ಶುಕ್ರವಾರ, ಏಪ್ರಿಲ್ 16, 2021
31 °C

ಬಸವಾಪಟ್ಟಣ ಹೋಬಳಿಮಟ್ಟದ ಜನಸ್ಪಂದನ ಸಭೆ; ಮಧ್ಯವರ್ತಿ ದೂರವಿಡಲು ಸಚಿವ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ನಿಯಮ ಮೀರಿ, ತಪ್ಪು ಮಾಹಿತಿ ನೀಡಿ, ಮಧ್ಯವರ್ತಿ ಸಹಾಯದಿಂದ ಸರ್ಕಾರದ ಸೌಲಭ್ಯ ಪಡೆಯಬೇಡಿ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದರು.

ಇಲ್ಲಿ ಭಾನುವಾರ ಹೋಬಳಿಮಟ್ಟದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ನೀತಿ ನಿಯಮಗಳ ಅನ್ವಯ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಇದುವರೆಗೆ ಸೌಲಭ್ಯ ದೊರೆಯದ  ಫಲಾನುಭವಿಗಳು ಕೂಡಾ ಅರ್ಜಿ ಸಲ್ಲಿಸಲಿ, ಅರ್ಹತೆ ಇದ್ದ್ಲ್ಲಲಿ ಅವರಿಗೂ ಸವಲತ್ತು ದೊರಕಿಸಿಕೊಡಲಾಗುವುದು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಇದುವರೆಗೆ  ಒಟ್ಟು 38 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಸ್ಥಳೀಯ ಹೋಬಳಿಮಟ್ಟದಲ್ಲಿ ಇದು 2ನೇ ಕಾರ್ಯಕ್ರಮವಾಗಿದೆ. ಈ  ಮೂಲಕ ಹೆಚ್ಚು ಮಂದಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಜಮೀನು ಇದ್ದವರಿಗೆ ಮಾಸಾಶನ ನೀಡುವಂತಿಲ್ಲ ಎಂಬ ನಿಯಮದಿಂದ ಸಮಸ್ಯೆ ಉಂಟಾಗಿದ್ದಲ್ಲಿ ಆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.

ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಇದುವರೆಗೂ 22 ಸಾವಿರ ಜನರಿಗೆ ವಿವಿಧ ಯೋಜನೆಗಳಿಂದ ಪ್ರಯೋಜನವಾಗಿದೆ. ಬಸವಾಪಟ್ಟಣ ಹೋಬಳಿಗೆ ರೂ. 6.5ಕೋಟಿ ಅನುದಾನ ಬಿಡುಗಡೆ ಮಾಡಲಾಗ್ದ್ದಿದು, ಇನ್ನೂ ರೂ. 3 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ರೇವಣಸಿದ್ದಪ್ಪ, ತಾ.ಪಂ. ಪ್ರಭಾರ ಅಧ್ಯಕ್ಷ ಗಣೇಶ ನಾಯ್ಕ, ತಾ.ಪಂ. ಸದಸ್ಯೆ ಪಾರ್ವತಿಬಾಯಿ, ಗ್ರಾ.ಪಂ. ಅಧ್ಯಕ್ಷ ಪಿ. ಖಲಂದರ್, ದಾಗಿನಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಪಾರಿಬಾಯಿ. ಹಿರೇಮಳಲಿ ಲೋಕೇಶ್, ಬಿ.ಜಿ. ಯೋಗೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಸಮಾಧಾನ

ತಹಶೀಲ್ದಾರ್ ರೇವಣದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡು ತ್ತಿದ್ದಂತೆಯೇ ಸಭೆಯಲ್ಲಿ  ಕೆಲವರು ಎದ್ದು ನಿಂತು ಸಭೆಯ ಬಗ್ಗೆ ಸರಿಯಾಗಿ ಪ್ರಚಾರ ಕೊಟ್ಟಿಲ್ಲ. ಗ್ರಾಮದಲ್ಲಿ ಟಾಂಟಾಂ ಹೊಡೆಸಿ ಹೇಳಬೇಕಿತ್ತು. ಅದನ್ನು ಮಾಡಿಲ್ಲ. ಹಾಗಿದ್ದ ಮೇಲೆ ಏಕೆ ಈ ಸಭೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ತಮ್ಮ ಕ್ರಮ ಸಮರ್ಥಿಸಿದ ತಹಶೀಲ್ದಾರ್, ಸಾಕಷ್ಟು ಪ್ರಚಾರ ನೀಡಲಾಗಿದೆ. ಎಲ್ಲರಿಗೂ ಆಮಂತ್ರಣ ಕೊಡಲಾಗದು. ಅರ್ಹ ಫಲಾನುಭವಿಗಳು ಬಂದು ಸೌಲಭ್ಯ ಪಡೆಯಬೇಕು. ನಾವು  ನಿಯಮ ಮೀರಿ ನಡೆಯಲಾಗದು. ಮಾಹಿತಿ ಪಡೆದವರು ಸಭೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ  ಸಂಸತ್ ಸದಸ್ಯ ಸಿದ್ದೇಶ್ವರ, ಅಧಿಕಾರಿಗಳು ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಪ್ರಚಾರಪಡಿಸಬೇಕು. ನೀವು ಸೌಲಭ್ಯ ಕೊಡುವುದಲ್ಲ. ಸರ್ಕಾರ ಕೊಡುತ್ತಿದೆ. ಆದ್ದರಿಂದ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.