ಭಾನುವಾರ, ಆಗಸ್ಟ್ 9, 2020
21 °C

ಬರ: ಶೆಟ್ಟರ್ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ: ಶೆಟ್ಟರ್ ಆತಂಕ

ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಸಂಭವ ಇರುವ ಕಾರಣ, ತಜ್ಞರೊಂದಿಗೆ ಇನ್ನೆರಡು ದಿನಗಳಲ್ಲಿ ಚರ್ಚಿಸಿ ಮೋಡ ಬಿತ್ತನೆಗೆ ಕಾರ್ಯ ಯೋಜನೆ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ಮೋಡ ಬಿತ್ತನೆಯ ಯಶಸ್ಸಿನ ಪ್ರಮಾಣ ಕುರಿತು ಪುಣೆ ಮೂಲದ ಐಐಟಿಎಂ (ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ) ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಟೆಂಡರ್ ಸಿದ್ಧಪಡಿಸಲಿದ್ದಾರೆ.ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ವಿಫಲವಾದರೂ, ಪರಿಸ್ಥಿತಿ ಎದುರಿಸಲು ಅಗತ್ಯ ಕಾರ್ಯಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬರ ಪರಿಸ್ಥಿತಿ ಕುರಿತು ವಿಡಿಯೊ ಸಂವಾದದ ಮೂಲಕ ಜಿಲ್ಲಾಧಿಕಾರಿಗಳಿಂದ ಶುಕ್ರವಾರ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಈ ಸೂಚನೆ ನೀಡಿದ್ದಾರೆ.`ಈ ಬಾರಿ ಮೇ ಹಾಗೂ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕ್ರಮವಾಗಿ ಶೇಕಡ 65 ಹಾಗೂ ಶೇ 37ರಷ್ಟು ಕಡಿಮೆ ಮಳೆ ಆಗಿದೆ. ರಾಜ್ಯದ ಬರ ಪರಿಸ್ಥಿತಿ ತೀವ್ರಗೊಳ್ಳುವ ಲಕ್ಷಣಗಳಿವೆ. ಬರಪೀಡಿತ 123 ತಾಲ್ಲೂಕುಗಳಿಗೆ ಪರಿಸ್ಥಿತಿ ಎದುರಿಸಲು ತಲಾ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ರೂ 40 ಕೋಟಿ  ಬಿಡುಗಡೆ ಮಾಡಲಾಗಿದೆ~ ಎಂದು ಸಭೆಯ ನಂತರ ಶೆಟ್ಟರ್ ಸುದ್ದಿಗಾರರಿಗೆ ತಿಳಿಸಿದರು.ರಾಜ್ಯದ 3,542 ಕೆರೆಗಳ ಪೈಕಿ 2,522 ಕೆರೆಗಳು ಸಂಪೂರ್ಣ ಬತ್ತಿವೆ. 911 ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದೆ. ಐದು ಕೆರೆಗಳು ಮಾತ್ರ ಪೂರ್ತಿಯಾಗಿ ತುಂಬಿವೆ. ಕುಡಿಯವ ನೀರಿನ ಪೂರೈಕೆಗಾಗಿ ವಿವಿಧೆಡೆ ಕೊರೆಸಲಾಗಿರುವ ಕೊಳವೆ ಬಾವಿಗಳ ಪೈಕಿ 887ಕ್ಕೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ. ಅವುಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 74.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಸಬೇಕು ಎಂಬ ಗುರಿ ಹೊಂದಲಾಗಿತ್ತು. ಜೂನ್ ಅಂತ್ಯದ ವೇಳೆಗೆ ಕೇವಲ 20.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ನಗರ ಪ್ರದೇಶಗಳಲ್ಲಿ 249 ವಾರ್ಡ್‌ಗಳಿಗೆ ಹಾಗೂ 713 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 11 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ ಎಂದರು.ರಿಯಾಯಿತಿ ದರದಲ್ಲಿ ಮೇವು: ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾವಿ, ವಿಜಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮೇವಿನ ಅಭಾವ ಇದೆ. ಒಟ್ಟು 77 ಗೋಶಾಲೆಗಳನ್ನು ತೆರೆದು, 66 ಸಾವಿರ ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. 98 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಈ ಬ್ಯಾಂಕ್‌ಗಳ ಮೂಲಕ ಶೇ 50ರಷ್ಟು ರಿಯಾಯಿತಿ ದರದಲ್ಲಿ ರೈತರಿಗೆ ಮೇವು ಪೂರೈಸಲು ಸೂಚಿಸಲಾಗುವುದು ಎಂದು ಹೇಳಿದರು.ಉದ್ಯೋಗ ಖಾತರಿ: ಸಂವಾದ ನಡೆಸಿದ ಪ್ರತಿಯೊಬ್ಬ ಜಿಲ್ಲಾಧಿಕಾರಿ ಬಳಿಯೂ, ನರೆಗಾ ಅನುಷ್ಠಾನ ಕುರಿತು ಮಾಹಿತಿ ಪಡೆದ ಶೆಟ್ಟರ್, `ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆ ಸಿದ್ಧಪಡಿಸಿ. ಯಾರಿಗೂ ಉದ್ಯೋಗ ಇಲ್ಲ ಎನ್ನಬೇಡಿ. ಯೋಜನೆಯಡಿ ಕೆಲಸ ಮಾಡಿದವರಿಗೆ ಪ್ರತಿ ವಾರ ಹಣ ನೀಡಿ, ಅವರಿಗೆ ತಿಂಗಳಿಗೊಮ್ಮೆ ಹಣ ನೀಡುವ ಪರಿಪಾಠ ಬೇಡ~ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ನರೆಗಾ ಯೋಜನೆಯ ಅನುಷ್ಠಾನ ಕುರಿತು ಸೂಕ್ತ ಮಾಹಿತಿ ನೀಡಲು ವಿಫಲರಾದ ಯಾದಗಿರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, `ನೀವು ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಬಂದಿಲ್ಲ. ಈ ವರ್ಷದಲ್ಲಿ ಎಷ್ಟು ಹಣ ಖರ್ಚಾಗಿದೆ ಎಂದು ಪ್ರಶ್ನಿಸಿದರೆ, ಕಳೆದ ವರ್ಷದ ಖರ್ಚು-ವೆಚ್ಚದ ಮಾಹಿತಿ ನೀಡುತ್ತಿದ್ದೀರಿ. ಏನಿದು? ನರೆಗಾ ಯೋಜನೆಯ ಅನುಷ್ಠಾನದಲ್ಲಿ ನೀವು ಸೋತಿದ್ದೀರಿ~ ಎಂದು ಕಿಡಿ ಕಾರಿದರು.ಹಣಕಾಸಿನ ಅವ್ಯವಹಾರದ ಆರೋಪ ಕೇಳಿಬಂದರೂ ನರೆಗಾ ಯೋಜನೆಯ ಅನುಷ್ಠಾನಕ್ಕೆ ಯಾವುದೇ ತೊಡಕಾಗದಂತೆ ನಿಗಾ ವಹಿಸಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸಚಿವರಾದ ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ, ಉಮೇಶ ಕತ್ತಿ, ವಿ. ಸೋಮಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.