ಮಂಗಳವಾರ, ಮೇ 24, 2022
24 °C

ಬಡವರ ತುತ್ತಿಗೆ ಕುತ್ತು ತಂದ ನಾರು ಉದ್ಯಮ

ಪ್ರಜಾವಾಣಿ ವಾರ್ತೆ/ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬೆಳೆದಿರುವ ನೂರಾರು ಎಕರೆ ಮಾವು ಮತ್ತು ಹುಣಸೆ ತೋಪುಗಳ ಸುತ್ತ ಬೆಳೆಸಿರುವ ಕತ್ತಾಳೆ ಬೇಲಿ ಜನ ಜಾನುವಾರುಗಳ ಹಾವಳಿಯಿಂದ ತೋಪುಗಳನ್ನು ರಕ್ಷಿಸುವುದಲ್ಲದೆ, ಅದರ ನಾರನ್ನು ತೆಗೆದು ಹಗ್ಗ ಹೆಣೆಯುವ ಒಂದು ಜನಾಂಗಕ್ಕೆ ಜೀವನಾಧಾರ ಆಗಿದೆ.ಸ್ಥಳೀಯವಾಗಿ `ಹಗ್ಗವಡ್ಡರು~ ಎಂದು ಕರೆ ಯಲ್ಪಡುವ ಜನಾಂಗ ಶ್ರೀನಿವಾಸಪುರ ಮತ್ತು ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ವಾಸ ವಾಗಿದೆ. ಆ ಜನಾಂಗದವರು ಬೇಲಿಗಳಲ್ಲಿ ಬಲಿತು ಒಣಗಿದ ಕತ್ತಾಳೆ ಪಟ್ಟೆಗಳನ್ನು ಕೊಯ್ದು ತಂದು ಕೊಡತಿಯಿಂದ ಬಡಿದು ನಾರು ತೆಗೆಯುತ್ತಾರೆ.ರೈತರಿಗೆ ಬೇಕಾದ ಹಗ್ಗ, ಗ್ರಾಮೀಣ ಜನರು ನಿತ್ಯ ಬಳಸುವ ನೆಳಲು, ಬರಕ, ಸಿಕ್ಕ, ಪೊಲಪು ಮುಂತಾದವುಗಳನ್ನು ಕೈಯಿಂದಲೇ ಹೆಣೆದು ಸಮೀಪದ ಸಂತೆ ಹಾಗೂ ಗ್ರಾಮಗಳಿಗೆ ಕೊಂಡೊ ಯ್ದು ಹಣ ಅಥವಾ ದವಸ ಧಾನ್ಯಕ್ಕಾಗಿ ಮಾರಿ ಜೀವನ ನಡೆಸುತ್ತಾರೆ.ಆದರೆ ಈಗ ತಾಲ್ಲೂಕನ್ನು ಪ್ರವೇಶಿಸಿರುವ ನಾರು ಉದ್ಯಮ ಬಡವರ ತುತ್ತಿಗೆ ಕುತ್ತಾಗಿ ಪರಿಣಮಿಸಿದೆ. ಜೊತೆಗೆ ಪ್ಲಾಸ್ಟಿಕ್ ದಾರದಿಂದ ತಯಾರಿಸಿದ ಹಗ್ಗಗಳು ಮಾರುಕಟ್ಟೆಗೆ ಬಂದಿರು ವುದು ಸಮಸ್ಯೆಯನ್ನು ಹೆಚ್ಚಿಸಿವೆ. ತಮಿಳುನಾಡಿನ ನಾರು ಉದ್ಯಮಿಗಳು ತೋಟದ ಬೇಲಿಯಲ್ಲಿನ ಕತ್ತಾಳೆ ಪಟ್ಟೆಗಳನ್ನು ಖರೀದಿಸುತ್ತಾರೆ.ಸುತ್ತ ಮುತ್ತ ಸುಮಾರು ಎರಡು ಕಿ.ಮೀ. ವ್ಯಾಪ್ತಿ ಯಲ್ಲಿನ ಪಟ್ಟೆಗಳನ್ನು ಕೊಯ್ದು ತಂದು ಡೀಸೆಲ್ ಚಾಲಿತ ಯಂತ್ರಕ್ಕೆ ಒದಗಿಸುತ್ತಾರೆ. ಇಂಥ ಪ್ರತಿ ಯಂತ್ರಕ್ಕೂ ದಿನವೊಂದಕ್ಕೆ ಹಲವು ಗಾಡಿಗಳಷ್ಟು ಪಟ್ಟೆಗಳಿಂದ ನಾರು ತೆಗೆಯುವ ಸಾಮರ್ಥ್ಯ ಇದೆ. ನಾರಿನ ವ್ಯಾಪಾರಿಗಳು ಸ್ಥಳಕ್ಕೆ ಬಂದು ನಾರನ್ನು ಖರೀದಿಸಿ ತಮಿಳುನಾಡಿಗೆ ರವಾನಿಸುತ್ತಾರೆ.

 

ಅಲ್ಲಿ ನಾರನ್ನು ಸಂಸ್ಕರಿಸಿ ಕರಕುಶಲ ವಸ್ತುಗಳು ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಇಂಥ ವಸ್ತುಗಳಿಗೆ ನಗರ ಪ್ರದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಕರಕುಶಲ ವಸ್ತುಗಳ ತಯಾರಿಕರಿಗೆ ಹಾಗೂ ಮಾರಾಟಗಾರರಿಗೆ ಉತ್ತಮ ಲಾಭ ಸಿಗುತ್ತದೆ.ಈಗ ಸೆಣಬಿನಿಂದ ತಯಾರಿಸಿದ ಚೀಲಗಳ ಬಳಕೆ ಕಡಿಮೆ. ತರಕಾರಿಯಿಂದ ಹಿಡಿದು ಯಾವುದೇ ಪದಾರ್ಥವನ್ನು ತುಂಬಲು ಪ್ಲಾಸ್ಟಿಕ್ ನಾರಿನಿಂದ ತಯಾರಿಸಿದ ಚೀಲಗಳನ್ನು ಬಳಸಲಾಗುತ್ತಿದೆ. ಸಿಮೆಂಟ್ ತುಂಬಲೂ ಸಹ ಪ್ಲಾಸ್ಟಿಕ್ ಚೀಲ ಬಳಕೆಯಲ್ಲಿದೆ. ಈ ಎಲ್ಲ ಚೀಲಗಳೂ ಒಂದು ಹಂತದಲ್ಲಿ ಹಿಂದಕ್ಕೆ ಬೀಳುತ್ತವೆ.

 

ಅವುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಯಂತ್ರದ ಸಹಾಯದಿಂದ ಹಗ್ಗ ಹೆಣೆದು ಸಂತೆಗಳಿಗೆ ಕೊಂಡೊಯ್ದು ಮಾರುತ್ತಾರೆ. ಪಟ್ಟಣದ ಅಂಗಡಿಗಳಲ್ಲೂ ಇಂಥ ಹಗ್ಗಗಳು ಸಿಗುತ್ತವೆ. ಕೆಲವರು ಸರಳ ಯಂತ್ರದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ, ಪ್ಲಾಸ್ಟಿಕ್ ಚೀಲಗಳನ್ನು ಪಡೆದು ಸ್ಥಳದಲ್ಲಿಯೇ ಅಗತ್ಯವಾದ ಹಗ್ಗ ಹೆಣೆದು ಕೊಡುತ್ತಾರೆ. ಹೆಣೆದು ಕೊಟ್ಟಿದ್ದಕ್ಕಾಗಿ ಹಣ ಪಡೆಯುತ್ತಾರೆ. ಇದರಿಂದಾಗಿ ಒಣಗಿದ ಕತ್ತಾಳೆ ಪಟ್ಟೆಗಳನ್ನು ಪುಕ್ಕಟೆಯಾಗಿ ಸಂಗ್ರಹಿಸಿ ಹಗ್ಗ ಮಾಡಿ ಜೀವನ ಸಾಗಿಸುತ್ತಿದ್ದ ಸ್ಥಳೀಯರಿಗೆ ಪಟ್ಟೆಗಳು ಸಿಗದೆ, ಕೆಲಸ ಇಲ್ಲದಂತಾಗಿದೆ. ಜೊತೆಗೆ ಅವರ ಕುಲ ಕಸುಬು ಅಳಿವಿನ ಹಾದಿ ಹಿಡಿದಿದೆ.ಅಲ್ಯುಮಿನಿಯಂ, ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಬಳಕೆ ಹೆಚ್ಚಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೆಲವರ ಕುಲ ಕಸುಬಾಗಿದ್ದ ಕುಂಬಾರಿಕೆ ಮಹತ್ವ ಕಳೆದುಕೊಂಡಿತು. ಅವರು ತಮ್ಮ ಮೂಲ ವೃತ್ತಿಯನ್ನು ಬಿಟ್ಟು ಅನ್ಯ ವೃತ್ತಿಗಳನ್ನು ಅವಲಂಬಿಸಬೇಕಾಗಿ ಬಂದಿತು. ಹೀಗೆ ನಾವೀನ್ಯತೆ ಗಾಳಿ ಬೀಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಕೆಲವು ನಿರ್ದಿಷ್ಟ ಪಂಗಡಗಳ ಕುಲ ಕಸುಬುಗಳು ಬೇಡಿಕೆ ಕಳೆದುಕೊಂಡವು. ಈಗ ಹಗ್ಗ ಹೆಣಿಗೆ ಅದೇ ಹಾದಿ ಹಿಡಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.