ಶುಕ್ರವಾರ, ಫೆಬ್ರವರಿ 26, 2021
22 °C
ಉಗ್ರ ಮಸೂದ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನ

ಬಂಧನವೂ ಇಲ್ಲ, ವಶಕ್ಕೂ ಪಡೆದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧನವೂ ಇಲ್ಲ, ವಶಕ್ಕೂ ಪಡೆದಿಲ್ಲ

ನವದೆಹಲಿ: ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ಸಂಚುಕೋರ ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಭದ್ರತಾ ಪಡೆಗಳು ಬಂಧಿಸಿಯೂ ಇಲ್ಲ, ವಶಕ್ಕೂ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮಾಹಿತಿ ಇತ್ತೀಚೆಗೆ ಪ್ರಕಟವಾದ ಸುದ್ದಿಗಳಿಗೆ ವ್ಯತಿರಿಕ್ತವಾಗಿದೆ. ಮಸೂದ್‌ನ ಸಂಘಟನೆಯ ಮೂವರು ಕಿರಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೆ ಪಠಾಣ್‌ಕೋಟ್‌ ದಾಳಿಗೂ ಈ ಬಂಧನಕ್ಕೂ ಸಂಬಂಧ ಇಲ್ಲ ಎಂದು ಭಾರತದ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.ಪಠಾಣ್‌ಕೋಟ್‌ ದಾಳಿಯಲ್ಲಿ ಪಾಕಿಸ್ತಾನೀಯರ ಕೈವಾಡದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಆದರೆ ಈತನಕ ಮಸೂದ್‌ ವಿರುದ್ಧ  ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಗುಪ್ತಚರ ಮಾಹಿತಿ ಆಧರಿಸಿ ಭಾರತದ ಅಧಿಕಾರಿಗಳು ಹೇಳಿದ್ದಾರೆ.ಪ್ರವೇಶ ನೀಡಲಾಗದು: ಪಠಾಣ್‌ಕೋಟ್‌ ವಾಯುನೆಲೆಯ ದಾಳಿಯ ಸ್ಥಳಕ್ಕೆ ಪ್ರವೇಶಿಸಲು ಪಾಕಿಸ್ತಾನ ತನಿಖಾಧಿಕಾರಿಗಳಿಗೆ ಅವಕಾಶ ನೀಡಬೇಕು ಎಂದು ಅಲ್ಲಿನ ಸರ್ಕಾರ ಕೇಳಿದೆ. ಆದರೆ ತನಿಖೆಗೆ ಸಂಬಂಧಿಸಿ ಪಾಕಿಸ್ತಾನ ಏನನ್ನೂ ಮಾಡಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ಅಲ್ಲಿನ ತನಿಖಾಧಿಕಾರಿಗಳಿಗೆ ಪಠಾಣ್‌ಕೋಟ್‌ ವಾಯುನೆಲೆಗೆ ಪ್ರವೇಶ ನೀಡುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.‘ಯಾವ ಕಾನೂನು ಅಡಿಯಲ್ಲಿ ಅವರಿಗೆ ನಾವು ಪ್ರವೇಶ ನೀಡಬೇಕು? ಅವರು ಎಫ್‌ಐಆರ್‌ ದಾಖಲಿಸಿದ್ದಾರೆಯೇ? ಇಲ್ಲ. ನ್ಯಾಯಾಲಯ ಏನಾದರೂ ತೀರ್ಪು ನೀಡಿದೆಯೇ? ಇಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಮಸೂದ್‌ನನ್ನು ಬಂಧಿಸಲಾಗಿದೆ ಎಂದು ಪ್ರಸಾರವಾದ ವರದಿಗಳು ಅಲ್ಲಿನ ಸಂಸ್ಥೆಯೊಂದು ನಡೆಸಿದ ಸುಳ್ಳು ಪ್ರಚಾರದ ಭಾಗ. ಕೊನೆಗೆ ಸ್ವತಃ ಮಸೂದ್‌ ಸಾಮಾಜಿಕ ಜಾಲತಾಣದ ಮೂಲಕ ತನ್ನನ್ನು ಬಂಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ ಎಂಬುದರತ್ತ ಅಧಿಕಾರಿಗಳು ಬೊಟ್ಟು ಮಾಡಿದ್ದಾರೆ.ಮಸೂದ್‌ ಬಂಧನದ ಬಗ್ಗೆ ಭಾರತಕ್ಕೆ ಪಾಕಿಸ್ತಾನ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಪ್ರಕರಣ ದಾಖಲಿಸಿದ ಬಗ್ಗೆಯೂ ಆ ದೇಶ ಯಾವುದೇ ಮಾಹಿತಿ ನೀಡಿಲ್ಲ. ವಶಕ್ಕೆ ಪಡೆದ ವ್ಯಕ್ತಿಗಳ ಹೆಸರನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಕಿಸ್ತಾನದಲ್ಲಿರುವ ಸಂಚುಕೋರರೊಂದಿಗೆ ಉಗ್ರರು ನಡೆಸಿದ ಸಂಭಾಷಣೆಯ ಸಾಕ್ಷ್ಯವನ್ನು ಪಾಕಿಸ್ತಾನಕ್ಕೆ ಭಾರತ ನೀಡಿದೆ. ಮಸೂದ್‌ ಮತ್ತು ಆತನ ಸಹೋದರ ಅಬ್ದುಲ್‌ ರವೂಫ್‌ ಸಂಚುಕೋರರು ಎಂಬುದನ್ನು ಭಾರತ ಸ್ಪಷ್ಟವಾಗಿ ಹೇಳಿದೆ.ಎಸ್ಪಿಗೆ ಪರೀಕ್ಷೆ: ಪಠಾಣ್‌ಕೋಟ್‌ ವಾಯು ನೆಲೆ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸ್‌ ಅಧಿಕಾರಿ ಸಲ್ವಿಂದರ್‌ ಸಿಂಗ್‌ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಿದೆ. ಸಲ್ವಿಂದರ್‌ ಸಿಂಗ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ಅನುಮತಿ ನೀಡಿತು.ಮಾಹಿತಿ ಬಹಿರಂಗ ಇಲ್ಲ: ಪಾಕ್

ಲಾಹೋರ್ (ಪಿಟಿಐ): ‘ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ಬಗ್ಗೆ ಜಂಟಿ ತನಿಖಾ ತಂಡ (ಜೆಐಟಿ) ನಡೆಸುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೆ ಆ ಬಗ್ಗೆ ಮಾಹಿತಿ ಬಹಿರಂಗ ಮಾಡುವುದಿಲ್ಲ’ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಕಾನೂನು ಸಚಿವ ರಾಣಾ ಸನಾವುಲ್ಲಾ ಸ್ಪಷ್ಟಪಡಿಸಿದ್ದಾರೆ. ದಾಳಿಯ ಹಿಂದೆ ಜೈಷ್‌ ಎ ಮೊಹಮ್ಮದ್ ಉಗ್ರರ ಕೈವಾಡವಿದೆ ಎಂದು ಆರೋಪಿಸಿದ್ದ ಭಾರತ ಆ ಬಗ್ಗೆ ಕೆಲವು ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ನೀಡಿತ್ತು.

ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು. ಜನವರಿ 15ಕ್ಕೆ ಪೂರ್ವನಿಗದಿಯಾಗಿದ್ದ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ದಾಳಿಯ ಬೆನ್ನಲ್ಲೇ ಮುಂದೂಡಲಾಗಿತ್ತು. ದಾಳಿ ಬಗ್ಗೆ ತನಿಖೆ ನಡೆಸುವ ಸಲುವಾಗಿ ಪಾಕಿಸ್ತಾನ ಜಂಟಿ ತನಿಖಾ ತಂಡವನ್ನು ರಚನೆ ಮಾಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.