ಶನಿವಾರ, ಏಪ್ರಿಲ್ 17, 2021
23 °C

ಬರದ ಹಿನ್ನೆಲೆ: 750 ಮೆಗಾವಾಟ್ ವಿದ್ಯುತ್ ಖರೀದಿಗೆ ಟೆಂಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ಸರಿದೂಗಿಸುವುದಕ್ಕೆ ಹೆಚ್ಚುವರಿಯಾಗಿ 750 ಮೆಗಾವಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಇಲ್ಲಿ ತಿಳಿಸಿದರು.

`ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಜಲ ವಿದ್ಯುತ್ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಹೆಚ್ಚುವರಿಯಾಗಿ ಇನ್ನಷ್ಟು ವಿದ್ಯುತ್ ಖರೀದಿಸುವುದು ಅನಿವಾರ್ಯ ಆಗಿದೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.

`ಸದ್ಯಕ್ಕೆ 1,200 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ 750 ಮೆಗಾವಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ. ಜಿಂದಾಲ್‌ನಲ್ಲಿ ವಿದ್ಯುತ್ ಲಭ್ಯವಿದ್ದರೂ ಆ ಸಂಸ್ಥೆಯವರು ಆಂಧ್ರಪ್ರದೇಶ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿರುವ ಕಾರಣ ಕರ್ನಾಟಕಕ್ಕೆ ಪೂರೈಸಲಾಗುತ್ತಿಲ್ಲ. ರಾಜ್ಯ ವಿದ್ಯುತ್ ಕಾಯ್ದೆ 2003ರ ಸೆಕ್ಷನ್ ಹನ್ನೊಂದನ್ನು ಜಾರಿ ಮಾಡಿ ರಾಜ್ಯದ ಗ್ರಿಡ್‌ಗೇ ವಿದ್ಯುತ್ ಮಾರಾಟ ಮಾಡುವಂತೆ ಷರತ್ತು ವಿಧಿಸಲು ಅವಕಾಶ ಇದೆ. ಆದರೆ, ಆ ವಿಷಯ ಕೂಡ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲಿಂದ, ಎಷ್ಟು ವಿದ್ಯುತ್ ಲಭ್ಯವಾಗಲಿದೆ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶದಿಂದ ವಿದ್ಯುತ್ ತರುವುದಕ್ಕೆ ಕಾರಿಡಾರ್ ಸಮಸ್ಯೆ ಇದೆ~ ಎಂದು ಹೇಳಿದರು.

`ಪ್ರತಿನಿತ್ಯ 8,000ದಿಂದ 8,500 ಮೆಗಾವಾಟ್ ವಿದ್ಯುತ್‌ಗೆ ಬೇಡಿಕೆ ಇದೆ. ಆದರೆ, ಸರಬರಾಜು ಆಗುತ್ತಿರುವುದು 7,000 ಮೆಗಾವಾಟ್. ಸರಾಸರಿ 1,000 ಮೆಗಾವಾಟ್ ವಿದ್ಯುತ್ ಕೊರತೆ ಇದೆ. ಪ್ರತಿವರ್ಷ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಸಲ ಶೇ 24ರಷ್ಟು ಬೇಡಿಕೆ ಹೆಚ್ಚಾಗಿದೆ~ ಎಂದರು.

ಮಳೆ ಸುರಿದು ಜಲಾಶಯಗಳು ತುಂಬಿದರೆ ಜಲ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುವುದು. ಈಗಿರುವ ನೀರಿನ ಸಂಗ್ರಹ ಪ್ರಕಾರ 3,000 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಿದರು.

ಗ್ರಿಡ್‌ಗೆ 1,000 ಮೆಗಾವಾಟ್: ಜನವರಿ ವೇಳೆಗೆ ರಾಜ್ಯ ಗ್ರಿಡ್‌ಗೆ ಹೊಸದಾಗಿ ಸುಮಾರು 1,000 ಮೆಗಾವಾಟ್ ಸೇರ್ಪಡೆಯಾಗಲಿದೆ. ಉಡುಪಿ ಶಾಖೋತ್ಪನ್ನ ವಿದ್ಯುತ್ ಘಟಕದಿಂದ ಮುಂದಿನ 10 ದಿನಗಳಲ್ಲಿ 500 ಮೆಗಾವಾಟ್ ಲಭ್ಯವಾಗಲಿದೆ. 500 ಮೆಗಾವಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕದ 2ನೇ ಹಂತದ ಕಾಮಗಾರಿ ಪೂರ್ಣಗೊಂಡು ಉತ್ಪಾದನೆ ಆರಂಭವಾಗಿದೆ. 300ರಿಂದ 400 ಮೆಗಾವಾಟ್ ಸದ್ಯ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.

ಅಕ್ರಮ ಪಂಪ್‌ಸೆಟ್: ಬರದ ಕಾರಣ ಕೊಳವೆಬಾವಿ ಕೊರೆಯುವುದು ಹೆಚ್ಚಾಗಿದೆ. ಇತ್ತೀಚೆಗೆ ಒಂದು ಲಕ್ಷ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಅವುಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದುವರೆಗೂ ಎರಡು ಲಕ್ಷ ಅಕ್ರಮ ಪಂಪ್‌ಸೆಟ್‌ಗಳಿದ್ದು, ಅವುಗಳ ಜತೆಗೆ ಈ ಒಂದು ಲಕ್ಷ ಪಂಪ್‌ಸೆಟ್‌ಗಳು ಸೇರ್ಪಡೆಯಾಗಿವೆ. ಈ ಕಾರಣಕ್ಕೂ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಿದರು.

`ಛತ್ತೀಸಗಡದಲ್ಲಿ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆಗೆ ಕಲ್ಲಿದ್ದಲು ಗಣಿಯನ್ನು ಕೇಂದ್ರ ಸರ್ಕಾರ ಇನ್ನೂ ಹಂಚಿಕೆ ಮಾಡಿಲ್ಲ. ಇದರಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ 1,300 ಎಕರೆ ಭೂಸ್ವಾಧೀನಕ್ಕೆ 280 ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಸದ್ಯದಲ್ಲೇ 12 ಕಲ್ಲಿದ್ದಲು ಗಣಿಗಳಿಗೆ ಟೆಂಡರ್ ಕರೆಯಲಿದ್ದು, ಅದರಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಸಂಸ್ಥೆ ಭಾಗವಹಿಸಲಿದೆ. ಆ ಮೂಲಕ ರಾಜ್ಯಕ್ಕೆ ಅಗತ್ಯ ಇರುವ ಕಲ್ಲಿದ್ದಲು ಸಂಗ್ರಹಿಸಲು ಪ್ರಯತ್ನಿಸಲಾಗುವುದು~ ಎಂದು ವಿವರಿಸಿದರು.

ಮೊಯಿಲಿ ಭೇಟಿ: ಇತ್ತೀಚೆಗೆ ಕೇಂದ್ರದ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಭೇಟಿ ಮಾಡಿ, ಹಂಚಿಕೆಯಾಗದ ಕೋಟಾದಡಿ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಶೋಭಾ ಹೇಳಿದರು.

`ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯದ ಪಾಲಿನ ವಿದ್ಯುತ್‌ನಲ್ಲೂ ಕಡಿಮೆ ನೀಡುತ್ತಿದೆ. ಇದನ್ನು ಸರಿಪಡಿಸಬೇಕು. ಜತೆಗೆ, ನೆರೆ ರಾಜ್ಯಗಳಿಗೆ ನೀಡುತ್ತಿರುವಂತೆ, ಹಂಚಿಕೆಯಾಗದ ಕೋಟಾದ ವಿದ್ಯುತ್ ನೀಡಬೇಕು. ಇತ್ತೀಚಿನ  ವರ್ಷಗಳಲ್ಲಿ ರಾಜ್ಯಕ್ಕೆ ಈ ಕೋಟಾದಡಿ ವಿದ್ಯುತ್ ನೀಡಿಲ್ಲ~ ಎಂದು ಅವರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.