ಹಾಸನ: ಹೊಳೆನರಸೀಪುರ ತಾಲ್ಲೂಕು ತೆವಡಹಳ್ಳಿ ತಲುಪಿದಾಗ ಗೋದೂಳಿ ಸಮಯ. ದನ, ಕರು, ಕುರಿ ಮಂದೆ ಹೊಡೆದುಕೊಂಡು ಹಟ್ಟಿಗೆ ವಾಪಸಾಗುತ್ತಿದ್ದ ರೈತಾಪಿ ಜನ. ಕಿತ್ತುಹೋದ ರಸ್ತೆಗೆ ಸಂಜೆ ೬ ಗಂಟೆಯಾದ ಮೇಲೂ ನಿಷ್ಠೆಯಿಂದ ಡಾಂಬರು ಹಾಕಿಸುತ್ತಿದ್ದ ಗುತ್ತಿಗೆದಾರ. ಚುನಾವಣೆ ಬಂತಲ್ಲ ಎಂದು ನಕ್ಕರು ಜತೆಯಲ್ಲಿದ್ದ ವರದಿಗಾರ ಮಿತ್ರರು.

ಚುನಾವಣೆ ಪ್ರಶ್ನೆ ಎತ್ತುತ್ತಿದ್ದಂತೆ ಅಣೆಕಟ್ಟೆ ಗೇಟ್ ತೆರೆದಂತೆ ಹೊರನುಗ್ಗಿತು ತೆವಡಹಳ್ಳಿ ಜನರಲ್ಲಿ ಮಡುಗಟ್ಟಿದ್ದ ಆಕ್ರೋಶ. ‘ಈಗ್ಯಾಕೆ ಬಂದ್ರಿ. ಮಳೆಗಾಲದಲ್ಲಿ ಬರಬೇಕಿತ್ತು. ದನಾನೂ ವಾಸ ಮಾಡಕಿಲ್ಲ. ಹಂಗಿರತೈತೆ ಇಲ್ಲಿ’ ಎಂದರು ಸುರೇಶ್. ಅದಕ್ಕೆ ದನಿಗೂಡಿಸಿದರು ಮಂಜುನಾಥ, ರಘು.

ಗೊರೂರಿನಿಂದ ಹೊರಟ ಹೇಮಾವತಿ ಬಲದಂಡೆ ನಾಲೆ ಈ ಗ್ರಾಮದಲ್ಲಿ ಹಾದುಹೋಗಿದೆ. ಗ್ರಾಮದ ತಗ್ಗುಪ್ರದೇಶದಲ್ಲಿ ಕೆರೆ. ಮಳೆಗಾಲ ಬಂತು ಅಂದರೆ ಈ ಜನ ಗಡಗಡ ನಡುಗುತ್ತಾರೆ. ಗ್ರಾಮದ ಮನೆಗಳ ಸುತ್ತ ನೀರು ನಿಲ್ಲುತ್ತದೆ. ಗೋಡೆಯಲ್ಲ ಥಂಡಿ. ರೆಡ್ ಆಕ್ಸೈಡ್ ನೆಲದಲ್ಲೂ ಜಿನುಗುವ ನೀರು.

೮೦ರ ದಶಕದಲ್ಲಿ ಹೇಮಾವತಿ ಅಣೆಕಟ್ಟೆಗೆ ಕೆಲಸ ಆರಂಭವಾಗುವಾಗ ಪುನರ್ವಸತಿ ಕಲ್ಪಿಸಬೇಕಾದ ಗ್ರಾಮಗಳ ಪಟ್ಟಿಯಲ್ಲಿ ತೆವಡಹಳ್ಳಿ ಹೆಸರು ಮೇಲೆಯೇ ಇತ್ತು. ಮೂರು ದಶಕಗಳಾದರೂ ಪುನರ್ವಸತಿ ಈ ಗ್ರಾಮದ ಜನರಿಗೆ ಕನಸಾಗಿಯೇ ಉಳಿದಿದೆ. ಜಾತಿ ರಾಜಕೀಯವೇ ಇದಕ್ಕೆಲ್ಲ ಕಾರಣ ಎಂದು ನೇರವಾಗಿ ಆರೋಪಿಸುತ್ತಾರೆ ಗ್ರಾಮದ ಜನ.

ಈ ಗ್ರಾಮದಲ್ಲಿ ಶೇ ೯೯ರಷ್ಟು ಜನ ಕುರುಬರು. ಇನ್ನುಳಿದವರು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರು. ಗ್ರಾಮದ ಪುನರ್ವಸತಿಗಾಗಿ ಮೇಲಿಂದ ಮೇಲೆ ನೀಡಿದ ಮನವಿಗಳು ಕಸದ ಬುಟ್ಟಿ ಸೇರಿವೆ. ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬೇಸತ್ತು ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೂ ಮುಂದಾಗಿದ್ದರು ಈ ಜನ.

ಮಾತನಾಡುತ್ತಿದ್ದಂತೆ ಅವರ ಸಿಟ್ಟು ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣ ಅವರತ್ತ ತಿರುಗಿತ್ತು. ತಮ್ಮ ಬೆಂಬಲಿಗರು ಇದ್ದಾರೆ, ಒಕ್ಕಲಿಗರು ಇದ್ದಾರೆ ಎಂಬ ಕಾರಣಕ್ಕೆ ನೀರು ಉಕ್ಕುವ ಸಮಸ್ಯೆ ಇಲ್ಲದ ಗ್ರಾಮಗಳನ್ನು ಸ್ಥಳಾಂತರಿಸಿದ್ದಾರೆ. ನಾವೆಲ್ಲ ಕುರುಬರೆಂಬ ಕಾರಣಕ್ಕೆ ಈ ಶಿಕ್ಷೆ ಅನುಭವಿಸಬೇಕಿದೆ ಎಂಬ ವಿಷಾದವೂ ಇತ್ತು.

ಈ ಬಾರಿ ವೋಟ್ ಯಾರಿಗೆ ಹಾಕುತ್ತೀರಾ ಎಂದರೆ, ಇನ್ನೂ ತೀರ್ಮಾನಿಸಿಲ್ಲ. ಅನ್ನಭಾಗ್ಯ ಕೊಟ್ಟ ಸಿದ್ಧರಾಮಯ್ಯ ಅವರ ಕೈಬಿಡಲ್ಲ ಎಂಬ ಉತ್ತರ. ಬಿಜೆಪಿ ಅಭ್ಯರ್ಥಿ ಎಚ್.ಆರ್. ವಿಜಯಶಂಕರ್ ಕುರುಬರಲ್ಲವೇ ಅಂದರೆ, ಸಿದ್ದರಾಮಯ್ಯ ಅವರಿಗಿಂತ ದೊಡ್ಡವರು ಇದ್ದಾರಾ ಎಂಬ ಮರುಪ್ರಶ್ನೆ.

ತೆವಡಹಳ್ಳಿಗೆ ಹೋಗುವ ದಾರಿಯಲ್ಲೇ ಇರುವ ಸೂರನಹಳ್ಳಿಯ ವಕೀಲ ಎಸ್. ಎಚ್. ಮೋಹನ್ ಕುಮಾರ್, ಸ್ಥಳೀಯ ರಾಜಕೀಯದ ಮತ್ತೊಂದು ಮುಖ ಅನಾವರಣಗೊಳಿಸಿದರು. ಹೊಳೆನರಸೀಪುರಕ್ಕೆ ತಾಗಿಕೊಂಡೇ ಇರುವ ಫಲವತ್ತಾದ ನೀರಾವರಿ ಜಮೀನಿನ ೮೬ ಎಕರೆಯನ್ನು ಆಶ್ರಯ ಯೋಜನೆಗಾಗಿ ಅಧಿಸೂಚನೆ ಹೊರಡಿಸಿದ್ದರ ವಿರುದ್ಧ ಹೆಚ್ಚೂ, ಕಡಿಮೆ ಎರಡು ದಶಕಗಳ ಹೋರಾಟ ನಡೆಸಿದ್ದನ್ನು ಎಳೆ, ಎಳೆಯಾಗಿ ಬಿಡಿಸಿಟ್ಟರು.

ಗಾಯದ ಮೇಲೆ ಬರೆ ಎಳೆದಂತೆ ಈ ವಿವಾದಿತ ಜಮೀನಿನ ಮಧ್ಯೆಯೇ ಹೊಳೆನರಸೀಪುರ- ಚನ್ನರಾಯಪಟ್ಟಣ ರಸ್ತೆಯನ್ನು ನೇರವಾಗಿಸಲು ಕಾಮಗಾರಿ ಆರಂಭಿಸಿದ್ದನ್ನು ತೋರಿಸಿದರು. ಈ ಹೋರಾಟದಿಂದಾಗಿ ತಾವು ಮತ್ತು ತಮ್ಮ ಕುಟುಂಬ ಅನುಭವಿಸಿದ ಕಿರಿಕಿರಿಯನ್ನು ಹೇಳುವಾಗ ಅವರ ದನಿಯಲ್ಲಿ ನೋವಿತ್ತು.

ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರಿಂದ ಈ ಸಂಕಟ ಅನುಭವಿಸಬೇಕಾಗಿದೆ. ಕಾಂಗ್ರೆಸ್ ನಾಯಕರ ನಿರ್ಲಕ್ಷ್ಯ, ಚುನಾವಣೆ ಬಂದಾಗ ಬೂತ್‌ಗಳಿಗೆ ನೇಮಿಸಲೂ ಕಾರ್ಯಕರ್ತರ ಕೊರತೆ ಇರುವುದು, ಕೊನೆಯ ಕ್ಷಣದಲ್ಲಿ ತಮ್ಮ ವಿರೋಧಿ ಅಲೆಯನ್ನೂ ಸಹ ಮತಗಳಾಗಿ ಪರಿರ್ವತಿಸುವ ಜೆಡಿಎಸ್ ನಾಯಕರ ಚಾಣಾಕ್ಷತನದಿಂದ ಕಾಂಗ್ರೆಸ್ ಚುನಾವಣೆಯಿಂದ, ಚುನಾವಣೆಗೆ ದುರ್ಬಲವಾಗುತ್ತ ಬಂತು. ಪುಟ್ಟಸ್ವಾಮಿಗೌಡರ ನಿಧನದ ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವರ್ಚಸ್ಸಿಗೆ ಸರಿ ಹೊಂದುವ ಎದುರಾಳಿಯನ್ನು ನಿಲ್ಲಿಸಲು ಪಕ್ಷ ವಿಫಲವಾಯಿತು. ಅದು ಸಹ ಗೌಡರ ಸರಣಿ ಗೆಲುವಿಗೆ ಕಾರಣ ಎಂಬ ವಿವರಣೆ ಅವರದ್ದು.

ಜಿಲ್ಲಾ ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳುವಂತೆ, ಕಾಂಗ್ರೆಸ್ ಹೈಕಮಾಂಡ್ ಹಾಸನ ಜಿಲ್ಲೆಯನ್ನು ನಿರ್ಲಕ್ಷಿಸಿರುವುದು ಪಕ್ಷದ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಡಕಿದೆ ಎನ್ನುತ್ತಲೇ ಅವರ್‍ಯಾರು ಇತ್ತ ತಲೆ ಹಾಕುತ್ತಲೇ ಇಲ್ಲ. ಪ್ರತಿ ಸಲ ಚುನಾವಣೆ ಬಂದಾಗಲೂ ಮಾಜಿ ಪ್ರಧಾನಿಯನ್ನು ಸೋಲಿಸುವುದುಂಟೆ, ಅವರ ಶಕ್ತಿಯ ಮುಂದೆ ನಾವ್ಯಾರು ಇತ್ಯಾದಿ ಭಾವನೆಗಳನ್ನು ಕಾಂಗ್ರೆಸ್ ಮುಖಂಡರೇ ಹರಿಬಿಡುತ್ತಾರೆ.

ಸಹಜವಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗುತ್ತದೆ. ಬೆಲ್ಲಕ್ಕೆ ಮುತ್ತುವ ಇರುವೆಯಂತೆ ಕಾಂಗ್ರೆಸ್ ಕಾರ್ಯಕರ್ತರು, ಬೂತ್ ಏಜೆಂಟರುಗಳು ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಕೆಲಸ ಮಾಡುತ್ತಾರೆ. ದೇವೇಗೌಡರನ್ನು ವೈಯಕ್ತಿಕವಾಗಿ ಇಷ್ಟಪಡದವರು ಸಹ ತಮ್ಮ ಮತ ವ್ಯರ್ಥವಾಗಬಾರದು ಎಂದು ಜೆಡಿಎಸ್ಗೇ ಮತ ಹಾಕುತ್ತಾರೆ ಎನ್ನುತ್ತಾರೆ ಈ ನಾಯಕ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ, ರೇವಣ್ಣ ಅವರನ್ನು ಹಾಡಿಹೊಗಳಿದ್ದರು. ಮತ್ತೊಬ್ಬ ಸಚಿವರು ಹಾಸನಕ್ಕೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರನ್ನು ಮಾತನಾಡಿಸದೇ ದೇವೇಗೌಡರ ಕುಟುಂಬದ ಜತೆ ಊಟ ಮಾಡಿ ಹೋದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಹಾಸನಕ್ಕೆ ಬಂದದ್ದು ಒಂದೇ ಬಾರಿ. ನಾಯಕರ ನಡವಳಿಕೆಯೇ ಹೀಗಿರುವಾಗ ಕಾರ್ಯಕರ್ತರಿಂದ ನಿಷ್ಠೆ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು ಅವರು.

ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು, ಗೌಡರ ಅಭಿವೃದ್ಧಿ ರಾಜಕೀಯದ ಮತ್ತೊಂದು ಮುಖ ಪರಿಚಯಿಸಿದರು. ಸಂಸದರ ನಿಧಿಯಿಂದ ದೇವೇಗೌಡರು ಹಳ್ಳಿ, ಹಳ್ಳಿಗೆ ಜಾತಿಗೊಂದರಂತೆ ೨-೩ ಸಮುದಾಯ ಭವನ ಕಟ್ಟಿಸಿಕೊಟ್ಟಿದ್ದಾರೆ. ಕೆಲ ಸಮುದಾಯ ಭವನಗಳು ಅರ್ಧಕ್ಕೇ ನಿಂತಿವೆ. ಜೆಡಿಎಸ್ ಬೆಂಬಲಿಸುವ ಗುತ್ತಿಗೆದಾರರಿಗೆ ಈ ಕಾಮಗಾರಿ ಕೊಡಿಸಲಾಗುತ್ತದೆ. ಅಲ್ಲಿಗೆ ಆ ಹಣ ಮತ್ತೆ ಪಕ್ಷಕ್ಕೆ ಸೇರುತ್ತದೆ ಎಂಬುದು ಅವರ ಆರೋಪ.

ಚುನಾವಣೆ ಮಾತೆತ್ತಿದ ಕೂಡಲೇ ಚನ್ನರಾಯಪಟ್ಟಣದ ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ ಅವರಲ್ಲಿ ಆವೇಶ ಉಕ್ಕಿತ್ತು. ಕಳೆದ ಚುನಾವಣೆಯಲ್ಲಿ ಚನ್ನರಾಯಪಟ್ಟಣದಲ್ಲಿ ದೇವೇಗೌಡರ ಸಂಬಂಧಿ ಸಿ. ಎನ್. ಬಾಲಕೃಷ್ಣ ಅವರಿಗೆ ಟಿಕೆಟ್ ಕೊಡಲು ಜೆಡಿಎಸ್ ನಿಷ್ಠಾವಂತ ಪುಟ್ಟೇಗೌಡರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅವರೀಗ ಕಾಂಗ್ರೆಸ್ ಅಪ್ಪಿಕೊಂಡಿದ್ದಾರೆ.

‘ಹಳ್ಳಿ, ಹಳ್ಳಿಯ ಹಾಲು ಉತ್ಪಾದಕರ ಸಂಘಗಳು, ಸಹಕಾರ ಸಂಘಗಳು, ಸಕ್ಕರೆ ಕಾರ್ಖಾನೆ ಎಲ್ಲವೂ ದೇವೇಗೌಡರ ಕುಟುಂಬದ ನಿಷ್ಠಾವಂತರ ಕೈಯಲ್ಲಿ ಇವೆ. ಅವರಿಂದ ಶಿಫಾರಸು ತಂದರೆ ಮಾತ್ರ ಸಾಲ ಸಿಗುತ್ತದೆ. ತಮ್ಮದೇ ಪಕ್ಷದಲ್ಲೋ, ವಿರೋಧ ಪಕ್ಷದಲ್ಲೋ ಮತ್ತೊಬ್ಬ ನಾಯಕ ಬೆಳೆಯುತ್ತಿದ್ದಾನೆ ಅಂದರೆ ಆತನನ್ನು ಹಣಿಯಲು ಯಾವ ಮಾರ್ಗವನ್ನಾದರೂ ಉಪಯೋಗಿಸುತ್ತಾರೆ.

ಬಿ. ಶಿವರಾಂ ಅವರಂತಹ ಕಾಂಗ್ರೆಸ್ ನಾಯಕರನ್ನು ಹಿಮ್ಮೆಟ್ಟಿಸಲು ಪುನರ್‌ವಿಂಗಡಣೆಯ ನೆಪದಲ್ಲಿ ಗಂಡಸಿ ಕ್ಷೇತ್ರವನ್ನು ಒಡೆಯಲಾಯಿತು. ತಮ್ಮದೇ ಪಕ್ಷದಲ್ಲಿದ್ದ ಜವರೇಗೌಡ, ಸ್ವತಃ ಸಿದ್ದರಾಮಯ್ಯ ಅವರನ್ನು ಹೀಗೆಯೇ ಹಣಿದರು ಎನ್ನುವಾಗ ಅವರ ದನಿಯಲ್ಲಿ ನೋವಿತ್ತು. ಹಾಸನದ ಕಾಲೇಜು ಪ್ರಾಂಶುಪಾಲರೊಬ್ಬರು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು.

’ದೇವೇಗೌಡರಿಂದಾಗಿಯೇ ಹಾಸನ ಅಭಿವೃದ್ಧಿ ಕಂಡಿದೆ. ಇಲ್ಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಸರ್ಕಾರಿ ಎಂಜನಿಯರಿಂಗ್ ಕಾಲೇಜು ಎಲ್ಲವನ್ನೂ ತಂದವರು ದೇವೇಗೌಡರು. ಇತರ ಜಿಲ್ಲೆಗಳ ನಾಯಕರಂತೆ ತಮ್ಮದೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಳ್ಳಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಲವು ಮಹಿಳಾ ಕಾಲೇಜು ಸೇರಿದಂತೆ ೨೯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಜಿಲ್ಲೆಗೆ ತಂದರು.

ಸಣ್ಣ, ಸಣ್ಣ ಗ್ರಾಮಗಳ ಹೆಣ್ಣುಮಕ್ಕಳು ಈಗ ಕಾಲೇಜು ಮುಖ ನೋಡುವಂತಾಗಿದೆ. ಹೋಬಳಿ ಮಟ್ಟದಲ್ಲೂ ಪಾಲಿಟೆಕ್ನಿಕ್ ಕಾಲೇಜು ತೆರೆದಿದ್ದಾರೆ. ಮಾಜಿ ಪ್ರಧಾನಿ ಪ್ರತಿನಿಧಿಸುವ ಕ್ಷೇತ್ರ ನಮ್ಮದು. ಅವರನ್ನು ಸೋಲಿಸಿ ಅಪಖ್ಯಾತಿ ಕಟ್ಟಿಕೊಳ್ಳುವುದುಂಟೆ’ ಎಂದು ಪ್ರಶ್ನಿಸಿದರು.

ನೀತಿ ಸಂಹಿತೆ ಇದೆ, ಮಾತನಾಡುವುದಿಲ್ಲ ಎನ್ನುತ್ತಲೇ ಗೌಡರ ಗುಣಗಾನ ಆರಂಭಿಸಿದ ಸರ್ಕಾರಿ ನೌಕರರೊಬ್ಬರು, ಬೆಂಗಳೂರು- ಹಾಸನ ನಡುವಣ ಹೆದ್ದಾರಿಯ ಶ್ರೇಯ ಪೂರ್ಣವಾಗಿ ಗೌಡರಿಗೇ ಸಲ್ಲಬೇಕು ಎಂದರು.

ಗೌಡರು ಪ್ರಧಾನಿಯಾದ ತಕ್ಷಣ ಹೆಚ್ಚು ಕಡಿಮೆ ಮುಚ್ಚೇ ಹೋಗುತ್ತಿದ್ದ ಅರಸೀಕೆರೆ- ಹಾಸನ ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಲು ಆದೇಶಿಸಿದರು. ಕೇವಲ ಎಂಟು ತಿಂಗಳ ದಾಖಲೆ ಅವಧಿಯಲ್ಲಿ ಈ ಕೆಲಸ ಮುಗಿಯಿತು. ಇಲ್ಲಿಗೆ ವಿಶ್ವದರ್ಜೆಯ ಬಸ್ ನಿಲ್ದಾಣ ಬಂತು. ಕಾವೇರಿ, ಕೃಷ್ಣಾ ವಿಚಾರ ಬಂದಾಗ ರಾಜ್ಯದ ಪರ ಧ್ವನಿ ಎತ್ತಿದ್ದು ಯಾರು? ಗೌಡರು ಮಾಡಿರುವ ಅಭಿವೃದ್ಧಿಯನ್ನು ಈಗ ವಿರೋಧಿಗಳು ಹಳಿಯುತ್ತಿದ್ದಾರೆ. ಅವರು ರಾಜಕೀಯವಾಗಿ ಬೆಳೆಯುವ ಮುನ್ನ ೪೦ ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ನಾಯಕರು ಜಿಲ್ಲೆಗೇನು ಮಾಡಿದ್ದರು? ಎನ್ನುತ್ತ ಮುಖ ನೋಡಿದರು.

ಜಿಲ್ಲೆಯ ಜನರಲ್ಲಿ ರಾಜಕೀಯ ಪ್ರಜ್ಞೆ ದಟ್ಟವಾಗಿದೆ. ಆದರೆ, ಆ ರಾಜಕೀಯ ಪ್ರಜ್ಞೆ ಅಭಿವೃದ್ಧಿಯತ್ತ ತುಡಿಯುವಂತೆ ಮಾಡುತ್ತಿಲ್ಲ. ಬದಲಾಗಿ ಜಾತಿ ಲೆಕ್ಕಾಚಾರ, ಚುನಾವಣೆ ಸಮಯದಲ್ಲಿ ಮಾಡಿಕೊಳ್ಳಬಹುದಾದ ಕಾಸು ಇತ್ಯಾದಿಗಳತ್ತಲೇ ಅವರ ಕಣ್ಣು. ಹಾಸನ, ಹೊಳೆನರಸೀಪುರ, ಬೇಲೂರು, ಹಳೇಬೀಡು ಸುತ್ತಿಬರುವ ಹೊತ್ತಿಗೆ ಮತ್ತೆ, ಮತ್ತೆ ಕೇಳಿಬರುತ್ತಿದ್ದುದು ಒಂದೇ ದನಿ. ಬಿಜೆಪಿ ಬಿ.ಬಿ. ಶಿವಪ್ಪ ಅವರಿಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದೆ ಎಂಬ ಗೊಣಗು, ಇಲ್ಲವೇ ಜಿಲ್ಲೆಯಲ್ಲಿ ದೇವೇಗೌಡರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಹೆಮ್ಮೆ ಮಿಶ್ರಿತ ಅಸಮಾಧಾನ.

ಅಪರೂಪಕ್ಕೆ ಎಂಬಂತೆ ಈ ಬಾರಿ ಸ್ಥಳೀಯ ಕಾಂಗ್ರೆಸ್ ನಾಯಕರೆಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನರಲ್ಲಿ ಕಾಣುತ್ತಿರುವ ಬದಲಾವಣೆಯ ತುಡಿತವನ್ನು ಅವರೆಲ್ಲ ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ಯಶಸ್ಸು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.