ಶನಿವಾರ, ಏಪ್ರಿಲ್ 10, 2021
32 °C

ಬತ್ತದ ಸಸಿ ಮಡಿಯಲ್ಲಿ ಕಾಂಡಕೊರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಬತ್ತದ ಸಸಿ ಮಡಿಗಳಲ್ಲಿ ಕಾಂಡಕೊರಕದ ಪತಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಇದರಿಂದ ನಷ್ಟವಾಗುವುದನ್ನು ತಪ್ಪಿಸಲು, ಹುಳುವಿನ ನಿಯಂತ್ರಣಕ್ಕೆ ಕೆಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬತ್ತದ ನಾಟಿಗಾಗಿ ಸಸಿ ಮಡಿಗಳನ್ನು ಹಾಕಲಾಗಿದೆ. ಇಲ್ಲಿ, ಚಿಟ್ಟೆಗಳು ಆತಂಕಕಾರಿ ಪ್ರಮಾಣದಲ್ಲಿ ಇರುವುದನ್ನು ಗಮನಿಸಲಾಗಿದೆ. ಈ ಪೀಡೆ ಜಿಲ್ಲೆಯಾದ್ಯಂತ ಇರುವ ಸಾಧ್ಯತೆ ಇದೆ. ಹೀಗಾಗಿ, ಕಾಂಡಕೊರಕದ ತೀವ್ರ ಬಾಧೆಯ ಆತಂಕದ ಛಾಯೆ ಹೆಚ್ಚಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ 10-35 ದಿನಗಳ ಸಸಿಮಡಿಗಳಿದ್ದು, ಈ ಹಂತದಲ್ಲೇ ಕಾಂಡಕೊರದ ಪತಂಗಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಕೃಷಿ ಇಲಾಖೆ ತಿಳಿಸಿದೆ.ಕಾಂಡಕೊರಕದ ಪತಂಗ, ಕಂದು ಮಿಶ್ರಿತ ಹಳದಿ ಬಣ್ಣ ಹೊಂದಿದ್ದು, ಮುಂದಿನ ಎರಡೂ ರೆಕ್ಕೆಗಳ ಮಧ್ಯದಲ್ಲಿ ಚಿಕ್ಕದಾದ ಕಪ್ಪುಬಣ್ಣದ ಚುಕ್ಕೆಗಳು ಇರುತ್ತವೆ. ಈ ಪತಂಗಗಳು ಎಲೆಯ ತುದಿ ಮೇಲೆ ಗುಂಪಾಗಿ ಮೊಟ್ಟೆ ಇಡುತ್ತವೆ.ಒಂದು ಗುಂಪಿನಲ್ಲಿ ಸುಮಾರು 75ರಿಂದ 110ರಷ್ಟು ಮೊಟ್ಟೆಗಳು ಇರುತ್ತವೆ. ಮೊಟ್ಟೆಗಳ ಸಮೂಹ ಕಂದುಬಣ್ಣದ ರೋಮಗಳಿಂದ ಮುಚ್ಚಿದ್ದು, ಮೊಟ್ಟೆಯೊಡೆದು ಹೊರ ಬಂದ ಮರಿಹುಳುಗಳು  ಕಾಂಡ ಕೊರೆದು ತಿನ್ನುತ್ತವೆ. ಇದರಿಂದ ಸುಳಿಗಳು ಒಣಗಿ ತೀವ್ರ ನಷ್ಟವಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಿಯಂತ್ರಣಕ್ಕೆ ಕ್ರಮ: ಒಂದು ಚದುರ ಮೀಟರ್ ಸಸಿಮಡಿ ಜಾಗಕ್ಕೆ, ಒಂದು ಪತಂಗ ಅಥವಾ ಒಂದು ತತ್ತಿ ಸಮೂಹ ಕಂಡುಬಂದರೆ 2 ಮಿ.ಲೀ. ಪ್ರೊಫೆನೋಪಾಸ್ ತತ್ತಿನಾಶಕ  ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಸಿಮಡಿಗಳಲ್ಲಿ ಮೋಹಕ ಬಲೆ ಹಾಕುವುದರಿಂದ ಪತಂಗಗಳ ಸಂಖ್ಯೆ ಕಡಿಮೆಗೊಳಿಸಬಹುದು.ಪತಂಗಗಳು ಹೆಚ್ಚಾಗಿ ಬೆಳಕಿಗೆ ಆರ್ಕರ್ಷಿತವಾಗುತ್ತವೆ. ರೈತರು ಸಾಮೂಹಿಕವಾಗಿ ಹೊಲದ  ಬದುಗಳಲ್ಲಿ ಬೆಂಕಿ ಹಾಕುವುದರಿಂದ ಪತಂಗಗಳನ್ನು ನಾಶಪಡಿಸಬಹುದು. ಈ ಕ್ರಮ ಬಹಳ ಉಪಯುಕ್ತ, ಸರಳ ಹಾಗೂ ಕಡಿಮೆ ಖರ್ಚಿನದು. ಪತಂಗಗಳು ಮೊಟ್ಟೆ ಇಡುವ ಮೊದಲೇ ಅವುಗಳನ್ನು ನಾಶಪಡಿಸುವುದರಿಂದ ಬೆಳೆಗೆ ಹಾನಿ ತಪ್ಪಿಸಬಹುದು.ಮಳೆ ಇಲ್ಲದಿರುವುದು ಮತ್ತು ತಾಪಮಾನ ವಾಡಿಕೆಗಿಂತ ಹೆಚ್ಚಿರುವುದು ಈ ಕೀಟದ ಬಾಧೆ ಹೆಚ್ಚಾಗಲು ಕಾರಣವಾಗಿದೆ. ಕಳೆದ ಮುಂಗಾರಿನಲ್ಲಿ ಬಿ. ಚಿತ್ತಾನಹಳ್ಳಿ, ಮಳಲಕೆರೆ, ಕಡ್ಲೇಬಾಳು, ಬಾಡ ಗ್ರಾಮದ ಭಾಗಗಳಲ್ಲಿ ಈ ಕೀಟ ಕಾಣಿಸಿತ್ತು. ಹತೋಟಿ ಕ್ರಮ ಕೈಗೊಳ್ಳದ ಕ್ಷೇತ್ರಗಳಲ್ಲಿ ತುಂಬಾ ಹಾನಿಯಾಗಿದ್ದನ್ನು ಬೆಳೆಗಾರರ ಗಮನಕ್ಕೆ ತರಲಾಗಿದೆ.ನಾಟಿ ಮುನ್ನ ಸಸಿಗಳ ಕುಡಿ ಚಿವುಟಬೇಕು ಅಥವಾ ಪ್ರೊಫೆನೋಫಾಶ್ ದ್ರಾವಣದಲ್ಲಿ ಸಸಿಗಳ ತುದಿ ಅದ್ದಿ ನಾಟಿ ಮಾಡಬೇಕು. ಈಗಾಗಲೇ ನಾಟಿ ಮಾಡಿರುವವರು ಪ್ರತಿ ಎಕರೆಗೆ 60 ಮಿ.ಲೀ. ಕೋರಾಜೆನ್ (ರನೆಕ್ಸಿಪೈರ್) ಅಥವಾ ತತ್ಸಮಾನ ಕೀಟನಾಶಕ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.ರೈತರು ಹೆಚ್ಚಿನ ಮಾಹಿತಿಗೆ, ಸಂಬಂಧಿಸಿದ ರೈತಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ನಿರ್ದೇಶಕರು ಅಥವಾ ಮಾಲತೇಶ ಪುಟ್ಟಣ್ಣವರ (ಮೊಬೈಲ್: 96117 69649) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.