ಮಂಗಳವಾರ, ಜನವರಿ 28, 2020
19 °C

ಫುಟ್‌ಬಾಲ್: ಸಿಗುವುದೇ ಜಯದ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹದಿನಾರು ವರ್ಷಗಳ ಕಾಲ ಭಾರತ ಫುಟ್‌ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ನಾಯಕ ಭೈಚುಂಗ್ ಭುಟಿಯಾಗೆ ಲಭಿಸುವುದೇ ಗೆಲುವಿನ ಉಡುಗೊರೆ?ಇದು ಕೋಟಿ ಕೋಟಿ ಕ್ರೀಡಾ ಪ್ರೇಮಿಗಳ ಪ್ರಶ್ನೆ. ಏಕೆಂದರೆ, ಮಂಗಳವಾರ ಜರ್ಮನಿಯ    ಬೇಯರ್ನ್ ಮ್ಯೂನಿಕ್ ವಿರುದ್ಧ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವು ಭುಟಿಯಾಗೆ ವಿದಾಯದ ಪಂದ್ಯ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.ಆದ್ದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ. ಭುಟಿಯಾ ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದರು.ಇಂದಿನ ಪಂದ್ಯದಲ್ಲಿ ಮಾಜಿ ನಾಯಕನ ಜೊತೆಗೆ ಆಡಲು ಸ್ಟಾರ್ ಆಟಗಾರರಲ್ಲಿ ಒಬ್ಬರಾದ ಸುನಿಲ್ ಚೆಟ್ರಿ ಅಲಭ್ಯರಾಗಿದ್ದಾರೆ. ಕಳೆದ ತಿಂಗಳು ನಡೆದ ಎಸ್‌ಎಎಫ್‌ಎಫ್ (ಸ್ಯಾಫ್) ಕಪ್ ಟೂರ್ನಿಯ ವೇಳೆ ಅವರು ಗಾಯಗೊಂಡಿದ್ದಾರೆ.`ಭಾರತ  ತಂಡಕ್ಕೂ ಹಾಗೂ ಮ್ಯೂನಿಕ್‌ಗೂ ಹೋಲಿಕೆ ಮಾಡುವುದು ಬೇಡ. ಅಂತರರಾಷ್ಟ್ರೀಯ ಆಟಗಾರರೊಂದಿಗೆ ಆಡಲು ಅವರಿಗೊಂದು ಉತ್ತಮ ಅವಕಾಶವಷ್ಟೇ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ.ಸಂತೋಷದಿಂದ ಆಡಬೇಕು. ಸಂಭ್ರಮಿಸಬೇಕು. ಈ ತಂಡದ ಎದುರು ಆಡುವುದು ನನಗೆ ಹೆಚ್ಚಿನ ಗೌರವ ತಂದುಕೊಟ್ಟಿದೆ~ ಎಂದು ಭುಟಿಯಾ ಹೇಳಿದ್ದಾರೆ.`ಭಾರತಕ್ಕೆ ನಾನು ಬರುತ್ತಿರುವುದು ಇದು ಎರಡನೇ ಸಲ. 2009ರಲ್ಲಿ ಈ ಮೊದಲು ಬಂದಿದ್ದೆ. ಇಲ್ಲಿನ ಕ್ರೀಡಾ ಪ್ರೇಮಿಗಳ ಪ್ರೀತಿಗೆ ಮನಸೋತಿದ್ದೆ~ ಎಂದು ಮ್ಯೂನಿಕ್ ತಂಡದ ಸ್ಟ್ರೈಕರ್ ಥಾಮಸ್ ಮುಲ್ಲರ್ ಸಂತಸ ವ್ಯಕ್ತಪಡಿಸಿದ್ದಾರೆ.ಭುಟಿಯಾ ಕಳೆದ ವರ್ಷದ ಜನವರಿಯಲ್ಲಿ ನಡೆದ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. ಕತಾರ್ ವಿರುದ್ಧದ ಪಂದ್ಯದಲ್ಲಿ 15 ನಿಮಿಷ ಆಡಲು ಸಹ ಅವರಿಗೆ ಸಾಧ್ಯವಾಗಿರಲಿಲ್ಲ.`ಯುವಿ~ಗೆ ಧನ್ಯವಾದ: ಭೂಕಂಪ ಸಂಭವಿಸಿ ಸಿಕ್ಕಿಂ ಜನತೆ ಸಂಕಷ್ಟದ ದಿನಗಳಲ್ಲಿದ್ದಾಗ ನೆರವಿಗೆ ಬಂದ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಸಹಾಯವನ್ನು ಎಂದಿಗೂ ಮರೆಯ ಲಾರೆ. ಅವರಗೆ ಧನ್ಯವಾದಗಳು ಎಂದು ಭುಟಿಯಾ ಹೇಳಿದ್ದಾರೆ.`ಭಾರತದಲ್ಲಿ ಫುಟ್‌ಬಾಲ್ ಅಭಿವೃದ್ಧಿಗೆ ನಾನು ಸಾಧ್ಯವಾದಷ್ಟು ಸೇವೆ ಸಲ್ಲಿಸಿದ್ದೇನೆ. ಭಾರತ ತಂಡಕ್ಕೆ ನನ್ನ ಸೇವೆ ಅಗತ್ಯವಾದಾಗ ಬಳಸಿಕೊಳ್ಳಬಹುದು~ ಎಂದು ಭುಟಿಯಾ ಹೇಳಿದರು.

ಪಂದ್ಯ ಆರಂಭ: ಸಂಜೆ 6 ಗಂಟೆಗೆ

ಪ್ರತಿಕ್ರಿಯಿಸಿ (+)