ಶುಕ್ರವಾರ, ಜೂನ್ 25, 2021
22 °C
ಕುಂದಾನಗರಿಯಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ

ಬಣ್ಣದೋಕುಳಿ ಕುಣಿದಾಡಿದ ಜನ...!

ಪ್ರಜಾವಾಣಿ ವಾರ್ತೆ/ ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ಬೆಳಗಾವಿ: ಎಲ್ಲೆಲ್ಲೂ ಬಣ್ಣದ ಚಿತ್ತಾರ. ಬಾನೆತ್ತರಕ್ಕೆ ನಲಿದಾಡಿದ ರಂಗು. ಪಿಚಕಾರಿಯಿಂದ ತೂರಿ ಬರುತ್ತಿದ್ದ ಬಣ್ಣದೋಕುಳಿ ಮೂಡಿಸಿದ್ದ ಬಣ್ಣದ ಕಾರಂಜಿ. ಕೇಕೆ ಹಾಕುತ್ತ, ಹಲಗೆ ಬಾರಿಸುತ್ತ ಅಬ್ಬರಿಸಿದ ಯುವಕರು, ಸಂಗೀತದ ಅಬ್ಬರಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ರಂಗಿನಾಟದಲ್ಲಿ ತೊಡಗಿದ ಸಾವಿರಾರು ಜನ...!ಇವು ಕುಂದಾನಗರಿಯಲ್ಲಿ ಸೋಮವಾರ ನಡೆದ ಹೋಳಿ ಹಬ್ಬದ ಸಂಭ್ರಮದ ಕೆಲವು ಝಲಕ್‌ಗಳು. ಬೆಳಿಗ್ಗೆ ಆಗುತ್ತಿದ್ದಂತೆ ಮಕ್ಕಳು– ಯುವಕರು ಹಲವು ಬಣ್ಣ– ಪಿಚಕಾರಿ, ವಾದ್ಯಗಳೊಂದಿಗೆ ಮನೆಯಿಂದ ಹೊರಗೆ ಬಂದು ರಂಗಿನಾಟದಲ್ಲಿ ತೊಡಗಿಕೊಂಡಿದ್ದರು.ಕೆಲವೆಡೆ ಭಾನುವಾರ ರಾತ್ರಿಯೇ ಕಾಮಣ್ಣನನ್ನು ದಹಿಸುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ತಡ ರಾತ್ರಿಯವರೆಗೂ ಹಲಗೆ, ಡೋಲು ಬಡಿಯುತ್ತ, ಹಾಡು ಹೇಳುತ್ತ ಸಂಭ್ರಮಿಸಿದರು. ಕೆಲವು ಓಣಿಗಳಲ್ಲಿ ಸೋಮವಾರ ಮುಂಜಾನೆ ಕಾಮಣ್ಣನನ್ನು ಸುಡುವುದರೊಂದಿಗೆ ಬಣ್ಣದಾಟಕ್ಕೆ ಸಜ್ಜಾದರು. ಪರಸ್ಪರ ಬಣ್ಣ ಹಚ್ಚುತ್ತ, ಬಣ್ಣ ತೂರುತ್ತ ಹೋಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ರಂಗೇರಿಸಿದ ಹೋಳಿ ಮಿಲನ್‌

ಹೋಳಿ ಹಬ್ಬದ ಅಂಗವಾಗಿ ಟಿಳಕವಾಡಿಯ ಲೇಲೆ ಮೈದಾನದಲ್ಲಿ ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪರಿವರ್ತನ ಪರಿವಾರ ಸಂಸ್ಥೆಯು ಹಮ್ಮಿಕೊಂಡಿದ್ದ 5ನೇ ವರ್ಷದ ‘ಹೋಳಿ ಮಿಲನ್‌’ ಕಾರ್ಯಕ್ರಮದಲ್ಲಿ ನಗರದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನರು ರಂಗಿನೊಂದಿಗೆ ನಲಿದಾಡಿದರು. ಬಣ್ಣಗಳನ್ನು ಬಾನೆತ್ತರಕ್ಕೆ ತೂರುತ್ತ ರಂಗಿನ ಚಿತ್ತಾರ ಮೂಡಿಸಿದರು. ತೇಲಿ ಬರುತ್ತಿದ್ದ ಹಲವು ಖ್ಯಾತ ಗಾಯನಗಳಿಗೆ ಹೆಜ್ಜೆ ಹಾಕುತ್ತ ಮೈರೆತರು.ಬೆಳಿಗ್ಗೆ 9 ಗಂಟೆಗೆ ವಿವಿಧೆಡೆಯಿಂದ ಲೇಲೆ ಮೈದಾನಕ್ಕೆ ಜನಸಾಗರ ಹರಿದು ಬರಲು ಆರಂಭಿಸಿತ್ತು. ಯುವಕರು ಹಾಗೂ ಯುವತಿಯರು ಪ್ರತ್ಯೇಕವಾಗಿ ಸಂಗೀತಕ್ಕೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು. ರಂಗಿನಾಟದ ‘ನಶೆ’ಯಲ್ಲಿದ್ದ ಯುವಕರು ಮಧ್ಯಾಹ್ನದ ಹೊತ್ತಿಗೆ ತಮ್ಮ ಶರ್ಟ್‌ ಹರಿದು ಗಾಳಿಯಲ್ಲಿ ತೂರಾಡುತ್ತ ಕುಣಿದರು. ತಮ್ಮ ಸ್ನೇಹಿತರನ್ನು ಗಾಳಿಯಲ್ಲಿ ಮೇಲಕ್ಕೆ ಎತ್ತಿ ಹಾರಿಸುತ್ತ ಕುಣಿದು ಕುಪ್ಪಳಿಸಿದರು. ಅಭಯ ಪಾಟೀಲರೂ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಯುವಕರನ್ನು ಪ್ರೋತ್ಸಾಹಿಸಿದರು.ಯುವಕ– ಯುವತಿಯರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಬಣ್ಣದಾಟದಲ್ಲಿ ತೊಡಗಿಕೊಂಡಿದ್ದರು. ಬೈಕ್‌ ಮೇಲೆ ಮೂವರು, ನಾಲ್ವರನ್ನು ಕುಳಿತುಕೊಂಡು ಹಾರನ್‌ ಬಾರಿಸುತ್ತ, ಬೊಬ್ಬೆ ಹೊಡೆಯುತ್ತ ರಸ್ತೆಗಳಲ್ಲಿ ಸಂಚರಿಸಿದರು. ವಿವಿಧ ಮುಖವಾಡಗಳನ್ನು ಧರಿಸಿದ್ದ ಯುವಕರು, ಬೈಕ್‌ ಮೇಲೆ ಡೋಲು, ಹಲಗೆ ಬಾರಿಸುತ್ತ ಅತ್ತಿಂದಿತ್ತ ಸುತ್ತಾಡಿದರು.ಪುಟಾಣಿ ಮಕ್ಕಳು ತಮ್ಮ ಮನೆಯ ಎದುರಿಗೆ ಹೋಗುವವರತ್ತ ಪಿಚಕಾರಿಯಿಂದ ಬಣ್ಣದ ನೀರನ್ನು ಎರಚುತ್ತ ಸಂಭ್ರಮಿಸಿದರು.ಪಾಂಗಳುಗಲ್ಲಿಯಲ್ಲಿ ಮೇಲಿನಿಂದ ಬಣ್ಣದೋಕುಳಿ ಸುರಿಯುತ್ತಿದ್ದಾಗ ಹಲವು ಜನರು ಉರುಳು ಸೇವೆ ಮಾಡುವ ಮೂಲಕ ಗಮನ ಸೆಳೆದರು. ತಮ್ಮ ಬಟ್ಟೆಯನ್ನು ಹರಿದು ಮನೆಯ ಮಹಡಿಗಳ ಮೇಲೆ ಎಸೆದರು. ಸಂಜೆಯವರೆಗೂ ಪಾಂಗಳುಗಲ್ಲಿಯಲ್ಲಿ ಬಣ್ಣದಾಟದ ಸಂಭ್ರಮ ಮುಂದುವರಿದಿತ್ತು.ಚುನಾವಣಾ ಪ್ರಚಾರಕ್ಕೆ ಬಿಡುವ ನೀಡಿದ್ದ ಸಂಸದ ಸುರೇಶ ಅಂಗಡಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಬಣ್ಣದಾಟದಲ್ಲಿ ತೊಡಗಿಕೊಂಡಿದ್ದರು. ತಮ್ಮ ಆಪ್ತರೊಂದಿಗೆ ರಂಗಿನ ಹಬ್ಬದ ಸಂಭ್ರಮ ಹಂಚಿಕೊಂಡರು.ದ್ವಿತೀಯ ಪಿಯುಸಿ ಪರೀಕ್ಷೆ ಮಗಿಸಿಕೊಂಡ ಬಂದ ವಿದ್ಯಾರ್ಥಿಗಳು ಮಧ್ಯಾಹ್ನದ ಮೇಲೆ ಕೆಲ ಹೊತ್ತು ಬಣ್ಣದಾಟದಲ್ಲಿ ತೊಡಗಿಕೊಂಡಿದ್ದರು.

ವಡಗಾವಿ, ಶಹಾಪುರ ಹಾಗೂ ಖಾಸಬಾಗ್‌ ಸುತ್ತಲಿನ ಪ್ರದೇಶಗಳಲ್ಲಿ ರಂಗಪಂಚಮಿ ದಿನದಂದು ಜನರು ಬಣ್ಣದಾಟ ಆಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.