ಸೋಮವಾರ, ಜೂನ್ 21, 2021
21 °C

ಬರಿದು ನೆಲದಲಿ ಬಗೆ ಬಗೆ ಬೆಳೆ

ಮಂಜುನಾಥ ಎಸ್. ರಾಠೋಡ Updated:

ಅಕ್ಷರ ಗಾತ್ರ : | |

ಅದೊಂದು ಗುಡ್ಡಗಾಡು ಪ್ರದೇಶದಲ್ಲಿನ ಮನೆ. ಮನೆಯ ಸುತ್ತಲೂ ೧೦ ಗುಂಟೆ  ಜಾಗ. ಬರಡು ನೆಲ, ಕಲ್ಲು ತುಂಬಿದ ಜಮೀನು. ಮಳೆ ಆಧರಿತ ಧಾನ್ಯ ಬೆಳೆದು ಬಹಳಷ್ಟು ಬೆವರು ಬಸಿದರೂ ಪುಡಿಗಾಸು ಸಿಗದ ಜಮೀನು ಅದು...ಅಲ್ಲೀಗ ಹೂವಿನ ಮಕರಂದ ಸವಿಯಲು ಮುಗಿಬೀಳುವ ಜೇನು ನೊಣಗಳು. ಹೂವಿಗೆ ಮುತ್ತಿಟ್ಟು ಚಕ್ಕಂದವಾಡುವ ಚಿಟ್ಟೆಗಳು. ಸೂರ್ಯಾಸ್ತವಾಗು­ತ್ತಿದ್ದಂತೆ ಇಂಪಾಗಿ ಕೂಗುವ ಪಕ್ಷಿಗಳು. ಮನಕ್ಕೆ ಕಚಗುಳಿ ಇಟ್ಟು ಹೋಗುವ ಸಿಹಿಗಾಳಿ. ಇವುಗಳ ಮಧ್ಯೆ ಬಾಯಲ್ಲಿ ನೀರು ತರಿಸುವ ಚಿಕ್ಕು, ಮಾಗಿದ ಪೇರಲೆ, ಫಲ ಕೊಡಲು ಸಿದ್ಧವಾಗಿರುವ ಮಾವಿನ ಮರ ಮತ್ತು ಗೋಡಂಬಿ ಗಿಡಗಳು...ಮನೆಯ ಮುಂಭಾಗದಲ್ಲಿ ಬಹು ಬೇಡಿಕೆಯ ಕೆತ್ತಗಿ, ಬಿಳಿಕೆಂಪು ದಾಸವಾಳ, ಅಮೃತಬಳ್ಳಿ, ದುಂಡು ಮಲ್ಲಿಗೆ, ಕೆಂಪು ಮಲ್ಲಿಗೆ, ತೆಂಗಿನ ಗಿಡ, ಬೆಟ್ಟದ ತಾವರೆ. ಪಕ್ಕದಲ್ಲಿ ಎರೆಹುಳು ಗೊಬ್ಬರದ ತೊಟ್ಟಿ.ಗುಡ್ಡ ಪ್ರದೇಶದಲ್ಲೂ ಇಂಥದ್ದೊಂದು ಅಚ್ಚರಿ ಮೂಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವುದು ಗದಗ ಜಿಲ್ಲೆಯ ರೋಣ ತಾಲ್ಲೂಕು ಗಜೇಂದ್ರಗಡ ಸಮೀಪದ ಕಣವಿ (ಕೃಷ್ಣಾಪೂರ) ಗ್ರಾಮದ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಶೇಖಪ್ಪ ಮಾಳೋತ್ತರ. ಅದೂ ಕೇವಲ ಅರ್ಧ ಗುಂಟೆ ಜಾಗದಲ್ಲಿ!ಉಳುಮೆ ಮಾಡಲು ಭೂಮಿ ಇಲ್ಲದಿದ್ದಾಗ ಮನೆಯ ಹಿತ್ತಲನ್ನೇ ಬಳಸಿಕೊಂಡರು ಇವರು. ಕೃಷಿ ಇಲಾಖೆಯಿಂದ ಚಿಕ್ಕು, ಗೋಡಂಬಿ ಸಸಿ ತಂದು ಗುಡ್ಡದ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ. ಶೂನ್ಯ ಬಂಡವಾಳದ ಈ ಕೃಷಿಯಿಂದಲೇ ಮನೆಯ ಖರ್ಚನ್ನು ಸಮದೂಗಿಸುತ್ತಿದ್ದಾರೆ. ಆರ್ಥಿಕ ಸಬಲತೆಗೆ ರೈತರಿಂದ ಭೂಮಿಯನ್ನು ಲಾವಣಿ ಪಡೆದು ಕೃಷಿಯಿಂದಲೇ ಆದಾಯ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿದ್ದಾರೆ  ಶಾಂತವ್ವ. ಇವರಿಗೆ ಪ್ರೇರಣೆ ಪತಿ ಶೇಖಪ್ಪ.ಕಡಿಮೆ ವೆಚ್ಚದಲ್ಲಿ ಆದಾಯ ಹೆಚ್ಚಿಸಿಕೊಳ್ಳುವ ವಾಣಿಜ್ಯ ಬೆಳೆಗಳ ಬಗ್ಗೆ ಆಸಕ್ತಿ ತೋರಿದ ಈ ದಂಪತಿ, ರೋಣ ಪಟ್ಟಣದ ಕೃಷಿ ಇಲಾಖೆಯಿಂದ ೫೦ ಗಿಡ ಚಿಕ್ಕು, ೧೫ ಗಿಡ ಗೋಡಂಬಿ ಗಿಡಗಳನ್ನು ತಂದು ಮನೆಯ ಹಿತ್ತಲಿನಲ್ಲಿ ನೆಟ್ಟಿದ್ದಾರೆ.ಗಿಡ ನೆಟ್ಟಿದ್ದು ಹೀಗೆ

೨/2 ಅಡಿ ಅಳತೆಯಂತೆ ೧೦ ಅಡಿಗೊಂದು ಚಿಕ್ಕು ಗಿಡಗಳನ್ನು ನೆಟ್ಟಿದ್ದಾರೆ. ನಾಟಿ ಸಮಯದಲ್ಲಿ ಚಿಕ್ಕು ನೆಟ್ಟ ಗುಣಿಯಲ್ಲಿ ಮೇಲ್ಮಣ್ಣು ಮತ್ತು ಕಾಂಪೋಸ್ಟ್‌ ಮಿಶ್ರಣ ಹಾಕಿ ಮುಚ್ಚಿದ್ದಾರೆ. ಪ್ರಾರಂಭದಲ್ಲಿ ಬೋರ್‌ವೆಲ್‌ನಿಂದ ನೀರನ್ನು ಹೊತ್ತು ತಂದು ಬೆಳೆಸಿದ್ದಾರೆ. ಮಳೆ ನೀರು ಗುಡ್ಡದ ಮೇಲಿನಿಂದ ರಭಸವಾಗಿ ಬೀಳುವ ಕಾರಣ, ಗಿಡಗಳಿಗೆ ಅಪಾಯ ಆಗದಂತೆ ಇಂಗು ಗುಂಡಿ ತಯಾರಿಸಿದ್ದಾರೆ. ಬಿರುಗಾಳಿಗೆ ಸಿಕ್ಕು ಚಿಕ್ಕು ಗಿಡಗಳು ಬಿದ್ದು ಹೋಗದಂತೆ ಆಸರೆಗಾಗಿ ಗಿಡದ ಸುತ್ತಲೂ ೧೫ ಗೋಡಂಬಿ ಗಿಡಗಳನ್ನು ನೆಟ್ಟಿದ್ದಾರೆ. ೩ /3 ಅಡಿ ಅಳತೆಯ ಗುಣಿ ತೆಗೆದು ೧೫ ಅಡಿ ಅಂತರದಲ್ಲಿ ಗೋಡಂಬಿ ಬೆಳೆಸಿದ್ದಾರೆ.ಶೂನ್ಯ ಬಂಡವಾಳದ ಲಾಭ

ಏಳೆಂಟು ವರ್ಷಗಳ ಹಿಂದೆ ಹಾಕಿರುವ ಈ ಗಿಡಗಳಿಗೆ ಕೊಳವೆ ಬಾವಿಯ ನೀರಿಲ್ಲ. ಮಳೆಯೇ ಇವರಿಗೆ ಆಸರೆ. ಆದರೂ ಇವು ಚೆನ್ನಾಗಿ ಫಸಲು ಕೊಡುತ್ತಿವೆ. ಚಿಕ್ಕುವಿನ ಪ್ರತಿ ಗಿಡವೂ ೫೦೦ ರಿಂದ ೧೨೦೦ ಹಣ್ಣುಗಳನ್ನು ನೀಡುತ್ತಿದೆ. ಇದರಿಂದ ವರ್ಷಕ್ಕೆ ೨೫ ರಿಂದ ೪೦ ಸಾವಿರ ರೂಪಾಯಿ ಆದಾಯ ಸಿಗುತ್ತಿದೆ.ಇದರ ಜೊತೆಗೆ ಗೋಡಂಬಿ ಮರಗಳಿಂದ ಕನಿಷ್ಠ ೧೦ ಸಾವಿರ ಆದಾಯ ಪಡೆಯುತ್ತಿದ್ದಾರೆ. ‘ಬೇಸಿಗೆ ಸಮಯದಲ್ಲಿ ನೀರಿನ ಕೊರತೆಯಿಂದಾಗಿ ಅಷ್ಟೊಂದು ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಕೊಳವೆ ಬಾವಿ ಕೊರೆಸುವುದೂ ಕಷ್ಟ. ಆದರೆ ನಮ್ಮ ಹೊಟ್ಟೆಗೇನೂ ಕೊರತೆಯಿಲ್ಲ. ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ ’ ಎನ್ನುತ್ತಾರೆ ದಂಪತಿ. ಮತ್ತೊಬ್ಬರ ಜಮೀನಿನಲ್ಲಿ ಕೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಈ ದಂಪತಿ, ಹಿತ್ತಲಲ್ಲಿ ಇರುವ ಪಾಳು ಜಮೀನನ್ನು ಸದ್ಬಳಕೆ ಮಾಡಿಕೊಂಡು ಸಾಕಷ್ಟು ಯಶ ಕಂಡಿದ್ದಾರೆ.ಎಲೆಗಳನ್ನು ಗಿಡಗಳಿಗೆ ಗೊಬ್ಬರವನ್ನಾಗಿಸಿ ಶೂನ್ಯ ಬಂಡವಾಳದಿಂದ ಬೆಳೆ ಬೆಳೆದು ಆರ್ಥಿಕ ಸಂಕಷ್ಟದಿಂದ ದೂರವಾಗಿದ್ದಾರೆ. ಭೂ ಮಾಲಿಕರಿಂದ ಭೂಮಿ ಲಾವಣಿ  ಪಡೆದು ಮನೆಯಲ್ಲಿನ ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿ ಸಾವಯವ ಕೃಷಿ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ.‘ಹೆಚ್ಚು ಇಳುವರಿ ಪಡೆಯುವ ಆಸೆಬುರುಕತನ­ದಿಂದ ಭೂಮಿಯ ಒಡಲಿಗೆ ರಾಸಾಯನಿಕಗಳನ್ನು ಸಿಂಪಡಿಸುವ ಆಸೆಬುರುಕತನ ನಮ್ಮಲ್ಲಿ ಇಲ್ಲ. ರಾಸಾಯನಿಕ ಕೃಷಿ ಅಲ್ಪ ಕಾಲದಲ್ಲಿ ಲಾಭ ತಂದುಕೊಟ್ಟರೂ ಭೂಮಿ ಬಂಜರಾಗಿ ಅದರಿಂದ ಅನಾಹುತಗಳೇ ಹೆಚ್ಚು’ ಎನ್ನುತ್ತಾರೆ ಶಾಂತವ್ವ.ಸಾವಯವ ಕೃಷಿಯ ಮೂಲಕವೇ ಮನೆಯ ಮುಂಭಾಗದಲ್ಲಿ ವಿವಿಧ ಹೂವುಗಳನ್ನು ನೆಟ್ಟು ಸೌಂದರ್ಯ ಇಮ್ಮಡಿಗೊಳಿಸಿದ್ದಾರೆ. ಸರ್ಕಾರ ನೀಡುವ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದರೂ ಅಲ್ಲಿಯೇ ಪ್ರಯೋಗಗಳನ್ನು ಮಾಡಿ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.‘ತೋಟಗಾರಿಕಾ ಇಲಾಖೆ ನೀಡುವ ಉಚಿತ ಮಾರ್ಗದರ್ಶನದಿಂದ ನಾವು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ಒಂದೆರಡು ಎಕರೆ ಸ್ವಂತ ಭೂಮಿ ಖರೀದಿಸಿ ಅರಣ್ಯ ತೋಟಗಾರಿಕೆಯಲ್ಲಿಯೇ ಬದುಕು ಕಟ್ಟಿಕೊಂಡು ಆರ್ಥಿಕ ಸಬಲತೆ ಹೊಂದಬೇಕೆಂಬ ಹುಮ್ಮಸ್ಸು ಇದೆ’ ಎನ್ನುತ್ತಾರೆ ಶಾಂತವ್ವ. ಕೃಷಿ ಭೂಮಿ ಚೆನ್ನಾಗಿ ಇದ್ದರೂ ನಗರದತ್ತ ಗುಳೆ ಹೋಗುತ್ತಿರುವವರ ಮಧ್ಯೆ ಇದ್ದುದರಲ್ಲೇ ಸಂತೃಪ್ತಿಯಿಂದ ಜೀವನ ನಡೆಸುತ್ತಿದ್ದಾರೆ ಇವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.