ಶನಿವಾರ, ಜೂನ್ 19, 2021
23 °C

ಬಜೆಟ್: ರಿಯಲ್ ಎಸ್ಟೇಟ್ ನಿರೀಕ್ಷೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಮುಂಗಡ ಪತ್ರ ಎಂದರೆ ಜನರು ಭಾರೀ ನಿರೀಕ್ಷೆಯಲ್ಲಿರುತ್ತಾರೆ. ಆದರೆ, ಎಲ್ಲರನ್ನೂ ತೃಪ್ತಿಪಡಿಸುವುದು ಕಷ್ಟದ ಸಂಗತಿ.ರಿಯಲ್ ಎಸ್ಟೇಟ್ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ.  ಬಜೆಟ್‌ನಲ್ಲಿ ತಮ್ಮ ಕ್ಷೇತ್ರಕ್ಕೂ ಆದ್ಯತೆ ದೊರೆಯಬಹುದೇ ಎಂಬ ಕಾತರದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆದಾರರಿದ್ದಾರೆ.

ರಿಯಲ್ ಎಸ್ಟೇಟ್ ವಲಯದ ಪ್ರಮುಖರು ತಮ್ಮ ಬಜೆಟ್ ಬೇಡಿಕೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದಾರೆ.ರಿಯಲ್ ಎಸ್ಟೇಟ್ ಮಾರುಕಟ್ಟೆ ಸಂಸ್ಥೆ ದಿಶಾ ಡೈರೆಕ್ಟ್‌ನ ನಿರ್ದೇಶಕ ಸಂತೋಷ್ ನಾಯಕ್ ಪ್ರಕಾರ, `ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಕಬ್ಬಿಣ ಮತ್ತು ಸಿಮೆಂಟ್ ದರ ಈಗಾಗಲೇ ಏರಿಕೆಯಾಗಿದೆ. ಕಳೆದ ವರ್ಷ ಇದರ ಬೆಲೆ ಶೇ 30ರಷ್ಟು ಏರಿಕೆಯಾಗಿತ್ತು.  ಕಳೆದ ಎರಡು ವರ್ಷಗಳಲ್ಲಿ ಗೃಹಸಾಲದ ಬಡ್ಡಿದರದಲ್ಲೂ ಏರಿಕೆ ಕಂಡುಬಂದಿದೆ.

 

ಇದು  ಮನೆ ಕೊಳ್ಳುವವರು ಮತ್ತು ನಿರ್ಮಾಣಗಾರರ ಮೇಲೆ ಪರಿಣಾಮ ಬೀರುತ್ತಿದೆ. ರಿಯಾಲ್ಟಿ ವಲಯದ ಪ್ರಗತಿಯೂ ಕುಂಠಿತವಾಗಿದೆ.  ತೆರಿಗೆ ಪ್ರಮಾಣ ಶೇ 35ರಿಂದ ಶೇ 40 ರಷ್ಟು ಹೆಚ್ಚಳ ಕಂಡುಬಂದಿದೆ. ಮೌಲ್ಯ ವರ್ಧಿತ ತೆರಿಗೆ, ಸೇವಾ ತೆರಿಗೆ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಎಲ್ಲವನ್ನೂ  ಸೇರಿಸಿದಾಗ ಒಟ್ಟು ಮೊತ್ತ ದೊಡ್ಡದಾಗುತ್ತದೆ.ಇನ್ನೊಂದೆಡೆ ಭೂಮಿಯ ಬೆಲೆಯೂ ಹೆಚ್ಚಾಗಿದ್ದು ಇದು ಡೆವಲಪರ್‌ಗಳ ಮೇಲೆ ಪರಿಣಾಮ ಬೀರಿದೆ. ಈ ಎಲ್ಲ ಬೆಳವಣಿಗಳ ಹಿನ್ನೆಲೆಯಲ್ಲಿ, ಖರೀದಿದಾರರಿಗೆ ತಮ್ಮ ಕನಸಿನ ಮನೆಯನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಸ್ಟೇಟ್ ನಿಯಂತ್ರಣ ಮಂಡಳಿ, ಸಿಮೆಂಟ್ ಮತ್ತು ಕಬ್ಬಿಣದ ಮೇಲೆ ಕಡಿಮೆ ತೆರಿಗೆ ಜೊತೆಗೆ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತ ಮುಂತಾದವುಗಳು ಈಗ ಅಗತ್ಯವಾಗಿ ಆಗಬೇಕಾಗಿದೆ~ ಎಂದು ಅವರು ಅಭಿಪ್ರಾಯಪಡುತ್ತಾರೆ.2012-13ನೇ ಸಾಲಿನ  ಕೇಂದ್ರ ಮುಂಗಡ ಪತ್ರದಿಂದ ತಾವು ಮೂರು ಸಂಗತಿಗಳನ್ನು ನಿರೀಕ್ಷಿಸುವುದಾಗಿ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಆಡಳಿತ ನಿರ್ದೇಶಕ  ಪಿ. ರವೀಂದ್ರ ಪೈ ತಿಳಿಸುತ್ತಾರೆ.ದೇಶದ ಆರ್ಥಿಕತೆಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಆದ್ದರಿಂದ ಇದನ್ನೂ ಉದ್ದಿಮೆ ಎಂದೇ ಪರಿಗಣಿಸಬೇಕು. ಮನೆ ಖರೀದಿಯನ್ನು ಇನ್ನಷ್ಟು ಉತ್ತೇಜನಗೊಳಿಸಲು ರೂ. 25 ಲಕ್ಷಕ್ಕಿಂತ ಕೆಳಗಿನ ಗೃಹ ಸಾಲಕ್ಕೆ ಸಬ್ಸಿಡಿ ನೀಡಬೇಕು. ರಿಯಲ್  ಎಸ್ಟೇಟ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ವಿದೇಶಿ ನೇರ ಬಂಡವಾಳದಲ್ಲಿ ಸಡಿಲಿಕೆ ತರಬೇಕು ಎಂಬ ಬೇಡಿಕೆಗಳನ್ನು ಅವರು ಸರ್ಕಾರದ ಮುಂದಿಡುತ್ತಾರೆ.ಸಿಪಿಡಬ್ಲ್ಯೂಸಿ ಇಂಡಿಯಾದ ತೆರಿಗೆ ಮತ್ತು ನಿಯಂತ್ರಣ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್ ಮುಖರ್ಜಿ ಅವರು ಸಹ ಸರ್ಕಾರಕ್ಕೆ ಕೆಲವು ಬೇಡಿಕೆಗಳ ಪಟ್ಟಿ ಇಟ್ಟಿದ್ದಾರೆ.ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕಂಡುಬಂದಿರುವ ಇಳಿಕೆಯು ಸರ್ಕಾರದ ಕಣ್ಣು ತೆರೆಸಬೇಕಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪರಿಣಾಮವಾಗಿ ಬೆಲೆಗಳು ಗಗನಕ್ಕೇರುತ್ತಿವೆ. ಬಾಹ್ಯ ವಾಣಿಜ್ಯ ಸಾಲವನ್ನು ಆರಂಭಿಸುವ ಮೂಲಕ ಭೂಮಿಯ ಬೆಲೆಯಲ್ಲಿ ನಿಯಂತ್ರಣ ತರಬಹುದು. ಇದೇ ವೇಳೆ ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ ಮುಂತಾದ ತೆರಿಗೆ ಇಳಿಕೆಯು ಮನೆ ಖರೀದಿದಾರರಿಗೆ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎನ್ನುತ್ತಾರೆ ಅವರು.ಹೊಯ್ಸಳ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್‌ನ  ಆಡಳಿತ ನಿರ್ದೇಶಕ ಟಿ. ಎಸ್. ಸತೀಶ್ ಪ್ರಕಾರ, ದೇಶದಲ್ಲಿ ಗೃಹ ನಿರ್ಮಾಣ ಕ್ಷೇತವು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಹಲವರಿಗೆ ಉದ್ಯೋಗವನ್ನು ನೀಡುತ್ತಿದ್ದರೂ ಕೂಡ ಅದಕ್ಕೆ ಸೂಕ್ತ ಪ್ರಾಮುಖ್ಯ ದೊರೆತಿಲ್ಲ. ಕೆಲವೊಂದು ವರ್ಷಗಳಿಂದ ಈ ಕ್ಷೇತ್ರ ಬದಲಾವಣೆಗಾಗಿ ತೀವ್ರ ಹಂಬಲ ವ್ಯಕ್ತಪಡಿಸುತ್ತಿದೆ.

ಒಮ್ಮೆ ಇದು ಸಾಧ್ಯವಾದಲ್ಲಿ ಬಿಲ್ಡರ್‌ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಇದೇ ವೇಳೆ ಇದು ಹಣಕಾಸು ಕಂಪನಿಗಳಿಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಾಲ ನೀಡುವುದು ಸುಲಭವಾಗುತ್ತದೆ. ಮುಂದಿನ ಎರಡು ತ್ರೈಮಾಸಿಕ ಅವಧಿಗಾದರೂ ಬಡ್ಡಿದರ ಶೇ 11ರಿಂದ 9 ಕ್ಕೆ ಇಳಿಯುವುದು ಅತ್ಯಗತ್ಯವಾಗಿದೆ.

ಇದೇ ವೇಳೆ ಸೇವಾ ತೆರಿಗೆಯಲ್ಲಿ ಇಳಿಕೆ ಕುರಿತ ಮಾತುಗಳೂ ಕೇಳಿ ಬರುತ್ತಿವೆ.ಆದರೆ, ಸರ್ಕಾರದ ಈ ಭರವಸೆಗಳು ಇನ್ನೂ ಜಾರಿಯಾಗಿಲ್ಲ. ಸೇವಾ ತೆರಿಗೆ ಪ್ರತಿಯೊಂದು ರಾಜ್ಯಕ್ಕೂ ಭಿನ್ನವಾಗಿದ್ದು  ಏಕರೂಪದ ಸೇವಾ ತೆರಿಗೆ ಜಾರಿಗೆ ಬರುವುದು ಅತ್ಯಗತ್ಯವಾಗಿದೆ ಎಂದು ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಡೆಯಬೇಕಾದ ಬದಲಾವಣೆಗಳನ್ನು ವಿವರಿಸುತ್ತಾರೆ.ಪ್ರೆಸ್ಟಿಜ್ ಗ್ರೂಪ್‌ನ ಹಣಕಾಸು ವಿಭಾಗದ ಕಾರ್ಯಕಾರಿ ನಿರ್ದೇಶಕ ವೆಂಕಟ್ ನಾರಾಯಣ ಅವರ ಪ್ರಕಾರ, ಆರ್ಥಿಕ ಪ್ರಗತಿಗೆ ಅನುಕೂಲವಾದ ಭೂಮಿಯನ್ನು ಪಡೆಯುವಲ್ಲಿ ದೀರ್ಫಕಾಲೀನ ಸುಸ್ಥಿರ ಹಾಗೂ ಪಾರದರ್ಶಕವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೈಗೆಟುಕುವ ದರದಲ್ಲಿ ಮನೆ ಲಭ್ಯವಾಗಬೇಕು ಎನ್ನುವುದು ಈಗಿನ ಅಗತ್ಯವಾಗಿದೆ.ಹೀಗಾಗಿ ಇಂಥ ಮನೆಗಳಿಗೆ ಅಗತ್ಯವಾದ ಮೂಲ  ಸೌಕರ್ಯವನ್ನು ಒದಗಿಸಿಕೊಡುವುದು ಸರ್ಕಾರದ ಕರ್ತವ್ಯ. ಇದರಿಂದ ಬಡ್ಡಿ ದರವೂ ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು.

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮನೆ ಖರೀದಿಗೆ ಸೂಕ್ತ ಗೃಹ ನೀತಿಯನ್ನೂ ಜಾರಿಗೆ ತರಬೇಕಾಗಿದೆ.ಇಂತಹ ನೀತಿಗಳಿಗೆ ತೆರಿಗೆ ಮರು ಪಾವತಿ, ಮುದ್ರಾಂಕ ಶುಲ್ಕದಲ್ಲಿ ಕಡಿತ ಮತ್ತು ರೂ.10ರಿಂದ ರೂ.25 ಲಕ್ಷವರೆಗಿನ ಸಾಲಕ್ಕೆ ಸಬ್ಸಡಿ ಮುಂತಾದವುಗಳು ಜಾರಿಗೆ ಬರಬೇಕು. ಮೆಟ್ರೊ ನಗರಗಳಲ್ಲಿ ನಗರೀಕರಣ ಪ್ರಕ್ರಿಯೆ ವೇಗವಾಗಿ ಬೆಳೆಯುತ್ತಿದ್ದು ಹೊಸ ಹೊಸ ಟೌನ್‌ಶಿಪ್‌ಗಳು ಅಭಿವೃದ್ಧಿಗೊಳ್ಳುತ್ತಿವೆ.

 

ಕೈಗಾರಿಕೆಗಳು ದಟ್ಟವಾಗಿರುವ ಸ್ಥಳದಲ್ಲಿಯೇ ಟೌನ್‌ಶಿಪ್ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡುವ ಮೂಲಕ ಡೆವಲಪರ್‌ಗಳಿಗೆ ಉತ್ತೇಜನ ನೀಡುವುದು ಇಂದಿನ ಅಗತ್ಯವಾಗಿದೆ. ಇಂಗಾಲ ಹೊರಸೂಸುವಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತಿರುವ ಕುರಿತು ಮತ್ತು ಕಾಂಕ್ರೀಟ್ ಕಾಡುಗಳ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಇದೀಗ ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಪರಿಸರ ಸ್ನೇಹಿಯಾಗುತ್ತಿದೆ.ಪ್ರಸ್ತುತ ಇಂಗಾಲ ಹೊರ ಸೂಸುವಿಕೆಗೆ ರಿಯಲ್ ಎಸ್ಟೇಟ್ ಕ್ಷೇತ್ರ ಶೇ 5ರಷ್ಟು ಕೊಡುಗೆ  ನೀಡುತ್ತಿದೆ. ಜಾಗತಿಕವಾಗಿ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿರುವ ಈ ವಿಷಯಕ್ಕೆ ಸಂಬಂಧಿಸಿದಂತೆ ಡೆವಲಪರ್‌ಗಳು ಪರಿಸರ ಸ್ನೇಹಿ ಯೋಜನೆಗಳನ್ನು ಅಭಿವೃದ್ದಿಪಡಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸರ್ಕಾರ ಬಿಲ್ಡರ್‌ಗಳ ನೆರವಿಗೆ ಬರಬೇಕಾಗಿದೆ. ಇದೇ ವೇಳೆ ಹಸಿರು ಅಭಿವೃದ್ಧಿಪಡಿಸುವಲ್ಲಿ ಗ್ರಾಹಕರಿಗೂ ಸಬ್ಸಿಡಿ ನೀಡುವುದೂ ಅತೀ ಅಗತ್ಯವಾಗಿದೆ.ಮುಂದಿನ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸರ್ಕಾರ ಧನಾತ್ಮಕವಾದ ಪರಿಸರ ನಿರ್ಮಿಸಿಕೊಡುವ ಮೂಲಕ ಅದನ್ನೂ ಉದ್ದಿಮೆ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದು   ವೆಸ್ಟ್‌ಕೋರ್ಟ್ ರಿಯಲ್ ಎಸ್ಟೇಟ್‌ನ ವೈ   ಸ್ ಪ್ರೆಸಿಡೆಂಟ್ ನೀಲ್ ಕಪೂರ್ ಅಭಿಪ್ರಾಯಪಡುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.