ಮಂಗಳವಾರ, ಮೇ 18, 2021
31 °C

ಬಂಗಲೆ ಸ್ಮಾರಕವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್‌ಪ್ರಸಿದ್ಧ ಭಾರತೀಯ ಆಂಗ್ಲ ಬರಹಗಾರರಾದ ಆರ್.ಕೆ. ನಾರಾ ಯಣ್ ಅವರ ಹೆಸರು ರಾಜ್ಯದ ಪಾರಂಪರಿಕ ನಗರ ಮೈಸೂರಿನ ಪ್ರಸಿದ್ಧಿಯ ಜೊತೆಗೇ ಮಿಳಿತವಾಗಿದೆ. ಅವರು ಹುಟ್ಟಿದ್ದು, ಕೊನೆಯುಸಿರೆಳೆದದ್ದು ಚೆನ್ನೈ ಆದರೂ, ಅವರು ಶಿಕ್ಷಣ ಪಡೆದದ್ದು ಹಾಗೂ ಬರಹದ ಬದುಕನ್ನು ಕಳೆದದ್ದು ಮೈಸೂರಿನಲ್ಲೇ. ಮೈಸೂರಿನ ಯಾದವಗಿರಿಯಲ್ಲಿರುವ ತಮ್ಮ ಮನೆಯಲ್ಲಿ ಕುಳಿತು `ಮಾಲ್ಗುಡಿ~ ಎಂಬಂತಹ ಕಾಲ್ಪನಿಕ ಪಟ್ಟಣವನ್ನು ನಾರಾಯಣ್ ಸೃಷ್ಟಿಸಿದ್ದರು. ಈ `ಮಾಲ್ಗುಡಿ~, ನಾರಾಯಣ್ ಅವರ ಬಹುತೇಕ ಕಥಾನಕಗಳ ನೆಲೆ. ಈ ಪುಟ್ಟ ಊರಿನ ಸಾಧಾರಣ ಜನಜೀವನದ ಚೈತನ್ಯ, ತಿಳಿ ಹಾಸ್ಯದೊಂದಿಗೆ ನಿರೂಪಿತವಾಗುವ ರೀತಿಯೇ ಅನನ್ಯ. ಜಗತ್ತಿನ ಗಮನ ವನ್ನೇ ಸೆಳೆದಂತಹ ಇಂತಹದೊಂದು ಕಲಾತ್ಮಕ ಕಾಲ್ಪನಿಕ ಕಥಾಪ್ರಪಂಚ ಸೃಷ್ಟಿಯಾದದ್ದು ಮೈಸೂರಿನ ನಾರಾಯಣ್ ಅವರ ಮನೆಯಲ್ಲಿ ಎಂಬುದು ಮೈಸೂರಿನವರಿಗೆ ಹೆಮ್ಮೆ ತರುವ ವಿಚಾರ. ಆದರೆ ಇಂತಹ ಮನೆ, ಮುಂದೆ ಬರೀ ನೆನಪಾಗಷ್ಟೇ ಉಳಿಯುವುದೇ ಎಂಬಂತಹ ಆತಂಕ ಈಗ ಎದುರಾಗಿದೆ. ಅಮೆರಿಕ ಮತ್ತು ಚೆನ್ನೈನಲ್ಲಿರುವ ಆರ್.ಕೆ ನಾರಾಯಣ್ ಅವರ ಮೊಮ್ಮಕ್ಕಳು ಈ ಬಂಗಲೆಯನ್ನು ಬಿಲ್ಡರ್ ಒಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ಬಂಗಲೆಯನ್ನು ಖರೀದಿಸಿರುವ ಬಿಲ್ಡರ್ ಅದನ್ನು ನೆಲಸಮ ಮಾಡಿ ಅಲ್ಲಿ ಎಂಟು ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಲು ಯೋಜನೆ ರೂಪಿಸಿ, ಕಟ್ಟಡ ಕೆಡಹುವ ಕಾರ್ಯ ಆರಂಭಿಸಿದ್ದರು. ಆದರೆ ಎಚ್ಚೆತ್ತ ಮೈಸೂರಿನ ನಾಗರಿಕರಿಂದ ಸದ್ಯಕ್ಕೆ ಆ ಬಂಗಲೆ ಉಳಿದುಕೊಂಡಿದೆ. ನಾಗರಿಕರ ಒತ್ತಾ ಯದ ಮೇಲೆ ಮೈಸೂರಿನ ಮಹಾನಗರ ಪಾಲಿಕೆ ಮಧ್ಯೆಪ್ರವೇಶಿಸಿ ಕಟ್ಟಡ ಕೆಡಹುವ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಈ ವಿಚಾರವನ್ನು ಈಗ  ಸರ್ಕಾರ ಗಂಭೀರವಾಗಿ ಪರಿಶೀಲಿಸುವುದು ಅಗತ್ಯ.  1990ರ ದಶಕದಲ್ಲಿ ಆರೋಗ್ಯದ ಕಾರಣಗಳಿಗಾಗಿ ಚೆನ್ನೈಗೆ ಸ್ಥಳಾಂತರ ಗೊಳ್ಳುವವರೆಗೂ ನಾರಾಯಣ್ ಅವರು 1950ರ ದಶಕದಿಂದ ಮೈಸೂರಿನ ಈ ಮನೆಯಲ್ಲಿಯೇ ಬಾಳಿ ಬದುಕಿದ್ದರು. ಎರಡು ಅಂತಸ್ತುಗಳ ಈ  ಮನೆ ಯನ್ನು ನಾರಾಯಣ್ ಅವರ ನೆನಪಿನ ವಸ್ತು ಸಂಗ್ರಹಾಲಯವಾಗಿಸಬೇಕು ಎಂಬಂತಹ ಸಲಹೆಗಳು 2006ರ ಅಕ್ಟೋಬರ್‌ನಲ್ಲಿ ಆರ್.ಕೆ. ನಾರಾಯಣ್ ಅವರ ಜನ್ಮಶತಾಬ್ದಿ ಕಾರ್ಯಕ್ರಮಗಳು ನಡೆದ ಸಂದರ್ಭದಲ್ಲಿ  ಪ್ರಸ್ತಾಪ ವಾಗಿದ್ದವು. ಆದರೆ ಈ ಸಲಹೆಯನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನಗಳೇ ನಡೆಯಲಿಲ್ಲ. ಈ ಬಗ್ಗೆ ಹೆಚ್ಚು ಕಾಳಜಿ ತೋರಿಸದೆ ಇರುವುದು ನಮ್ಮ ಆಡಳಿತ ಗಾರರ ಬೌದ್ಧಿಕ ದಾರಿದ್ರ್ಯದ ದ್ಯೋತಕ. ಮೈಸೂರು ಹಾಗೂ ಬೆಂಗಳೂರು ಮಧ್ಯೆ ಸಂಚರಿಸುವ ರೈಲೊಂದಕ್ಕೆ `ಮಾಲ್ಗುಡಿ ಎಕ್ಸ್‌ಪ್ರೆಸ್~ ಎಂಬ ಹೆಸರಿಡ ಬೇಕೆಂದು ಇತ್ತೀಚೆಗಷ್ಟೇ ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಿರುವುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಮಹಾನ್ ಲೇಖಕರು ಬಾಳಿ ಬದುಕಿದ ಮನೆಗಳು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ವಿಲೇವಾರಿಯಾಗುವಂತಹ ನಿರ್ಜೀವ ಕಟ್ಟಡಗಳಲ್ಲ. ಬದಲಿಗೆ ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ಪಾರಂಪರಿಕ ತಾಣಗಳಾಗುವಂತೆ ಮಾಡುವುದು ಆಡಳಿತದ ಜವಾಬ್ದಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.