಕೆ.ಎಸ್‌. ರಾಜಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಇಚಲಕರಂಜಿಯ ಭಕ್ತಿಯೋಗಾ­ಶ್ರಮದ ಮಹೇಶಾನಂದ ಸ್ವಾಮೀಜಿ, ಸೌಂದತ್ತಿಯ  ಓಂಕಾರಾಶ್ರಮದ ಶಿವಶಂ­ಕರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೊಲ್ಲೆ ಉದ್ಯೋಗ ಸಮೂಹದ ಸಂಸ್ಥಾ­ಪಕ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಶಿವಶಂಕರ ಜೊಲ್ಲೆ ಪಬ್ಲಿಕ್‌ ಶಾಲೆ ಆವರಣದಲ್ಲಿ ವಿವಿಧ ಕಲಾತಂಡಗಳು ತಮ್ಮ ಕೌಶಲ ಪ್ರದರ್ಶಿ­ಸಿದರು. ಹುಬ್ಬಳ್ಳಿಯ ಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘದ ಸದಸ್ಯರು ಪ್ರದರ್ಶಿಸಿ ಸಮರ­ಕಲೆಗಳು ಮೈಮನ ರೋಮಾಂಚನ­ಗೊಳಿಸಿದವು.ಚಿಕ್ಕಮಗಳೂರು ಜಿಲ್ಲೆ ಲಿಂಗದಳ್ಳಿಯ ಸಹ್ಯಾದ್ರಿ ಮಹಿಳಾ ವೀರಗಾಸೆ ನೃತ್ಯ ತಂಡ, ಶಿವಮೊಗ್ಗದ ಫಣಿಯಮ್ ಮಹಿಳಾ ಡೊಳ್ಳು ಕುಣಿತ ಸಂಘ, ಗೋಕಾಕದ ಕನ್ನಡ ಜಾನಪದ ಸಂಸ್ಥೆಯ ದಟ್ಟಿ ಕುಣಿತ, ಧುಳಗನವಾ­ಡಿಯ ಝಾಂಜ್‌ ಪಥಕ್‌, ಚಿಕ್ಕೋಡಿಯ ಮುರಸಿದ್ಧೇಶ್ವರ ಡೊಳ್ಳು ಕುಣಿತ ಹಾಗೂ ಗಾಯನ ಸಂಘದ ಡೊಳ್ಳಿನ ವಾದನ ಕಲೆಗಳನ್ನು ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)