ಗುರುವಾರ , ಜೂನ್ 24, 2021
29 °C

ಬರಿದಾದ ಕೃಷ್ಣೆ, ಮಲಪ್ರಭೆ: ನೀರಿಗೆ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಿದಾದ ಕೃಷ್ಣೆ, ಮಲಪ್ರಭೆ: ನೀರಿಗೆ ತತ್ವಾರ

ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ನೀರು ಬರಿದಾಗಿರುವುದರಿಂದ ತೀರದ ಗ್ರಾಮಗಳಿಗೆ, ನಿತ್ಯ ಕೂಡಲಸಂಗಮಕ್ಕೆ ಬರುವ ಭಕ್ತರಿಗೆ ನೀರಿಲ್ಲ.

ಕೂಡಲಸಂಗಮದಲ್ಲಿ ಹರಡಿಕೊಂಡಿದ್ದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಬರಿದಾಗಿದ್ದು, ಮರುಭೂಮಿಯಂಗಿವೆ. ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸುವ ಭಕ್ತರು ಅನಿವಾರ್ಯವಾಗಿ  ಕೂಡಲಸಂಗಮ ಅಭಿವೃದ್ಧಿ ಮಂಡಳಿಯವರು ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಿ ಸಂಗಮನಾಥನ ದರ್ಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕೃಷ್ಣಾ ನದಿಯ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನೇ ಯಂತ್ರಗಳ ಮೂಲಕ ತಾತ್ಕಾಲಿಕ ಸ್ನಾನ ಘಟ್ಟಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.ದೇವಾಲಯದ ಆವರಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆಡಳಿತ ಮಂಡಳಿ  ಯಾವುದೇ ವ್ಯವಸ್ಥೆ ಮಾಡದ ಕಾರಣ ಭಕ್ತರು ಹೋಟಲ್‌ಗಳಲ್ಲಿ 2 ರೂ.ಗೆ ನೀರು ಕುಡಿಯವಂತಾಗಿದೆ. ಟ್ಯಾಂಕರ್ ಮೂಲಕ ನೀರು ತರಿಸಿ ಭಕ್ತರಿಗೆ ಮಂಡಳಿ ಅನುಕೂಲ ಮಾಡಿಕೊಡಬೇಕು ಎಂದು ಶಿವಮೊಗ್ಗದಿಂದ ಬಂದಿದ್ದ ಭಕ್ತರಾದ ಸಂಪತಕುಮಾರ ಪಾಟೀಲ ಮನವಿ ಮಾಡಿದರು. ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಈ ನದಿಗಳಲ್ಲಿ  ನೀರು ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್ ಮೊದಲ  ವಾರದ್ಲ್ಲಲೇ ನದಿ ಬತ್ತಿ ತೊಂದರೆ ಹೆಚ್ಚಾಗಿದೆ.ಕೂಡಲಸಂಗಮ ಸಮೀಪದ ಕಟಗೂರ, ತುರಡಗಿ, ಕೆಂಗಲ್ಲ, ಕಜಗಲ್ಲ, ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ ಮುಂತಾದ ಗ್ರಾಮಗಳಲ್ಲಿ ನೀರಿನ ತೊಂದರೆ ಉಂಟಾಗಿದೆ.ಹುನಗುಂದ ತಾಲ್ಲೂಕು ಆಡಳಿತ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿಲ್ಲ ಎಂದು ಸಿದ್ದು ಸಾರಂಗಮಠ ಆರೋಪಿಸುತ್ತಾರೆ.ಕೂಡಲಸಂಗಮ, ಅಡವಿಹಾಳ ಹಾಗೂ ಕುಂಚಗನೂರ ನಡುವಿನ ದೋಣಿ ಸಂಚಾರ ಕೂಡ 1 ವಾರದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಜನರು ಕೂಡಲಸಂಗಮಕ್ಕೆ ಬರಲು 25 ಕಿ.ಮೀಯಷ್ಟು ಹೆಚ್ಚು ಸುತ್ತಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.