ಬಂಟಿಂಗ್ಸ್ ಹರಿದುಬಿದ್ದು ಅಪಘಾತ: ಸಾವು-ಬದುಕಿನ ಹೋರಾಟದಲ್ಲಿ ಆಫ್ರಿನ್
ಹುಬ್ಬಳ್ಳಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಗಮಿಸುತ್ತಿರುವ ಕಾಂಗ್ರೆಸ್ `ಯುವರಾಜ~ ರಾಹುಲ್ ಗಾಂಧಿ ಸ್ವಾಗತಕ್ಕೆ ಅವಳಿ ನಗರ ಸಂಭ್ರಮದಿಂದ ಸಜ್ಜಾಗಿದ್ದರೆ ಇಲ್ಲಿನ ಮೂರುಸಾವಿರ ಮಠದ ಹಿಂಭಾಗದ ಗುರುಸಿದ್ಧೇಶ್ವರ ನಗರದ ನಿವಾಸಿ ಅಮ್ಜದ್ ಅಹಮದ್ ಊಂಟವಾಲೆ ಅವರ ಮನೆಯಲ್ಲಿ ಮಾತ್ರ ದುಃಖದ ಛಾಯೆ ಮಡುಗಟ್ಟಿದೆ.
ರಾಹುಲ್ಗಾಂಧಿ ಸ್ವಾಗತಕ್ಕೆ ಹಾಕಲಾಗಿದ್ದ ಬಂಟಿಂಗ್ಸ್ನ ಸರಮಾಲೆ ಗುರುವಾರ ಹರಿದುಬಿದ್ದು, ಸ್ಕೂಟಿ ಮೇಲೆ ಹೊರಟಿದ್ದ ಅಮ್ಜದ್ ಅವರ ಮಗಳು ಆಫ್ರಿನ್ ಅಂಜುಮ್ (22) ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡ್ದ್ದಿದು, ಕುಟುಂಬದ ಸದಸ್ಯರ ಕಳವಳಕ್ಕೆ ಕಾರಣವಾಗಿದೆ.
ಭಾರತ್ ಬಂದ್ ದಿನದಂದು ಸಂಜೆ ಕಚೇರಿಯಿಂದ ಮನೆಗೆ ಹೊರಟಿದ್ದ ವೇಳೆ ಪಿ.ಬಿ.ರಸ್ತೆಯ ಜೆ.ಜಿ.ಕಾಲೇಜು ಮುಂಭಾಗದಲ್ಲಿ ರಸ್ತೆ ವಿಭಜಕದ ಕಂಬಕ್ಕೆ ಕಟ್ಟಲಾಗಿದ್ದ ಬಂಟಿಂಗ್ಸ್ ಕಿತ್ತು ಗಾಳಿಯಲ್ಲಿ ತೂಗಾಡುತ್ತಾ ಆಫ್ರಿನ್ ಅವರ ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ.
ಅಪಘಾತದ ನಂತರ ಪ್ರಜ್ಞಾಹೀನರಾಗಿದ್ದ ಆಫ್ರಿನ್ ಅವರನ್ನು ಸ್ಥಳೀಯರು 108 ಅಂಬುಲೆನ್ಸ್ನಲ್ಲಿ ಸಮೀಪದ ಕಿಮ್ಸಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಆಫ್ರಿನ್ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಇದೇ ವೇಳೆ ಕೋಮಾಕ್ಕೆ ಜಾರಿದ ಆಕೆಗೆ ತುರ್ತಾಗಿ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಅಗತ್ಯವಿದ್ದ ಕಾರಣ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಶುಕ್ರವಾರ ಸಂಜೆ `ಪ್ರಜಾವಾಣಿ~ ಪ್ರತಿನಿಧಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಫ್ರಿನ್ ತಂದೆ ಅಮ್ಜದ್ ಊಂಟವಾಲೆ, ಆಸ್ಪತ್ರೆಯ ತೀವ್ರ ನಿಗಾ ಚಿಕಿತ್ಸಾ ಘಟಕದ ಎದುರು ನಿಂತು ವೈದ್ಯರ ಸೂಚನೆಯ ನಿರೀಕ್ಷೆಯಲ್ಲಿದ್ದರು. ಐಸಿಯು ನಿರೀಕ್ಷಣಾ ಕೊಠಡಿಯಲ್ಲಿ ಕಾಯುತ್ತಿದ್ದ ಪತ್ನಿ ನಜೀಬುನ್ನಿಸಾ ಈ ಅನಿರೀಕ್ಷಿತ ಅಘಾತದಿಂದ ಮಾತು ಹೊರಡದಂತಾಗಿದ್ದರು. ಆಫ್ರಿನ್ಳ ತಮ್ಮಂದಿರು ತಾಯಿಯನ್ನು ಸಂತೈಸುತ್ತಿದ್ದರು.
`ಅಪಘಾತದಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಮಿದುಳಿನಲ್ಲಿ ಆಂತರಿಕ ರಕ್ತಸ್ರಾವದಿಂದ ಕೋಮಾಗೆ ಜಾರಿದ್ದಾಳೆ. ಕಳೆದ 28 ಗಂಟೆಯಿಂದ ವೆಂಟಿಲೇಟರ್ನ ಸಹಾಯದಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯದಲ್ಲಿ ಚೇತರಿಕೆಯ ಕುರಿತು ವೈದ್ಯರು ಇಲ್ಲಿಯವರೆಗೆ ಯಾವುದೇ ಭರವಸೆ ನೀಡಿಲ್ಲ~ ಎಂದು ಹೇಳಿದ ಅಮ್ಜದ್ ಅವರ ಕಣ್ಣು ಹನಿಗೂಡಿದವು. ಮಗಳನ್ನು ಉಳಿಸಿಕೊಳ್ಳಲು ತಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ನಗರದ ಎಂ.ಎಂ.ಮಳಗಿ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಅಮ್ಜದ್ ಅವರ ಮೂವರು ಮಕ್ಕಳಲ್ಲಿ ಮೊದಲನೆಯವರಾದ ಆಫ್ರಿನ್ ಅವರು ಆಟೊಮೊಬೈಲ್ ಡಿಪ್ಲೊಮಾ ಮುಗಿಸಿ, ಉಣಕಲ್ನ ಸುತಾರಿಯಾ ಆಟೋ ಸೆಂಟರ್ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬಂದ್ ಹಿನ್ನೆಲೆಯಲ್ಲಿ ಎಂದಿಗಿಂತ ಒಂದು ಗಂಟೆ ಮುಂಚೆ ಕಚೇರಿ ಮುಚ್ಚಿದ್ದರಿಂದ ಮನೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.
ಯಾರೊಬ್ಬರೂ ಭೇಟಿ ನೀಡಿಲ್ಲ: `ಅಪಘಾತ ಸಂಭವಿಸಿ ಎರಡು ದಿನ ಕಳೆಯುತ್ತಾ ಬಂದರೂ, ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಅಥವಾ ಕಾಂಗ್ರೆಸ್ಸಿನ ಯಾವುದೇ ಪದಾಧಿಕಾರಿಯೂ ಕನಿಷ್ಠ ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡಿ ಸಂತೈಸಲಿಲ್ಲ~ ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕಾಯುತ್ತಿದ್ದ ಆಫ್ರಿನ್ನ ಸಹೋದ್ಯೋಗಿ ಅಬ್ದುಲ್ ಮಲಬಾರಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ನಾಯಕರ ಓಲೈಕೆಗೆ ನೀತಿ-ನಿಯಮಗಳನ್ನು ಪಾಲಿಸದೆ, ಸ್ವಾಗತ ಕೋರುವ ನೆಪದಲ್ಲಿ ಸಂಘಟಕರು ಸಾಮಾನ್ಯ ಜನರ ಜೀವದೊಂದಿಗೆ ಆಟವಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.