ಶನಿವಾರ, ಮೇ 21, 2022
22 °C

ಬಚಾವಾದ ಹೂವು: ಮಿಡಿ ಕಚ್ಚಿದ ಮಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಕಳೆದ ವರ್ಷ ಹವಾಮಾನ ವೈಪರಿತ್ಯಕ್ಕೆ (ಅಗ್ಗಿನ ಮೋಡ) ಬಲಿಯಾದ ಮಾವಿನ ಹೂ ಈ ವರ್ಷ ಅದರಿಂದ ಪಾರಾಗಿದೆ. ಈ ವರ್ಷ ಮಾವಿನ ಹೂ ಬಿಟ್ಟ ಹೊಸತರಲ್ಲಿ ‘ಈ ಸಲವಂತೂ ಬೇಲಿ ಗುಟ್ಟಕ್ಕೆಲ್ಲ ಮಾವಿನ ಹೂ. ಯಾವ ಮಾವಿನ ಮರ ನೋಡಿದರೂ ‘ತೇರು ಕಟ್ಟಿದ’ ಹಾಗೆ  ಕಾಣ್ತದೆ. ಬಿಟ್ಟ ಹೂವೆಲ್ಲ ನಿಂತರೆ ಮಾವಿನ ಕಾಯಿ ಭಾರಕ್ಕೆ ಮರ ಮುರಿದು ಬೀಳುವುದು ಗ್ಯಾರಂಟಿ’ ಎಂಬುದು ಹೂ ಬಿಟ್ಟ ಮಾವಿನ ಮರ ನೋಡಿದವರ ಅನಿಸಿಕೆ. 

ಆದರೆ ಎಲ್ಲರ ನಿರೀಕ್ಷೆಯಂತೆ ಈ ವರ್ಷದ ಮಾವಿನ ಹೂವು ಮೋಡ ಕವಿದ ವಾತಾವರಣದಿಂದ ಬಚಾವಾಗಿದೆ.  ಎಲ್ಲ ಅಗತ್ಯ ವಸ್ತುಗಳ ಜೊತೆ ಹಣ್ಣುಗಳ ಬೆಲೆಯೂ ಗಗನಕ್ಕೇರುತ್ತಿರುವಾಗ ಈ ಸಲದ ಬೇಸಿಗೆಯಲ್ಲಿ  ಮಾವಿನ ಹಣ್ಣಾದರೂ ಜನಸಾಮಾನ್ಯರ ಕೈಗೆಟಕಬಹುದೇನೋ ಎಂಬ ಎಲ್ಲರ ಆಸೆ ಈಡೇರುವ ನಿರೀಕ್ಷೆಯಿದೆ. ಆದರೂ ಕಳೆದ ವರ್ಷ ಪೇಟೆಯಲ್ಲಿ ನೂರಕ್ಕೆ ರೂ. 90ರಿಂದ  100 ರವರೆಗೆ ಇದ್ದ ಉಪ್ಪಿನಕಾಯಿ ಮಾವಿನ ಮಿಡಿ  ಈ ಸಲ ನೂರಕ್ಕೆ ನೂರೈವತ್ತು ರೂ. ದರದಲ್ಲಿ ಮಾರಾಟವಾಗುತ್ತಿದೆ. ಅಪ್ಪೆ ಮಿಡಿಯಂತೂ  ಪೇಟೆಯಲ್ಲಿ ಕಾಣಲಿಕ್ಕೇ ಅಪರೂಪ. ಇನ್ನು ಅದರ ಬೆಲೆಯಂತೂ ಸಾದಾ ಮಿಡಿಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಮಾವಿನ ಹಣ್ಣು ಮಾರುಕಟ್ಟೆಗೆ ಬರಲು ಇನ್ನೂ ಶುರುವಾಗಿಲ್ಲ. ಕರಾವಳಿ ಭಾಗದ ಪ್ರಸಿದ್ಧ ತಳಿಯಾದ ಈಶಾಡು ಮಾವಿನ ಮರಗಳನ್ನು ರೈತರಿಂದ ಉದ್ಯಮಿಗಳು ಗುತ್ತಿಗೆ ಪಡೆದುಕೊಳ್ಳುವ ಪ್ರಕ್ರಿಯೆ ಈಗ ಜೋರಾಗಿ ನಡೆಯುತ್ತಿದೆ. ಮಾವಿನ ಮರಗಳಿಗೆ ಮಿಡಿ ಬಿಡುವ ಸಂದರ್ಭದಲ್ಲಿ ಉತ್ತಮ ತಳಿಯ ಈಶಾಡು, ಅಲ್ಫೆನ್ಸೋ ಮಾವಿನ ಮರಗಳನ್ನು ಕಡಿಮೆ ದರಕ್ಕೆ ಗುತ್ತಿಗೆ ಪಡೆವ ಉದ್ಯಮಿಗಳು ಮಾವಿನ ಕಾಯಿ ಕೊಯ್ದು ಹಣ್ಣಾಗಿಸಿ ದೂರ ಕಳಿಸಿ ಹಣ ಗಳಿಸುತ್ತಾರೆ. ಮಾವಿನ ಮರಗಳನ್ನು ಗುತ್ತಿಗೆ ಪಡೆಯುವ ಉದ್ಯಮಿಗಳೂ ಮೋಡ ಕವಿದ ವಾತಾವರಣ (ಅಗ್ಗಿನ ಮೋಡ) ಕಳೆದು ಮರ ಮಿಡಿ ಕಚ್ಚುವರೆಗೂ ಕಾಯುತ್ತಾರೆ. ಮಾವಿನ ಹೂವು ಅಗ್ಗಿನ ಮೋಡಕ್ಕೆ ಬಲಿಯಾದರೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವಂತೆ ರೈತರು ಚಡಿಪಡಿಸುತ್ತಾರೆ.

ಗುತ್ತಿಗೆದಾರರು ಮಾವಿನ ಮಿಡಿ ‘ಹಿಡುಪು’ ನೋಡಿ ಗುತ್ತಿಗೆ ಮೊತ್ತದ ಹಣ ನಿರ್ಧರಿಸುತ್ತಾರೆ. ದೊಡ್ಡ  ದೊಡ್ಡ ಮಾವಿನ ತೋಪುಗಳು ಬಹಿರಂಗ ಹರಾಜಿನಲ್ಲಿ ಮಾರಾಟವಾಗುತ್ತವೆ. ಈ ವರ್ಷ ಮಾವಿನ ಮರಕ್ಕೆ ಹೂ ಬಿಟ್ಟ ಸಂದರ್ಭದಲ್ಲೇ ಹೊರ ಜಿಲ್ಲೆಗಳಲ್ಲಿ ಮಳೆಯಾಯಿತು.  ಅದೃಷ್ಟವಶಾತ್ ಈ ಭಾಗದಲ್ಲಿ ಒಂದೆರಡು ದಿನ ಮೋಡದ ವಾತಾವರಣ ಉಂಟಾದರೂ ಮಾವಿನ ಹೂಗಳಿಗೆ ಹಾನಿಯುಂಟಾಗದಿರುವುದರಿಂದ ಬೇಸಿಗೆಯಲ್ಲಿ  ಮಾವಿನ ಹಣ್ಣಿನ ಸುಗ್ಗಿ ನಿರೀಕ್ಷಿಸಬಹುದಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.