ಶುಕ್ರವಾರ, ಏಪ್ರಿಲ್ 16, 2021
31 °C

ಬಡ ಮಕ್ಕಳ ತಲೆ ಕೂದಲು ಕತ್ತರಿಸಿದ ಪ್ರಕರಣ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆರ್‌ಟಿಇ ಕಾಯ್ದೆಯಡಿ ಪ್ರವೇಶ ಪಡೆದ ಬಡ ಮಕ್ಕಳ ತಲೆ ಕೂದಲು ಕತ್ತರಿಸುವ ಮೂಲಕ ನಂದಿನಿ ಲೇಔಟ್‌ನ ಆಕ್ಸ್‌ಫರ್ಡ್ ಶಾಲೆಯ ಆಡಳಿತ ಮಂಡಳಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ~ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಗುರುವಾರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.`ಬಡವ ಹಾಗೂ ಶ್ರೀಮಂತ ಎಂಬ ಭೇದವನ್ನು ಶಿಕ್ಷಣ ಕ್ಷೇತ್ರದಲ್ಲಿ ತರುವುದು ಸಮಂಜಸವಲ್ಲ. ಇದನ್ನು ಖಾಸಗಿ ಶಾಲೆಗಳು ಅರ್ಥ ಮಾಡಿಕೊಳ್ಳಬೇಕು. ಖಾಸಗಿ ಶಾಲೆಗಳು ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿಲ್ಲ. ಬದಲಿಗೆ ಪ್ರತಿ ವಿದ್ಯಾರ್ಥಿಗೂ ಕೇಂದ್ರ ಸರ್ಕಾರ ಶೇ 65ರಷ್ಟು ಮತ್ತು ರಾಜ್ಯ ಸರ್ಕಾರ ಶೇ 35ರಷ್ಟು ಅನುದಾನ ನೀಡುತ್ತಿದೆ. ಅನುದಾನ ಪಡೆದರೂ ಶಾಲೆಯ ಆಡಳಿತ ಮಂಡಳಿ ಇಂತಹ ಹೇಯ ಕೃತ್ಯ ನಡೆಸಿದೆ~ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ನೆ.ಲ. ನರೇಂದ್ರಬಾಬು ಆರೋಪಿಸಿದರು.`ಬಡ ಮಕ್ಕಳನ್ನು ಬೇರೊಂದು ಕೊಠಡಿಯಲ್ಲಿ ಕೂರಿಸುವ ಮೂಲಕ ಮಕ್ಕಳನ್ನು ಅವಮಾನಿಸುವ ಕೆಲಸ ಅನೇಕ ಖಾಸಗಿ ಶಾಲೆಯಲ್ಲಿ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ತನಿಖೆ ಕೈಗೊಂಡು ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಶರ್ಮ ಬಂಧನಕ್ಕೆ ಒತ್ತಾಯ : `ಬಡ ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ `ಕುಸ್ಮಾ~ದ ಮಾಜಿ ಅಧ್ಯಕ್ಷ ಜಿ.ಎಸ್.ಶರ್ಮ ಅವರನ್ನು ಬಂಧಿಸಬೇಕು~ ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ನಗರದ ಪುರಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿ, ಶರ್ಮ ಅವರ ಪ್ರತಿಕೃತಿ ದಹನ ಮಾಡಿದರು.`ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನದ ವಿಚಾರದಲ್ಲಿ ಇರುವ ಗೊಂದಲಗಳನ್ನು ನಿವಾರಿಸಬೇಕೆಂದು `ಕುಸ್ಮಾ~ ಸಂಘಟನೆ ಮೂರು ದಿನಗಳ ಕಾಲ ಶಾಲೆಗಳನ್ನು ಬಂದ್ ಮಾಡಿಸಿತ್ತು. ಅಲ್ಲದೇ, ಜಿ.ಎಸ್. ಶರ್ಮ ಅವರು ಬಡ ಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಅವರ ಈ ಹೇಳಿಕೆ ಬಡ ಮಕ್ಕಳನ್ನು ಕೀಳಾಗಿ ಕಾಣುವಂತಿದೆ. ಜಾತಿ ನಿಂದನೆಯ ಆರೋಪ ಶರ್ಮ ಅವರ ಮೇಲಿದ್ದು, ಅವರನ್ನು ಕೂಡಲೇ ಬಂಧಿಸಬೇಕು~ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಟಾಪಟ್ ನಾಗರಾಜ್ ಆಗ್ರಹಿಸಿದರು.`ಆರ್‌ಟಿಇ ಕಾಯ್ದೆಯಲ್ಲಿ ಗೊಂದಲವಿರುವುದು ನಿಜ. ಸಂಬಂಧಪಟ್ಟವರ ಜತೆ ಚರ್ಚಿಸಿ ಗೊಂದಲ ನಿವಾರಿಸಿಕೊಳ್ಳಬಹುದಿತ್ತು. ಆದರೆ, ಶಾಲೆಗಳನ್ನು ಬಂದ್ ಮಾಡುವ ಮೂಲಕ ಕುಸ್ಮಾ ಸಂಘಟನೆ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ. ಬಡ ಮಕ್ಕಳೊಂದಿಗೆ ತಮ್ಮ ಮಕ್ಕಳು ಶಿಕ್ಷಣ ಪಡೆಯುವುದು ಬೇಡ ಎನ್ನುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಿ. ಶಿಕ್ಷಣ ಒಂದು ಜಾತಿಗೆ, ವರ್ಗಕ್ಕೆ ಸೀಮಿತವಾದುದ್ದಲ್ಲ. ಶಿಕ್ಷಣ ಸಾರ್ವರ್ತಿಕ ಹಕ್ಕು~ ಎಂದು ಅವರು ಹೇಳಿದರು.`ಸಮಗ್ರ ತನಿಖೆಯಾಗಬೇಕು~

`ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆ ಸೇರಿರುವ ಬಡ ಮಕ್ಕಳನ್ನು ಪ್ರತ್ಯೇಕವಾಗಿ ನಡೆಸಿಕೊಳ್ಳುತ್ತಿರುವ ಕ್ರಮ ಸರಿಯಲ್ಲ. ಮಕ್ಕಳ ತಲೆಗೂದಲು ಕತ್ತರಿಸಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕೆಲವು ಪ್ರತಿಷ್ಠಿತ ಶಾಲೆಗಳು ಬಡ ಮಕ್ಕಳಿಗೆ ತರಗತಿಗಳನ್ನೇ ಪ್ರತ್ಯೇಕವಾಗಿ ನಡೆಸುತ್ತಿವೆ.ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವುದು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಕೀಳರಿಮೆ ಮೂಡಲು ಕಾರಣವಾಗುತ್ತದೆ. ಆರ್‌ಟಿಇ ಕಾಯ್ದೆ ಹಾಗೂ ಮಕ್ಕಳ ಮನೋವಿಜ್ಞಾನದ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ನಡೆಸಿದರೆ ಇಂತಹ ಪ್ರಕರಣಗಳನ್ನು ತಪ್ಪಿಸಬಹುದು~

-ವಾಸುದೇವಶರ್ಮಾ,

ಕಾರ್ಯಕಾರಿ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.