ಗುರುವಾರ , ಜನವರಿ 23, 2020
19 °C

ಬಸ್ ಹರಿದು ವಿದ್ಯಾರ್ಥಿನಿ ಗಾಯ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಕಾಲೇಜು ವಿದ್ಯಾರ್ಥಿನಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಲಗಾಲಿಗೆ ತೀವ್ರ ಪೆಟ್ಟಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಶಾಲಿನಿ (17) ಅಪಘಾತದಲ್ಲಿ ಗಾಯಗೊಂಡವರು. ಶಾಲಿನಿ ತಾಲ್ಲೂಕಿನ ಸಣ್ಣೇಗೌಡನಕೊಪ್ಪಲಿನ ಪ್ರಕಾಶ್ ಎಂಬುವವರ ಮಗಳು. ಈಕೆ ಎಂದಿನಂತೆ ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದರು. ಪ್ಲಾಟ್‌ಫಾರ್ಮ್ ಅಂಚಿನಲ್ಲಿ ಕುಳಿತು ಬಸ್‌ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಬೆಟ್ಟದಪುರಕ್ಕೆ ಹೋಗುವ ಬಸ್ ಪ್ಲಾಟ್‌ಫಾರ್ಮ್‌ಗೆ ಬಂದು ನಿಂತುಕೊಳ್ಳುವಾಗ ಬಸ್‌ನ ಮುಂಭಾಗದ ಕವಚ ಶಾಲಿನಿ ಬಲಗಾಲಿಗೆ ಉಜ್ಜಿತು. ಇದರಿಂದ ಶಾಲಿನಿ ಬಲಗಾಲು ತೀವ್ರ ಗಾಯವಾಗಿ ರಕ್ತಸ್ರಾವವಾಯಿತು. ತಕ್ಷಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳುಹಿಸಲಾಯಿತು.ಈ ವೇಳೆ ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಆಕ್ರೋಶಗೊಂಡ ಕಾಲೇಜು ವಿದ್ಯಾರ್ಥಿಗಳು, ಬಸ್ ನಿಲ್ದಾಣದಲ್ಲಿಯೇ ಕೆಲ ಹೊತ್ತು ಬಸ್ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಪವನ್‌ಕುಮಾರ್ ಮತ್ತು ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು. ಬಸ್ ನಿಲ್ದಾಣ ನವೀಕರಣ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ಸ್ಥಳ ಇಲ್ಲದಿರುವುದರಿಂದ ಇಂತಹ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೇ ಬಸ್ ಚಾಲಕರು ಕೂಡ ಬೇಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಪ್ರಯಾಣಿಕರು ಸಹ ಪ್ರತಿಭಟನೆಗೆ ಸಹಕರಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)