ಶುಕ್ರವಾರ, ಮೇ 7, 2021
20 °C

ಪ್ರೊ.ಸೈಯದ್ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲೂರು: ರಾಯರಕೊಪ್ಪಲಿನಲ್ಲಿ ಸೆ.12ರಂದು ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಆಲೂರಿನ ಸಾಹಿತಿ ಪ್ರೊ.ಸೈಯದ್ ಸಹಾಬುದ್ದೀನ್ ರೋಷನ್ ಆಯ್ಕೆಯಾಗಿದ್ದಾರೆ.ಸೈಯದ್ ಮಹಮದ್ ಮತ್ತು ಸೈದಾನೀಬೀ ದಂಪತಿ ದ್ವಿತೀಯ ಪುತ್ರರಾದ ಇವರು 1951 ಏ.16ರಂದು ಆಲೂರಿನಲ್ಲಿ ಜನಿಸಿದರು. ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಆಲೂರಿನಲ್ಲಿ ಮುಗಿಸಿದ ಇವರು ಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ(ಉರ್ದು) ಪದವಿ ಪಡೆದು, ಶಿವಮೊಗ್ಗದ ಡಿ.ವಿ.ಎಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದರು.ಡಾ.ಎಸ್.ಎಲ್.ಬೈರಪ್ಪನವರ `ವಂಶವೃಕ್ಷ~ ಕಾದಂಬರಿ, ಕುವೆಂಪು ಅವರ `ನನ್ನ ದೇವರು ಮತ್ತು ಇತರ ಕಥೆಗಳು~ ಕೃತಿ  ಶ್ರೀ ಚರಣ ಸುವಾಸಿನಿ ಬಳಗ, ಹೊಸಪೇಟೆಯವರ ವಿನಂತಿಯ ಮೇರೆ ಇಸ್ಲಾಂ ಅಂಡ್ ಸೊಸೈಟಿ ಎಂಬ ಆಂಗ್ಲ ಕೃತಿಗಳನ್ನು ಉರ್ದುಗೆ ಅನುವಾದಿಸಿದ್ದಾರೆ. ಬಿ.ಟಿ.ಲಲಿತಾ ನಾಯಕ್, ಅಬ್ದುಲ್ ಮಜೀದ್ ಖಾನ್, ಪೂರ್ಣ ಚಂದ್ರ ತೇಜಸ್ವಿ ಮತ್ತು ಬಾನುಮುಷ್ತಾಕ್ ಅವರ ಕೆಲವು ಸಣ್ಣ ಕಥೆ, ಲೇಖಕ ಅಪ್ಪಾಸ್ವಾಮಿಯವರ `ಅಟಲ್ ಬಿಹಾರಿ ವಾಜಪೇಯಿ~ ಜೀವನ ಚರಿತ್ರೆ ಅನುವಾದಿಸಿ ಪ್ರಕಟಿಸಿದ್ದಾರೆ. ಗೊರುರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಡಾ.ರಾಜೇಗೌಡ ಹೊಸಳ್ಳಿಯವರ `ಮಹಾರಾಯನ ದುರ್ಗ~ಕಥೆ ಆಧರಿಸಿ ನಾಟಕ ರಚಿಸಿದ್ದಾರೆ. ಇನ್ನೂರು ವರ್ಷಗಳ ಉರ್ದು ಸಾಹಿತ್ಯದ ಬೆಳವಣಿಗೆಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಇವರ `ಗೌಡರ ಔದಾರ್ಯ~ ಕಥೆಗೆ ಶಿವಮೊಗ್ಗ ವಾಸವಿ ಯುವಜನ ಸಂಘ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಸಮಾನಾರ್ಥ ನೀಡುವ ಒಂದು ಸಾವಿರ ಉರ್ದು ಕನ್ನಡ ಗಾದೆ ಮತ್ತು ನುಡಿಗಟ್ಟುಗಳನ್ನು ಸಂಗ್ರಹಿಸಿದ್ದಾರೆ. `ಅನುವಾದ ನನ್ನ ಅನುಭವ~ ಮತ್ತು `ಉರ್ದುವಿನಲ್ಲಿ ಕನ್ನಡ ಸಾಹಿತ್ಯ~ ಎಂಬ ಎರಡು ಲೇಖನಗಳು ಹಂಪಿ ವಿಶ್ವವಿದ್ಯಾಲಯದ ಅಧ್ಯಯನ ಸಂಚಿಕೆಯಲ್ಲಿ ಪ್ರಕಟಗೊಂಡಿವೆ.

ಪ್ರೋ.ಆರ್.ಸಿ.ಹಿರೇಮಠರವರು ಪ್ರಕಟಿಸಿದ ಸರ್ವ ಧರ್ಮ ಸಂದರ್ಶನ ಕೃತಿಯಲ್ಲಿ ಇವರ ಲೇಖನ ಇಸ್ಲಾಂ ಪರಿಪೂರ್ಣ ಜೀವನ ವ್ಯವಸ್ಥೆ ಪ್ರಕಟವಾಗಿದೆ.ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಎನ್.ಸಿ.ಪಿ.ಯು.ಎಲ್. ಸಂಸ್ಥೆಯು ಪ್ರಕಟಿಸಿದ ಉರ್ದು-ಕನ್ನಡ-ಆಂಗ್ಲ ನಿಘಂಟಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತಿ ಜ.ಹೋ.ನಾರಾಯಣ ಸ್ವಾಮಿಯವರ `ಆದಮ್ಯ~ ನಾಟಕವನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.