ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಕಲ್ಯಾಣದ ಮರುಸೃಷ್ಟಿ

Last Updated 1 ಡಿಸೆಂಬರ್ 2010, 9:35 IST
ಅಕ್ಷರ ಗಾತ್ರ


ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆಯ ಚಿಂತನೆಗೆ ಕಾರಣೀಭೂತರಾದವರು ಬಸವಣ್ಣ. ಅವರ ಚಿಂತನೆಗೆ ನೆಲ- ನೆಲೆ ಒದಗಿಸಿದ್ದು ‘ಕಲ್ಯಾಣ’. ಅದುವೇ ಬೀದರ್ ಜಿಲ್ಲೆಯ ಬಸವ ಕಲ್ಯಾಣ. ಅಲ್ಲಿ ಶರಣರ ಸ್ಮೃತಿ ಮೆಲುಕು ಹಾಕುವ, ಕಲ್ಯಾಣದ ಗತವೈಭವವನ್ನು ಮರುಸೃಷ್ಟಿಸುವ ಉದ್ದೇಶದಿಂದ ನೂತನ ಸ್ಮಾರಕಗಳ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ನೂತನ ಸ್ಮಾರಕಗಳು ಮೇಲೆದ್ದಿವೆ.

ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಕ್ರಾಂತಿಗೆ ನೆಲೆಗಟ್ಟು ಒದಗಿಸಿದ ಕಲ್ಯಾಣ ನಗರಿಯ ವೈಭವವು ಇತಿಹಾಸದ ಕಾಲಚಕ್ರದಲ್ಲಿ ಸಿಲುಕಿ ಮೂಲೆಗುಂಪಾಗಿತ್ತು. ಚಾಲುಕ್ಯ ಮತ್ತು ಕಳಚುರಿ ಮನೆತನಗಳಿಗೆ ರಾಜಧಾನಿಯಾಗಿದ್ದ ಕಲ್ಯಾಣ ಪಟ್ಟಣವು 20ನೇ ಶತಮಾನದ ಆರಂಭದಲ್ಲಿ ಕೇವಲ ಕಸಬಾ ಹೋಬಳಿಯಾಗಿ ಉಳಿದಿತ್ತು. ಕಲ್ಯಾಣದ ಮೇಲೆ ಆವರಿಸಿದ ಧೂಳು ಒರೆಸುವ ಕೆಲಸ ಆರಂಭಿಸಿದವರು ಸೊಲ್ಲಾಪುರದ ಬಾಬಾಸಾಹೇಬ್ ಮಲ್ಲಪ್ಪ ವಾರದ್. ಜತೆಗೆ ಫ.ಗು. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸಿ ಅವುಗಳ ಮಹತ್ವ ಅರಿಯುವಂತೆ ಮಾಡಿದರು.

ಇದು ಬಸವಾದಿ ಶರಣರ ಕಲ್ಯಾಣ ಹೌದೋ ಇಲ್ಲವೋ ಎಂಬಂತಹ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು. ಶರಣರದ್ದು ಎಂದು ಗುರುತಿಸುವಂತಹ ಯಾವ ಸ್ಥಳವೂ ಇಲ್ಲಿ ಇರಲಿಲ್ಲ. ಸುಸ್ಥಿತಿಯಲ್ಲಿದ್ದ ಕೋಟೆ 10-11 ನೇ ಶತಮಾನದ್ದು ಎಂಬುದೂ ಯಾರಿಗೂ ಗೊತ್ತಿರಲಿಲ್ಲ. ವಾರದ್ ಅವರು ಇದರ ಇತಿಹಾಸವನ್ನು ಜನರಿಗೆ ಮನದಟ್ಟು ಮಾಡಿದರು. ರಾಜಕೀಯ ನಾಯಕರನ್ನು, ಧಾರ್ಮಿಕ ಮುಖಂಡರನ್ನು ಕರೆತಂದು ಈ ಸ್ಥಳದ ಮಹತ್ವ ತಿಳಿಹೇಳಿದರು.

ಕೆಲ ಆಧಾರಗಳನ್ನು ಮುಂದಿಟ್ಟುಕೊಂಡು ಹಾಳು ಬಿದ್ದಿದ್ದ ಮಠ, ಮಂದಿರ, ಗವಿಗಳಿಗೆ ಶರಣರ ಹೆಸರನ್ನು ಕೊಟ್ಟರು. ಬಸವ ಜಯಂತಿಗೆ ಕಲ್ಯಾಣದಲ್ಲಿ ಜಾತ್ರೆ ಹಮ್ಮಿಕೊಂಡು ರಥ ಎಳೆಯುವ ಪರಂಪರೆ ಆರಂಭಿಸಿ ನಾಡಿನ ಜನರ ಗಮನ ಸೆಳೆದರು. ಕಲ್ಯಾಣಕ್ಕೆ ‘ಬಸವಕಲ್ಯಾಣ’ ಎಂದು ನಾಮಕರಣ ಮಾಡುವಲ್ಲಿಯೂ ಇವರ ಪ್ರಯತ್ನ ಮರೆಯಲಾಗದ್ದು.

ಭಾಲ್ಕಿಯ ಲಿಂ. ಚನ್ನಬಸವ ಪಟ್ಟದ್ದೇವರು ಸಹ ಇಲ್ಲಿನ ಶರಣ ಸ್ಮಾರಕಗಳ ಸಂರಕ್ಷಣೆಗೆ ದುಡಿದವರು. ಇಲ್ಲಿ ಅನುಭವ ಮಂಟಪದ ಕೊರತೆ ಎದ್ದು ಕಂಡಿದ್ದರಿಂದ ಸ್ವತಃ ತಲೆಯ ಮೇಲೆ ಕಲ್ಲು, ಮಣ್ಣನ್ನು ಹೊತ್ತುಕೊಂಡು ನೂತನ ಅನುಭವ ಮಂಟಪ ನಿರ್ಮಿಸಿದರು.ಬೆಂಗಳೂರಿನ ವೀರಶೈವ ಕ್ಷೇಮಾಭ್ಯುದಯ ಟ್ರಸ್ಟ್‌ನ ಎಸ್.ಬಿ.ಮುದ್ದಪ್ಪ ಅವರ ನೇತೃತ್ವದಲ್ಲಿಯೂ ಸ್ಮಾರಕಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆ ಆಗಿದ್ದರಿಂದ ಅವರು ಈ ಕಾರ್ಯ ಕೈಬಿಟ್ಟರು.

ಮಂಡಳಿಯಿಂದ ಅಭಿವೃದ್ಧಿ: ‘ಬಸವಕಲ್ಯಾಣ ಅಭಿವೃದ್ಧಿ ಮಂಡಳಿ’ಯು ಅಲ್ಲಮಪ್ರಭುಗಳ ಗದ್ದುಗೆ ಮಠ, ಮಡಿವಾಳ ಮಾಚಿದೇವರ ಹೊಂಡ, ಬಸವಣ್ಣನವರ ಅರಿವಿನ ಮನೆ, ಉರಿಲಿಂಗ ಪೆದ್ದಿಯವರ ಗವಿ, ಅಕ್ಕನಾಗಮ್ಮನ ಗವಿ, ಹರಳಯ್ಯನವರ ಗವಿ, ನುಲಿ ಚಂದಯ್ಯನ ಗವಿ, ಅಂಬಿಗರ ಚೌಡಯ್ಯನವರ ಗವಿ, ಕಂಬಳಿ ನಾಗಿದೇವನ ಮಠ, ಬಂದವರ ಓಣಿ, ಜೇಡರ ದಾಸಿಮಯ್ಯನ ಮಠ, ವಿಜ್ಞಾನೇಶ್ವರ ಗುಹೆ, ಬಸವ ವನ, ವಸ್ತು ಸಂಗ್ರಹಾಲಯ ಮತ್ತು ಪಂಚಸೂತ್ರದ ಗವಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಶರಣ ಸಾಹಿತ್ಯ ಸಂಶೋಧನಾ ಕೇಂದ್ರದ ಗ್ರಂಥಾಲಯದ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ ಆರಂಭಿಸಲು ಕಳೆದ ತಿಂಗಳಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಈ ಕಟ್ಟಡವನ್ನು ಹಸ್ತಾಂತರಿಸಲಾಗಿದೆ.

ಪ್ರತಿಯೊಂದು ಸ್ಮಾರಕದ ಎದುರಿಗೆ ಚಾಲುಕ್ಯ ಶೈಲಿಯಲ್ಲಿ ಗ್ರಾನೈಟ್ ಕಲ್ಲಿನ ಸುಂದರ ಮಂಟಪಗಳನ್ನು ನಿರ್ಮಿಸಲಾಗಿದೆ. ಸುತ್ತ ಉದ್ಯಾನ ಬೆಳೆಸಲಾಗಿದೆ. ಆವರಣ ಗೋಡೆ, ಆಕರ್ಷಕ ಮತ್ತು ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಸ್ಮಾರಕಕ್ಕೆ ಹೋಗುವ ರಸ್ತೆಗೆ ಹಾಸುಗಲ್ಲುಗಳನ್ನು ಹಾಕಲಾಗಿದೆ. ಅಗತ್ಯವಿದ್ದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕೂಡು ರಸ್ತೆಗಳ ಡಾಂಬರೀಕರಣ ಕೈಗೊಳ್ಳಲಾಗಿದೆ. ಇದಲ್ಲದೆ ಪ್ರತಿ ಸ್ಮಾರಕದ ಸಮೀಪ ಪ್ರವಾಸಿಗರ ಕೋಣೆಗಳು, ಪರಿಚಾರಕರ ವಸತಿಗೃಹ ಕಟ್ಟಲಾಗಿದೆ. ಹೀಗಾಗಿ ಗಿಡ ಗಂಟೆಗಳ ಮಧ್ಯದಲ್ಲಿ ಯಾರಿಗೂ ಕಾಣದಂತೆ ಇದ್ದ ಗವಿಗಳು ಈಗ ನಿಸರ್ಗ ಸೌಂದರ್ಯದಿಂದ ಕಂಗೊಳಿಸುತ್ತಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಬರೀ ಸ್ಮಾರಕಗಳ ವಿಕಾಸ ಅಷ್ಟೇ ಅಲ್ಲ; ಪಟ್ಟಣದ ಅಭಿವೃದ್ಧಿ ಕಾರ್ಯವನ್ನೂ ಮಂಡಳಿ ಕೈಗೊಂಡಿದೆ. 9 ನೇ ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣ ಪ್ರವೇಶಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲಾಗಿದೆ. ಹೆದ್ದಾರಿಯ ಹತ್ತಿರ 95 ಅಡಿ ಎತ್ತರದ ಬೃಹತ್ ಪ್ರವೇಶ ದ್ವಾರ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಅದರ ಎದುರಿಗೆ ಬಸವಣ್ಣನವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ.5 ಸಾವಿರ ಆಸನಗಳುಳ್ಳ ಸುಸಜ್ಜಿತವಾದ ಬೃಹತ್ ಸಭಾಭವನವನ್ನು ರಥ ಮೈದಾನದಲ್ಲಿ ನಿರ್ಮಿಸಲಾಗುತ್ತಿದೆ. ತ್ರಿಪುರಾಂತ ಕೆರೆಯ ಹೂಳು ತೆಗೆಯಲಾಗಿದ್ದು ಅದರ ದಂಡೆಯಲ್ಲಿ ಜಾಗಿಂಗ್ ಮತ್ತು ಮಕ್ಕಳ ಪಾರ್ಕ್ ನಿರ್ಮಿಸಲಾಗಿದೆ. ‘ಬಂದವರ ಓಣಿ’ ಸಮೀಪದ ಗುಡ್ಡದ ಪರಿಸರವನ್ನ್ನು ‘ಪಿಕ್‌ನಿಕ್ ಸೆಂಟರ್’ ಆಗುವಂತೆ ರಮಣೀಯವಾಗಿ ಮಾಡಲಾಗಿದೆ. ಬಸವೇಶ್ವರ ದೇವಸ್ಥಾನ ಮತ್ತು ತ್ರಿಪುರಾಂತಕೇಶ್ವರ ಮಂದಿರದ ಹತ್ತಿರ ಯಾತ್ರಿ ನಿವಾಸ ಕಟ್ಟಲಾಗಿದೆ. ವಸ್ತು ಸಂಗ್ರಹಾಲಯವನ್ನು ಮೊದಲ ಅಂತಸ್ತಿನವರೆಗೆ ಎತ್ತರಿಸುವ ಕಾರ್ಯ ಮುಗಿದಿದೆ.

ಅಲ್ಲಮಪ್ರಭುದೇವರ ಗದ್ದುಗೆ ಮಠದ ಹತ್ತಿರ ಅನುಭವ ಮಂಟಪ ನಿರ್ಮಿಸುವ ಬಹು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕಲ್ಯಾಣ ಕ್ರಾಂತಿ ನಡೆದಾಗ ಹರಳಯ್ಯ ಮಧುವರಸನಿಗೆ ಯಳೆಹೂಟೆ ಶಿಕ್ಷೆ ಕೊಡಿಸಿದ ದೃಶ್ಯವನ್ನು ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ಪ್ರಸ್ತುತಪಡಿಸುವ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ.

ಒಟ್ಟಾರೆ, ಸಮಾನತೆಗಾಗಿ ಕ್ರಾಂತಿ ನಡೆದ ಈ ನೆಲ ಜಗತ್ತಿಗೆ ಒಳ್ಳೆಯ ಸಂದೇಶ ಸಾರುವುಕ್ಕಾಗಿ ಮತ್ತೆ ಸಿದ್ಧಗೊಳ್ಳುತ್ತಿದೆ.‘ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು, ತೊಳಗಿ ಬೆಳಗುತಿರ್ದುತಯ್ಯ ಶಿವನ ಪ್ರಕಾಶ. ಆ ಬೆಳಗಿನೊಳಗೊಪ್ಪುತಿರ್ದರಯ್ಯಾ ಅಸಂಖ್ಯಾತ ಭಕ್ತ ಮಹಾಗಣಂಗಳು..’ ಎಂದು ಅಲ್ಲಮಪ್ರಭು ಅಂದಿನ ವೈಭವವನ್ನು ವಚನದಲ್ಲಿ ಹಿಡಿದಿಟ್ಟಿದ್ದಾರೆ. ಅದರಂತೆ ಗತವೈಭವದ ಬೆಳಕು ಪಸರಿಸಲು ಕಲ್ಯಾಣ ಇನ್ನೊಮ್ಮೆ ಸನ್ನದ್ಧವಾಗುತ್ತಿದೆ. ಪ್ರೇರಣಾ ಸ್ಥಾನವಾಗಿ ರೂಪುಗೊಳ್ಳುತ್ತಿದೆ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT