ಬಳ್ಳಾರಿ: ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಬಳ್ಳಾರಿ: ‘ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷದ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಮುಖಂಡರು ಗಮನ ಹರಿಸುತ್ತಿಲ್ಲ. ಕಳೆದ ಒಂದು ದಶಕದ ಅವಧಿಯಲ್ಲಿ ರೆಡ್ಡಿ ಸಹೋದರರನ್ನು ಎದುರು ಹಾಕಿಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಿದವರ ಬೇಕು– ಬೇಡಗಳನ್ನು ಆಲಿಸುವವರೇ ಇಲ್ಲ. ಈ ಧೋರಣೆ ಮುಂದುವರಿದರೆ ಪಕ್ಷ ಮತ್ತೆ ನೆಲ ಕಚ್ಚಲಿದೆ’.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅನೇಕರು ಕಾರ್ಯಕರ್ತರು ತಮ್ಮ ವಿರೋಧ ವ್ಯಕ್ತಪಡಿಸಿದರು.
‘ಮೊದಲು ಬಿಜೆಪಿ, ನಂತರ ಬಿಎಸ್ಆರ್ ಕಾಂಗ್ರೆಸ್ ಮುಖಂಡರ ಕಿರುಕುಳವನ್ನು ಎದುರಿಸಿ, ಕಾಂಗ್ರೆಸ್ ಬಾವುಟ ಹಾರಿಸಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಮನ್ನಣೆ ಇಲ್ಲ. ಪೊಲೀಸ್ ಠಾಣೆಗಳಲ್ಲಿ ಯಾವುದಾದರೂ ಸಮಸ್ಯೆ ಪರಿಹರಿಸುವುದಕ್ಕೆ ಹೋದರೂ ನಮ್ಮನ್ನು ಹೊರಗಡೆ ನಿಲ್ಲಿಸಲಾಗುತ್ತದೆ. ಹೆಸರಿಗಷ್ಟೇ ಪಕ್ಷದ ಆಡಳಿತ ಇದೆ. ನಮಗೆ ಮರ್ಯಾದೆಯೇ ಇಲ್ಲ’ ಎಂದು ಕೆಲವರು ದೂರಿದರು.
ಕಾರ್ಯಕರ್ತರ ನೆರವಿನೊಂದಿಗೆ ಚುನಾಯಿತರಾಗುವವರು ನಂತರ ಗ್ರಾಮಗಳಿಗೆ ಭೇಟಿ ನೀಡುವುದೇ ಇಲ್ಲ. ಕುಡಿಯುವ ನೀರು ಪೂರೈಕೆ, ವಸತಿ ಯೋಜನೆಯಡಿ ಮನೆ ಹಂಚಿಕೆ, ವಿದ್ಯುತ್ ಕಡಿತ ಸಮಸ್ಯೆ ಬಗೆಹರಿಸುತ್ತಿಲ್ಲ. ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಕೊಡಿಸಲು ಒಬ್ಬ ಜನಪ್ರತಿನಿಧಿಯೂ ಬಂದಿಲ್ಲ. ಆಲಿಕಲ್ಲು ಮಳೆಗೆ ಸಿಕ್ಕಿ ಸತ್ತ ಮಹಿಳೆಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲೂ ಬಂದಿಲ್ಲ’ ಎಂದು ರೂಪನಗುಡಿ, ಕಮ್ಮರಚೇಡು ಮತ್ತಿತರ ಗ್ರಾಮಗಳ ಕಾರ್ಯಕರ್ತರು ಅಳಲು ತೋಡಿಕೊಂಡರು.
‘ನಾವು ದುಡಿಮೆ ಬಿಟ್ಟು, ಕೈಯಿಂದ ಹಣ ಖರ್ಚು ಮಾಡಿಕೊಂಡು ಸಭೆ, ಸಮಾರಂಭಗಳಿಗೆ, ಪಕ್ಷ ಸಂಘಟನೆಗೆ ಬರುತ್ತೇವೆ. ಚುನಾವಣೆ ಬಂದಾಗ ನಮ್ಮನ್ನು ಬಳಸಿಕೊಳ್ಳುವ ನಾಯಕರು ಮತ್ತೆ ಐದು ವರ್ಷಗಳವರೆಗೆ ನಮ್ಮನ್ನು ಮಾತನಾಡಿಸುವುದೇ ಇಲ್ಲ. ಮುಖಂಡರ ವರ್ತನೆಯಿಂದ ಬೇಸತ್ತ ಜನತೆ ಕಳೆದ 10 ವರ್ಷ ಬೇರೆ ಪಕ್ಷಕ್ಕೆ ಮತ ನೀಡಿದ್ದರು. ಈ ಬಾರಿ ಅಧಿಕಾರ ದೊರೆತಿದೆ. ಇದೇ ರೀತಿ ಆದರೆ, ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಕೈಬಿಡುವುದು ಶತಃಸಿದ್ಧ’ ಎಂದು ಎಚ್ಚರಿಸಿದರು.
‘ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪಕ್ಷದ ಕಚೇರಿಯಲ್ಲಿ ನಾಲ್ಕು ಗೋಡೆಗಳ ನಡುವೆ ಚರ್ಚಿಸೋಣ. ಈಗ ಚುನಾವಣೆ ಎದುರಿಸುವ ಬಗೆ ಹೇಗೆ ಎಂಬುದರ ಬಗ್ಗೆ ಆಲೋಚಿಸೋಣ’ ಎಂದು ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ತೆರೆ ಎಳೆದರು.
ಪಕ್ಷದ ಅಭ್ಯರ್ಥಿ ಎನ್.ವೈ. ಹನುಮಂತಪ್ಪ, ಶಾಸಕ ಅನಿಲ್ ಲಾಡ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.