ಭಾನುವಾರ, ಜೂನ್ 20, 2021
21 °C

ಬಾಗಲಕೋಟೆ ಓಕುಳಿಗೆ ಸಂಭ್ರಮದ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಣೆಗೊಂಡ ಹೋಳಿ ಓಕುಳಿಯನ್ನು ಭಾನುವಾರ ಎಲ್ಲ ಓಣಿಗಳ ಜನತೆ ಸಾಮೂಹಿಕವಾಗಿ ಆಚರಿಸುವ ಮೂಲಕ ರಂಗಿನ ಆಟಕ್ಕೆ ಸಂಭ್ರಮದ ವಿದಾಯ ಕೋರಿದರು.ಬೆಳಿಗ್ಗೆಯಿಂದಲೇ ಯುವಕರು, ಚಿಣ್ಣರ ಕೇಕೆ, ಹಲಗೆ ವಾದನ, ಓಕುಳಿ ಎರಚಾಟ ಹಾಗೂ ನೃತ್ಯ ನಗರದಲ್ಲಿ ಸಂಭ್ರಮ ಮಾಡಿಸಿತ್ತು.ಮಧ್ಯಾಹ್ನವಾಗುತ್ತಿದ್ದಂತೆ ವಿವಿಧ ಬಡಾವಣೆ ಗಳಿಂದ ಟ್ರ್ಯಾಕ್ಟರ್ ಮತ್ತು ಬಂಡಿಗಳಲ್ಲಿ ಬ್ಯಾರಲ್ ಗಟ್ಟಲೇ ಬಣ್ಣ ಓಕುಳಿಯನ್ನು ತುಂಬಿ ೊಂಡು ಬಂದ ಸಾವಿರಾರು ಯುವಕರು, ಚಿಣ್ಣರು  ನಗರದ ವಲ್ಲಭಬಾಯಿ ಚೌಕಿಯಲ್ಲಿ ಜಮಾಯಿಸಿದರು.ಬಳಿಕ ವಲ್ಲಭಬಾಯಿ ಚೌಕಿಯಿಂದ ಹಳೆ ಅಂಚೆ ಕಚೇರಿ ಮಾರ್ಗವಾಗಿ ಕೊತ್ತಲೇಶ್ವರ ಗುಡಿ, ಪಂಕ ಮಸೀದಿ, ವೆಂಕಟಪೇಟೆ, ಜೈನಪೇಟೆ, ಹಳೆ ಪೇಟೆ, ಟೀಕಿನಮಠದ ಮೂಲಕ ಸಾಲಾಗಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಮನೆಯ ಮಹಡಿ ಏರಿ ನಿಂತ ಜನತೆ ಮೆರವಣಿಗೆ ನೋಡಿ ಸಂಭ್ರಮಿಸಿದರು.ಯುವಕರು, ಚಿಣ್ಣರು ಹಲಗೆ ಬಾರಿಸುತ್ತಾ ಮೆರವಣಿಗೆ ಉದ್ದಕ್ಕೂ ನೆರೆದ ಜನರ ಮೇಲೆ ಓಕುಳಿಯನ್ನು ಎರಚಿ ಸಂಭ್ರಮಿಸಿದರು. ಬಗೆಬಗೆಯ ಭಂಗಿಯಲ್ಲಿ ಹೆಜ್ಜೆ ಹಾಕಿ ನೋಡುಗರನ್ನು ಸಂತಸ ಪಡಿಸಿದರು.

ಒಬ್ಬ ವ್ಯಕ್ತಿಯಂತೂ ಮೈಗೆ ಸೋಪನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ, ಮತ್ತೊಬ್ಬ ವ್ಯಕ್ತಿ ಹಸಿ ಮೀನನ್ನೇ ಕೊರಳಿಗೆ ನೇತು ಹಾಕಿಕೊಂಡು, ಮತ್ತೆ ಕೆಲ ಯುವಕರು ಚೂಡಿ, ಕುಪ್ಪಸ, ಸೀರೆ ತೊಟ್ಟು ಯುವತಿಯರಂತೆ ನರ್ತಿಸಿದರು. ಇನ್ನು ಕೆಲವರು ನಟ ಉಪೇಂದ್ರನಂತೆ ತಲೆ ಮೇಲೆ ಜುಟ್ಟು ಕಟ್ಟಿಕೊಂಡು ಹಾಸ್ಯಮಯವಾಗಿ ನಟಿಸಿದರು. ದೆವ್ವದ ಮುಖವಾಡ ತೊಟ್ಟು ನರ್ತಿಸಿದರು.ಯಾವುದೇ ಬೇಧ-ಭಾವ ಇಲ್ಲದೇ ಹಿರಿ-ಕಿರಿಯ ಎನ್ನದೇ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು, ವೈದ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮೆರವಣಿಗೆಯಲ್ಲಿ 50ಕ್ಕೂ ಅಧಿಕ ಟ್ರ್ಯಾಕ್ಟರ್ ಮತ್ತು ಎತ್ತಿನಬಂಡಿಗಳು ಭಾಗವಹಿಸಿದ್ದವು. ಮೆರವಣಿಗೆ ಅಂತ್ಯಗೊಂಡ ಸಂದರ್ಭದಲ್ಲಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ರಂಗಿನ ಆಟಕ್ಕೆ ಸಂಭ್ರಮದ ವಿದಾಯ ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.