ಬುಧವಾರ, ಮೇ 18, 2022
21 °C

ಬಂಧನದ ಭೀತಿ: ಅವಕಾಶ ನಿರಾಕರಿಸಿದ ಸ್ಯಾಮುಯೆಲ್ಸ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ಟನ್, ಜಮೈಕಾ (ಪಿಟಿಐ): ವೆಸ್ಟ್ ಇಂಡೀಸ್‌ನ ಬ್ಯಾಟ್ಸ್‌ಮನ್ ಮಾರ್ಲಾನ್ ಸ್ಯಾಮುಯೆಲ್ಸ್ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಲಭಿಸಿದ್ದ ಅವಕಾಶವನ್ನು ತಿರಸ್ಕರಿಸಿದ್ದಾರೆ. ಭಾರತಕ್ಕೆ ಬಂದರೆ ಬಂಧನಕ್ಕೊಳಗಾಗುವ ಭೀತಿಯಿಂದ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ‘ದಿ ಟ್ರಿನಿಡಾಡ್ ಎಕ್ಸ್‌ಪ್ರೆಸ್’ ಪತ್ರಿಕೆ ವರದಿ ಮಾಡಿದೆ.ಗಾಯಾಳು ಡ್ವೇಯ್ನಿ ಬ್ರಾವೊಗೆ ಬದಲಿ ಆಟಗಾರನಾಗಿ ಸ್ಯಾಮುಯೆಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಬಯಸಿತ್ತು. ಆದರೆ ವಿಂಡೀಸ್ ಮಂಡಳಿ ಮುಂದಿಟ್ಟ ಪ್ರಸ್ತಾಪವನ್ನು ಸ್ಯಾಮುಯೆಲ್ಸ್ ತಿರಸ್ಕರಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಸ್ಯಾಮುಯೆಲ್ಸ್ 2006 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ (ಐಸಿಸಿ) ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.ಪಂದ್ಯದ ಕುರಿತ ಮಾಹಿತಿಗಳನ್ನು ಬುಕ್ಕಿಗಳಿಗೆ ನೀಡಿದ ಆರೋಪ ಸ್ಯಾಮುಯೆಲ್ಸ್ ಮೇಲಿತ್ತು. ಬುಕ್ಕಿಗಳ ಜೊತೆ ಅವರು ನಡೆಸಿದ್ದ ದೂರವಾಣಿ ಸಂಭಾಷಣೆಯ ಮಾಹಿತಿ ದೆಹಲಿ ಪೊಲೀಸರಿಗೆ ಲಭಿಸಿತ್ತು.ಇದರ ಆಧಾರದಲ್ಲಿ ಐಸಿಸಿ 2006ರ ಮೇ ತಿಂಗಳಲ್ಲಿ ಇವರ ಮೇಲೆ ನಿಷೇಧ ಹೇರಿತ್ತು. ‘ಆಟದ ಬಗ್ಗೆ ಮೊದಲೇ ಮಾಹಿತಿ ನೀಡಿದ’ ಆರೋಪವನ್ನು ಐಸಿಸಿ ಇವರ ಮೇಲೆ ಹೊರಿಸಿತ್ತು.ಸ್ಯಾಮುಯೆಲ್ಸ್ ಅವರು ಆಡಲು ಒಪ್ಪದ ಕಾರಣ ವಿಂಡೀಸ್ ಮಂಡಳಿ ಬ್ರಾವೊಗೆ ಬದಲು ದೇವೇಂದ್ರ ಬಿಶೂ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದ ವರದಿ ವಿವರಿಸಿದೆ. ಆದರೆ ವಿಂಡೀಸ್ ಮಂಡಳಿಯ ಅಧಿಕಾರಿ ಇಮ್ರಾನ್ ಖಾನ್ ಅವರು ಈ ವರದಿಯನ್ನು ಖಚಿತಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ.ನಿಷೇಧ ಶಿಕ್ಷೆಯ ಅವಧಿ ಕೊನೆಗೊಂಡಿರುವ ಕಾರಣ ಸ್ಯಾಮುಯೆಲ್ಸ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.ನಿಷೇಧಕ್ಕೆ ಒಳಗಾಗುವ ಮುನ್ನ ಅವರು 29 ಟೆಸ್ಟ್ ಹಾಗೂ 107 ಏಕದಿನ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.