ಗುರುವಾರ , ಮೇ 6, 2021
26 °C

ಬತ್ತಿದ ಕೃಷ್ಣಾ: 4 ಘಟಕ ಸ್ಥಗಿತ

ಪ್ರಜಾವಾಣಿ ವಾರ್ತೆ / ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಅಭಾವದ ಬಿಸಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೂ (ಆರ್‌ಟಿಪಿಎಸ್) ತಟ್ಟಿದೆ. ರಾಜ್ಯದ ವಿದ್ಯುತ್ ಬೇಡಿಕೆಯ ಶೇ 40ರಷ್ಟನ್ನು ಪೂರೈಸುವ ಆರ್‌ಟಿಪಿಎಸ್‌ನ ಒಟ್ಟು 8 ಘಟಕಗಳಲ್ಲಿ 3,6, 7 ಮತ್ತು 8ನೇ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ನೀರಿಲ್ಲದ ಕಾರಣ ಸ್ಥಗಿತಗೊಳಿಸಲಾಗಿದೆ. ಇದರಿಂದ  880 ಮೆಗಾವಾಟ್ ವಿದ್ಯುತ್ ಉತ್ಪಾದನೆ ಖೋತಾ ಆಗಿದೆ.

ಭಾನುವಾರ ರಾತ್ರಿ 10 ಗಂಟೆಗೆ 210 ಮೆಗಾ ವಾಟ್‌ನ 7ನೇ ಘಟಕ ಹಾಗೂ 250 ಮೆಗಾವಾಟ್ ಸಾಮರ್ಥ್ಯದ 8ನೇ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು. ನೀರಿನ ಅಭಾವ ಮತ್ತಷ್ಟು ಕಂಡುಬಂದ ಕಾರಣ ಸೋಮವಾರ ಮುಂಜಾನೆ ತಲಾ 210 ಮೆಗಾವಾಟ್ ಸಾಮರ್ಥ್ಯದ 3 ಮತ್ತು 6ನೇ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಸುಮಾರು 25 ವರ್ಷ ಹಳೆಯವಾದ 210 ಮೆಗಾವಾಟ್ ಸಾಮರ್ಥ್ಯದ 1 ಮತ್ತು 2 ನೇ ಘಟಕಗಳು ಹಾಗೂ ದಶಕಗಳ ಹಿಂದೆ ನಿರ್ಮಾಣಗೊಂಡ 4 ಮತ್ತು 5ನೇ ಘಟಕಗಳಲ್ಲಿ ಈಗ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಮಂಗಳವಾರ ಮತ್ತು ಬುಧವಾರದ ವೇಳೆಗೆ ಪರಿಸ್ಥಿತಿ ಇನ್ನೂ ಪರಿಸ್ಥಿತಿ ಗಂಭೀರವಾಗಲಿದೆ. ಈಗ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಘಟಕಗಳೂ ಯಾವುದೇ ಕ್ಷಣದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಆರ್‌ಟಿಪಿಎಸ್ ಮೂಲಗಳು ಹೇಳಿವೆ.

ಆರ್‌ಟಿಪಿಎಸ್ 8 ಘಟಕಗಳ ಒಟ್ಟು  ಉತ್ಪಾದನಾ ಸಾಮರ್ಥ್ಯ 1,720 ಮೆಗಾವಾಟ್. ವರ್ಷದುದ್ದಕ್ಕೂ ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆ ಕಾರಣದಿಂದ ಒಂದಿಲ್ಲೊಂದು ಘಟಕಗಳು ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಈಚೆಗೆ ಕಲ್ಲಿದ್ದಲು ಮತ್ತು ತಾಂತ್ರಿಕ ಸಮಸ್ಯೆ ನೀಗಿಕೊಂಡು ಆರ್‌ಟಿಪಿಎಸ್ ನಿತ್ಯ 1,400- 1,500 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಿ ಕತ್ತಲೆಯ ಭೀತಿ ಎದುರಿಸುತ್ತಿದ್ದ ರಾಜ್ಯವನ್ನು ಬೆಳಗಿಸುತ್ತಿತ್ತು. ಈಗ ಕೃಷ್ಣಾ ನದಿ ಬತ್ತಿ ನೀರಿನ ತೀವ್ರ ಅಭಾವ ಸೃಷ್ಟಿಯಾಗಿರುವುದು ಘಟಕಗಳು ಸುಸ್ಥಿತಿಯಲ್ಲಿದ್ದರೂ ವಿದ್ಯುತ್ ಉತ್ಪಾದನೆ ಮಾಡದಂಥ ಪರಿಸ್ಥಿತಿ ಬಂದಿದೆ.

ಈಗ 4 ಘಟಕಗಳು ಉತ್ಪಾದಿಸುತಿತರುವ 840 ಮೆಗಾವಾಟ್ ವಿದ್ಯುತ್ ಅನ್ನು ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ.

ಘಟಕಗಳಿಗೆ ಎಷ್ಟು ನೀರು ಬೇಕು?: ಆರ್‌ಟಿಪಿಎಸ್‌ನ  8 ಘಟಕಗಳು ಸಮರ್ಪಕ ರೀತಿ ಕಾರ್ಯನಿರ್ವಹಿಸಿ ನಿರ್ದಿಷ್ಟ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬೇಕಾದರೆ ಪ್ರತಿ ನಿತ್ಯ ಒಂದು ಲಕ್ಷ ಘನ ಮೀಟರ್(ಒಂದು ಲಕ್ಷ ಕ್ಯೂಬಿಕ್ ಮೀಟರ್) ನೀರು ಬೇಕು. ಆದರೆ, ಈಗಿನ ಸ್ಥಿತಿಯಲ್ಲಿ ಕೇವಲ 2,000 ಘನ ಮೀಟರ್‌ನಷ್ಟು ಮಾತ್ರ ನೀರು ಕೃಷ್ಣಾ ನದಿಯಿಂದ ಲಭ್ಯವಾಗುತ್ತಿರುವುದು ಆರ್‌ಟಿಪಿಎಸ್‌ಗೆ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದೆ.

ಕೃಷ್ಣಾ ನದಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಆರ್‌ಟಿಪಿಎಸ್‌ಗೆ ನೀರು ಸರಬರಾಜಿಗೆ ನಿರ್ಮಿಸಿದ ಜಾಕ್‌ವೆಲ್‌ಗೆ ಅತ್ಯಂತ ಕನಿಷ್ಠ ಪ್ರಮಾಣದ ನೀರು ನಿಲುಕುತ್ತಿದೆ. ಅದೂ ಒಂದು ತಿಂಗಳ ಹಿಂದೆ ಮುನ್ನೆಚ್ಚರಿಕೆ ಕ್ರಮವಾಗಿ ಆರ್‌ಟಿಪಿಎಸ್ ಆಡಳಿತ ವರ್ಗ ನದಿಯಲ್ಲಿಯೇ ಉಸುಕಿನ ಚೀಲದ ಗೋಡೆ ನಿರ್ಮಿಸಿ, ಜಾಕ್‌ವೆಲ್ ಹತ್ತಿರ ಸ್ವಲ್ಪ ಗುಂಡಿ ನಿರ್ಮಾಣ ಮಾಡಿದ್ದರಿಂದ ಇಲ್ಲಿಯವರೆಗೆ ನೀರು ದೊರಕಿದೆ.

20 ದಿನಗಳ ಹಿಂದೆಯೇ ನೀರಿನ ತೀವ್ರ ಅಭಾವ ಕಾಣಿಸಿತ್ತು. ಆಗ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಆರ್‌ಟಿಪಿಎಸ್ ಆಡಳಿತ ವರ್ಗ, ಕೆಪಿಸಿಯು ಪತ್ರ ಬರೆದು ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಮನವಿ ಮಾಡಿತ್ತು. ಬಳಿಕ 2 ಟಿಎಂಸಿ ನೀರು ಬಿಡಲಾಗಿತ್ತು. 15 ದಿನಗಳವರೆಗೆ ಈ ನೀರು ಆರ್‌ಟಿಪಿಎಸ್‌ನ್ನು ನೀರಿನ ಅಭಾವ ಸ್ಥಿತಿಯಿಂದ ತಪ್ಪಿಸಿತ್ತು. ಈಗ ಕೃಷ್ಣಾ ನದಿ ಬತ್ತಿದೆ.

ಮತ್ತೆ ಈ ರೀತಿ ಸಮಸ್ಯೆ ಉದ್ಭವಿಸಬಹುದು ಎಂದ ಹಿನ್ನೆಲೆಯಲ್ಲಿ ಆರ್‌ಟಿಪಿಎಸ್ ಕಾರ್ಯನಿರ್ವಾಹಕ ಅಧಿಕಾರಿಗಳು ನಾರಾಯಣಪುರ ಜಲಾಶಯ ಮತ್ತು ಆಲಮಟ್ಟಿ ಜಲಾಶಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರೂ ನೀರು ಬಿಡುಗಡೆಯಾಗಿಲ್ಲ.

ಸಚಿವರ ಭರವಸೆ ಹುಸಿ: ಮಹಾರಾಷ್ಟ್ರದ ಕೊಯ್ನಾ ನದಿಯಿಂದ ಅಲ್ಲಿನ ಸರ್ಕಾರ ನೀರು ಬಿಡುಗಡೆ ಮಾಡಲಿದೆ. ಈಗಗಲೇ ನಾರಾಯಣಪುರ ಜಲಾಶಯದಿಂದ ಆರ್‌ಟಿಪಿಎಸ್‌ಗೆ ನೀರು ಕೊರತೆ ಆಗದಂತೆ ನೋಡಿಕೊಳ್ಳಲು ನೀರು ಹರಿಸಲಾಗಿದೆ. ಮೇ 31ರವರೆಗೂ ಆರ್‌ಟಿಪಿಎಸ್‌ಗೆ ನೀರಿನ ಸಮಸ್ಯೆ ಇಲ್ಲ ಎಂದು ಐದು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಈಗ ಆರ್‌ಟಿಪಿಎಸ್ ನೀರಿನ ತೀವ್ರ ಅಭಾವ ಸ್ಥಿತಿಗೆ ಸಿಲುಕಿರುವುದು ಸಚಿವರ ಭರವಸೆ ಹುಸಿ ಮಾಡಿದೆ.

ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುವ ಸುಮಾರು 5 ಸಾವಿರ ನೌಕರರು, ಸಿಬ್ಬಂದಿ ವರ್ಗದ ಕುಟುಂಬದವರು ವಾಸಿಸುವ ಶಕ್ತಿನಗರ ಕಾಲೊನಿಗೂ ತಟ್ಟಿದೆ. ಕಾಲೊನಿಗೂ ನೀರು ಪೂರೈಕೆ ಆಗುತ್ತಿಲ್ಲ. ಅದೇ ರೀತಿ 3 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲಾ ಕೇಂದ್ರವಾದ ರಾಯಚೂರಿನ ಶೇ 70ರಷ್ಟು ಭಾಗಕ್ಕೆ ಕೃಷ್ಣಾ ನದಿಯಿಂದಲೇ ನೀರು ಪೂರೈಕೆ ಆಗುತ್ತದೆ. ನದಿಯಲ್ಲಿ ನೀರು ಕಡಿಮೆ ಆಗಿದ್ದು, ನಗರಸಭೆ ಕೃಷ್ಣಾ ನದಿಯಲ್ಲಿ ನಿರ್ಮಿಸಿದ ಜಾಕ್‌ವೆಲ್‌ಗೂ ನೀರು ದೊರಕುತ್ತಿಲ್ಲ. ಸೋಮವಾರ ನಗರಸಭೆಯು ಜಾಕ್‌ವೆಲ್ ಸುತ್ತ ಉಸುಕಿನ ಚೀಲದ ಗೋಡೆ ನಿರ್ಮಿಸಿ ಜಾಕ್‌ವೆಲ್ ಬಳಿ ಕನಿಷ್ಠ ಪ್ರಮಾಣದ ನೀರು ಸಂಗ್ರಹಣೆಗೆ ಪ್ರಯತ್ನ ನಡೆಸುತ್ತಿರುವುದು ಕಂಡುಬಂದಿತು.

ನದಿಗೆ ನೀರು: ನಿಷೇಧಾಜ್ಞೆ

ರಾಯಚೂರು:  ಆರ್‌ಟಿಪಿಎಸ್‌ನ ನೀರಿನ ಕೊರತೆ ನೀಗಿಸಲು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1,000 ಕ್ಯೂಸೆಕ್ ನೀರು ಹರಿಸಲಾಗಿದೆ. ನದಿ ಪಾತ್ರದ ರೈತರು ಪಂಪ್‌ಸೆಟ್ ಮೂಲಕ ನೀರು ಎತ್ತುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ತಿಳಿಸಿದ್ದಾರೆ.

ಲಿಂಗಸುಗೂರು ಹಾಗೂ ದೇವದುರ್ಗ ತಾಲ್ಲೂಕುಗಳಲ್ಲಿ ಕೃಷ್ಣಾ ನದಿ ಪಾತ್ರದ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದಿಶೆಯಲ್ಲಿ ಇದೇ 26 ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನೀರು ಪೋಲಾಗದೆ ನೇರವಾಗಿ ಆರ್‌ಟಿಪಿಎಸ್ ವಿದ್ಯುತ್ ಸ್ಥಾವರಕ್ಕೆ ತಲುಪಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.