ಬುಧವಾರ, ಏಪ್ರಿಲ್ 21, 2021
23 °C

ಬದುಕ ಮನ್ನಿಸು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನೇಹ, ಸೌಹಾರ್ದ ವೃದ್ಧಿಸುವ ಮತ್ತು ಹೊಸ ಬಾಂಧವ್ಯ ಬೆಸೆಯುವ ರಂಜಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಮತ್ತು ಶ್ರದ್ಧೆಯ ಹಬ್ಬ. ಕೆಟ್ಟದ್ದನ್ನು ಸಂಪೂರ್ಣವಾಗಿ ತ್ಯಜಿಸಿ ಒಳ್ಳೆಯದನ್ನು ಸ್ವೀಕರಿಸುವ ಮತ್ತು ಉತ್ತಮವಾದುದ್ದನ್ನು  ಪಾಲಿಸುವ ಗುಣವನ್ನು ಬೆಳೆಸಿಕೊಳ್ಳಲು ರೋಜಾ (ಉಪವಾಸ ಆಚರಣೆ) ಅವಕಾಶ ಕಲ್ಪಿಸುತ್ತದೆ. ಈ ಕಾರಣದಿಂದಲೇ 7 ವರ್ಷದ ಕಿರಿಯರಿಂದ 70 ವರ್ಷದ ಹಿರಿಯರೂ ಶ್ರದ್ಧಾಭಕ್ತಿಯಿಂದ ರೋಜಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.ಮುಸ್ಲಿಂ ಸಮುದಾಯದ ಪವಿತ್ರ ಮತ್ತು ಸಂಭ್ರಮದ ಹಬ್ಬವಾಗಿರುವ ರಂಜಾನ್ ಜಿಲ್ಲೆಯಾದ್ಯಂತ ಆಚರಿಸಲಾಗುತ್ತದೆ. ತಾಲ್ಲೂಕು ಕೇಂದ್ರ, ಹೋಬಳಿ ಮತ್ತು ಗ್ರಾಮಗಳ ಮಸೀದಿಯ ವಿಶಾಲ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸುತ್ತಾರೆ. ಹಳೆಯ ದ್ವೇಷ-ವೈಷಮ್ಯ-ಅಪಸ್ವರ-ಬೇಸರ-ವೈರತ್ವ ಎಲ್ಲವನ್ನೂ ಮರೆತು ಒಂದೆಡೆ ಸೇರಿ ಅಲ್ಲಾಹ್‌ಗೆ ಪ್ರಾರ್ಥಿಸಿ, ನಮಾಜು ಪೂರ್ಣಗೊಳಿಸಿದ ಬಳಿಕ ಪರಸ್ಪರ ಆಲಿಂಗಿಸಿಕೊಂಡು ಸಂತಸ ಹಂಚಿಕೊಳ್ಳುತ್ತಾರೆ.30 ದಿನಗಳ ಕಾಲ `ರೋಜಾ~ ಆಚರಿಸುವ ಮೂಲಕ ಬಹುತೇಕ ಮಂದಿ ಅರಿತು-ಅರಿಯದೇ ಮಾಡಿರುವ ತಪ್ಪುಒಪ್ಪುಗಳನ್ನು ಮನ್ನಿಸುವಂತೆ ಅಲ್ಲಾಹ್‌ಗೆ ಪ್ರಾರ್ಥನೆ ಮೂಲಕ ಕೋರುತ್ತಾರೆ. ತಮ್ಮನ್ನು ಪಾಪಗಳಿಂದ ಮುಕ್ತಗೊಳಿಸಿ ಉತ್ತಮ ವ್ಯಕ್ತಿಯಾಗಿಸಬೇಕು. ಭೂಮಿಯಲ್ಲಿನ ಪ್ರತಿಯೊಂದು ಜೀವ-ಜಂತುವಿಗೂ ಆಯುಷ್ಯ-ಆರೋಗ್ಯ ಕೊಡುವಂತೆ ಮನವಿ ಮಾಡುತ್ತಾರೆ.`ರೋಜಾ ಆಚರಣೆ ಸಂದರ್ಭದಲ್ಲಿ ಖರ್ಜೂರ, ಸೇಬು, ಬಾಳೆಹಣ್ಣು ಮುಂತಾದ ಫಲಗಳನ್ನು ಸೂರ್ಯೋದಯ ಮುನ್ನ ಮತ್ತು ಸೂರ್ಯಾಸ್ತದ ನಂತರ ಸೇವಿಸುತ್ತೇವೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ. ಪ್ರತಿದಿನ ನಸುಕಿನ 5.15, ಮಧ್ಯಾಹ್ನ 1.30, ಸಂಜೆ 5.15, ರಾತ್ರಿ 7 ಮತ್ತು 8.30ಕ್ಕೆ ಐದು ಬಾರಿ ನಮಾಜು ಮಾಡುತ್ತೇವೆ. ಎಲ್ಲರೂ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ~ ಎಂದು ನಗರದ ಹುಸ್ಸೇನಿಯಾ ಮಸೀದಿಯ ಮೌಲಾನಾ ತೌಹೀದ್ ಆಲಂ  ಹೇಳುತ್ತಾರೆ.`ಈ ಬಾರಿ ಆಗಸ್ಟ್ 20ಕ್ಕೆ ಹಬ್ಬ ಆಚರಿಸಲಾಗುವುದು. ಅಂದು ಬೆಳಿಗ್ಗೆ ನಗರದ ಮಸೀದಿಯ ವಿಶಾಲ ಮೈದಾನದಲ್ಲಿ ಸೇರಿ ನಮಾಜು ಸಲ್ಲಿಸುತ್ತೇವೆ. ಎಷ್ಟೇ ಕಡು ವೈರಿಯಾಗಿದ್ದರೂ ಎಲ್ಲವನ್ನೂ ತ್ಯಜಿಸಿ ಪರಸ್ಪರ ತಬ್ಬಿಕೊಳ್ಳುತ್ತೇವೆ. ಶುಭಾಶಯ ವಿನಿಮಯ ಮಾಡಿಕೊಂಡು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತೇವೆ. ಅಂದು ಅಂಗವಿಕಲರಿಗೆ, ನಿರ್ಗತಿಕರಿಗೆ,  ಬಡವರಿಗೆ, ನಿರ್ಗತಿಕರಿಗೆ ಆರ್ಥಿಕ ರೂಪದಲ್ಲಿ ನೆರವು ನೀಡಲಾಗುತ್ತದೆ~ ಎನ್ನುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.