ಶನಿವಾರ, ಏಪ್ರಿಲ್ 17, 2021
32 °C

ಬಸ್ ಪಾಸ್ ದರ ರಿಯಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ತೀವ್ರ ಬರ ಎದುರಾಗಿರುವುದರಿಂದ ವಿದ್ಯಾರ್ಥಿ ಸಮೂಹಕ್ಕೆ ಸಹಕರಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ವಾರ್ಷಿಕ ಬಸ್ ಪಾಸ್ ದರದಲ್ಲಿ ಶೇ 20ರಷ್ಟು ರಿಯಾಯಿತಿ ನೀಡಲಾಗುವುದು~ ಎಂದು ಸಾರಿಗೆ ಸಚಿವ ಆರ್.ಅಶೋಕ ಪ್ರಕಟಿಸಿದರು.ನಗರದಲ್ಲಿ ಶನಿವಾರ ಮಾತನಾಡಿದ ಅವರು, `ರಾಜ್ಯದಾದ್ಯಂತ ಒಟ್ಟು 14.65 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳನ್ನು ಒದಗಿಸಲಾಗುತ್ತಿದೆ. ಆದರೆ ಸಾಮಾಜಿಕ ಜವಾಬ್ದಾರಿಯನ್ನು ಮನಗಂಡು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲು ಈ ರಿಯಾಯಿತಿ ನೀಡಲಾಗಿದೆ. ಈಗಾಗಲೇ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಆಧಾರದ ಮೇಲೆ ಹಣ ಮರುಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು~ ಎಂದು ಹೇಳಿದರು.`ರಾಜ್ಯದಲ್ಲಿ 5.80 ಲಕ್ಷ ವಿದ್ಯಾರ್ಥಿನಿಯರು ಮತ್ತು 8.70 ಲಕ್ಷ ಅಧಿಕ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುತ್ತಿದ್ದಾರೆ. ಈ ವರ್ಷದಿಂದ ರಿಯಾಯಿತಿ ನೀಡುವುದರಿಂದ ಸಾರಿಗೆ ಇಲಾಖೆಗೆ 20 ಕೋಟಿ ರೂಪಾಯಿ ಹೊರೆ ಬೀಳಲಿದೆ. ಈ ಹೊರೆಯನ್ನು ಸರಿದೂಗಿಸಲು ಪ್ರಯಾಣಿಕರ ಟಿಕೆಟ್ ದರದಲ್ಲಿ ಹೆಚ್ಚಳ ಮಾಡುವ ಯಾವುದೇ ಆಲೋಚನೆಯಿಲ್ಲ~ ಎಂದರು.`ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರೂ ಕೂಡ ಮುಂದಿನ ವರ್ಷ ಸಹ ಇದೇ ದರ ಮುಂದುವರಿಯಲಿದೆ. ಇದರೊಂದಿಗೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಲಾಗುವುದು. ವಿದ್ಯಾರ್ಥಿಗಳು ಭಾನುವಾರ, ಹಬ್ಬ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲೂ ಸಹ ಬಸ್ ಪಾಸ್ ಸೌಲಭ್ಯದಿಂದ ಪ್ರಯಾಣಿಸಬಹುದು~ ಎಂದು ಸ್ಪಷ್ಟಪಡಿಸಿದರು.ಕಾಲೇಜಿನಲ್ಲಿ ಚಾಲನಾ ಪರವಾನಗಿ: `ಚಾಲನಾ ಪರವಾನಗಿ (ಡಿ.ಎಲ್) ಪಡೆದುಕೊಳ್ಳುವ ಸಲುವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲೇ ಚಾಲನಾ ಪರವಾನಗಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಕಾರ್ಯವೈಖರಿಯಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಸಂಸ್ಥೆಯ 50 ವರ್ಷಗಳ ಸೇವೆ ಮತ್ತು ಅನುಭವ ನೆನಯಲು ` ಸುವರ್ಣ ಸಾರಿಗೆ~ ಸಮಾರಂಭವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು~ ಎಂದು ಅಶೋಕ ತಿಳಿಸಿದರು.ದರ ಇಳಿಕೆ ಎಬಿವಿಪಿ ಸ್ವಾಗತ: `ಸಾರಿಗೆ ಇಲಾಖೆಯು ವಿದ್ಯಾರ್ಥಿ ಪಾಸ್‌ಗಳ ದರದಲ್ಲಿ ಶೇ 20ರಷ್ಟು ರಿಯಾಯಿತಿ ನೀಡುವ ಮೂಲಕ ವಿದ್ಯಾರ್ಥಿಪರ ಕಾಳಜಿಯನ್ನು ವ್ಯಕ್ತಪಡಿಸಿದೆ. ದರ ಇಳಿಸುವ ಸಲುವಾಗಿ ಎಬಿವಿಪಿಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಧ್ಯೇಯೋದ್ದೇಶಗಳನ್ನು ಅರಿತ ಸರ್ಕಾರ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ.ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇವೆ~ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ರಮೇಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.