ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು–ಬೇಸಾಯದ ಕೃಷಿಕನ ಆಪ್ತ–ಅರ್ಥಪೂರ್ಣ ಚಿತ್ರಣ

ವಿಮರ್ಶೆ
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬದುಕು ಬೇಸಾಯ (ಸಾವಯವ ಕೃಷಿಕನ ಮಹಾನ್ ಪಯಣ)
ದಾಖಲಾತಿ–ನಿರೂಪಣೆ:
ವಿ.ಗಾಯತ್ರಿ
ಪ್ರ: ಇನ್‌ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆ್ಯಕ್ಷನ್, ನಂ. 22, 5ನೇ ಕ್ರಾಸ್, ಮೈಖೇಲ್ ಪಾಳ್ಯ, 2ನೇ ಹಂತ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು– 560 075,

ಮಳೆಯಾಶ್ರಿತ ಕೃಷಿ ಮಾಡುವವರು ರೈತರೇ ಅಲ್ಲ ಎಂಬ ಭ್ರಮೆಯನ್ನು ಪರೋಕ್ಷವಾಗಿ ಮೂಡಿಸಿದ್ದು ‘ಹಸಿರು ಕ್ರಾಂತಿ’. ಅಧಿಕ ಆಹಾರ ಉತ್ಪಾದನೆ ಹೆಸರಿನಲ್ಲಿ ಅರವತ್ತರ ದಶಕದಲ್ಲಿ ರೈತರ ಹೊಲಕ್ಕೆ ಕಾಲಿಟ್ಟ ಈ ಕ್ರಾಂತಿ, ಮೂರ್ನಾಲ್ಕು ದಶಕಗಳಲ್ಲಿ ಮಾಡಿದ ಅನಾಹುತಗಳು ಒಂದೆರಡಲ್ಲ. ಆಹಾರ ಉತ್ಪಾದನೆ ಹೆಚ್ಚಾಯಿತು ಎಂದು ಹಸಿರು ಕ್ರಾಂತಿಯನ್ನು ಅಪ್ಪಿ ಮುದ್ದಾಡುವವರು ಅದು ರೈತರನ್ನು ದಿಕ್ಕೆಡಿಸಿದ್ದು, ಆಹಾರ ವಿಷಮಯವಾಗಿಸಿದ್ದನ್ನು ಜಾಣತನದಿಂದ ಪಕ್ಕಕ್ಕೆ ಸರಿಸುತ್ತಾರೆ.

ಸಾಂಪ್ರದಾಯಿಕ ವಿಧಾನದಿಂದ ಅಧಿಕ, ಅತ್ಯಧಿಕ, ಇನ್ನಷ್ಟು, ಮತ್ತಷ್ಟು ಎಂಬ ದಾರಿಯತ್ತ ಹೊರಳಿದ ಭಾರತದ ಕೃಷಿ ಲೋಕದ ಪಲ್ಲಟಕ್ಕೆ ಡಿ.ಡಿ. ಭರಮಗೌಡ್ರ ಸಾಕ್ಷಿಯಾಗಿದ್ದರು (ಊರು ಯಳವತ್ತಿ. ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲೆ). ಅವರು ನಡೆದ ಕೃಷಿ ಬದುಕಿನ ದಾರಿಯನ್ನು ‘ಬದುಕು– ಬೇಸಾಯ’ ಕೃತಿ ಸಮಗ್ರವಾಗಿ ಕಟ್ಟಿಕೊಡುತ್ತದೆ. ಹೆಚ್ಚು ನೀರು – ರಾಸಾಯನಿಕ ಒಳಸುರಿ ಬಳಸಿ, ಹೆಚ್ಚೆಚ್ಚು ಇಳುವರಿ ತೆಗೆಯುವುದೇ ಸಾಧನೆ ಎಂದು ಪ್ರತಿಬಿಂಬಿಸುವ ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ನಿಲುವಿಗೆ ಎದುರಾಗಿ ಹೆಜ್ಜೆ ಹಾಕಿದ್ದು ಭರಮಗೌಡ್ರ.

ಮಳೆಯಾಶ್ರಯದಲ್ಲಿ ಎಷ್ಟೆಲ್ಲ ಬೆಳೆಗಳನ್ನು ಹೇಗೆಲ್ಲ ಬೆಳೆಯಬಹುದು? ಅದು ಭಾರತದ ರೈತರಿಗೆ ಹೇಗೆಲ್ಲ ಪ್ರಯೋಜನವಾದೀತು ಎಂಬುದನ್ನು ಅವರ ಆಡುಭಾಷೆಯಲ್ಲೆ ವಿವರಿಸಲಾಗಿದೆ (ನಿರೂಪಣೆ: ವಿ.ಗಾಯತ್ರಿ). ಭರಮಗೌಡ್ರ ಬದುಕಿದ್ದಾಗಲೇ ಈ ಪುಸ್ತಕ ಪ್ರಕಟವಾಗಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಆಗಿರಲಿಲ್ಲ. ಅವರ ಸ್ಮರಣೆಯಲ್ಲಿ ‘ಇಕ್ರಾ’ ಇಚೆಗಷ್ಟೇ ಇದನ್ನು ಬಿಡುಗಡೆ ಮಾಡಿದೆ.

ಭರಮಗೌಡ್ರ ಕೃಷಿ ಜೀವನ ಚರಿತ್ರೆಯನ್ನು ‘ಬದುಕು’ ಹಾಗೂ ‘ಬೇಸಾಯ’ ಎಂದು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರಿಗೆ ಸಾಂಪ್ರದಾಯಿಕ ಕೃಷಿ ಲೋಕದ ಅರಿವು ಮೊದಲಿನಿಂದಲೂ ಇತ್ತು. ಅವರ ತಾರುಣ್ಯದ ದಿನಗಳಲ್ಲಿ ಚಾಲ್ತಿಗೆ ಬಂದ ರಾಸಾಯನಿಕ ಕೃಷಿ ವಿಧಾನಕ್ಕೆ ಮನಸೋತು, ಅದನ್ನು ತಮ್ಮ ಜಮೀನಿನಲ್ಲಿ ಅಳವಡಿಸಿದರು. ಒಂದೂವರೆ ದಶಕದ ಕಾಲ ಆ ಕೃಷಿ ಮಾಡಿ, ಕೈಸುಟ್ಟುಕೊಂಡು ಪರ್ಯಾಯ ಮಾರ್ಗದ ಹುಡುಕಾಟ ಆರಂಭಿಸಿದರು. ಆಗ ಅವರಿಗೆ ಕಂಡಿದ್ದು ಸಾವಯವ ಕೃಷಿ. ಸ್ವಲ್ಪ ಅನುಮಾನದಿಂದಲೇ ಅದರ ಬೆನ್ನತ್ತಿ ಹೊರಟರು. ಅದು ಪರಿಹಾರವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಆ ಸಮಯದಲ್ಲಿ ಸಾವಯವ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ಬರ್ನಾರ್ಡ್ ಡಿಕ್ಲರ್ಕ್, ಭಾಸ್ಕರ್ ಸಾವೆ, ಭರತ್ ಮನ್ಸಾಟ, ಕವಿತಾ ಮುಖಿ ಇತರರು ಮಾಡುತ್ತಿದ್ದ ಸಾವಯವ ಕೃಷಿಯಿಂದ ಪ್ರಭಾವಿತರಾದರು. ಅದನ್ನು ತಮ್ಮ ಹೊಲದಲ್ಲಿ ಅಳವಡಿಸಲು ಮುಂದಾದರು. ‘ಬೇಸಾಯ’ ಭಾಗವೆಲ್ಲ ಅವರು ಅನುಸರಿಸುತ್ತಿದ್ದ ಕೃಷಿ ವಿಧಾನ ವಿವರಣೆಗೆ ಮೀಸಲು. ನೀರಾವರಿ ಸೌಲಭ್ಯ ಸುಲಭವಾಗಿ ದಕ್ಕಿದಾಗಿನಿಂದ ಬಹುತೇಕ ಕಣ್ಮರೆಯಾಗಿ ಹೋಗಿರುವ ಮಳೆಯಾಶ್ರಯ ವ್ಯವಸಾಯ ಪದ್ಧತಿಯನ್ನು ಗೌಡರು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

‘ಸಾವಯವ ಕೃಷಿ ಎಂದರ ಮತ್ತೇನೋ ಬೇರೆ ವಿಧಾನವಲ್ಲ; ಹಸಿರು ಕ್ರಾಂತಿ ಬರುವುದಕ್ಕೂ ಮೊದಲು ನಮ್ಮಲ್ಲಿ ಇದ್ದ ಬೇಸಾಯವದು’ ಎನ್ನುತ್ತಾರೆ. ಅಧಿಕ ಒಳಸುರಿ ಬೇಡುವ ರಾಸಾಯನಿಕ ಕೃಷಿಗೆ ವ್ಯತಿರಿಕ್ತವಾಗಿ ಸಾವಯವ ಕೃಷಿ ಇದೆ. ಅದರಲ್ಲಿ ಒಳಗೊಳ್ಳುವ ಮಳೆನೀರು ಸಂಗ್ರಹ, ಕೃಷಿಹೊಂಡ, ಭೂಹೊದಿಕೆ, ಜವಾರಿ ತಳಿ ಬಿತ್ತನೆ ಬೀಜ, ಹಸಿರುಗೊಬ್ಬರ, ಕೃಷಿ ಅರಣ್ಯ ಇತ್ಯಾದಿ ಅಂಶಗಳನ್ನು ವಿವರವಾಗಿ ತಿಳಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ರೈತನ ಸ್ವಾವಲಂಬಿ ಬದುಕಿಗೆ ಮೂಲಾಧಾರವಾದ ಮಿಶ್ರ ಬೆಳೆ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಿ, ಅದರಲ್ಲಿ ಲಾಭ ಕಂಡ ಬಗೆಯನ್ನು ಬಿಚ್ಚಿಟ್ಟಿದ್ದಾರೆ.

ಒಂದೊಮ್ಮೆ ರಾಸಾಯನಿಕ ಕೃಷಿ ಅನುಸರಿಸಿ ಕೃಷಿ ಇಲಾಖೆಯ ಕಣ್ಮಣಿ ಆಗಿದ್ದ ಗೌಡರು, ಅದನ್ನೆಲ್ಲ ತೊರೆದು ಹಳೆ ವಿಧಾನಕ್ಕೆ ಮರಳಿದ್ದು ಆಧುನಿಕ ಕೃಷಿಯಲ್ಲಿ ಅವರು ಅನುಭವಿಸಿದ ಭ್ರಮನಿರಸನಕ್ಕೆ ಸಾಕ್ಷಿ. ಆ ಪರಿವರ್ತನೆಯಾಗಲು ಕಾರಣವೇನು? ಅನುಭವಿಸಿದ ಹಾನಿ ಎಷ್ಟು ಎಂಬ ಕುರಿತ ವಿಶ್ಲೇಷಣೆಯು ರಾಸಾಯನಿಕ ಕೃಷಿ ಪ್ರತಿಪಾದಕರ ಪೊಳ್ಳುತನವನ್ನು ಬಯಲಿಗೆಳೆಯುತ್ತದೆ. ಆ ಹಾದಿ ಬಿಟ್ಟು ಸ್ವಾವಲಂಬನೆಯ ಸಾವಯವ ಕೃಷಿ ಅನುಸರಿಸುತ್ತ, ಅದರಿಂದ ತಾನು ಗಳಿಸಿದ್ದೇನು ಎಂಬುದನ್ನು ಲೆಕ್ಕಾಚಾರದ ಸಮೇತ ಪ್ರಕಟಿಸಿದ್ದಾರೆ.

ಹತ್ತಿ, ಕಡಲೆ, ಶೇಂಗಾ ಬೆಳೆಗಳ ಸಾವಯವ ವ್ಯವಸಾಯ ವಿಧಾನವನ್ನು ವಿವರಿಸುವ ಅವರು, ಈ ಬೆಳೆ ಪದ್ಧತಿಯು ರೈತರ ಸ್ವಾವಲಂಬನೆಗೆ ಹೇಗೆ ದಾರಿ ತೋರಬಹುದು ಎಂಬ ಗುಟ್ಟನ್ನು ರಟ್ಟು ಮಾಡುತ್ತಾರೆ. ಕೆಸರು ಮೈಗಂಟಿಸಿಕೊಳ್ಳದ ಕೃಷಿ ವಿಜ್ಞಾನಿಗಳ ಒಣ ಉಪದೇಶಗಳನ್ನು ಗೌಡರು ಸೆಮಿನಾರ್, ಚರ್ಚೆಗಳಲ್ಲಿ ಕಟುವಾಕ್ಯಗಳಲ್ಲಿ ಟೀಕಿಸುತ್ತಿದ್ದರು. ಈ ಪುಸ್ತಕದಲ್ಲಿ ಅವರು ಒಂದೆಡೆ ಹೇಳುತ್ತಾರೆ: ‘ರೈತನ ಜಮೀನು ಆತನಿಗೆ ಚೆನ್ನಾಗಿ ಗೊತ್ತು. ಯಾರದೋ ಮಾತು ಕೇಳಿ ಆತ ಅವನತಿ ಹಾದಿ ಹಿಡಿದಿದ್ದಾನೆ. ಅದರಿಂದ ಹೊರಬರಲು ಸಾವಯವ ಕೃಷಿಯೊಂದೆ ಮಾರ್ಗ’.

ಮಳೆಯಾಶ್ರಿತ ಕೃಷಿ ಜ್ಞಾನ ಹಾಗೂ ಒಣಭೂಮಿ ರೈತರ ದನಿಗೆ ಭರಮಗೌಡ್ರು ಸಂಕೇತವಾಗಿದ್ದರು. ಹಾಗೆಂದು ಬರೀ ಹಳೆಯ ವಿಧಾನಕ್ಕೆ ಜೋತುಬೀಳದೆ, ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಮಾಹಿತಿಯನ್ನು ಬ್ಲೆಂಡ್ ಮಾಡಿದ ಬೇಸಾಯ ಅವರದಾಗಿತ್ತು. ತಿಪ್ಪೆ, ಮಳೆ ನಕ್ಷತ್ರ, ಗಾಳಿ, ಬಿತ್ತನೆ ವಿಧಾನ, ಕಳೆಗಳು, ಬೆಳೆ ಪರಿವರ್ತನೆ ಓದುತ್ತಿದ್ದರೆ, ಈಗಾಗಲೇ ನಾವು ಕಳೆದುಕೊಂಡಿರುವ ರೈತ ಜ್ಞಾನ ಎಷ್ಟೆಂಬುದು ಅರ್ಥವಾಗುತ್ತದೆ. ತಮ್ಮಲ್ಲಿರುವ ಅಂಥ ಮಾಹಿತಿಯನ್ನು ರೈತರ ಜತೆ ಸದಾ ಹಂಚಿಕೊಳ್ಳುವ ತುಡಿತ ಅವರಲ್ಲಿತ್ತು. ಅದಕ್ಕೆಲ್ಲ ಈ ಪುಸ್ತಕ ವೇದಿಕೆಯಾಗಿದೆ.

ಮಳೆ ಜತೆಗಿನ ಕೃಷಿಯು ಜೂಜಾಟ ಎಂಬಂತಾಗಿರುವ ಇಂದಿನ ದಿನಗಳಲ್ಲಿ ರೈತರು ಸೋಲುತ್ತಿರುವುದೇ ಹೆಚ್ಚು. ಗೌಡರಲ್ಲಿದ್ದ ಕೃಷಿ ಜ್ಞಾನವನ್ನು ಕೃಷಿ ಸಂಶೋಧನಾ ಸಂಸ್ಥೆಗಳು ಬಳಸಿಕೊಂಡಿದ್ದರೆ, ಹೀಗೆ ಬೇಸಾಯದಲ್ಲಿ ಸೋತವರಿಗೆ ಹೊಸ ಬೆಳಕು ಕೊಡಬಹುದಾಗಿತ್ತೆನೋ? ಆದರೆ ಅದೆಲ್ಲ ಆಗದ ಕೆಲಸ! ಆ ಮಹತ್ವದ ಕಾರ್ಯವನ್ನು ‘ಇಕ್ರಾ’ ನಿರ್ವಹಿಸಿದೆ. ಸಾವಯವ ಕೃಷಿಕನ ಮಹಾನ್ ಪಯಣವನ್ನು ‘ಬದುಕು ಬೇಸಾಯ’ದ ಮೂಲಕ ದಾಖಲಿಸಿ, ರೈತರಿಗೆ ಒಪ್ಪಿಸಿದೆ. ಕೃಷಿ ಪದವಿ ಪಡೆದವರು ಹೇಳುವುದನ್ನು ಪಾಲಿಸುವುದಷ್ಟೆ ಕೃಷಿ ಅಲ್ಲ; ಅದೊಂದು ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆ ಎಂಬುದನ್ನು ಈ ಕೃತಿ ತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT