ಸೋಮವಾರ, ಏಪ್ರಿಲ್ 19, 2021
23 °C

ಪ್ಲಾಸ್ಟಿಕ್ ಮುಕ್ತ ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮ. 40 ಮೈಕ್ರಾನ್‌ಗಿಂತ ತೆಳು ಪ್ಲಾಸ್ಟಿಕ್ ಬಳಕೆಗೆ ನಿಷೇಧವನ್ನು ಮಾರ್ಚ್ 15ರಿಂದ ಜಾರಿ ಮಾಡಲಾಗಿದೆ. ಆದರೆ  ಈ  ನಿಷೇಧದ ನಿರ್ದೇಶನವನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪಾಲಿಸಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಅನೇಕ ಅಂಗಡಿಗಳವರಿಗೆ ಈಗಲೂ ಈ ನಿರ್ದೇಶನ ಜಾರಿಯಾಗಿರುವುದರ ಬಗ್ಗೆ ಅರಿವಿಲ್ಲ ಎಂಬಂತಹ ವರದಿಗಳು ಬರುತ್ತಿವೆ.ವಾಸ್ತವವಾಗಿ 40 ಮೈಕ್ರಾನ್‌ಗಿಂತ ತೆಳು ಪ್ಲಾಸ್ಟಿಕ್ ಉತ್ಪಾದನೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆಯೇ? ಜೊತೆಗೆ ಈಗಾಗಲೇ ಉತ್ಪಾದನೆ ಆಗಿರುವ ಈ ಬಗೆಯ ಪ್ಲಾಸ್ಟಿಕ್ ಅನ್ನು ಏನು ಮಾಡಲಾಗುತ್ತದೆ ಇತ್ಯಾದಿ ವಿವರಗಳ ಬಗ್ಗೆ ಸಮಗ್ರ ಮಾಹಿತಿಗಳು ಇಲ್ಲ. ಪ್ಲಾಸ್ಟಿಕ್ ನಿಷೇಧ ಎಂಬುದು ಜನಸಾಮಾನ್ಯರು ಒಳಗೊಂಡಂತೆ, ತಯಾರಕರು, ಮಾರಾಟಗಾರರನ್ನೆಲ್ಲಾ ಒಳಗೊಳ್ಳುವ ಪ್ರಕ್ರಿಯೆ. ಈ ನಿಟ್ಟಿನಲ್ಲಿ  ಜನ ಬೆಂಬಕ್ಕಾಗಿ ಪ್ಲಾಸ್ಟಿಕ್ ವಿರೋಧಿ ಪ್ರಚಾರ ಆಂದೋಲನದ ರೂಪ ತಾಳಬೇಕಾದುದು ಅವಶ್ಯ.  ಆಧುನೀಕತೆ ಬೆಳೆದಂತೆಲ್ಲಾ, ಪ್ಲಾಸ್ಟಿಕ್ ಚೀಲ ಎಂಬುದು ವಸ್ತುಗಳನ್ನು ಒಯ್ಯಲು ಅಗ್ಗವಾದ, ಅನುಕೂಲವಾದ ಸಾಧನವಾಗಿಬಿಟ್ಟಿದೆ. ಹಾಗೆಯೇ, ಪ್ಲಾಸ್ಟಿಕ್ ತ್ಯಾಜ್ಯ ಎಂಬುದು ನಿರ್ವಹಿಸಲು ಅಸಾಧ್ಯವಾದಂತಹ ದೊಡ್ಡ ತಲೆ ನೋವಾಗಿರುವುದೂ ಕಹಿ ಸತ್ಯ. ಹೀಗಾಗಿ ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್ ಚೀಲಗಳು ಪರಿಸರವನ್ನು ನಾಶ ಮಾಡುತ್ತಿವೆ.ಏಕೆಂದರೆ ಭೂಮಿಯಲ್ಲಿ ಪ್ಲಾಸ್ಟಿಕ್ ಕರಗುವುದಿಲ್ಲ. ಕ್ರಮೇಣ ಇದು ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವಂತಹದ್ದು. ಜೊತೆಗೆ ಕರಗದ ಪ್ಲಾಸ್ಟಿಕ್ ತ್ಯಾಜ್ಯ, ಜಾನುವಾರಗಳ ಹೊಟ್ಟೆ ಸೇರಿ ಅವುಗಳಿಗೂ ಕಂಟಕವಾಗುತ್ತಿದೆ. ಹೀಗಾಗಿಯೇ ದಿನ ನಿತ್ಯದ ಬದುಕಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು, ಒಮ್ಮೆ ಬಳಸಿದ ಪ್ಲಾಸ್ಟಿಕ್ ಚೀಲವನ್ನು ಮತ್ತೆ ಮತ್ತೆ ಬಳಸುವುದು ಹಾಗೂ ಅದನ್ನು ಪುನರ್ ಬಳಕೆಗೆ ಪರಿವರ್ತಿಸುವಂತಹ (ರೀಸೈಕಲ್) ಮೂರು ತತ್ವಗಳು ನಮ್ಮದಾಗಬೇಕು.ಪುನರ್ ಬಳಕೆಗೆ ಪರಿವರ್ತಿಸುವ ಅವಕಾಶವನ್ನು ಪರಿಗಣಿಸಿಯೇ, 40 ಮೈಕ್ರಾನ್‌ಗಿಂತ ದಪ್ಪ ಪ್ಲಾಸ್ಟಿಕ್ ಬಳಕೆಗೆ ಅವಕಾಶ ನೀಡಲಾಗಿದೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ಉಚಿತವಾಗಿಯೂ ನೀಡುವಂತಿಲ್ಲ.ಮನೆಯಿಂದ ತಮ್ಮದೇ ಷಾಪಿಂಗ್ ಚೀಲ ತರಲು ಗ್ರಾಹಕರಿಗೆ ಇದು ಪ್ರೇರಕವಾಗಬೇಕಿದೆ. ಪ್ಲಾಸ್ಟಿಕ್ ನಿಷೇಧದ ಅನುಷ್ಠಾನ ಯಶಸ್ವಿಯಾಗಲು ಜನ ಜಾಗೃತಿಯೇ ಮದ್ದು. ಇದು ಎಲ್ಲರ ವೈಯಕ್ತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಆಗಬೇಕು. ಜೊತೆಗೆ ಪ್ಲಾಸ್ಟಿಕ್ ನಿಷೇಧದ ನಿಯಮ ಸಮರ್ಪಕವಾಗಿ ಅನುಷ್ಠಾನಗೊಳ್ಳಲು, ಸಂಬಂಧಿಸಿದ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುವುದು ಅತ್ಯಗತ್ಯ. ನಿಯಮ ಜಾರಿಗೊಳಿಸುವ ಹೊಣೆ ಹೊತ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಲಗೊಳ್ಳಬೇಕು. ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆಗಳೂ ಆಗಬೇಕು. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಜನರ ಆಂದೋಲನವಾಗಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.