ಶನಿವಾರ, ಮೇ 15, 2021
23 °C

ಬಸ್ ಪ್ರಯಾಣ ದರ ಹೆಚ್ಚಳ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪೆಟ್ರೋಲ್ ದರ ಹೆಚ್ಚಳದ ನೆಪದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿಯ ಬೆಳಗಾವಿ ಮಹಾನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.



ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಬೆಲೆಗಿಂತ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆ ಭಾರವೇ ಹೆಚ್ಚಾಗಿದೆ. ಆದರೆ, ರಾಜ್ಯ ಸರ್ಕಾರ ಪೆಟ್ರೋಲ್ ದರ ಏರಿಕೆಯ ನೆಪ ಹೇಳಿ ಶೇ. 16 ರಷ್ಟು ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವುದು ಖಂಡನೀಯವಾಗಿದೆ.



ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬೇಕಾದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಬೆಲೆ ಏರಿಕೆ ಮಾಡುವ ಬದಲು ತೆರಿಗೆ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.



ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಂಸ್ಥೆಯ ನೌಕರರ ವೇತನವನ್ನು ಹೆಚ್ಚಳ ಮಾಡಿರುವುದಿಂದ ಬಸ್ ಪ್ರಯಾಣ ದರ ಏರಿಕೆ ಮಾಡಿರುವುದಾಗಿ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯ ನೌಕರರ ವೇತನ ಹೆಚ್ಚಳ ಮಾಡಿ ಒಂದು ವರ್ಷ ಆರು ತಿಂಗಳು ಕಳೆದಿವೆ. ಆದರೆ, ಈಗ ಪ್ರಯಾಣ ದರ ಹೆಚ್ಚಳ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ವಸ್ತುಗಳ ಬೆಲೆಗಳು ಏರುತ್ತಲೇ ಸಾಗಿದ್ದು, ಕಾಂಗ್ರೆಸ್ ಸರ್ಕಾರ ಬಡಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಆದ್ದರಿಂದ ಬಸ್ ಪ್ರಯಾಣ ದರ ಹೆಚ್ಚಿಸಿದ್ದನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.



ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಝಿರಲಿ, ಪ್ರಧಾನ ಕಾರ್ಯದರ್ಶಿ ನಂದು ಮಿರಜಕರ, ಶಾಂತಾ ಉಪ್ಪಾರ, ಸಂಜೀವ ಹನಮಸಾಗರ, ದೀಪಕ ಜಮಖಂಡಿ,  ಎಲ್.ವಿ.ಪಾಟೀಲ ಮತ್ತಿತರರು ಹಾಜರಿದ್ದರು.



ಖಂಡನೆ: ಪೆಟ್ರೋಲ್ ದರ ಹೆಚ್ಚಳದ ನೆಪದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕರ್ನಾಟಕ ವಿಶ್ವ ನಿರ್ಮಾಣ ಸಂಘದ ಅಧ್ಯಕ್ಷ ರಾಮಚಂದ್ರ ಢವಳಿ ಖಂಡಿಸಿದ್ದಾರೆ.



ಬಸ್ ದರ ಏರಿಕೆಯಿಂದ ಬಡ ಜನರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ಬಸ್ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಅಲ್ಪಮಟ್ಟಿನ ದರ ಏರಿಕೆ ಮಾಡಿ ಬಡ ಜನರ ಹಿತ ಕಾಪಾಡಬೇಕು ಎಂದು ಢವಳಿ ಆಗ್ರಹಿಸಿದ್ದಾರೆ.



ಬೆಲೆ ಏರಿಕೆ ಖಂಡಿಸಿ ಮನವಿ

ಹುಕ್ಕೇರಿ:  ಕೇಂದ್ರ  ಹಾಗೂ ರಾಜ್ಯ ಸರ್ಕಾರಗಳು ಪದೇ ಪದೇ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ನೀತಿಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶಾಸಕ ಉಮೇಶ ಕತ್ತಿ ಅವರ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಶೇಖ ಖಲಿಮುಲ್ಲಾ ಅವರಿಗೆ ಮನವಿ ಅರ್ಪಿಸಿದರು.



ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾದ ಇಂದಿನ ದಿನಗಳಲ್ಲಿ ಕಳೆದ ಎರಡು ದಿನಗಳಲ್ಲಿ ಕೇಂದ್ರವು ಪೆಟ್ರೋಲ್ ದರವನ್ನು ಹಾಗೂ ರಾಜ್ಯವು ಶೇ. 10.50ರಷ್ಟು ಬಸ್‌ನ ದರವನ್ನು ಏರಿಸಿ ಬಡವರ ಮೇಲೆ ಬರೆ ಎಳೆದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.   



ಶಾಸಕ ಉಮೇಶ ಕತ್ತಿ ಮಾತನಾಡಿ,  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಯು ಜನ ವಿರೋಧಿಯಾಗಿದ್ದು ಅವುಗಳ ಅಸಮರ್ಪಕ ಆರ್ಥಿಕ ನೀತಿಯಿಂದ ಜನರ ಸಂಕಷ್ಟಗಳು ಕಡಿಮೆಯಾಗುವದರ ಬದಲು ಹೆಚ್ಚಾಗುತ್ತಲಿವೆ ಎಂದು ಖಂಡಿಸಿದರು.



ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಗೌಡ ಪಾಟೀಲ, ಹು.ಗ್ರಾ. ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಗುರು ಕುಲಕರ್ಣಿ, ತಾಲ್ಲೂಕು ಕಾರ್ಯದರ್ಶಿಗಳಾದ ಶಿವಾನಂದ ಹಿರೇಮಠ, ಸಂಜು ಬಸ್ತವಾಡ,  ಜಿ.ಪಂ ಸದಸ್ಯರಾದ ಅಂಜನಾ ಹೆಬ್ಬಾಳಿ, ತನುಜಾ ಜಾಧವ, ನಂದಾ ಸನ್ನಾಯಿಕ, ಪರಶುರಾಮ ನಾಯಿಕ,  ತಾ.ಪಂ. ಅಧ್ಯಕ್ಷೆ ಶೋಭಾ ಹಿರೇಕೂಡಿ,  ಸದಸ್ಯೆ  ಸುಜಾತಾ ಖಾನಾಪುರೆ,  ಮಾಜಿ ಅಧ್ಯಕ್ಷ  ಸತ್ಯಪ್ಪ ನಾಯಿಕ, ರಮೇಶ ಕುಲಕರ್ಣಿ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.