ಮಂಗಳವಾರ, ಏಪ್ರಿಲ್ 13, 2021
31 °C

ಬಡವರಿಗೆ ಸೂರು: ಜಮೀನು ಗುರುತಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಗಡಿ ಜಿಲ್ಲೆಯನ್ನು ಗುಡಿಸಲುಮುಕ್ತ ಗೊಳಿಸಲು ತಾಲ್ಲೂಕು ಕೇಂದ್ರದಲ್ಲಿ 50 ಎಕರೆ ಹಾಗೂ ಜಿಲ್ಲಾ ಕೇಂದ್ರದಲ್ಲಿ 100 ಎಕರೆ ಜಮೀನು ಗುರುತಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಆ ಮೂಲಕ ಅರ್ಹರಿಗೆ ಸೂರಿನ ಸೌಲಭ್ಯ ಕಲ್ಪಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಶಿವರಾಮ್ ಹೇಳಿದರು.ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯನ್ನು ಗುಡಿಸಲುರಹಿತ ಜಿಲ್ಲೆಯನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ. ಬಡ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲು ಅಧಿಕಾರಿ ಗಳು ಅಗತ್ಯವಿರುವ ಭೂಮಿ ಗುರುತಿಸಬೇಕು. ನೋಡೆಲ್ ಅಧಿಕಾರಿಗಳು ಮೂರು ದಿನದೊಳಗೆ ಗುಡಿಸಲುವಾಸಿಗಳ ಫಲಾನುಭವಿಗಳ ಪಟ್ಟಿ ಸಲ್ಲಿಸಬೇಕು. ವಸತಿಯನ್ನು ಫಲಾನುಭವಿಗಳೇ ನಿರ್ಮಿಸಿಕೊಳ್ಳಲು ಬಯಸುತ್ತಾರೆಯೋ? ಅಥವಾ ಇಲಾಖೆ ನಿರ್ಮಿಸಿಕೊಡಬೇಕೇ ಎಂಬ ಸ್ಪಷ್ಟ ಅಭಿಪ್ರಾಯವನ್ನು ಫಲಾನುಭವಿಗಳಿಂದ ಪಡೆದು ದಾಖಲು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಲಭ್ಯವಿರುವ ಮೇವಿನ ಸ್ಥಳ ಗುರುತಿಸುವ ಕಾರ್ಯವನ್ನು ಶೀಘ್ರವಾಗಿ ಮಾಡಬೇಕು. ಈಗಾಗಲೇ, ತೆರೆದಿರುವ ಗೋಶಾಲೆಗಳ ಪ್ರಯೋಜನ ಬಡರೈತರಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಮೇವು ವಿತರಣೆಯಲ್ಲಿ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು. ಪೂರ್ಣಗೊಂಡಿರುವ ಕುಡಿಯುವ ನೀರು ಯೋಜನೆ ಕಾಮಗಾರಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಒದಗಿಸುವ ಪ್ರಕ್ರಿಯೆಗೆ ಅನುಸರಿಸಬೇಕಾದ ನಿಯಮಗಳಿಗೆ ಸಡಿಲಿಕೆಯಿದೆ. ವಿಶೇಷವಾಗಿ ಬರಗಾಲ ಸಮಯದಲ್ಲಿ ಕುಡಿಯುವ ನೀರಿನ ಯೋಜನೆಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಆದೇಶ ನೀಡಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರೈಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ತಾಕೀತು ಮಾಡಿದರು.ಹೋಬಳಿಯ ಉಸ್ತುವಾರಿ ಹೊಣೆ ಹೊತ್ತಿರುವ ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸ ಮಾಡಿ ಜನರ ಕುಂದುಕೊರತೆ ಆಲಿಸಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು ಎಂದ ಅವರು, ಇಲಾಖೆಯ ಕಾರ್ಯಕ್ರಮ ಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಇರಬಾರದು. ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್, ರಾಜೀವ್‌ಗಾಂಧಿ ವಸತಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿಕುಮಾರ್, ಉಪ ವಿಭಾಗಧಿಕಾರಿ ಎ.ಬಿ. ಬಸವರಾಜು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.